ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬೆಂಬಲಿಸಿದ ಮನಮೋಹನ್‌ ಸಿಂಗ್‌, ಮುಲಾಯಂ ಸಿಂಗ್‌... ಆದರೆ!

Last Updated 5 ಮಾರ್ಚ್ 2022, 11:08 IST
ಅಕ್ಷರ ಗಾತ್ರ

ಅಂಬೇಡ್ಕರ್‌ ನಗರ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮನಮೋಹನ್‌ ಸಿಂಗ್, ಮುಲಾಯಂ ಸಿಂಗ್‌ ಹಾಗೂ ಮತ್ತಿತರರು ಬಿಜೆಪಿಯನ್ನು ಬೆಂಬಲಿಸಿ ಸುದ್ದಿಯಾಗಿದ್ದಾರೆ.

ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಮತ್ತು ವಿದೇಶಾಂಗ ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದರು. ಇದೀಗ ಬಿಜೆಪಿಯನ್ನು ಬೆಂಬಲಿಸಿದ್ದಾರೆಯೇ? ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿದು, ಮುಖ್ಯಮಂತ್ರಿ ಗಾದಿಗೇರುವ ಹುಮ್ಮಸ್ಸಿನಲ್ಲಿರುವ ಅಖಿಲೇಶ್‌ ಯಾದವ್‌ ಅವರ ತಂದೆ ಮುಲಾಯಂ ಸಿಂಗ್‌ ಯಾದವ್‌ ಅವರು ಯೋಗಿ ಆದಿತ್ಯನಾಥ್‌ ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆಯೇ? ಎಂಬ ಅಚ್ಚರಿ ಕಾಡದೆ ಇರದು.

ಅಸಲಿಗೆ ಇವರಾರೂ ರಾಜಕಾರಣಿಗಳಲ್ಲ. ಅಂಬೇಡ್ಕರ್‌ ನಗರದ ಜಲಾಲ್‌ಪುರ್‌ ವಿಧಾನಸಭಾ ಕ್ಷೇತ್ರದ ಮತದಾರರು ಹಾಗೂ ಸಹೋದರರು. ಹೈದರಾಬಾದ್‌ ಎಂಬ ಹಳ್ಳಿಯ ರೈತ ಮಿಠಾಯಿ ಲಾಲ್‌ ಮತ್ತು ಚಂದ್ರಸೇನಾ ದಂಪತಿಯ ಮಕ್ಕಳು.

57 ವರ್ಷದ ಮಿಠಾಯಿ ಲಾಲ್‌ ಅವರಿಗೆ 7 ಮಂದಿ ಮಕ್ಕಳು. ಇಬ್ಬರಿಗೆ ಮನಮೋಹನ್‌ ಸಿಂಗ್‌, ಮುಲಾಯಂ ಸಿಂಗ್‌ ಯಾದವ್‌ ಎಂಬ ಹೆಸರಿದ್ದರೆ, ಉಳಿದ ಐವರಿಗೆ ಬಾಳ್‌ ಠಾಕ್ರೆ, ಜೈಲ್‌ ಸಿಂಗ್‌, ಕಲ್ಯಾಣ್‌ ಸಿಂಗ್‌ , ರಾಜನಾಥ್‌ ಸಿಂಗ್‌ ಮತ್ತು ಜಯಲಲಿತಾ ಎಂಬ ಹೆಸರುಗಳಿವೆ.

ಮಕ್ಕಳಿಗೇಕೆ ರಾಜಕಾರಣಿಗಳ ಹೆಸರಿಡಲಾಗಿದೆ? ಎಂಬ ಪ್ರಶ್ನೆಗೆ ಮಿಠಾಯಿ ಲಾಲ್‌ ಉತ್ತರ 'ಗೌರವಕ್ಕಾಗಿ' ಎಂಬುದಾಗಿದೆ.

'ಶಾಲಾ ದಿನಗಳಲ್ಲಿ ಸಹಪಾಠಿಗಳು ತನ್ನ ಹೆಸರನ್ನು ತಮಾಷೆ ಮಾಡುತ್ತಿದ್ದರು. ತರಗತಿಯ ಎಲ್ಲರೂ ನಗುತ್ತಿದ್ದರು. ಶಿಕ್ಷಕರೂ ನಗುತ್ತಿದ್ದರು. ಇದು ಸುಮಾರು 10 ನಿಮಿಷಗಳ ಕಾಲ ನಡೆಯುತ್ತಿತ್ತು. ಇದರಿಂದ ತುಂಬ ಮುಜುಗರವಾಗುತ್ತಿತ್ತು. ನನ್ನಂತೆ ನನ್ನ ಮಕ್ಕಳಿಗೆ ಈ ರೀತಿ ಮುಜುಗರವಾಗಬಾರದು ಎಂದು ಆಗಲೇ ನಿರ್ಧರಿಸಿದ್ದೆ. ಹಾಗಾಗಿ ನನ್ನ ಮಕ್ಕಳಿಗೆ ಪ್ರಸಿದ್ಧ ರಾಜಕಾರಣಿಗಳ ಹೆಸರನ್ನು ಇಟ್ಟೆ. ಈಗ ನನ್ನ ಮಕ್ಕಳಿಗೆ ಹೆಚ್ಚು ಗೌರವ ಸಿಗುತ್ತಿದೆ. ' ಎಂದು ಸುದ್ದಿ ಸಂಸ್ಥೆ 'ಪಿಟಿಐ'ಗೆ ಮಿಠಾಯಿ ಲಾಲ್‌ ವಿವರಿಸಿದ್ದಾರೆ.

ಗುರುವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಯಾರಿಗೆ ಮತ ಚಲಾಯಿಸಿದ್ದೀರಿ ಎಂಬ ಪ್ರಶ್ನೆಗೆ, 'ಸರ್ಕಾರದಿಂದ ಸಾಕಷ್ಟು ಅನುಕೂಲವನ್ನು ಪಡೆದಿದ್ದೇವೆ. ಹಾಗಾಗಿ ಬಿಜೆಪಿಯನ್ನು ಬೆಂಬಲಿಸುತ್ತೇವೆ' ಎಂದು ಜೈಲ್‌ ಸಿಂಗ್‌ ತಿಳಿಸಿದ್ದಾರೆ. ಇವರ ಕುಟುಂಬಕ್ಕೆ 'ಪಿಎಂ ಆವಾಸ್‌ ಯೋಜನಾ' ಅಡಿಯಲ್ಲಿ ಮನೆ ಸಿಕ್ಕಿದೆ.

ಮುಲಾಯಂ ಸಿಂಗ್‌ ಅವರು ಅಂಬೇಡ್ಕರ್‌ ನಗರದಲ್ಲಿ ಮೆಡಿಕಲ್‌ ಶಾಪ್‌ ನಡೆಸುತ್ತಿದ್ದಾರೆ. ಕಲ್ಯಾಣ್‌ ಸಿಂಗ್‌ ಅವರು ಗೌತಮ ಬುದ್ಧ ನಗರದ ದಾದ್ರಿ ಎಂಬಲ್ಲಿ ಸಿಸಿಟಿವಿ ಕ್ಯಾಮೆರಾಗಳ ಬಿಡಿಭಾಗಗಳ ಉತ್ಪಾದನಾ ಫ್ಯಾಕ್ಟರಿ ಹೊಂದಿದ್ದಾರೆ. ಜೈಲ್‌ ಸಿಂಗ್‌ ಅವರಿಗೆ ಪೀಠೋಪಕರಣಗಳ ಅಂಗಡಿಯಿದೆ. ರಾಜನಾಥ್‌ ಸಿಂಗ್‌ ಅವರು ಹರಿಯಾಣದ ಫ್ಯಾಕ್ಟರಿ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮನಮೋಹನ ಸಿಂಗ್‌ ಮತ್ತು ಬಾಳ ಠಾಕ್ರೆ ಅವರು ಶಾಲೆಗೆ ಹೋಗುತ್ತಿದ್ದಾರೆ. ಮಗಳು ಜಯಲಲಿತಾ ಅವರು 2013ರಲ್ಲಿ ಮೃತರಾಗಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಸರ್ಕಾರಿ ಕೆಲಸಕ್ಕೆ ಸೇರಬೇಕು ಎಂಬ ಗುರಿ ಹೊಂದಿರುವ ಮನಮೋಹನ್‌ ಸಿಂಗ್‍‌, 'ಜನ ನನ್ನನ್ನು ಮನಮೋಹನ್‌ ಸಿಂಗ್‌ ಎಂಬುದು ನಿನ್ನ ಹೆಸರಾ?' ಎಂದು ಕೇಳುತ್ತಾರೆ. ಹೆಸರು ತುಂಬ ಪ್ರಬಲವಾಗಿದೆ. ಹಾಗಾಗಿ ಕನಿಷ್ಠ ನನ್ನನ್ನು ಎಲ್ಲರು ಗುರುತಿಸುತ್ತಾರೆ' ಎಂದು ತನ್ನ ಹೆಸರಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾನೆ.

ಕ್ರಿಕೆಟ್‌ ಆಟಗಾರನಾಗಬೇಕು, ಭಾರತ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆಯಬೇಕು ಎಂಬುದು ಬಾಳ್‌ ಠಾಕ್ರೆಯ ಕನಸಾಗಿದೆ.

ಮುಲಾಯಂ ಮಗನ ಹೆಸರೂ ಅಖಿಲೇಶ್‌!

'ಯಾರ ಹೆಸರನ್ನು ಇರಿಸಿದ್ದೇನೆಯೋ ಅವರಿಂದ ಸ್ಫೂರ್ತಿ ಪಡೆಯಬೇಕು. ಜೀವನದಲ್ಲಿ ಮುಂದೆ ಬರಲು ಶ್ರಮವಹಿಸಿ ದುಡಿಯಬೇಕು ಎಂದು ನನ್ನ ತಂದೆ ಯಾವಾಗಲು ಹೇಳುತ್ತಾರೆ. ನಾಯಕರ ಹೆಸರು ಹೊಂದಿರುವುದಕ್ಕೆ ನಾವೂ ಅವರಂತೆ ಆಗಲು ಸಾಧ್ಯವಿಲ್ಲ. ಆದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಛಲ ಸದಾ ಜೊತೆಗಿರುತ್ತದೆ' ಎಂದು ಮುಲಾಯಂ ಸಿಂಗ್‌ ತಿಳಿಸಿದ್ದಾರೆ. ಮುಲಾಯಂ ಅವರು ತಮ್ಮ ಮಗನಿಗೆ ಅಖಿಲೇಶ್‌ ಎಂದು ಹೆಸರು ಇಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT