ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ವಾಟ್ಸ್‌ಆ್ಯಪ್ ಮೂಲಕ ಹಣ ಪಾವತಿಯೂ ಸಾಧ್ಯ: ಕಳುಹಿಸೋದು ಹೇಗೆ?

ಇಂದಿನಿಂದ ಸೌಲಭ್ಯ ಜಾರಿ
Last Updated 6 ನವೆಂಬರ್ 2020, 11:31 IST
ಅಕ್ಷರ ಗಾತ್ರ

ಗೂಗಲ್ ಪೇ, ಫೋನ್‌ ಪೇ ಮತ್ತಿತರ ಆ್ಯಪ್‌ಗಳ ಮೂಲಕ ಹಣ ಪಾವತಿ, ವರ್ಗಾವಣೆ ಮಾಡುವುದು ತಿಳಿದಿರುವ ವಿಷಯ. ಇನ್ನು ಮೆಸೇಜಿಂಗ್ ಆ್ಯಪ್ ವಾಟ್ಸ್‌ಆ್ಯಪ್‌ ಮೂಲಕವೂ ಈ ಕೆಲಸ ಸಾಧ್ಯ.

ಎರಡು ವರ್ಷಗಳ ಹಿಂದೆಯೇ ಫೇಸ್‌ಬುಕ್‌ ಭಾರತದಲ್ಲಿ ವಾಟ್ಸ್‌ಆ್ಯಪ್‌ ಪಾವತಿ ವ್ಯವಸ್ಥೆ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದರೂ ರಾಷ್ಟ್ರೀಯ ಪಾವತಿ ನಿಗಮದಿಂದ (ಎನ್‌ಸಿಪಿಐ) ಅನುಮೋದನೆ ದೊರೆತಿರಲಿಲ್ಲ. ಬಳಿಕ ಭಾರತದ ಬಳಕೆದಾರರ ಖಾಸಗಿತನ ರಕ್ಷಿಸುವ ಸಲುವಾಗಿ ಸ್ಥಳೀಯ ದತ್ತಾಂಶ ಸಂಗ್ರಹ ಕೇಂದ್ರ ಸ್ಥಾಪಿಸುವಂತೆ ನಿಗಮವು ಫೇಸ್‌ಬುಕ್‌ಗೆ ಸೂಚಿಸಿತ್ತು.

‘ವಾಟ್ಸ್‌ಆ್ಯಪ್‌ ಪಾವತಿ ವ್ಯವಸ್ಥೆ ಆರಂಭಿಸಲು ಎನ್‌ಸಿಪಿಐ ಅನುಮೋದನೆ ನೀಡಿದೆ. ಇಂದಿನಿಂದ (ನ.6) ಸೌಲಭ್ಯ ಜಾರಿಗೆ ಬಂದಿದೆ. ಆ್ಯಂಡ್ರಾಯ್ಡ್ ಮತ್ತು ಐಒಎಸ್ ವರ್ಷನ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದೆ’ ಎಂದು ಫೇಸ್‌ಬುಕ್ ಘೋಷಿಸಿದೆ.

ಹೀಗೆ ಕಾರ್ಯನಿರ್ವಹಿಸುತ್ತೆ...

ಗೂಗಲ್ ಪೇ, ಪೇಟಿಎಂ ಹಾಗೂ ಫೋನ್‌ಪೇ ರೀತಿಯಲ್ಲೇ ವಾಟ್ಸ್‌ಆ್ಯಪ್ ಪೇ ಸಹ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ಮೂಲಕ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಬ್ಯಾಂಕ್ ಖಾತೆ ಜತೆ ಲಿಂಕ್ ಮಾಡುವ ಮೂಲಕ ಹಣ ವರ್ಗಾವಣೆ ಅಥವಾ ಪಾವತಿ ಮಾಡಬಹುದಾಗಿದೆ.

ಹಣ ಪಾವತಿ ಮಾಡೋದು ಹೇಗೆ?

* ಮೊದಲು ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬೇಕು
* ಯಾವ ವ್ಯಕ್ತಿಯ ಖಾತೆಗೆ ಹಣ ವರ್ಗಾಯಿಸಬೇಕೋ ವಾಟ್ಸ್‌ಆ್ಯಪ್‌ನಲ್ಲಿ ಆ ವ್ಯಕ್ತಿಯ ಚಾಟ್‌ ಲಿಸ್ಟ್‌ಗೆ ತೆರಳಬೇಕು.
* ಸೆಂಡಿಂಗ್ ಆಪ್ಷನಲ್ಲಿರುವ ಅಟ್ಯಾಚ್‌ಮೆಂಟ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
* ಅಲ್ಲಿ ‘ಪೇಮೆಂಟ್’ ಆಯ್ಕೆ ಮಾಡಿಕೊಂಡರೆ ನಂತರ ಯುಪಿಐ ಪಿನ್ ಮೂಲಕ ಹಣ ವರ್ಗಾವಣೆ ಮಾಡಬಹುದು.
* ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಸ್‌ಬಿಐ ಮತ್ತು ಜಿಯೊ ಪೇಮೆಂಟ್ಸ್ ಬ್ಯಾಂಕ್ ಜೊತೆ ಸೇರಿ ಕಾರ್ಯ ನಿರ್ವಹಿಸುತ್ತಿರುವುದಾಗಿ ವಾಟ್ಸ್‌ಆ್ಯಪ್ ಹೇಳಿದೆ.

ಯುಪಿಐ ಪಾವತಿ ಹೆಚ್ಚಳ

ದೇಶದಲ್ಲಿ ಅಕ್ಟೋಬರ್‌ನಲ್ಲಿ ಯುಪಿಐ ಪಾವತಿ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದು, 207 ಕೋಟಿಯಷ್ಟು ಪಾವತಿ ನಡೆದಿದೆ. ಸೆಪ್ಟೆಂಬರ್‌ನಲ್ಲಿ ಇದು 180 ಕೋಟಿ ಆಗಿತ್ತು. ಸದ್ಯ ವಾಟ್ಸ್ಆ್ಯಪ್‌ಗೆ ಭಾರತದಲ್ಲಿ 40 ಕೋಟಿ ಬಳಕೆದಾರರಿದ್ದಾರೆ. ವಾಟ್ಸ್ಆ್ಯಪ್‌ ಪೇ ಸೌಲಭ್ಯವನ್ನು 2 ಕೋಟಿಯಂತೆ ಹಂಹಂತವಾಗಿ ಹೆಚ್ಚಿಸಲು ಎನ್‌ಸಿಪಿಐ ಅನುಮತಿ ನೀಡಿದೆ.

***

ಭಾರತದಲ್ಲಿ ವಾಟ್ಸ್‌ಆ್ಯಪ್ ಪಾವತಿ ಸೌಲಭ್ಯ ಜಾರಿಗೆ ಸಂಬಂಧಿಸಿ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ಹೇಳಿಕೆ ಹಾಗೂ ಬಳಸುವುದು ಹೇಗೆಂಬ ವಿಡಿಯೊವುಳ್ಳ ಸಂದೇಶ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT