ಬುಧವಾರ, ಜನವರಿ 22, 2020
16 °C

ವಾಟ್ಸ್ಆ್ಯಪ್ ಕಾಡುತ್ತಿರುವ ಮತ್ತೊಂದು ಬಗ್; ಒಮ್ಮೆಗೆ ಗ್ರೂಪ್‌ನ ಎಲ್ಲ ಸಂದೇಶ ಮಾಯ!

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ವಾಟ್ಸ್‌ಆ್ಯಪ್‌ಗೆ ಕಾಡುತ್ತಿದೆ ಬಗ್‌

ನವದೆಹಲಿ: ಸಂದೇಶಗಳನ್ನು ಒಮ್ಮೆಗೆ ಅಳಿಸಿ ಹಾಕಬಲ್ಲ ಬಗ್‌ (ದೋಷ) ಅಪಾಯ ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಎದುರಾಗಿದೆ ಎಂದು  ತಾಂತ್ರಿಕ ಸುರಕ್ಷತೆ ವಿಷಯಗಳ ಸಂಶೋಧಕರು ಹೇಳಿದ್ದಾರೆ.

ಹ್ಯಾಕರ್‌ಗಳು ಹರಿಯಬಿಟ್ಟಿರುವ ಸಂದೇಶ ವಾಟ್ಸ್‌ಆ್ಯಪ್‌ ಗ್ರೂಪ್‌ ತಲುಪುತ್ತಿದ್ದಂತೆ ಗುಂಪಿನ ಎಲ್ಲ ಸಂದೇಶಗಳೂ ಶಾಶ್ವತವಾಗಿ ಅಳಿಸಿ ಹೋಗುತ್ತವೆ. ವಾಟ್ಸ್‌ಆ್ಯಪ್‌ ಬಳಕೆದಾರರು ಕೂಡಲೇ ಅಪ್ಲಿಕೇಶನ್‌ ಅಪ್‌ಡೇಟ್‌ ಮಾಡಿಕೊಳ್ಳುವಂತೆ ಸಂಶೋಧಕರು ಸಲಹೆ ನೀಡಿದ್ದಾರೆ. 

ವಾಟ್ಸ್‌ಆ್ಯಪ್‌ನ ಯಾವುದೇ ಗ್ರೂಪ್‌ಗೆ ನುಸುಳುವ ಹ್ಯಾಕರ್‌ಗಳ ಸಂದೇಶ ಗುಂಪಿನ ಎಲ್ಲ ಸಂದೇಶಗಳನ್ನು ಅಳಿಸಿ ಹಾಕುವ ಜತೆಗೆ ಬಳಸಲು ಆಗದಂತೆ ಅಪ್ಲಿಕೇಷನ್‌ ಕ್ರ್ಯಾಷ್‌ ಆಗುತ್ತದೆ. ಗುಂಪಿನ ಎಲ್ಲರೂ ವಾಟ್ಸ್‌ಆ್ಯಪ್‌ ತೆಗೆದುಹಾಕಿ ಮತ್ತೊಮ್ಮೆ ಇನ್‌ಸ್ಟಾಲ್‌ ಮಾಡಿಕೊಳ್ಳುವುದು ಬಿಟ್ಟರೆ ಬೇರೆ ಮಾರ್ಗ ಇರುವುದಿಲ್ಲ. ಅಪ್‌ಡೇಟ್‌ ಆಗಿರುವ ವಾಟ್ಸ್‌ಆ್ಯಪ್‌ನ 2.19.58 ಆವೃತ್ತಿಯಲ್ಲಿ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ. 

ವಾಟ್ಸ್‌ಆ್ಯಪ್‌ನ ಸುಮಾರು 150 ಕೋಟಿ ಬಳಕೆದಾರರಿಂದ ನಿತ್ಯ ಸರಾಸರಿ 6,500 ಕೋಟಿ ಸಂದೇಶಗಳು ವಿನಿಮಯಗೊಳ್ಳುತ್ತಿವೆ. 

ಜಗತ್ತಿನಾದ್ಯಂತ ಗ್ರಾಹಕರು, ಸರ್ಕಾರಿ ಸಂಸ್ಥೆಗಳು ಹಾಗೂ ವಾಣಿಜ್ಯ ವಹಿವಾಟು ನಡೆಸುತ್ತಿರುವವರು ಸೇರಿ ಹಲವು ಮಂದಿಗೆ ವಾಟ್ಸ್‌ಆ್ಯಪ್‌ ಪ್ರಮುಖ ಸಂಪರ್ಕ ಮಾಧ್ಯಮವಾಗಿದೆ. ಬಗ್‌ಗಳ ಮೂಲಕ ಗ್ರೂಪ್‌ ಚಾಟ್‌ಗಳಲ್ಲಿನ ಪ್ರಮುಖ ಮಾಹಿತಿಯನ್ನು ಅಳಿಸಿ ಹಾಕುವ ಅಸ್ತ್ರವಾಗಿ ಬಳಸಲಾಗಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. 

ಪ್ರಸ್ತುತ ವಾಟ್ಸ್‌ಆ್ಯಪ್‌ನ ಒಂದು ಗುಂಪಿನಲ್ಲಿ 256 ಬಳಕೆದಾರರು ಸೇರ್ಪಡೆಯಾಗಲು ಅವಕಾಶವಿದ್ದು, ಗುರಿಯಾಗಿಸಿಕೊಂಡ ಗುಂಪಿಗೆ ಸೇರಿಕೊಳ್ಳುವ ದುರುದ್ದೇಶ ಹೊಂದಿರುವ ವ್ಯಕ್ತಿ ಸಿದ್ಧ ಸಂದೇಶವನ್ನು ಹರಿಬಿಟ್ಟರೆ ಸಾಕು ಇಡೀ ಗುಂಪು ನಿಷ್ಕ್ರಿಯಗೊಳ್ಳುತ್ತದೆ. ವಾಟ್ಸ್‌ಆ್ಯಪ್‌ ವೆಬ್‌ನಲ್ಲಿ ಡಿಬಗ್ಗಿಂಗ್‌ ಟೂಲ್‌ ಮೂಲಕ ನಿರ್ದಿಷ್ಟ ಸಂದೇಶವನ್ನು ಎಡಿಟ್‌ ಮಾಡಿ, ಅದನ್ನು ಗುಂಪುಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆ ಅಪ್ಲಿಕೇಷನ್‌ ಕ್ರ್ಯಾಷ್‌ ಆಗುತ್ತದೆ. ಆಗಸ್ಟ್‌ನಲ್ಲಿಯೇ ಸಂಶೋಧನಾ ಸಂಸ್ಥೆ ಸುರಕ್ಷತೆ ತೊಡುಕು ಎದುರಾಗಿರುವುದನ್ನು ವಾಟ್ಸ್‌ಆ್ಯಪ್‌ಗೆ ರವಾನಿಸಿದೆ. ಹೊಸ ಆವೃತ್ತಿಯಲ್ಲಿ ವಾಟ್ಸ್‌ಆ್ಯಪ್‌ ಈ ಸಮಸ್ಯೆಯನ್ನು ಪರಿಹರಿಸಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು