ಶನಿವಾರ, ಜನವರಿ 18, 2020
19 °C
ಅರ್ಜಿ ಸಲ್ಲಿಕೆಗೆ ಜನವರಿ 17 ಕೊನೆಯ ದಿನ

ಚಂದ್ರಲೋಕ ಸುತ್ತಿ ಬರಲು ಜಪಾನ್ ಕೋಟ್ಯಧಿಪತಿಗೆ ಗರ್ಲ್‌ಫ್ರೆಂಡ್ ಬೇಕಾಗಿದ್ದಾರೆ...!

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಗಗನಯಾತ್ರಿಯಂತೆ ಕಾಣುವ ಯುಸಾಕು ಮೆಜಾವಾ ಚಿತ್ರ– ಚಿತ್ರಕೃಪೆ: ಟ್ವಿಟರ್‌

ಟೋಕಿಯೊ: ಭೂಮಿಯನ್ನು ಸುತ್ತುತ್ತಿರುವ ಚಂದ್ರನನ್ನು ಹತ್ತಿರದಿಂದ ನೋಡಿ ಬರುವ ತಯಾರಿಯಲ್ಲಿರುವ ಜಪಾನ್‌ನ ಕೋಟ್ಯಧಿಪತಿ, ತನ್ನೊಂದಿಗೆ ಗಗನಯಾತ್ರೆಯಲ್ಲಿ ಭಾಗಿಯಾಗಲು ಗರ್ಲ್‌ಫ್ರೆಂಡ್‌ ಒಬ್ಬಳ ಹುಡುಕಾಟದಲ್ಲಿದ್ದಾರೆ. ಅದಕ್ಕಾಗಿ ಅಂತರ್ಜಾಲದಲ್ಲಿ ಜಾಹೀರಾತನ್ನೂ ನೀಡಿದ್ದಾರೆ. 

ಸ್ಪೇಸ್‌ಎಕ್ಸ್‌ ರಾಕೆಟ್‌ನಲ್ಲಿ ಯುಸಾಕು ಮೆಜಾವಾ ಚಂದ್ರನನ್ನು ಸುತ್ತಿ ಬರಲಿದ್ದಾರೆ. ಇತ್ತೀಚೆಗೆ ಜಪಾನಿ ನಟಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡಿರುವುದಾಗಿ ಘೋಷಿಸಿದ್ದ ಯುಸಾಕು, ಬದುಕನ್ನು ಸಂಭ್ರಮಿಸಲು ಇಚ್ಛಿಸುವ '20 ವರ್ಷ ವಯಸ್ಸು ಅಥವಾ ಅದಕ್ಕಿಂತ ಮೇಲ್ಪಟ್ಟ ಮದುವೆಯಾಗದ ಮಹಿಳೆಯರಿಂದ (ಸಿಂಗಲ್‌ ವುಮೆನ್‌)' ಅರ್ಜಿ ಸ್ವೀಕರಿಸುತ್ತಿದ್ದಾರೆ. 

ಜನಪ್ರಿಯತೆ ಹೊಂದಿರುವ ಯುಸಾಕು ಚಂದ್ರಯಾನಕ್ಕೆ ಸೂಕ್ತ ಗರ್ಲ್‌ಫ್ರೆಂಡ್‌ ಹುಡುಕುವ ಪ್ರಯತ್ನ ಟಿವಿ ಶೋ ರೂಪವನ್ನೂ ಪಡೆದಿದೆ. 'ಮಧ್ಯ ವಯಸ್ಸಿನ ಒಂಟಿ ತನದಿಂದ ಹೊರಬರಲು ಇದಕ್ಕೆ ಒಪ್ಪಿರುವೆ‘ ಎಂದು ಅವರು ಹೇಳಿದ್ದಾರೆ. 

44 ವರ್ಷ ವಯಸ್ಸಿನ ಯುಸಾಕು ಅವರು ಇಬ್ಬರು ಮಹಿಳೆಯರ ಮೂಲಕ ಮೂವರು ಮಕ್ಕಳನ್ನು ಹೊಂದಿದ್ದಾರೆ. 'ಏಕಾಂಗಿತನ ಮತ್ತು ಏನೂ ಇಲ್ಲದಂತಹ ಭಾವನೆ ನಿಧಾನವಾಗಿ ನನ್ನನ್ನು ಆವರಿಸಿಕೊಳ್ಳಲು ಶುರುವಾಗುತ್ತಿದೆ. ಒಬ್ಬಳು ಮಹಿಳೆಯನ್ನೇ ಪ್ರೀತಿಸಿ ಮುಂದುವರಿಯುವ ಬಗ್ಗೆ ಯೋಚಿಸುತ್ತಿದ್ದೇನೆ' ಎಂದು ಜಾಹೀರಾತಿನಲ್ಲಿ ಹೇಳಿಕೊಂಡಿದ್ದಾರೆ. 

'ಚಂದ್ರಯಾನ ಕೈಗೊಂಡ ಮೊದಲ ಮಹಿಳೆ ಯಾಕಾಗಬಾರದು?' ಎಂದು ಮಹಿಳೆಯರನ್ನು ಆಕರ್ಷಿಸಲು ಟ್ವೀಟ್‌ ಮಾಡಿದ್ದಾರೆ. 

ಚಂದ್ರ ಲೋಕಕ್ಕೆ ಗರ್ಲ್‌ಫ್ರೆಂಡ್‌ ಆಗಿ ಯಾನ ಕೈಗೊಳ್ಳಲು ಬಯಸುವವರಿಗೆ ಅರ್ಜಿ ಸಲ್ಲಿಸಲು 2020ರ ಜನವರಿ 17 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಿದವರಲ್ಲಿ ಆಯ್ಕೆ ಮಾಡಿದವರೊಂದಿಗೆ ಕೆಲ ಸಮಯ ಕಳೆದ ನಂತರ ಮಾರ್ಚ್‌ ಅಂತ್ಯಕ್ಕೆ ಅಂತಿಮ ಆಯ್ಕೆ ಮಾಡಲಿದ್ದಾರೆ. 

ಯುಸಾಕು, ಫ್ಯಾಷನ್‌ ಕಂಪನಿ ಜೊಜೊ (Zozo) ಮುಖ್ಯಸ್ಥರಾಗಿದ್ದರು. ಕಳೆದ ವರ್ಷ ಕಂಪನಿಯನ್ನು 'ಯಾಹೂ! ಜಪಾನ್‌' ಸಂಸ್ಥೆಗೆ ಮಾರಾಟ ಮಾಡಿದ್ದಾರೆ. ಎಲಾನ್‌ ಮಸ್ಕ್‌ ಅವರ ಸ್ಪೇಸ್‌ಎಕ್ಸ್‌ ಸಂಸ್ಥೆಯ ರಾಕೆಟ್‌ನಲ್ಲಿ 2023ಕ್ಕೆ ಅಥವಾ ನಂತರದ ದಿನಗಳಲ್ಲಿ ಚಂದ್ರನನ್ನು ಸುತ್ತಿ ಬರುವ ಖಾಸಗಿ ಗಗನಯಾನ ನಡೆಯಲಿದೆ. 

ಚಂದ್ರನನ್ನು ಸುತ್ತಿ ಭೂಮಿಗೆ ಮರಳಲಿರುವ ಗಗನಯಾತ್ರೆಗೆ ಸುಮಾರು 6 ಮಂದಿ ಕಲಾವಿದರನ್ನೂ ಕರೆದೊಯ್ಯುವ ಯೋಜನೆಯನ್ನು ಯುಸಾಕು ಹೊಂದಿದ್ದಾರೆ. ಚಿತ್ರಕಲೆಗಳಿಗೆ ದುಬಾರಿ ಬೆಲೆ ನೀಡಿ ಕೊಳ್ಳುವ ಹವ್ಯಾಸವನ್ನು ಅವರು ಹೊಂದಿದ್ದಾರೆ. ಹಲವು ಕಲೆಗಳ ಬೃಹತ್‌ ಸಂಗ್ರಹವನ್ನು ಅವರು ಹೊಂದಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು