ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕ ಲಾಭ ತೋರಿಸಲು ಇನ್ಫೊಸಿಸ್ ಸಿಇಒ ಅಡ್ಡಮಾರ್ಗ: ವಿಸಿಲ್‌ಬ್ಲೋವರ್‌ ಆರೋಪ

ಇನ್ಫೊಸಿಸ್‌ ಮಂಡಳಿಗೆ ದೂರು
Last Updated 21 ಅಕ್ಟೋಬರ್ 2019, 9:46 IST
ಅಕ್ಷರ ಗಾತ್ರ

ಬೆಂಗಳೂರು:ಮುಖ್ಯಕಾರ್ಯನಿರ್ವಹಣಾಧಿಕಾರಿ ಸಲೀಲ್‌ ಪರೇಖ್‌ ನೈತಿಕತೆಯನ್ನು ಬದಿಗಿಟ್ಟು ನಡೆಸಿರುವ ಕಾರ್ಯಗಳ ಮೂಲಕ ಸಂಸ್ಥೆಯ ಅಲ್ಪಾವಧಿ ಗಳಿಕೆ ಮತ್ತು ಲಾಭಾಂಶವನ್ನು ಉತ್ತಮ ಪಡಿಸಲು ಯತ್ನಿಸಿದ್ದಾರೆ ಎಂದು ನೈತಿಕತೆಯುಳ್ಳ ಉದ್ಯೋಗಿಗಳ ಗುಂಪೊಂದು(ವಿಸಿಲ್‌ಬ್ಲೋವರ್‌) ಇನ್ಫೊಸಿಸ್‌ ಮಂಡಳಿಗೆ ದೂರು ನೀಡಿದೆ.

ದೇಶದ ಎರಡನೆ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆಯಾಗಿರುವ ಇನ್ಫೊಸಿಸ್‌ ಆಡಳಿತದಲ್ಲಿ ಉಂಟಾಗುವ ನ್ಯೂನತೆಗಳನ್ನು ಬಹಿರಂಗಪಡಿಸುತ್ತಿರುವ ನೈತಿಕ ಉದ್ಯೋಗಿಗಳ ಗುಂಪು (ವಿಸಿಲ್‌ಬ್ಲೋವರ್‌),ಸಿಇಒ ಸಲೀಲ್‌ ಪರೇಖ್‌ ಲಾಭಾಂಶ ಗಳಿಕೆಗಾಗಿ ಅನುಸರಿಸುತ್ತಿರುವ ಮಾರ್ಗಗಳ ಬಗ್ಗೆಇನ್ಫೊಸಿಸ್‌ ಮಂಡಳಿಗೆ ಪತ್ರ ಬರೆದಿದೆ. ಈ ಬಗ್ಗೆ ಅಮೆರಿಕದ ಭದ್ರತಾ ಮತ್ತು ವಿನಿಮಯ ಆಯೋಗಕ್ಕೂ ದೂರ ನೀಡಿದೆ.

ಇನ್ಫೊಸಿಸ್‌, ದ್ವಿತೀಯ (ಜುಲೈ–ಸೆಪ್ಟೆಂಬರ್‌) ತ್ರೈಮಾಸಿಕದಲ್ಲಿ ₹ 4,019 ಕೋಟಿ ನಿವ್ವಳ ಲಾಭ ಗಳಿಸಿದೆ.

'ಗುಟ್ಟುರಟ್ಟು ಪಡಿಸುವ ಗುಂಪು'(ವಿಸಿಲ್‌ಬ್ಲೋವರ್‌) ನೀಡಿರುವ ದೂರನ್ನು ಸಂಸ್ಥೆಯ ಕಾರ್ಯನಿರ್ವಹಣೆಯ ಅನುಸಾರ ಲೆಕ್ಕಪರಿಶೋಧನಾ ಸಮಿತಿ ಎದುರು ಇಡಲಾಗಿದೆ.ವಿಸಿಲ್‌ಬ್ಲೋವರ್‌ಸಂಬಂಧಿಸಿದಂತೆ ಸಂಸ್ಥೆಯ ನಿಯಮಾವಳಿಗಳ ಆಧಾರದ ಮೇಲೆ ದೂರಿನ ನಿರ್ವಹಣೆ ಆಗಲಿದೆ ಎಂದು ಇನ್ಫೊಸಿಸ್‌ ತನ್ನ ಪ್ರಕಟಣೆಯೊಂದರಲ್ಲಿ ತಿಳಿಸಿರುವುದಾಗಿ ದಿ ಹಿಂದು ಬಿಸಿನೆಸ್‌ಲೈನ್‌ ವರದಿ ಮಾಡಿದೆ.

ಈಗಿನ ಆರೋಪಗಳು:

ಅಲ್ಪಾವಧಿ ಲಾಭಾಂಶಕ್ಕಾಗಿಯೇನೈತಿಕತೆಯನ್ನು ಬದಿಗಿಟ್ಟು ಕೈಗೊಂಡಿರುವ ಕ್ರಮಗಳ ಬಗ್ಗೆ ರೆಕಾರ್ಡಿಂಗ್‌ಗಳು ಹಾಗೂ ಮೇಲ್‌ಗಳ ಸಾಕ್ಷ್ಯ ಇರುವುದಾಗಿ ವಿಸಿಲ್‌ಬ್ಲೋವರ್‌ ಗುಂಪು ಹೇಳಿದೆ. ಬಹುತೇಕ ಒಪ್ಪಂದಗಳು, ವ್ಯವಹಾರಗಳ ಅನುಮತಿ ಮತ್ತು ಮೇಲ್ವಿಚಾರಣೆಯನ್ನು ಸಿಇಒ ಸಲೀಲ್‌ ಪರೇಖ್‌ ನಿರ್ವಹಿಸಿರುವುದಾಗಿ ಆರೋಪಿಸಲಾಗಿದೆ.

ನಿಯಮಾವಳಿಗಳಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಅಧಿಕ ಲಾಭಾಂಶವನ್ನು ತೋರಿಸುವಂತೆ ಹಣಕಾಸು ತಂಡದ ಮೇಲೆ ಸಿಇಒ ಮತ್ತು ಸಿಎಫ್‌ಒ ನಿಲಾಂಜನ್‌ ರಾಯ್‌ ಒತ್ತಡ ಹೇರುತ್ತಿರುವುದಾಗಿ ಆರೋಪಿಸಲಾಗಿದೆ.

ಇನ್ಫೊಸಿಸ್‌ನಲ್ಲಿ ಆಡಳಿತ ವ್ಯವಹಾರಗಳಲ್ಲಿರುವ ಲೋಪಗಳ ಕುರಿತು 2017 ಮತ್ತು 2018ರಲ್ಲಿವಿಸಿಲ್‌ಬ್ಲೋವರ್‌ಗಳಿಂದ ಪ್ರಶ್ನೆ ಎದುರಾಗಿತ್ತು. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ(ಸೆಬಿ) ಆರೋಪಗಳ ಕುರಿತು ಸತ್ಯಾಸತ್ಯತೆ ತಿಳಿಯಲು ತನಿಖಾ ಸಮಿತಿಯನ್ನು ರೂಪಿಸಿತ್ತು.

ಸಂಸ್ಥೆಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ(ಸಿಎಫ್‌ಒ) ರಾಜಿವ್‌ ಬನ್ಸಾಲ್‌ ಸ್ಥಾನದಿಂದ ಹೊರಬಂದಾಗ ನೀಡಲು ಉದ್ದೇಶಿಸಿದ ₹17.4 ಕೋಟಿ ಹಾಗೂ 200 ಮಿಲಿಯನ್‌ ಡಾಲರ್‌ಗಳಿಗೆ ಇಸ್ರೇಲ್‌ ಸಾಫ್ಟ್‌ವೇರ್‌ ಸಂಸ್ಥೆ ‘ಪನಾಯಾ‘ ಸ್ವಾಧೀನ ಪ್ರಕ್ರಿಯೆಯಲ್ಲಿ ಹಣಕಾಸು ಅಕ್ರಮಗಳ ಕುರಿತು ವಿಸಿಲ್‌ಬ್ಲೋವರ್‌ ಪ್ರಶ್ನೆ ಮಾಡಿದ್ದರು.

ಹಲವು ಆರೋಪಗಳು ಹಾಗೂ ನಂತರದ ಬೆಳವಣಿಗೆಗಳಿಂದಾಗಿ ಅಂದಿನ ಇನ್ಫೊಸಿಸ್ ಸಿಇಒ ವಿಶಾಲ್‌ ಸಿಕ್ಕಾ ಸ್ಥಾನದಿಂದ ಹೊರಬರಲು ಒತ್ತಡ ಹೇರಲಾಯಿತು. ಬಳಿಕ ಸಲೀಲ್‌ ಪರೇಖ್‌ ಸಿಇಒ ಆಗಿ ಅಧಿಕಾರ ವಹಿಸಿದರು. ಸಂಸ್ಥೆಯ ಸಹ ಸಂಸ್ಥಾಪಕ ನಂದನ್‌ ನಿಲೇಕಣಿ ಅವರು ಕಾರ್ಯನಿರ್ವಾಹಕಯೇತರ ಅಧ್ಯಕ್ಷರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT