₹5 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

ಚಾಮರಾಜನಗರ: ಯಳಂದೂರು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರವಾಸೋದ್ಯಮ ಮತ್ತು ಪುರಾತತ್ವ ಇಲಾಖೆ ಸಚಿವ ಸಾ.ರಾ. ಮಹೇಶ್ ಅವರು ಗುರುವಾರ ಚಾಲನೆ ನೀಡಿದರು.
ನವೀಕರಣಗೊಳ್ಳುತ್ತಿರುವ ದೇವಾಲಯದ ಆವರಣದಲ್ಲಿ ಕಲ್ಲುಹಾಸು ಹಾಕಲು ₹1 ಕೋಟಿ ಮತ್ತು ದೇವಾಲಯಕ್ಕೆ ಮೆಟ್ಟಿಲುಗಳ ನಿರ್ಮಾಣಕ್ಕೆ ಪುರಾತತ್ವ ಇಲಾಖೆಯು ₹4 ಕೋಟಿ ಬಿಡುಗಡೆ ಮಾಡಿತ್ತು.
ಸಾ.ರಾ. ಮಹೇಶ್ ಅವರು ಮೆಟ್ಟಿಲುಗಳ ನಿರ್ಮಾಣ ಹಾಗೂ ಕಲ್ಲು ಹಾಸು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಜೊತೆಗೆ, ದೀರ್ಘ ಸಮಯದಿಂದ ನನೆಗುದಿಗೆ ಬಿದ್ದಿದ್ದ ₹1ಕೋಟಿ ವೆಚ್ಚದಲ್ಲಿ ದೇವಾಲಯದ ರಥ ನಿರ್ಮಾಣಕ್ಕೂ ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ಕೊಡಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೂಚನೆ ನೀಡಿದ್ದಾರೆ. ಅದರಂತೆ ₹13 ಕೋಟಿ ಕೊಟ್ಟಿದ್ದೇವೆ’ ಎಂದರು.
ಬಿಳಿಗಿರಿರಂಗನಾಥಸ್ವಾಮಿ ಕ್ಷೇತ್ರದ ಅಭಿವೃದ್ಧಿಗೆ ಸಿದ್ಧಪಡಿಸಲಾಗಿರುವ ನೀಲ ನಕ್ಷೆಯಂತೆ ಅಭಿವೃದ್ಧಿಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತೇವೆ. ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಅಭಿವೃದ್ಧಿಗೆ ಬದ್ಧ: ‘ಕ್ಷೇತ್ರದ ಅಭಿವೃದ್ಧಿ ನಾವು ಬದ್ಧರಾಗಿದ್ದೇವೆ. ನೀಲನಕ್ಷೆಯಂತೆ ಅಭಿವೃದ್ಧಿ ಕೆಲಸ ನಡೆಯಬೇಕು. ಯಾರು ಅಧಿಕಾರಲ್ಲಿದ್ದರೂ ನಕ್ಷೆಯ ಪ್ರಕಾರವೇ ಅಭಿವೃದ್ಧಿ ನಡೆಯಬೇಕು. ಅದಕ್ಕೆ ಬೇಕಾದಷ್ಟು ಹಣ ಕೊಡುತ್ತೇವೆ’ ಎಂದರು.
ಕೇಬಲ್ ಕಾರ್: ‘ಗಗನಚುಕ್ಕಿ ಮತ್ತು ಭರಚುಕ್ಕಿ ನಡುವೆ ಕೇಬಲ್ ಕಾರು ಸೌಲಭ್ಯ ಕಲ್ಪಿಸಲು ಸರ್ಕಾರ ಯೋಚಿಸುತ್ತಿದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಇದು ಸಾಕಾರಗೊಳ್ಳಲಿದೆ' ಎಂದು ಅವರು ಹೇಳಿದರು.
ಸಂಸದ ಆರ್.ಧ್ರುವನಾರಾಯಣ ಅವರು ಮಾತನಾಡಿ, 'ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸಾ.ರಾ.ಮಹೇಶ್ ಅವರು ₹13 ಕೋಟಿ ಕೊಟ್ಟಿದ್ದಾರೆ. ಮಲೆ ಮಹದೇಶ್ವರ ಪ್ರಾಧಿಕಾರ ದಂತೆ ಬಿಳಿಗಿರಿರಂಗನಾಥ ಸ್ವಾಮಿ ಕ್ಷೇತ್ರದಲ್ಲೂ ಪ್ರಾಧಿಕಾರ ರಚನೆಯಾದರೆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ' ಎಂದರು.
‘ಯಳಂದೂರಿನ ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಸ್ವಲ್ಪ ಅಡೆ ತಡೆ ಉಂಟಾಗಿದೆ. ಅದನ್ನು ಪರಿಹರಿಸಿ, ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕು’ ಎಂದು ಸಚಿವರಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಾ.ರಾ. ಮಹೇಶ್, ‘ಅಲ್ಲಿ ಒತ್ತುವರಿ ಸಮಸ್ಯೆ ಇದೆ. ಅದನ್ನು ಪರಿಹರಿಸಿದರೆ 15 ದಿನಗಳಲ್ಲಿ ಅನುದಾನ ಬಿಡುಗಡೆ ಮಾಡುತ್ತೇವೆ’ ಎಂದರು.
ಶಾಸಕ ಎನ್.ಮಹೇಶ್ ಅವರು ಮಾತನಾಡಿ, 'ದೇವಾಲಯದ ಅಭಿವೃದ್ಧಿಗೆ ಇನ್ನೂ ಐದಾರು ಕೋಟಿ ಬೇಕು. ಸಚಿವರು ಅಷ್ಟು ಹಣ ಬಿಡುಗಡೆ ಮಾಡಿದರೆ, ದೇವಾಲಯವನ್ನು ಶಾಶ್ವತವಾಗಿ ಅಭಿವೃದ್ಧಿಯಾದಂತಾಗುತ್ತದೆ' ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, 'ದೇವಾಲಯದ ರಥ ನಿರ್ಮಾಣಕ್ಕೆ ₹1 ಕೋಟಿ ಬಿಡುಗಡೆ ಮಾಡಿದ್ದರೂ ಟೆಂಡರ್ ಸಮಸ್ಯೆ ಯಿಂದ ನಿರ್ಮಾಣ ಕಾರ್ಯ ಆರಂಭವಾಗಿರಲಿಲ್ಲ. ಈಗ ಎಲ್ಲವೂ ಬಗೆಹರಿದಿದೆ. 20 ತಿಂಗಳಲ್ಲಿ ರಥ ನಿರ್ಮಾಣವಾಗಲಿದೆ' ಎಂದರು.
ಬಿಳಿಗಿರಿ ಮಯೂರ ಉದ್ಘಾಟನೆ: ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಭಿವೃದ್ಧಿ ಪಡಿಸಿರುವ ವಸತಿಗೃಹ, ಹೋಟೆಲ್ ಬಿಳಿಗಿರಿ ಮಯೂರವನ್ನು ಸಚಿವ ಸಾ.ರಾ.ಮಹೇಶ್ ಉದ್ಘಾಟಿಸಿದರು.
ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ
ಕಾರ್ಯಕ್ರಮ ಆರಂಭವಾಗುವ ಮುನ್ನ ಮಾತನಾಡಿದ ಸ್ಥಳೀಯ ಮುಖಂಡ ಶೇಷಾದ್ರಿ ಅವರು, ‘ದೇವಾಲಯದ ಸುತ್ತಮುತ್ತ ಹಲವು ಕುಟುಂಬಗಳು ವಾಸಿಸುತ್ತಿವೆ. ಮೆಟ್ಟಿಲು ನಿರ್ಮಾಣ ಮಾಡುವಾಗ ಅವರಿಗೆ ಯಾವುದೇ ತೊಂದರೆಯಾಗಬಾರದು. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು, ‘ಇಲ್ಲಿನ ಸುತ್ತಮತ್ತಲಿನ ಎಲ್ಲ ಜಾಗ ದೇವಸ್ಥಾನಕ್ಕೆ ಸೇರಿದ್ದು. ಇಲ್ಲಿನ ಜನರಿಗೆ ತಾತ್ಕಾಲಿಕವಾಗಿ ಆ ಜಾಗವನ್ನು ಬಳಸಲು ಅವಕಾಶ ಕಲ್ಪಿಸಲಾಗಿದೆ. ಮೆಟ್ಟಿಲುಗಳನ್ನು ನಿರ್ಮಾಣ ಮಾಡುವಾಗ ಅವರನ್ನು ತೆರವುಗೊಳಿಸಲೇ ಬೇಕಾಗುತ್ತದೆ’ ಎಂದರು.
ಸಂಸದ ಆರ್.ಧ್ರುವನಾರಾಯಣ ಅವರು ಮಾತನಾಡಿ, ‘ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಇನ್ನಿತರ ಅಧಿಕಾರಿಗಳು ಸ್ಥಳೀಯ ದೂರುಗಳನ್ನು ಆಲಿಸಿ ಪರಿಹರಿಸಲಿದ್ದಾರೆ’ ಎಂದರು.
ಸಚಿವ ಸಾ.ರಾ.ಮಹೇಶ್ ಅವರು ಮಾತನಾಡುತ್ತಾ, ‘ಬಿಳಿಗಿರಿರಂಗನಾಥ ಸ್ವಾಮಿ ಇದ್ದರೆ ನಾವು ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಹಾಗಾಗಿ ಕ್ಷೇತ್ರದ ಅಭಿವೃದ್ಧಿಗೆ ನಾವು ಒತ್ತು ಕೊಡಬೇಕು. ಅಭಿವೃದ್ಧಿ ದೃಷ್ಟಿಯಿಂದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಜನರಿಗೆ ತೊಂದರೆ ಆಗುತ್ತದೆ ಎಂದು ಮೆಟ್ಟಿಲುಗಳ ಪಥ ಬದಲಿಸಬಾರದು. ಜಿಲ್ಲಾಧಿಕಾರಿ, ಅಧಿಕಾರಿಗಳು ಸ್ಥಳೀಯರ ಸಲಹೆ ಪಡೆಯಲಿ. ಆದರೆ ಸಲಹೆಗಳು ಅಭಿವೃದ್ಧಿಗೆ ಪೂರಕವಾಗಿರಬೇಕು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.