ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಚೆ ನೀರೇ ಕಾರಿಗೆ ಇಂಧನ!

Last Updated 7 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಜಗತ್ತಿನ ಓಟಕ್ಕೆ ಇಂಧನ ಬೇಕೇ ಬೇಕು. ಜನರು ನಡೆದುಹೋಗುತ್ತಿದ್ದ ಕಾಲಕ್ಕೆ ಇಂಧನ ಬೇಕಿರಲಿಲ್ಲ. ಬದುಕುಳಿಯಲು ನೀರು ಸಾಕಿತ್ತು. ಆದರೆ, ಈಗ ಜನರು ಓಡುತ್ತಿದ್ದಾರೆ. ನಗರಗಳಿಂದ ನಗರಗಳಿಗೆ, ನಗರಗಳಿಂದ ಹಳ್ಳಿಗೆ ಜನ ಓಡುತ್ತಾರೆ. ಇನ್ನೊಂದೆಡೆ, ನಗರಗಳ ಜನರು ಅಪಾರ ಪ್ರಮಾಣದ ಕೊಳಚೆ ನೀರನ್ನೂ ಕಸವನ್ನೂ ಸೃಷ್ಟಿಸುತ್ತಿದ್ದಾರೆ. ಆ ಕಸವನ್ನೇ ಬಳಸಿಕೊಂಡು ಆ ಓಟಕ್ಕೆ ಇಂಧನ ತುಂಬಿದರೆ ಹೇಗೆ ಎಂಬ ಯೋಚನೆ ಹಲವು ದೇಶಗಳಲ್ಲಿ ಯೋಜನೆಯಾಗಿ ರೂಪುಗೊಂಡಿದೆ. ರಸ್ತೆಬದಿ ಗುರುತ್ವಾಕರ್ಷಣೆಗೆ ಅನುಗುಣವಾಗಿ ಹರಿಯುವ ನೀರನ್ನೇ ಬಳಸಿ ರಸ್ತೆಯ ಮೇಲೆ ಗುರುತ್ವಾಕರ್ಷಣೆಗೆ ವಿರುದ್ಧ ದಿಕ್ಕಿನಲ್ಲಿ ಕಾರು ಓಡಬಹುದು!

ತೀರಾ ಇತ್ತೀಚೆಗಷ್ಟೇ ಬಾರ್ಸಿಲೋನಾದಲ್ಲಿ ಕೊಳಚೆ ನೀರಿನಿಂದ ಇಂಧನ ತಯಾರಿಸಿ ಅದರಿಂದ ಬಸ್ ಓಡುವ ಯೋಜನೆ ರೂಪುಗೊಂಡಿದೆ. ಅದರ ಜೊತೆಗೇ, ಮೊನ್ನೆಯಷ್ಟೇ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಕೊಳಚೆ ನೀರಿನಿಂದ ಹೈಡ್ರೋಜನ್ ಉತ್ಪಾದನೆ ಮಾಡುವ ಹಲವು ಪ್ರಯೋಗಗಳು, ಪ್ರಯತ್ನಗಳು ನಡೆದಿವೆ, ನಡೆಯುತ್ತಿವೆ.

ಕೊಳಚೆ ನೀರಿನಿಂದ ಎಲೆಕ್ಟ್ರೋಲಿಸಿಸ್‌ ಮೂಲಕ ಹೈಡ್ರೋಜನ್ ಉತ್ಪಾದನೆ ಮಾಡಲಾಗುತ್ತದೆ. ಎಲೆಕ್ಟ್ರೋಲಿಸಿಸ್‌ನಲ್ಲಿ ನೀರಿಗೆ ವಿದ್ಯುತ್ ಹರಿಸಿ ಜಲಜನಕವನ್ನು ಬೇರ್ಪಡಿಸಲಾಗುತ್ತದೆ. ಆದರೆ, ಸದ್ಯಕ್ಕೆ ಎಲೆಕ್ಟ್ರೋಲೈಸರ್ ವೆಚ್ಚವೇ ಅಧಿಕ. ಸಾಮಾನ್ಯವಾಗಿ ಪಳೆಯುಳಿಕೆ ಇಂಧನಗಳನ್ನು ಬಳಸಿ ಉದ್ಯಮಕ್ಕೆ ಬೇಕಾಗುವ ಹೈಡ್ರೋಜನ್ ಉತ್ಪಾದನೆ ಮಾಡಲಾಗುತ್ತಿದ್ದು, ಅದರ ವೆಚ್ಚ ಒಂದು ಕಿಲೋ ಹೈಡ್ರೋಜನ್‌ಗೆ 2 ಡಾಲರ್ ಆಗಿದ್ದರೆ, ನೀರನ್ನು ಬಳಸಿ ಉತ್ಪಾದಿಸಿದ ಹೈಡ್ರೋಜನ್ ಕಿಲೋ ಒಂದರ ಬೆಲೆ ಕನಿಷ್ಠ 15-16 ಡಾಲರ್ ಆಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ಬೆಲೆ ಕಡಿಮೆಯಾಗುವ ನಿರೀಕ್ಷೆ ಇದೆ.

ಕೊಳಚೆ ನೀರಿನಿಂದ ಹೈಡ್ರೋಜನ್ ಉತ್ಪಾದನೆ ಸುಲಭವೇ?

ಹಲವು ದೇಶಗಳಲ್ಲಿ ಈಗಾಗಲೇ ಕೊಳಚೆ ನೀರನ್ನು ಸಂಸ್ಕರಿಸುವ ಘಟಕಗಳಿವೆ. ಈ ಘಟಕಗಳು ನಗರದ ಕೊಳಚೆ ನೀರನ್ನು ಸಂಸ್ಕರಿಸಿ, ಘನತ್ಯಾಜ್ಯವನ್ನು ಗೊಬ್ಬರ ಹಾಗೂ ಇತರ ಉತ್ಪನ್ನಗಳನ್ನಾಗಿ ಪರಿವರ್ತಿಸುತ್ತವೆ ಮತ್ತು ಸಂಸ್ಕರಿಸಿದ ನೀರನ್ನು ತೊರೆಗಳಿಗೆ ಬಿಡುತ್ತವೆ. ಈ ಘಟಕಗಳಲ್ಲೇ ಎಲೆಕ್ಟ್ರೋಲೈಸರ್‌ಗಳನ್ನು ಸ್ಥಾಪನೆ ಮಾಡುವುದು ಕಷ್ಟಕರವಲ್ಲ, ಅಷ್ಟು ವೆಚ್ಚದಾಯಕವೂ ಅಲ್ಲ.

ಆದರೆ, ಭಾರತದ ನಗರದಲ್ಲಿ ಕೊಳಚೆ ನೀರನ್ನು ಸಂಸ್ಕರಣೆ ಮಾಡುವ ಘಟಕಗಳೇ ಕಡಿಮೆ. ಕೊಳಚೆ ನೀರನ್ನು ಹಾಗೆಯೇ ತೊರೆಗಳಿಗೆ ಬಿಡುತ್ತಿರುತ್ತೇವೆ. ಹೀಗಾಗಿ, ಕೊಳಚೆ ನೀರಿನಿಂದ ಹೈಡ್ರೋಜನ್ ಉತ್ಪಾದನೆ ಮಾಡುವುದು ಇನ್ನೂ ವೆಚ್ಚದಾಯಕವಾಗಬಹುದು. ಆದರೆ, ಅಸಾಧ್ಯವಾದುದೇನೂ ಅಲ್ಲ. ಅಷ್ಟೇ ಅಲ್ಲ, ಹೈಡ್ರೋಜನ್ ಉತ್ಪಾದನೆಯ ನೆಪದಲ್ಲಾದರೂ ಕೊಳಚೆ ನೀರು ಸಂಸ್ಕರಿಸುವ ಅವಕಾಶವೂ ನಮಗಿದೆ.

ಮೀಥೇನ್ ಉತ್ಪಾದನೆ ಅವಕಾಶ

ಹೈಡ್ರೋಜನ್ ಉತ್ಪಾದನೆ ಪ್ರಕ್ರಿಯೆಯಲ್ಲಿ ಕೊಳಚೆ ನೀರಿನಿಂದ ಮೀಥೇನ್ ಉತ್ಪಾದನೆ ಮಾಡುವ ಅವಕಾಶವೂ ಸಿಗುತ್ತದೆ. ಮೀಥೇನ್ ಅನ್ನೂ ವಾಹನಗಳಿಗೆ ಇಂಧನವಾಗಿ ಬಳಸಬಹುದು. ಹೀಗಾಗಿ, ಹೈಡ್ರೋಜನ್ ಉತ್ಪಾದನೆ ಮಾಡುವ ಘಟಕಗಳ ನಿರ್ವಹಣೆ ವೆಚ್ಚ ಕಡಿಮೆಯಾಗುತ್ತದೆ. ಇದು ಕೂಡ ಹೈಡ್ರೋಜನ್ ವೆಚ್ಚದ ಮೇಲೆ ಪರಿಣಾಮ ಬೀರಬಹುದು.

ಮೈಲೇಜ್ ಲೆಕ್ಕಾಚಾರ

ಕಾರು ತೆಗೆದುಕೊಳ್ಳುವಾಗ ನಾವು ಮೈಲೇಜ್‌ ಲೆಕ್ಕಾಚಾರ ಹಾಕದೆಯೇ ಮುಂದಡಿ ಇಡುವುದೇ ಇಲ್ಲ. ಮೈಲೇಜ್ ಎಷ್ಟು ಎಂಬುದು ಕಾರು ನಮಗೆ ದೀರ್ಘಾವಧಿಯಲ್ಲಿ ಎಷ್ಟರ ಮಟ್ಟಿಗೆ ಜೇಬು ಬಿಸಿ ಮಾಡಬಹುದು ಎಂಬುದರ ಮುನ್ಸೂಚನೆಯನ್ನೂ ನೀಡುತ್ತದೆ. ಹೈಡ್ರೋಜನ್ ಕಾರುಗಳು ಸದ್ಯಕ್ಕೆ ಪೆಟ್ರೋಲ್, ಡೀಸೆಲ್ ಕಾರಿನಷ್ಟೇ ಮೈಲೇಜ್ ಕೊಡುತ್ತವೆ. ಒಂದು ಕಿಲೋ ಹೈಡ್ರೋಜನ್‌ನಿಂದ ಕಾರು ಸಾಮಾನ್ಯವಾಗಿ 95-100 ಕಿ.ಮೀ. ಓಡುತ್ತವೆ. 3-4 ಕಿಲೋ ಹೈಡ್ರೋಜನ್ ತುಂಬಬಹುದಾದ ಟ್ಯಾಂಕ್ ಕಾರಿನಲ್ಲಿ ಇದ್ದರೆ ಸಾಕು.

ಆದರೆ, ಸದ್ಯಕ್ಕೆ ಪರಿಸರಸ್ನೇಹಿ ಹೈಡ್ರೋಜನ್ ಕಾರಿಗೆ ಒಂದು ಕಿ.ಮೀ.ಗೆ ₹12ಕ್ಕಿಂತ ಹೆಚ್ಚು ವೆಚ್ಚ ಮಾಡಬೇಕಾದೀತು. ಎಲೆಕ್ಟ್ರಿಕ್ ಕಾರುಗಳಂತೆಯೇ ಹೈಡ್ರೋಜನ್‌ ಇಂಧನದ ಕುರಿತೂ ಹೆಚ್ಚು ಕಾರು ತಯಾರಕಾ ಕಂಪನಿಗಳಲ್ಲಿ ಆಸಕ್ತಿ ಮೂಡಿರುವುದರಿಂದ ಮುಂದಿನ ದಿನಗಳಲ್ಲಿ ಇದರ ಬೆಲೆ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಬಹುದು.

ಕೊಳಚೆ ನೀರೇ ಕೊರತೆಯಾಗಬಹುದು!

ಒಂದು ವೇಳೆ ಕೊಳಚೆ ನೀರಿನಿಂದ ಹೈಡ್ರೋಜನ್ ಉತ್ಪಾದನೆ ಹೆಚ್ಚಿ, ಇಡೀ ದೇಶದ ಕಾರುಗಳು ಕೊಳಚೆ ನೀರಿನಿಂದ ಉತ್ಪಾದಿಸಿದ ಹೈಡ್ರೋಜನ್ನನ್ನೇ ಬಳಸುತ್ತಿವೆ ಎಂದು ಕಲ್ಪಿಸಿಕೊಂಡರೆ, ಆಗ ಕೊಳಚೆ ನೀರೇ ಕೊರತೆಯಾಗಬಹುದು! ಈ ಬಗ್ಗೆ ಅಧ್ಯಯನ ನಡೆಸುತ್ತಿರುವ ತಜ್ಞರಿಗೆ ಕಾಡುತ್ತಿರುವ ಸಮಸ್ಯೆಯ ಪೈಕಿ ಇದೂ ಒಂದು! ಏಕೆಂದರೆ, ನಮ್ಮಲ್ಲಿ ಅಷ್ಟರ ಮಟ್ಟಿಗೆ ಕೊಳಚೆ ನೀರು ಉತ್ಪಾದನೆಯಾಗುತ್ತಿಲ್ಲ. ಇಂಧನದ ಬೇಡಿಕೆ ಹೆಚ್ಚಿದಂತೆ ಕೊಳಚೆ ನೀರಿನ ಉತ್ಪಾದನೆ ಹೆಚ್ಚುವುದೂ ಇಲ್ಲ. ಅದನ್ನು ಹೆಚ್ಚು ಮಾಡುವ ಅವಕಾಶವೂ ಇರುವುದಿಲ್ಲ. ಹೀಗಾಗಿ, ಇದು ದೀರ್ಘಾವಧಿಯಲ್ಲಿ ಅಷ್ಟು ಉಪಯುಕ್ತ ವಿಧಾನವಲ್ಲ ಎಂಬ ಮಾತೂ ಇದೆ.

ಹೈಬ್ರಿಡ್‌ ಬಗ್ಗೆ ಆಸಕ್ತಿ

ಅಷ್ಟಕ್ಕೂ ಕಾರುಗಳು ಮತ್ತು ಬಸ್‌ಗಳನ್ನು ಹೈಬ್ರಿಡ್‌ ಮಾಡಿದಾಗ, ಅದರಲ್ಲಿ ಹೈಡ್ರೋಜನ್, ಮೀಥೇನ್ ಹಾಗೂ ಪೆಟ್ರೋಲ್ ಮೂರನ್ನೂ ಬಳಸಬಹುದಾದ ಅವಕಾಶವಿರುತ್ತದೆ. ಇಂಥ ಎಂಜಿನ್‌ಗಳ ತಯಾರಿಕೆಗೂ ಹಲವು ವಾಹನ ತಯಾರಕಾ ಕಂಪನಿಗಳು ಆಸಕ್ತಿ ತೋರುತ್ತಿವೆ. ಅದರಿಂದಾಗುವ ಅನುಕೂಲವೆಂದರೆ ನಾವು ಪೆಟ್ರೋಲ್ ಬೆಲೆ ಏರಿದಾಗ, ಮೀಥೇನನ್ನೂ, ಮೀಥೇನ್ ಬೆಲೆ ಏರಿದಾಗ ಹೈಡ್ರೋಜನ್ ಅನ್ನೂ ತುಂಬಿಸಿಕೊಳ್ಳಬಹುದು. ಅಥವಾ ಯಾವ ಇಂಧನ ಸುಲಭವಾಗಿ ಲಭ್ಯವಿದೆಯೋ ಅದನ್ನು ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT