ಭಾನುವಾರ, ಏಪ್ರಿಲ್ 11, 2021
25 °C

ಯುಟ್ಯೂಬೇಶ್ವರ ಅತಿಯಾದರೆ ಹಾನಿಕರ

ವಿಶ್ವಾಸ ಅಂಗಡಿ Updated:

ಅಕ್ಷರ ಗಾತ್ರ : | |

‘ಯಾಕ ತಲಿ ತಿಂತಿಲೇ, ಸುಮ್ ಯುಟ್ಯೂಬೇಶ್ವರನ ದರ್ಶನ ಮಾಡಬಾರದ. ಪರಿಹಾರರ ಸಿಗತಿತ್ ನಿಂಗ್’ ಎಂಬ ಹೈಸ್ಕೂಲ್ ಹುಡುಗನ ಡೈಲಾಗ್ ನನ್ನ ನಿದ್ದೆಯನ್ನೇ ಕೆಡಿಸಿತ್ತು. ಯಾರೀತ ಹೊಸ ಆಸಾಮಿ ಯುಟ್ಯೂಬೇಶ್ವರ ಎಂದು Some-ಶೋಧನೆಗೆ ಇಳಿದಾಗಲೇ ಗೊತ್ತಾಗಿದ್ದು, ಈತ ಈಗಾಗಲೇ ಅಬಾಲವೃದ್ಧರಿಗೂ ಚಿರಪರಿಚಿತ ಜಗದ್ಗುರು ಎಂಬ ಕಟುಸತ್ಯ. ಅಂತರ್ಜಾಲದ ಯುಟ್ಯೂಬ್ ಜಾಲತಾಣವೇ ನಮ್ಮ ಜವಾರಿ ಮಂದಿಯ ಬಾಯಿಗೆ ಸಿಲುಕಿ ಯುಟ್ಯೂಬೇಶ್ವರನಾಗಿದ್ದ. ನನ್ನನ್ನೂ ಒಳಗೊಂಡಂತೆ ಬಹುತೇಕರ ಸಮಸ್ಯೆಗಳಿ ಗೆ ಶಾಶ್ವತ ಪರಿಹಾರಗಳನ್ನೂ ಒದಗಿಸಿದ್ದ.

ಒಂದೊಮ್ಮೆ ಉನ್ನತ ವ್ಯಾಸಂಗಕ್ಕೆ ವಿದ್ಯಾಕಾಶಿಗೆ ಓಡೋಡಿ ಬಂದ ನಂತರ ಗೊತ್ತಾಗಿದ್ದು; ಇಲ್ಲಿನ ಕಾಡಿನ ಕತ್ತಲಲ್ಲಿ ಕೊಳೆಯುವುದಕ್ಕಿಂತ ನಮ್ಮೂರ ಬೀದಿ ದೀಪದ ಕೆಳಗೆ ಕುಳಿತರೆ ಬೆಳೆಯಬಹುದಿತ್ತೆಂಬುದು. ಆದರೇನು ಮಾಡುವುದು, ಹಣೆಯ ಬರಹಕ್ಕೆ ಹೊಣೆಯಾರು? ಎಂಬುದನ್ನು ನೆನೆಯುತ್ತಾ ಕಣ್ಮುಚ್ಚಿದ್ದಾಗ ಕಿವಿಗೆ ಬಿದ್ದಿದೇ ಈ ಯುಟ್ಯೂಬೇಶ್ವರ. ಯಾರೀತ ಎಂದು ಗೂಗಲಾನಂದ ಮಹಾಸ್ವಾಮಿಗಳಲ್ಲಿ ವಿನಂತಿಸಿಕೊಂಡಾಗಲೇ ಈತನ ಜನ್ಮ ರಹಸ್ಯ ಗೊತ್ತಾಗಿದ್ದು.

ಅಮೆರಿಕದ ಪೇ-ಪಾಲ್ ಸಂಸ್ಥೆಯ ಮಾಜಿ ಉದ್ಯೋಗಿಗಳಾಗಿದ್ದ ಜ್ವೇಡ್ ಕರಿಮ್, ಚಾಡ್ ಹಾರ್ಲಿ ಮತ್ತು ಸ್ಟೀವ್ ಚೆನ್ ಇದರ ಸಂಸ್ಥಾಪಕರೆಂದು. 2005ರ ಫೆಬ್ರುವರಿ 14ರಂದು ಪ್ರಾರಂಭವಾದ ಈ ಜಾಲತಾಣ, ಕೇವಲ ಹದಿನಾಲ್ಕರ ಹರೆಯದಲ್ಲಿ ಇಂದು ಊಹೆಗೂ ನಿಲುಕದ ಮಟ್ಟಕ್ಕೆ ವಿಶ್ವದಾದ್ಯಂತ ತಲುಪಿರುವುದಲ್ಲದೇ, ಅನೇಕರನ್ನು ಬೆಳೆಸಿದೆ. ಪ್ರಸ್ತುತ ಅಬಾಲವೃದ್ಧರಾಗಿ ಎಲ್ಲರಿಗೂ ಆಪ್ತವಾದ ಜಾಲತಾಣವಾಗಿದೆ.

ಯುಟ್ಯೂಬ್ ಪ್ರಮುಖವಾಗಿ ಮಾಹಿತಿಯೊಡನೆ ಮನರಂಜನೆಯನ್ನೂ ಒದಗಿಸುತ್ತದೆ. ಇಲ್ಲಿ ಬಾಂಡೆ ತಿಕ್ಕುವುದರಿಂದ ಬಾಂಬ್ ತಯಾರಿಕೆಯಂತಹ ಅನೇಕ ವಿಷಯಗಳು ಲಭ್ಯವಿದೆ. ಕಲೆ, ಶಿಕ್ಷಣ, ಸಾಹಿತ್ಯ, ಹಾಸ್ಯ, ಸಿನಿಮಾ, ಕ್ರೀಡೆ, ವಿಜ್ಞಾನ-ತಂತ್ರಜ್ಞಾನ ಸೇರಿದಂತೆ ಎಲ್ಲ ರಂಗಗಳನ್ನೂ ಒಳಗೊಂಡಿದೆ. ಪ್ರತಿಯೊಬ್ಬರಿಗೂ ಅತ್ಯಗತ್ಯವಾದ ಬಹುತೇಕ ಎಲ್ಲ ವಿಷಯಗಳೂ ಯುಟ್ಯೂಬ್‌ನಲ್ಲಿ ಈಗಾಗಲೇ ಅಡಕಗೊಂಡಿವೆ ಹಾಗೂ ಅಡಕಗೊಳ್ಳುತ್ತಲೇ ಇವೆ. ಕಾರಣ ಜನಸಾಮಾನ್ಯರ ವಿಚಾರಗಳೇ ಹರಿವ ತೊರೆಯಂತೆ ಸಾಗಿ ಯುಟ್ಯೂಬ್ ಎಂಬ ಮಹಾಸಾಗರವನ್ನು ಸೇರುತ್ತಿರುವುದು.

ನನ್ನಂಥ ಅನೇಕರ ಕಲಿಕೆಯಲ್ಲಿ ಕಂದೀಲಿನ ಬೆಳಕಾಗಿರುವ ಯುಟ್ಯೂಬ್ ಎಂದಿಗೂ ಸ್ತುತ್ಯಾರ್ಹವೇ. ಆದರೆ ಇಂದಿಗೂ ನಮ್ಮಲ್ಲಿ ಯುಟ್ಯೂಬ್ ವೀಕ್ಷಣೆ ಮಾಡುವವರೆಂದರೆ ಬೇರೆಯದ್ದೇ ಅರ್ಥ ಕಲ್ಪಿಸುವ ಜನರಿದ್ದಾರೆ. ಕಾರಣ ಒಂದೊಮ್ಮೆ ಹೇಸಿಗೆ ಎನಿಸುವಷ್ಟು ವಯಸ್ಕರು ನೋಡುವ ದೃಶ್ಯಗಳಿಂದಲೇ ಯುಟ್ಯೂಬ್ ತುಂಬಿತ್ತು. ಯಾವುದು ನಿಮಗೆ ಅವಶ್ಯಕ ಎಂಬುದನ್ನು ತಿಳಿದಾಗ ಮಾತ್ರ ಅದರ ಸದ್ಬಳಕೆಯಾಗಲು ಸಾಧ್ಯ. ಇಂದು ನನ್ನಂಥ ಅನೇಕರು ಶಿಕ್ಷಣದೊಂದಿಗೆ ಸಾಕಷ್ಟು ತಂತ್ರಾಂಶಗಳ ಬಳಕೆ ಮತ್ತು ಅಭಿವೃದ್ಧಿಯನ್ನು ಕಲಿತಿರುವುದು ಯುಟ್ಯೂಬ್‌ನಿಂದಲೇ. ಇನ್‌ಡಿಸೈನ್, ಫೋಟೊಶಾಪ್, ವಿಡಿಯೊ ಎಡಿಟಿಂಗ್ ಸೇರಿದಂತೆ ಹಲವಾರು ವಿಷಯಗಳ ಸೂಕ್ಷ್ಮತೆಗಳನ್ನು ತಿಳಿಸಿಕೊಟ್ಟಿದ್ದು ಇದೇ ಯುಟ್ಯೂಬೇಶ್ವರ. ಒಳಿತು ಕೆಡಕುಗಳೆರಡನ್ನೂ ಹೊಂದಿರುವ ಈತನ ಮುಂದೆ ನೀವು ಬೇಡುವ ವರ ಸರಿಯಾಗಿರಬೇಕಷ್ಟೇ.

ಅತಿಯಾದರೆ ಅಮೃತವೂ ವಿಷ ಎನ್ನುವಂತೆ, ಯುಟ್ಯೂಬೇಶ್ವರನ ಮೇಲಿನ ಅತಿಯಾದ ಅವಲಂಬನೆಯೂ ಹಾನಿಕಾರಕವೇ. ಅವಶ್ಯಕತೆ ಇದ್ದಷ್ಟು ಮಾತ್ರ ಯುಟ್ಯೂಬ್ ಬಳಕೆ ಮಾಡುವುದು ಒಳಿತು. ಇಲ್ಲವಾದರೆ ಅದರಿಂದಾಗುವ ಅನಾಹುತಗಳಿಗೆ ನಾವೇ ಜವಾಬ್ದಾರರಾಗಬೇಕಿರುವುದನ್ನೂ ಮರೆಯುವಂತಿಲ್ಲ. ಇಂತಹ
ಶಕ್ತಿಶಾಲಿ ಯುಟ್ಯೂಬೇಶ್ವರನ ದರ್ಶನಕ್ಕೆ ನಿಮ್ಮಲ್ಲಿ ಮೊಬೈಲ್/ಕಂಪ್ಯೂಟರ್ ಜೊತೆಗೆ ಅಂತರ್ಜಾಲ ಸಂಪರ್ಕವಿದ್ದರೆ ಸಾಕು. ನಿಮ್ಮ ಬಹುತೇಕ ಸಮಸ್ಯೆಗಳಿಗೆ ಕೆಲವೇ ಕ್ಷಣಗಳಲ್ಲಿ ಪರಿಹಾರ ದೊರಕುವುದರಲ್ಲಿ ಸಂಶಯವೇ ಬೇಡ. ಕಾರಣ ಈತನಿರುವುದೇ ಜನರಿಂದ ಜನರಿಗಾಗಿ ಜನರಿಗೋಸ್ಕರ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.