ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಜಾಲದಲ್ಲಿ ಸದ್ದು ಮಾಡುತ್ತಿದೆ ಹೊಸ ಚಾಟ್ ಬಾಟ್ ChatGPT

ಕೇಳಿದ್ದಕ್ಕೆ ಉತ್ತರ ನೀಡುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಚಾಟಿಂಗ್ ತಂತ್ರಾಂಶ
Last Updated 27 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಅಂತರಜಾಲದಲ್ಲಿ ಸಕ್ರಿಯರಾಗಿರುವವರಿಗೆ ಚಾಟ್ ಬಾಟ್‌ಗಳ ಬಗ್ಗೆ ಅರಿವಿದೆ. ಹಲವು ಕಂಪನಿಗಳು ಅವುಗಳ ಜಾಲತಾಣಗಳಲ್ಲಿ ಚಾಟ್ ಬಾಟ್‌ಗಳನ್ನು ಅಳವಡಿಸಿ, ಗ್ರಾಹಕರ ನಿರ್ದಿಷ್ಟ ಸಂದೇಹಗಳಿಗೆ ಸ್ವಯಂಚಾಲಿತವಾಗಿ ನಿರ್ದಿಷ್ಟ ಉತ್ತರವನ್ನು ಪಠ್ಯ ರೂಪದಲ್ಲಿ ನೀಡುವ ಗ್ರಾಹಕ ಸಹಾಯವಾಣಿಗಳಂತೆ ಕೆಲಸ ಮಾಡುತ್ತವೆ ಅವು. ಇದು ಸಾಧ್ಯವಾಗಿರುವುದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಆರ್ಜಿತ ಬುದ್ಧಿಮತ್ತೆ) ಎಂಬ ತಂತ್ರಜ್ಞಾನದ ಆಧಾರದಲ್ಲಿ. ಅಂದರೆ, ಪ್ರಶ್ನೆಯನ್ನು ಟೈಪ್ ಮಾಡಿದ ನಿರ್ದಿಷ್ಟ ಪದಗಳನ್ನು ಗ್ರಹಿಸಿಕೊಂಡು, ಅದಕ್ಕೆ ಸೂಕ್ತವಾಗಬಹುದಾದ ಉತ್ತರವನ್ನು ಸ್ವಯಂಚಾಲಿತವಾಗಿ ನೀಡುವ ವ್ಯವಸ್ಥೆಯದು.

ಕಳೆದೊಂದು ತಿಂಗಳಿನಿಂದ ಅಂತರಜಾಲದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿರುವುದು ಚಾಟ್ ಜಿಪಿಟಿ ಎಂಬ ಎಐ ಆಧಾರಿತ ಚಾಟಿಂಗ್ ವ್ಯವಸ್ಥೆ. ಓಪನ್ ಎಐ ಎಂಬ ಸಂಸ್ಥೆಯು ರೂಪಿಸಿದ ಈ ಚಾಟ್ ಜಿಪಿಟಿ (ChatGPT)ಗೆ ನಮ್ಮ ಇಮೇಲ್ ವಿಳಾಸ ಹಾಗೂ ಫೋನ್ ನಂಬರ್ ದಾಖಲಿಸಿ ನೋಂದಾಯಿಸಿಕೊಂಡು ಒಳ ಪ್ರವೇಶಿಸಿ, ಏನೇ ಪ್ರಶ್ನೆ ಕೇಳಿದರೂ ಅದಕ್ಕೆ ಉತ್ತರಗಳನ್ನು ಪಠ್ಯ ರೂಪದಲ್ಲಿ ಅಲ್ಲೇ ಪಡೆಯಬಹುದು. ಲಿಂಕ್ ಇಲ್ಲಿದೆ: https://chat.openai.com. ಇಲ್ಲಿ ಇಮೇಲ್, ಫೋನ್ ನಂಬರ್ ನೀಡಬೇಕಾಗುವುದರಿಂದ ಖಾಸಗಿತನದ ಬಗ್ಗೆ ಆತಂಕಪಡುವವರು ಎಚ್ಚರವಹಿಸಿ.

ಉದಾಹರಣೆಗೆ, ನ್ಯೂಟನ್ನನ ನಿಯಮ ಏನು ಅಥವಾ ಡಾರ್ವಿನ್ ಥಿಯರಿ ಏನು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರೆ, ಅದು ತನ್ನಲ್ಲಿ ಅಡಕವಾಗಿರುವ ಮಾಹಿತಿಕೋಶದಿಂದ ತಕ್ಷಣವೇ ಉತ್ತರವನ್ನು ವ್ಯವಸ್ಥಿತವಾಗಿ ಮುಂದಿಡುತ್ತದೆ. ಕುತೂಹಲಕ್ಕಾಗಿ 'ಕನ್ನಡ ಕಲಿಯುವುದು ಹೇಗೆ?' ಅಂತ ಕನ್ನಡದಲ್ಲಿ ಟೈಪ್ ಮಾಡಿ ಪ್ರಶ್ನೆ ಕೇಳಿ ನೋಡಿದಾಗ, ಅಸಂಬದ್ಧವಾಗಿ ಕನ್ನಡದಲ್ಲೇ ಉತ್ತರ ದೊರಕಿದೆ. (ಅದು ಅನ್ಯಭಾಷೆಗಳಿಗೆ ಇನ್ನಷ್ಟೇ ಅಭಿವೃದ್ಧಿಯಾಗಬೇಕಿದೆ). ಆದರೆ ಇಂಗ್ಲಿಷಿನಲ್ಲಿ How to learn Kannada ಅಂತ ಟೈಪ್ ಮಾಡಿ ಕೇಳಿದರೆ, ಅತ್ಯಂತ ವ್ಯವಸ್ಥಿತವಾಗಿ, ಹಂತ ಹಂತವಾದ ಹೆಜ್ಜೆಗಳ ಮೂಲಕ ವಿವರಿಸುತ್ತದೆ.

ನವೆಂಬರ್ 30ರಂದು ಘೋಷಣೆಯಾದ ಚಾಟ್‌ಜಿಪಿಟಿ,ಶಕ್ತಿಶಾಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನದ ಆಧುನಿಕ ರೂಪ ಮತ್ತು ಅದರ ಸಾಧ್ಯತೆಗಳ ಅಗಾಧತೆಯನ್ನು ತೆರೆದಿಟ್ಟಿದೆ, ಭವಿಷ್ಯ ಹೇಗಿರುತ್ತದೆ ಎಂಬುದನ್ನೂ! ಗೂಗಲ್ ಎಂಬ ಸರ್ಚ್ ಎಂಜಿನ್ ಹೇಗೆ ಕೆಲಸ ಮಾಡುತ್ತದೆಯೋ ಅದೇ ರೀತಿ ಅಥವಾ ಅದಕ್ಕಿಂತಲೂ ಶಿಸ್ತುಬದ್ಧವಾಗಿ ಈ ಚಾಟ್ ಬಾಟ್ ಕೆಲಸ ಮಾಡುತ್ತದೆ.

ನೋಂದಾಯಿಸಿಕೊಂಡವರು ನೂರಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳಬಹುದು. ಎಲ್ಲಿಯವರೆಗೆ ಎಂದರೆ, ಕೆಲವೊಂದು ಕಂಪ್ಯೂಟರ್ ಪ್ರೋಗ್ರಾಂನ ಕೋಡ್‌ಗಳನ್ನು, ಜಾವಾಸ್ಕ್ರಿಪ್ಟ್‌ಗಳನ್ನು ಕೂಡ ಅದು ತಿಳಿಸಿಕೊಡಬಲ್ಲುದು. ಕುತೂಹಲಕ್ಕಾಗಿ, Write a blogger code for scrolling text ಎಂದು ಬರೆದಾಗ, ಸೂಕ್ತವಾದ HTML ಕೋಡ್ ಅನ್ನು ಒದಗಿಸಿತು. ಅಷ್ಟೇ ಅಲ್ಲದೆ, ಬ್ಲಾಗ್‌ನಲ್ಲಿ ಟಿಕರ್‌ನಂತೆ ಸ್ಕ್ರಾಲ್ ಆಗುವ ಪಠ್ಯವನ್ನು ಯಾವ ರೀತಿಯೆಲ್ಲ ಬಳಸಬಹುದು ಎಂಬ ಹಂತಗಳನ್ನೂ ತಿಳಿಸಿತು. ಉದಾಹರಣೆಗೆ, ಸ್ಕ್ರಾಲ್ ಆಗುವುದು ಅಥವಾ ಸ್ಲೈಡ್ ಆಗುವುದು, ಇಲ್ಲವೇ ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ, ಮೇಲಿನಿಂದ ಕೆಳಕ್ಕೆ, ಕೆಳಗಿನಿಂದ ಮೇಲಕ್ಕೆ ಸ್ಕ್ರಾಲ್ ಆಗುವಂತೆ ಈ ಕೋಡ್‌ನಲ್ಲಿ ಏನು ಬದಲಾವಣೆ ಮಾಡಬೇಕು ಎಂದೂ ತಿಳಿಸಿಕೊಡುತ್ತದೆ.

ವಿಷಯ ಏನೆಂದರೆ, ಚಾಟ್‌ಜಿಪಿಟಿಗೆ ಏನೂ ಗೊತ್ತಿಲ್ಲ. ಅಂತರಜಾಲದಿಂದ ಮತ್ತು ಪ್ರೋಗ್ರಾಮಿಂಗ್ ಮೂಲಕ ಮಾಹಿತಿಗಳನ್ನು ಅದರ ದತ್ತಸಂಚಯಕ್ಕೆ ಊಡಿಸಲಾಗಿದೆ. ಜೊತೆಗೆ ಈ ತಂತ್ರಾಂಶಕ್ಕೆ ಮಾನವೀಯ ಸ್ಪರ್ಶ ನೀಡಿ, ತರಬೇತುಗೊಳಿಸಲಾಗಿದೆ. ಅದು ತನಗೆ ದೊರೆತ ಮಾಹಿತಿಯ ಆಧಾರದಲ್ಲಿ ಕಲಿಯುತ್ತಾ (ಮಾಹಿತಿಯನ್ನು ಆರ್ಜಿಸುತ್ತಾ), ತಾನಾಗಿ 'ಯೋಚಿಸಿ' ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಾ, ತಪ್ಪುಗಳಿಂದ ಕಲಿಯುತ್ತಾ ಬೆಳೆಯುತ್ತಿದೆ. ಇದುವೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್. ಇದನ್ನು ಕೃತಕವಾದ ಬುದ್ಧಿಮತ್ತೆ ಎಂದೂ ಕರೆಯುವವರಿದ್ದಾರೆ. ಒಟ್ಟಿನಲ್ಲಿ ಇದು ದತ್ತಾಂಶವನ್ನು ಅಥವಾ ಪ್ರೋಗ್ರಾಮಿಂಗ್ ಮೂಲಕ ಊಡಿಸಿದ ಮಾಹಿತಿಯನ್ನು ಕಲಿತುಕೊಳ್ಳುವ ಯಾಂತ್ರಿಕ ಕಲಿಕೆ ಅಥವಾ ಮೆಷಿನ್ ಲರ್ನಿಂಗ್ (ಎಂಎಲ್) ಎಂಬ ತಂತ್ರಜ್ಞಾನದ ವಿಸ್ತೃತ ರೂಪ.

ಈ ಚಾಟ್ ಜಿಪಿಟಿಗೆ ಲಾಗಿನ್ ಆಗುವಾಗಲೇ ನಮಗೆ ಎಚ್ಚರಿಕೆಯ ಸಂದೇಶಗಳು ಕಾಣಿಸುತ್ತವೆ. ಅಂದರೆ, ಇಲ್ಲಿ ದೊರೆಯುವ ಉತ್ತರಗಳು ಸರಿ ಇರಬಹುದು ಅಥವಾ ತಪ್ಪಾಗಿಯೂ ಇರಬಹುದು. ಆದರೆ, ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಇನ್ನೂ ಬೆಳೆಯಬೇಕಿರುವ ಈ ಚಾಟ್ ಬಾಟ್, ಗೂಗಲ್‌ಗೆ ಪ್ರತಿಸ್ಫರ್ಧಿಯಾಗಿ ರೂಪುಗೊಳ್ಳಬಹುದು. ಇದನ್ನು ಹೆಚ್ಚು ಬಳಸಿ, ತಪ್ಪು ಉತ್ತರಗಳು ಕಂಡುಬಂದಲ್ಲಿ ಸರಿ ಇಲ್ಲ ಎಂದು ರಿಪೋರ್ಟ್ ಮಾಡಿದರೆ, ಯಂತ್ರವು ಅದರಿಂದಲೂ ಕಲಿತುಕೊಳ್ಳುತ್ತದೆ. ಈ ರೀತಿಯಾಗಿ ಬಳಕೆದಾರರಿಂದಲೇ ಬೆಳೆಯಬಹುದಾದ ಮಾಹಿತಿಕೋಶವಿದು.

ಸದ್ಯಕ್ಕೆ ಸಂಶೋಧನೆ ಮತ್ತು ಪ್ರಾಯೋಗಿಕ ಹಂತದಲ್ಲಿರುವ ಚಾಟ್‌ಜಿಪಿಟಿ ಉಚಿತವಾಗಿ ಲಭ್ಯವಿದೆ. ಮುಂದಕ್ಕೆ ಪಾವತಿ ವ್ಯವಸ್ಥೆಯೂ ಬರಲಿದೆ ಎಂದು ಇದನ್ನು ರೂಪಿಸಿದ ಓಪನ್ಎಐ ಕಂಪನಿಯು ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಬಹುಶಃ ಜನಸಾಮಾನ್ಯರಿಗೆ ಉಚಿತವಾಗಿಯೂ, ಚಾಟ್ ಬಾಟ್ ಅಳವಡಿಸುವ ಕಂಪನಿಗಳಿಗೆ ಶುಲ್ಕಸಹಿತವಾಗಿಯೂ ಲಭ್ಯವಾಗುವ ಸಾಧ್ಯತೆಯಿದೆ. ಓಪನ್ಎಐ ಕಂಪನಿಯು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ನೆರವಾಗುವಂತೆ ರೂಪಿಸುವ ಗುರಿ ಹೊಂದಿರುವ ಸ್ಯಾನ್ ಫ್ರಾನ್ಸಿಸ್ಕೊದ ಸಂಸ್ಥೆ.

ಈಗಾಗಲೇ ಗೂಗಲ್ ಸರ್ಚ್ ಎಂಜಿನ್ ಮೂಲಕ ಯಾವುದೇ ಮಾಹಿತಿಯನ್ನು ಹುಡುಕಿ, ಅಲ್ಲಿ ದೊರೆತದ್ದೇ ಪರಮಸತ್ಯ ಎಂದುಕೊಳ್ಳುವ ಯುವ ಪೀಳಿಗೆಯ ಕೈಗೆ ಈ ಚಾಟ್ ಬಾಟ್ ಮತ್ತೊಂದು ಅಸ್ತ್ರ. ಗೂಗಲ್‌ನಲ್ಲಿ ನಕಲಿ, ಸುಳ್ಳು ಮಾಹಿತಿಗಳು ಹೇಗೆ ಸಿಗುತ್ತವೆಯೋ, ಈ ಚಾಟ್ ಬಾಟ್ ಮೂಲಕವೂ ತಪ್ಪು ಮಾಹಿತಿ ಲಭ್ಯವಾಗುವ ಅಪಾಯವಿದೆ ಎಂಬ ಎಚ್ಚರಿಕೆ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT