ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 85 ಲಕ್ಷಕ್ಕೆ ಮಾರಾಟವಾಯ್ತು ಗೋಡೆಗೆ ಅಂಟಿಸಿದ ಬಾಳೆಹಣ್ಣು!

Last Updated 7 ಡಿಸೆಂಬರ್ 2019, 9:04 IST
ಅಕ್ಷರ ಗಾತ್ರ

ಯಾವುದೇ ಚಿತ್ರಗಳಿಲ್ಲದ, ಬರಹಗಳಿಲ್ಲದ ಗೋಡೆ. ಆ ಗೋಡೆ ಮೇಲೆ ಟೇಪಿನ ಬಂಧನದಲ್ಲಿ ಸಿಲುಕಿರುವ ಬಾಳೆಹಣ್ಣು. ಅದನ್ನು ನೋಡಲು ಬರುತ್ತಿರುವ ಕಲಾ ರಸಿಕರು, ಕಲಾ ಪ್ರೇಮಿಗಳು ಅಚ್ಚರಿ ಮತ್ತು ಸಂಭ್ರಮದಿಂದ ದಿಟ್ಟಿಸುತ್ತಿದ್ದಾರೆ; ಫೋಟೊ–ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಮಾರಾಟಕ್ಕೆ ಇಡಲಾದ ಆ ಬಾಳೆಹಣ್ಣಿನ ಕಲಾಕೃತಿಗೆ ₹ 85 ಲಕ್ಷ (1.20 ಲಕ್ಷ ಡಾಲರ್‌).

ಟೇಪು ಅಂಟಿಸಿಕೊಂಡು ಗೋಡೆಯಲ್ಲಿ ಉಳಿದ ಕಲಾಕೃತಿಯ ಹೆಸರು 'ಕಮೀಡಿಯನ್‌'. ಇಟಲಿಯ ಕಲಾವಿದ ಮೌರಿಜಿಯೊ ಕ್ಯಾಟೆಲನ್‌ ಅವರ ಆ ಕಲಾಕೃತಿಯುಮಿಯಾಮಿ ಬೀಚ್‌ನ 'ಆರ್ಟ್‌ ಬೇಸೆಲ್‌'ನಲ್ಲಿ ಮಾರಾಟಗೊಂಡಿದೆ. 5–6 ರೂಪಾಯಿ ಬೆಲೆಯ ಬಾಳೆಹಣ್ಣು ಲಕ್ಷಾಂತರ ರೂಪಾಯಿಯ ಕಲಾಕೃತಿಯಾಗಿ ಮಾರಾಟಗೊಂಡಿರುವ ಬಗ್ಗೆ ಎರಡು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮಿಯಾಮಿಯ ಅಂಗಡಿಯೊಂದರಲ್ಲಿ ಖರೀದಿಸಿ ತಂದ ಬಾಳೆಹಣ್ಣು ಮತ್ತು ಅದನ್ನು ಅಂಟಿಸಲು ಡಕ್ಟ್‌ ಟೇಪ್‌. ಆ ಕಲಾಕೃತಿಯನ್ನು ಕೊಂಡವರು ಬೇಕಾದಾಗ ಬಾಳೆಹಣ್ಣನ್ನು ಬದಲಿಸಿಕೊಳ್ಳಬಹುದು!

ಕ್ಯಾಟೆಲನ್‌ ಈ ಹಿಂದೆ ಸೃಷ್ಟಿಸಿದ್ದ 'ಚಿನ್ನದ ಕಮೋಡ್‌' ಬ್ರಿಟನ್‌ನ ಬ್ಲೆನ್‌ಹಿಮ್‌ ಪ್ಯಾಲೇಸ್‌ನ ಪ್ರದರ್ಶನದಿಂದ ಇದೇ ವರ್ಷ ಕಳುವಾಗಿತ್ತು. 18 ಕ್ಯಾರೆಟ್‌ನ ಗಟ್ಟಿ ಚಿನ್ನ ಬಳಸಿ ಕಮೋಡ್‌ ಕಲಾಕೃತಿ ಸಿದ್ಧಪಡಿಸಿದ್ದರು.

ಕಲಾವಿದ ಕ್ಯಾಟೆಲನ್‌ನ ಹಲವು ಕಲಾಕೃತಿಗಳಂತೆ ಕಮೀಡಿಯನ್‌ ಸಹ ಮೂರು ಆವೃತ್ತಿಗಳಲ್ಲಿ ಪ್ರದರ್ಶನಗೊಂಡಿದೆ. ಮೂರು ಕಲಾಕೃತಿಗಳ ಪೈಕಿ ಎರಡು ಈಗಾಗಲೇ ಮಾರಾಟಗೊಂಡಿರುವುದಾಗಿ ವರದಿಯಾಗಿದೆ.

ಕಲಾವಿದ ಮೌರಿಜಿಯೊ ಕ್ಯಾಟೆಲನ್‌
ಕಲಾವಿದ ಮೌರಿಜಿಯೊ ಕ್ಯಾಟೆಲನ್‌

'ಬಾಳೆಹಣ್ಣು ಜಾಗತಿಕ ವ್ಯಾಪಾರ, ದ್ವಂದ್ವಾರ್ಥ ಹಾಗೂ ಹಾಸ್ಯದ ಪ್ರತೀಕವಾಗಿದೆ' ಎಂದು ಪ್ಯಾರಿಸ್‌ ಮೂಲದ ಪೆರ್ರೊಟಿನ್‌ ಗ್ಯಾಲರಿಯ ಎಮಾನ್ಯುಯೆಲ್‌ ಪೆರ್ರೊಟಿನ್‌ ಪ್ರತಿಕ್ರಿಯಿಸಿರುವುದಾಗಿ ಸಿಎನ್‌ಎನ್‌ ವರದಿ ಮಾಡಿದೆ.

ನೈಜ ಬಾಳೆಹಣ್ಣು ಬಳಸುವುದಕ್ಕೂ ಮುನ್ನ ಕಲಾವಿದ ಕ್ಯಾಟೆಲನ್‌ ರೆಸಿನ್‌, ಕಂಚಿನ ಬಾಳೆಹಣ್ಣಿನ ಕಲಾಕೃತಿಗಳನ್ನು ರಚಿಸಿದ್ದಾರೆ. 15 ವರ್ಷಗಳ ಬಳಿಕ ಕಲಾ ವೇಳಕ್ಕಾಗಿ ಕ್ಯಾಟೆಲನ್‌ ತಯಾರಿಸಿಕೊಟ್ಟ ಕಲಾಕೃತಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT