ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್‌ವರ್ಡ್‌ ಪರ್ಯಾಯಗಳು ಸುರಕ್ಷಿತವೆ?

Last Updated 23 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ತಿಂಗಳಿಗೊಮ್ಮೆ ಪಾಸ್‌ವರ್ಡ್‌ ಬದಲಿಸಬೇಕಾಗಿ ಬಂದಾಗ ತಲೆಬಿಸಿ ಆಗುತ್ತದೆ ಅಲ್ಲವೇ!? ಸಿಸ್ಟಂ, ಮೊಬೈಲ್‌, ಇ–ಮೇಲ್‌, ಫೇಸ್‌ಬುಕ್‌ – ಹೀಗೆ ಪ್ರತಿಯೊಂದಕ್ಕೂ ಪ್ರತ್ಯೇಕ ಪಾಸ್‌ವರ್ಡ್‌ ನೀಡಬೇಕಲ್ಲಾ ಎನ್ನುವ ಹತಾಶೆ ಮೂಡುತ್ತದೆ. ಹೆಸರಿನೊಂದಿಗೆ, ಮೊಬೈಲ್‌ ನಂಬರ್‌, ಇಸವಿ, ಜನ್ಮ ದಿನಾಂಕ – ಹೀಗೆ ಹಿಂದೆ ಮುಂದೆ ಮಾಡಿ ನೀಡಿದ ಪಾಸ್‌ವರ್ಡ್‌ ಎಲ್ಲವೂ ಖಾಲಿಯಾದ ಮೇಲೆ ಇನ್ನೇನು ಉಳಿದಿದೆ ಎನ್ನುವ ಪ್ರಶ್ನೆ ಎದುರಾಗುತ್ತದೆ.

ಶೇ. 80ರಷ್ಟು ಹ್ಯಾಕಿಂಗ್‌ ನಡೆಯುತ್ತಿರುವುದು ಅತ್ಯಂತ ಸುಲಭವಾದ ಪಾಸ್‌ವರ್ಡ್‌ ನೀಡುವುದರಿಂದಲೇ ಎನ್ನುತ್ತಿವೆ ಅಧ್ಯಯನ ವರದಿಗಳು. ಹಾಗಾದರೆ ಫಿಂಗರ್‌ಪ್ರಿಂಟ್‌ ಸ್ಕ್ಯಾನ್‌, ಫೇಶಿಯಲ್‌ ರೆಕಗ್ನಿಷನ್‌ ಸುರಕ್ಷಿತವೇ ಎಂದು ಪ್ರಶ್ನಿಸಿದರೆ, ಪಾಸ್‌ವರ್ಡ್‌ಗಿಂತಲೂ ಸುರಕ್ಷಿತ ಎಂದಷ್ಟೇ ಹೇಳಬಹುದು. ಏಕೆಂದರೆ, ಚೂಯಿಂಗ್‌ ಗಮ್‌ ಅನ್ನು ಫಿಂಗರ್‌ಪ್ರಿಂಟ್ ಸ್ಕ್ಯಾನ್‌ ಮಾಡುವ ಜಾಗದಲ್ಲಿ ಅಂಟಿಸಿ ನಕಲು ಮಾಡುವುದು, ಮುಖದ 3ಡಿ ಪ್ರಿಂಟೆಡ್‌ ಕಾಪಿ ಮಾಡಿ ಅಕ್ಸೆಸ್ ಮಾಡುವುದು ಹಾಲಿವುಡ್‌ ಸಿನಿಮಾಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ.

100 ಸ್ಮಾರ್ಟ್‌ಫೋನ್‌ಗಳಲ್ಲಿ 42 ಸ್ಮಾರ್ಟ್‌ಫೋನ್‌ಗಳು ಅದರ ಬಳಕೆದಾರರ ಫೋಟೊವನ್ನು ಪರದೆಯ ಎದುರಿಗೆ ಹಿಡಿದಾಕ್ಷಣ ಗುರುತಿಸಿ ಅನ್‌ಲಾಕ್‌ ಆಗಿವೆ ಎನ್ನುವುದನ್ನು ಡಚ್‌ ಸಂಶೋಧಕರು ಕಂಡುಕೊಂಡಿದ್ದಾರೆ. ತಂತ್ರಾಂಶದ ಕಾರ್ಯನಿರ್ವಹಣೆಯಲ್ಲಿನ ದೋಷದಿಂದಾಗಿಯೂ ಹೀಗಾಗಿರುವ ಸಾಧ್ಯತೆ ಇದೆ.

ಬೆರಳಿನ ರೇಖೆಗಳನ್ನು ಪಡೆಯಲುಇನ್‌ಫ್ರಾರೆಡ್‌ ಫಿಲ್ಟರ್‌ ಇಲ್ಲದ ಕ್ಯಾಮೆರಾದಲ್ಲಿ 2,500 ಚಿತ್ರಗಳನ್ನು ಸೆರೆಹಿಡಿದು, ಅವುಗಳ ಆಧಾರದಲ್ಲಿ ಮೇಣದ ಹಸ್ತ ತಯಾರಿಸಿದರು. ಈ ಮೂಲಕ ಬೆರಳಚ್ಚನ್ನೂ ನಕಲು ಮಾಡಿ ಅನ್‌ಲಾಕ್‌ ಮಾಡಲು ಸಾಧ್ಯವಿದೆ ಎನ್ನುವುದನ್ನು ಬರ್ಲಿನ್‌ನ ಖೆಯಾಸ್‌ ಕಮ್ಯೂನಿಕೇಷನ್‌ ಕಾಂಗ್ರೆಸ್‌ನ ಸಂಶೋಧಕರು ತೋರಿಸಿದ್ದಾರೆ.

ಪಾಸ್‌ವರ್ಡ್‌ ಯುಗಾಂತ್ಯ?
ಬೋಸ್ಟನ್‌ನ ಟ್ರಾನ್ಸ್‌ಮಿಟ್‌ ಸೆಕ್ಯುರಿಟಿ ಎನ್ನುವ ಕಂಪನಿಯು ಪಾಸ್‌ವರ್ಡ್‌ ರಹಿತ ಸುರಕ್ಷತೆಗಾಗಿ BindID ಅಭಿವೃದ್ಧಿಪಡಿಸಿದೆ. ಇದು ಅತ್ಯಂತ ಸುಧಾರಿತ ಗುರುತು ದೃಢೀಕರಣ ನೆಟ್‌ವರ್ಕ್‌ ಆಗಿದ್ದು, ಗ್ರಾಹಕರು ಎಂಬೆಡೆಡ್‌ ಫಿಂಗರ್‌ಪ್ರಿಂಟ್‌ ಅಥವಾ ಫೇಸ್‌ ಸ್ಕ್ಯಾನರ್‌ ಬಳಸಿ ತಮ್ಮ ಖಾತೆಯನ್ನು ಪ್ರವೇಶಿಸಬಹುದು ಎಂದು ಅದು ಹೇಳಿಕೊಂಡಿದೆ. ಇದಕ್ಕಾಗಿ ಬಯೊಮೆಟ್ರಿಕ್‌ ರೀಡರ್ ಅಗತ್ಯವಿಲ್ಲ, ಗ್ರಾಹಕರು ತಮ್ಮ ಮೊಬೈಲ್‌ ಅನ್ನೇ ಬಳಸಬಹುದು ಎಂದೂ ಹೇಳಿದೆ. ಹಾಗಾದರೆ ಪಾಸ್‌ವರ್ಡ್‌ ಯುಗ ಅಂತ್ಯವಾಗಲಿದೆಯೇ ಎಂದರೆ, ಸದ್ಯಕ್ಕಂತೂ ಕಷ್ಟವೇ. ಏಕೆಂದರೆ, ಈಗಲೂ ಸಿಸ್ಟಂ, ಅಪ್ಲಿಕೇಷನ್‌ಗಳಿಗೆ ಪಾಸ್‌ವರ್ಡ್‌ ಬಳಕೆ ಅನಿವಾರ್ಯವಾಗಿದೆ. ವಾಯ್ಸ್‌ ರೆಕಗ್ನಿಷನ್‌, ಫೇಸ್‌ಅನ್‌ಲಾಕ್‌, ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ ಆಯ್ಕೆಗಳ ಬಳಕೆ ಹೆಚ್ಚಾಗುತ್ತಿದ್ದರೂ ಇನ್ನೂ ಹಲವು ವರ್ಷಗಳವರೆಗೆ ಪಾಸ್‌ವರ್ಡ್‌ ತನ್ನ ಅಸ್ತಿತ್ವ ಉಳಿಸಿಕೊಳ್ಳಲಿದೆ. ಏಕೆಂದರೆ, ಒಂದೊಮ್ಮೆ ಪಾಸ್‌ವರ್ಡ್‌ ಹ್ಯಾಕ್‌ ಆದರೆ ಬದಲಿಸಲು ಸಾಧ್ಯವಿದೆ. ಆದರೆ ಒಮ್ಮೆ ನಮ್ಮ ಫಿಂಗರ್‌ಪ್ರಿಂಟ್‌ ಹ್ಯಾಕ್‌ ಆದರೆ ಬದಲಾಯಿಸಲು ಆಗುವುದಿಲ್ಲ ಎನ್ನುವುದು ಕೆಲವು ತಜ್ಞರ ಅಭಿಪ್ರಾಯ.

ಕೆಟ್ಟ ಪಾಸ್‌ವರ್ಡ್‌ಗಳು
ಪ್ರತೀ ವರ್ಷವೂಅತ್ಯಂತ ಕೆಟ್ಟ ಅಥವಾ ಅತ್ಯಂತ ಸರಳವಾದ ಪಾಸ್‌ವರ್ಡ್‌ಗಳ ಪಟ್ಟಿಯನ್ನು ವಿವಿಧ ಸಂಸ್ಥೆಗಳು ನೀಡುತ್ತವೆ. ಈ ಸಂಸ್ಥೆಗಳು ಹೇಳುವ ಪ್ರಕಾರ ಜನರು ಪಾಸ್‌ವರ್ಡ್‌ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಲೇ ಇಲ್ಲ. ಏಕೆಂದರೆ, ಸಂಸ್ಥೆಗಳು ಈಗಾಗಲೇ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಇರುವ ಪಾಸ್‌ವರ್ಡ್‌ಗಳನ್ನೇ ಮತ್ತೆ ಮತ್ತೆ ಬಳಸಲಾಗುತ್ತಿದೆ. ನಾರ್ಡ್‌ಪಾಸ್‌ ಕಂಪನಿ ನೀಡಿರುವ ವರದಿಯಂತೆ ಪ್ರಮುಖ 10 ಕೆಟ್ಟ ಪಾಸ್‌ವರ್ಡ್‌ಗಳಲ್ಲಿ ಹಲವು ಪಾಸ್‌ವರ್ಡ್‌ಗಳು ಸಂಖ್ಯೆಗಳನ್ನೇ ಒಳಗೊಂಡಿವೆ. ಇವುಗಳಲ್ಲಿ ‘123456’ ಮೊದಲ ಸ್ಥಾನದಲ್ಲಿದ್ದರೆ, ‘123456789’ ಎರಡು ಹಾಗೂ ‘12345678’ ಐದನೇ ಸ್ಥಾನದಲ್ಲಿದೆ.

2020ರ ಕೆಲವು ಕೆಟ್ಟ ಪಾಸ್‌ವರ್ಡ್‌ಗಳು
A) 123456
B) 123456789
C) picture1
D) password
E) 12345678
F) 111111
G) 123123
H) 12345
I) 1234567890
J) senha

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT