ಜಬಲ್ಪುರ್, (ಮಧ್ಯಪ್ರದೇಶ): ಹಾವೊಂದು ಎಕ್ಸ್‌ಪ್ರೆಸ್ ರೈಲಿನ ಎ.ಸಿ ಕೋಚ್‌ನಲ್ಲಿ ಪ್ರತ್ಯಕ್ಷವಾಗಿ ಬುಸುಗುಟ್ಟಿರುವ ಘಟನೆ ನಡೆದಿದೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಮಧ್ಯಪ್ರದೇಶದ ಜಬಲ್ಪುರ್– ಮುಂಬೈ ನಡುವೆ ಸಂಚರಿಸುವ ಗರೀಬ್ ರಥ್ ಎಕ್ಸ್‌ಪ್ರೆಸ್ ರೈಲಿನ ಎ.ಸಿ ಕೋಚ್‌ನಲ್ಲಿ ಮಹಾರಾಷ್ಟ್ರದ ಕಾಸರಾ ನಿಲ್ದಾಣದ ಬಳಿ ಇತ್ತೀಚೆಗೆ ಈ ಘಟನೆ ನಡೆದಿದೆ.
ಬೋಗಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಹಾವು ಜನರ ಸಪ್ಪಳಕ್ಕೆ ಹೊರಗೆ ಬಂದು ಕಬ್ಬಿಣದ ಸರಳಿಗೆ ಸುತ್ತಿಕೊಂಡು ಬುಸುಗುಟ್ಟಿದೆ. ಇದರಿಂದ ಕೆಲಹೊತ್ತು ಪ‍್ರಯಾಣಿಕರು ಆತಂಕಗೊಂಡಿದ್ದರು. ಬಳಿಕ ಪ್ರಯಾಣಿಕರನ್ನು ಬೋಗಿಯಿಂದ ಇಳಿಸಿ ಹಾವು ಹಿಡಿಯುವರನ್ನು ಕರೆಯಿಸಿ ಹಾವನ್ನು ರಕ್ಷಿಸಿದ್ದಾರೆ.
ಈ ಕುರಿತು ಸುದ್ದಿಸಂಸ್ಥೆ ಪಿಟಿಐಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಕೇಂದ್ರ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಹರ್ಷಿತ್ ಶ್ರೀವಾತ್ಸವ್ ಅವರು, ಸಂಬಂಧಿಸಿದ ಅಧಿಕಾರಿಗಳಿಂದ ವರದಿ ಕೇಳಿದ್ದೇವೆ. ಯಾವ ಪ್ರಯಾಣಿಕರಿಗೂ ತೊಂದರೆ ಆಗಿಲ್ಲ ಎಂದು ತಿಳಿಸಿದ್ದಾರೆ.