ಬುಧವಾರ, ಸೆಪ್ಟೆಂಬರ್ 29, 2021
21 °C

ತಂತ್ರಜ್ಞಾನ: ಆಕಾಶಮಾರ್ಗದಲ್ಲಿ ನೆಟ್...

ಶರತ್‌ ಭಟ್‌ ಸೇರಾಜೆ Updated:

ಅಕ್ಷರ ಗಾತ್ರ : | |

Prajavani

ಎಲಾನ್ ಮಸ್ಕ್ ಎಂಬ ಕನಸುಗಾರ ಉದ್ಯಮಿಯು ಸ್ಪೇಸ್-ಎಕ್ಸ್ ಎಂಬ ಸಂಸ್ಥೆಯ ಮೂಲಕ ಹಮ್ಮಿಕೊಂಡಿರುವ ಸ್ಟಾರ್ಲಿಂಕ್ ಯೋಜನೆ ಸಾಕಾರವಾದರೆ ಇನ್ನೀಗ ಉಪಗ್ರಹಗಳ ಮೂಲಕ ಆಕಾಶಮಾರ್ಗವಾಗಿಯೂ ನೆಟ್ಟು ಬರಲಿದೆ...

**

‘ಮನುಷ್ಯನ ಬಾಳುವೆಗೆ ಅಗತ್ಯವಾಗಿ ಬೇಕಾದದ್ದು ಏನು?’ ಅಂತ ಯಾರಾದರೂ ಹಳಬರನ್ನು ಕೇಳಿದರೆ, ’ರೋಟಿ, ಕಪ್‌ಡಾ, ಮಕಾನುಗಳು’ ಎನ್ನುತ್ತಿದ್ದರೇನೋ? ಆ ಪಟ್ಟಿಯಲ್ಲಿ ಅಶನ, ವಸನ, ವಸತಿಗಳ ಕೆಳಗಿನ ಜಾಗಕ್ಕೆ ಅಂತರ್ಜಾಲವೂ ಮೆತ್ತಗೆ ನುಸುಳಿದ್ದು ಹೊಸ ವೃತ್ತಾಂತವೇನಲ್ಲ. ತಾಮ್ರದ ತಂತಿಗಳಲ್ಲಿ ಜಾರಿ ಅದು ಬರುತ್ತಿತ್ತು, ಕೇಬಲ್ ಟಿವಿಯವರ ತಂತುಗಳಲ್ಲಿ ಸೂಸೂಕರಿಸುತ್ತ ಹಾದಿಗೊಂಡು, ಡಿಎಸ್ಎಲ್ಲಿನಲ್ಲಿ ಮಂದಗಮನೆಯಾಗಿ, ಮೊಬೈಲಿನಲ್ಲಿ ಡಾಟಾ ಪ್ಯಾಕಾಗಿ ಹಾಯಾಗಿ ತೇಲಿ, ಆಪ್ಟಿಕಲ್ ಫೈಬರಿನಲ್ಲಿ ಬರಬರ ಭರದಲಿ ನುಗ್ಗಿ ಎಲ್ಲ ಮನೆ ಮನೆಗಳಲ್ಲಿ ಇಂಟರ್ನೆಟ್ಟು ಪ್ರತ್ಯಕ್ಷವಾಗುತ್ತಲಿದೆ. ಈ ಅಂತರ್ಜಾಲವೆಂಬ ನುಸುಳುಕೋರಶಕ್ತಿಯು ಯಾವ್ಯಾವ ಇಕ್ಕಟ್ಟಾದ ಸಂದಿ, ಓಣಿಗಳಲ್ಲೆಲ್ಲ ತೂರಿ, ಯಾವ ಉಚ್ಚಬಿಂದುಗಳನ್ನು ಏರಿ ತಾಕಿ, ನಮ್ಮ ಮನೆಗೆ ಬಂದೀತು ಅನ್ನುವುದು ಮಾತ್ರ ಹೊಸ ವಿಷಯ. ಎಲಾನ್ ಮಸ್ಕ್ ಎಂಬ ಕನಸುಗಾರ ಉದ್ಯಮಿಯು ಸ್ಪೇಸ್-ಎಕ್ಸ್ ಎಂಬ ಸಂಸ್ಥೆಯ ಮೂಲಕ ಹಮ್ಮಿಕೊಂಡಿರುವ ಸ್ಟಾರ್ಲಿಂಕ್ ಯೋಜನೆ ಸಾಕಾರವಾದರೆ ಇನ್ನೀಗ ಉಪಗ್ರಹಗಳ ಮೂಲಕ ಆಕಾಶಮಾರ್ಗವಾಗಿಯೂ ನೆಟ್ಟು ಬರಲಿದೆ!

ಹಾಗೆ ನೋಡಿದರೆ, ಉಪಗ್ರಹಗಳಿಂದ ಇಂಟರ್ನೆಟ್ಟು ಬರುವುದು ಹೊಸ ವಿಚಾರವೇನಲ್ಲ. ಟಿವಿ, ರೇಡಿಯೊ ಸೇವೆಗಳನ್ನು ಕೊಡುವ ಉಪಗ್ರಹಗಳಂತೆ ನೆಟ್ಟನ್ನೂ ಕೊಡಬಲ್ಲ ಸಂಪರ್ಕ ಉಪಗ್ರಹಗಳಿವೆ. ಇವು ಸುಮಾರು 35,786 ಕಿ.ಮೀ. ಎತ್ತರಕ್ಕೆ ಹೋಗಿ ಚಲಿಸುತ್ತವೆ; ಇವು ಭೂಮಿ ತಿರುಗಿದ ಹಾಗೇ ತಿರುಗಿ, ಅದರ ಜೊತೆ ಜೊತೆಗೇ ಹೆಜ್ಜೆ ಹಾಕುವುದರಿಂದ ಅವು ಒಂದೇ ಕಡೆ ನಿಶ್ಚಲವಾಗಿ ನಿಂತಿವೆಯೇನೋ ಅನ್ನಿಸುತ್ತವೆ. ಹೀಗಾಗಿ ಅವುಗಳ ವೃತ್ತಾಕಾರದ ಪಥಕ್ಕೆ ಭೂಸ್ಥಾಯಿ ಕಕ್ಷೆ (Geostationary orbit) ಅಂತ ಹೆಸರು. ಹೀಗಾಗಿ ಹವಾಮಾನ ವೈಪರೀತ್ಯವಾದರೆ, ’ಅಯ್ಯೋ ಸಿಗ್ನಲ್ ಹೋಯ್ತಾ’ ಎಂಬಂತಾಗುತ್ತದೆ, ಸಿಗ್ನಲ್ಲುಗಳು ಅಷ್ಟೊಂದು ದೂರ ಹೋಗಿ ಬರಬೇಕಾದ್ದರಿಂದ ನೆಟ್ಟು ಬೆಟ್ಟ ಹತ್ತಹೊರಟವನಂತೆ ಏದುಸಿರು ಬಿಡುತ್ತ ನಿಧಾನವಾಗುತ್ತದೆ, ಬ್ಯಾಂಡ್‌ವಿಡ್ತ್‌ (Bandwidth) ಹೆಚ್ಚು ಇರುವುದಿಲ್ಲ, ಮತ್ತು ಅಂತರ್ಜಾಲ ದುಬಾರಿಯೂ ಆಗುತ್ತದೆ.

ಈ ತೊಡಕುಗಳನ್ನೆಲ್ಲ ಬಿಡಿಸಬೇಕು, ಪೇಟೆಗಳಿಂದ ದೂರವೋ, ಕಾಡಲ್ಲೋ, ಗುಡ್ಡದಲ್ಲೋ, ಹಡಗಿನಲ್ಲೋ ಇರುವವರಿಗೂ ನೆಟ್ಟು ಸಿಗಬೇಕು, ಕಡಮೆ ಬೆಲೆಗೂ ಅದು ದಕ್ಕಬೇಕು ಎಂಬುದು ಸ್ಪೇಸ್-ಎಕ್ಸ್ ಸಂಸ್ಥೆಯ ಹೆಗ್ಗುರಿ. ಆ ನಿಟ್ಟಿನಲ್ಲಿ ಅದು ಈಗ ಇಟ್ಟಿರುವುದು ಅಂಬೆಗಾಲನ್ನು ಮಾತ್ರ. ಸ್ಟಾರ್ಲಿಂಕಿನ ಕಥೆಯ ಮೊದಲ ಪುಟವು 2019ರಲ್ಲಿ ’ಫಾಲ್ಕನ್ 9’ ಎಂಬ ಉಡಾವಣಾ ವಾಹನಗಳ ಮೂಲಕ 60 ಉಪಗ್ರಹಗಳನ್ನು ಗಗನಕ್ಕೇರಿಸಿದಲ್ಲಿಂದ ಶುರುವಾಗುತ್ತದೆ. ಈಗ ಆ ಕಥೆ ಸುಮಾರು 1,800 ಪುಟ್ಟ ಉಪಗ್ರಹಗಳನ್ನು ಹಾರಿಸಿ, ’ನೆಲಕ್ಕಂಟಿ ಬಿದ್ದ ಆಕಾಶಯಾನದ ಕನಸನ್ನು’ ನನಸಾಗಿಸಿದ ಐವತ್ತನೇ ಪುಟಕ್ಕೆ ಬಂದು ನಿಂತಿದೆ. ಇನ್ನೊಂದಷ್ಟು ವರ್ಷಗಳಲ್ಲಿ ಕೊನೆಯ ಪುಟದ ಆಸುಪಾಸಿಗೆ ಬರುವಾಗ ಸುಮಾರು 42,000 ಉಪಗ್ರಹಗಳ ಬೃಹಜ್ಜಾಲವನ್ನು ಬಾನಂಗಳದಲ್ಲಿ ನಿಲ್ಲಿಸಿ, ’ಒಂದನೊಂದಕೆ ಕೂಡಿಸಾಡಿಸುವ, ಕುಣಿಸುವ ಚಮತ್ಕಾರ’ ಮೆರೆಯಬೇಕು ಎಂಬುದು ಎಲಾನ್ ಮಸ್ಕ್ ಮಹಾಶಯನ ಆಶಯ! ಎಲ್ಲ ದೇಶಗಳ ಸರ್ಕಾರೀ ಸಂಸ್ಥೆಗಳು ಸೇರಿ ಇದುವರೆಗೆ ಉಡಾಯಿಸಿರುವ ಉಪಗ್ರಹಗಳಲ್ಲಿ ಈಗ ಜೀವಂತ ಇರುವುದು ಬರೀ 4,084 ಉಪಗ್ರಹಗಳು ಎಂಬ ಲೆಕ್ಕವನ್ನು ತಲೆಗೆ ತಂದುಕೊಂಡರೆ ಈ ಯೋಜನೆಯ ವಿಸ್ತಾರ, ಹಿರಿಯಾಸೆಯ ಕಲ್ಪನೆ ಮೂಡೀತು!

ಈ ಪುಟ್ಟ ಉಪಗ್ರಹಗಳು ಭೂಸ್ಥಾಯಿ ಕಕ್ಷೆಯ ಉಪಗ್ರಹಗಳಷ್ಟು ಹೈಜಂಪ್ ಮಾಡಿ ದೂರತೀರ ಯಾನ ಮಾಡುವುದಿಲ್ಲ, ಅವುಗಳು ಹಾರುವುದು ಬರೀ 550 ಕಿ.ಮೀ. ಎತ್ತರಕ್ಕೆ. ಹೀಗಾಗಿ ಸಿಗ್ನಲ್ಲುಗಳು ಭಯಂಕರ ದೂರ ಹೋಗಿ ಬರಬೇಕು ಎಂಬ ಕಷ್ಟ ಇಲ್ಲ; ’ನೆಟ್ಟು ಸ್ಪೀಡಾಗಿದೆ’ ಅನ್ನಿಸಿಕೊಳ್ಳಲಿಕ್ಕೆ ಇದು ಮುಖ್ಯ. ಗ್ರಾಹಕರು ಮನೆಯ ಹೊರಗೆ ಒಂದು ಡಿಶ್ ನಿಲ್ಲಿಸಿದರೆ ಆಯಿತು, ಅದು ಟಪಕ್ಕನೆ ಆಕಾಶವನ್ನು ಸ್ಕ್ಯಾನ್ ಮಾಡಿ, ಅದರ ತಲೆ ಮೇಲೆ ಯಾವ ಉಪಗ್ರಹ ಆ ಕ್ಷಣದಲ್ಲಿ ಇದೆಯೋ ಅದಕ್ಕೆ ನಮಸ್ಕಾರ ಹಾಕಿ, ಅದರ ಜೊತೆ ಮಾತಾಡುತ್ತದೆ. ತೊಂಬತ್ತರ ದಶಕದಲ್ಲಿ ಟಿವಿ ’ಗರ ಗರ’ ಎಂದರೆ ನಾವೆಲ್ಲ ಆಂಟೆನಾವನ್ನು ಸ್ವಲ್ಪ ಆಚೆ ಸ್ವಲ್ಪ ಈಚೆ ತಿರುಗಿಸಿ, ’ಈಗ ಬಂತಾ’ ಅಂತ ಕೊರಳುದ್ದ ಮಾಡುತ್ತಿದ್ದೆವು. ಈ ಡಿಶ್ ಆ ಅಂಟೆನಾಕ್ಕಿಂತ ಬುದ್ಧಿವಂತ! ಅಲೆಗಳು ಇರುವ ದಿಕ್ಕಿಗೆ ಅದೇ ತಿರುಗಿಕೊಳ್ಳುತ್ತದೆ.

ಬೆಟ್ಟದ ಮೇಲೆ ಹತ್ತಿದವನಿಗೆ ಇಡೀ ಊರು ಒಂದೇ ನೋಟಕ್ಕೆ ಕಾಣುವಂತೆ ಉಪಗ್ರಹಗಳು ಮೇಲೆ ಮೇಲೆ ಹೋದಷ್ಟು ಅವಕ್ಕೆ ಹೆಚ್ಚೆಚ್ಚು ಭೂಮಿ ಕಾಣುತ್ತದೆ. ಸ್ಪೇಸ್-ಎಕ್ಸಿನವು ತೀರಾ ಕೆಳಮಟ್ಟದಲ್ಲಿರುವುದರಿಂದ, ಇಡೀ ವಸುಂಧರೆ ಅವುಗಳ ತೆಕ್ಕೆಗೆ ಸಿಗಬೇಕಾದರೆ ಸಾವಿರಗಟ್ಟಲೆ ಉಪಗ್ರಹಗಳು ಬೇಕು. ಇದೊಂಥರಾ, ಬೆಂಗಳೂರಿನಲ್ಲಿ ಸಾವಿರ ಜನರು ಸಾವಿರ ಬಹುಮಹಡಿ ಕಟ್ಟಡಗಳಲ್ಲಿ ನಿಂತು ಒಬ್ಬರ ಜೊತೆ ಇನ್ನೊಬ್ಬರು ಮಾತಾಡಿದರೆ, ಅವರೆಲ್ಲರ ನೋಟಗಳು ಸೇರಿ ಇಡೀ ಬೆಂಗಳೂರನ್ನು ಒಳಗೊಳ್ಳಬಹುದಾದಂತೆ. ಇಷ್ಟೊಂದು ಉಪಗ್ರಹಗಳು ಅಂಬರದಲ್ಲಿ ಇಡಿಕಿರಿದರೆ ಅವು ಸಿಕ್ಕಾಬಟ್ಟೆ ಬೆಳಕನ್ನು ಪ್ರತಿಫಲಿಸಿ ಖಗೋಳಶಾಸ್ತ್ರಜ್ಞರಿಗೆ ತೊಂದರೆ ಕೊಡುತ್ತವೆ; ನಭೋಮಂಡಲಕ್ಕೆ ದೂರದರ್ಶಕಗಳನ್ನು ನೆಟ್ಟು ಕೂತು ತಾರೆ ನೀಹಾರಿಕೆಗಳಾಚೆಯ ಸಮಾಚಾರದಲ್ಲಿ ಆಸಕ್ತರಾಗಿರುವ ತಜ್ಞರಿಗೆ ಈ ಉಪಗ್ರಹಗಳು ಕಾಟ ಕೊಡುತ್ತವೆ; ಇವುಗಳ ಭಗ್ನಾವಶೇಷಗಳ ಕಸ ಬಾನಿನಲ್ಲಿ ರಾಶಿ ಬೀಳಲಿದೆ ಎಂಬೆಲ್ಲ ಗಂಭೀರ ಕೂಗುಗಳೂ ಎದ್ದಿವೆ. ಅದಕ್ಕೇನು ಮಾಡುತ್ತಾರೋ ಕಾದು ನೋಡಬೇಕಾಗಿದೆ.

ಏನೇ ಇದ್ದರೂ, ಈ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಸುದ್ದಿಗಳನ್ನು ಹುಟ್ಟಿಸಲಿದೆ ಅನ್ನುವುದಂತೂ ಈ ಕ್ಷಣದ ಸತ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು