ಗುರುವಾರ , ಸೆಪ್ಟೆಂಬರ್ 16, 2021
29 °C

ದುಸ್ಸಾಹಸ ಬೇಡ: ಇರಾನ್‌ಗೆ ಟ್ರಂಪ್‌ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌ (ಪಿಟಿಐ): ‘ಇರಾನ್‌ ದುಸ್ಸಾಹಸಕ್ಕೆ ಮುಂದಾದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. 

ಮಧ್ಯಪ್ರಾಚ್ಯ ಭಾಗದಲ್ಲಿ ವೇಗವಾಗಿ ಸೇನಾ ಶಕ್ತಿಯನ್ನು ವೃದ್ದಿಸಿಕೊಳ್ಳುತ್ತಿರುವ ಅಮೆರಿಕ, ಇರಾನ್‌ಗೆ ಈ ತಾಕೀತು ಮಾಡಿದೆ. 

‘ಇರಾನ್‌ ದುಷ್ಕೃತ್ಯದ ಬಗ್ಗೆ ಕೇಳಿದ್ದೇವೆ. ಇದು ಮುಂದುವರಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಒಂದೊಮ್ಮೆ ಇರಾನ್‌ ದಾಳಿ ನಡೆಸಲು ಮುಂದಾದರೆ, ಅದು ಇರಾನ್‌ನಿಂದಾಗುವ ದೊಡ್ಡ ಪ್ರಮಾದವಾಗಲಿದೆ’ ಎಂದು ತಿಳಿಸಿದ್ದಾರೆ.

ಇದೇ ವೇಳೆ ರಾಜ್ಯ ಕಾರ್ಯದರ್ಶಿ ಪೊಪಿಯೊ ಮೈಕ್‌, ಮಾಸ್ಕೊ ಪ್ರವಾಸ ರದ್ದುಪಡಿಸಿ ಬ್ರಸೆಲ್‌ನಲ್ಲಿ ನ್ಯಾಟೊ ಮೈತ್ರಿಕೂಟಗಳ ಜೊತೆಗೆ ಸಭೆ ನಡೆಸಿದ್ದಾರೆ. ಇರಾನ್‌ ಜೊತೆಗಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.  

ಅರಬ್‌ ಸಂಯುಕ್ತ ಸಂಸ್ಥಾನದ (ಯುಎಇ) ಕರಾವಳಿ ಭಾಗದಲ್ಲಿ ನಡೆದ ವಿಧ್ವಂಸಕ ದಾಳಿಯಲ್ಲಿ ಎರಡು ತೈಲ ಟ್ಯಾಂಕರ್‌ಗಳಿಗೆ ಹಾನಿಯಾದ ಕುರಿತು ಚರ್ಚೆ ನಡೆಸಲಾಗಿದೆ. ದಾಳಿಗೊಳಗಾದ ಎರಡು ಟ್ಯಾಂಕರ್‌ಗಳ ಪೈಕಿ ಒಂದು ಅಮೆರಿಕಕ್ಕೆ ತೈಲ ತೆಗೆದುಕೊಂಡು ಹೋಗುತ್ತಿತ್ತು.

‘ಬೆದರಿಕೆಯ ಬದಲಾಗಿ ಇರಾನ್‌ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಬಯಸುತ್ತೇವೆ. 40 ವರ್ಷಗಳಿಂದ ಮಧ್ಯಪ್ರಾಚ್ಯ ಭಾಗದಲ್ಲಿ ಹಿಂಸಾತ್ಮಕ ಕೃತ್ಯವನ್ನು ಇರಾನ್‌ ನಡೆಸಿದೆ. ಇರಾನ್‌ ಆಡಳಿತಕ್ಕೆ ಸಂಬಂಧಿಸಿದಂತೆ ನಾವು ನೂತನ ವಿದೇಶಾಂಗ ನೀತಿಯನ್ನು ಜಾರಿಗೊಳಿಸಿದ್ದೇವೆ. ದಾಳಿ ನಡೆಸುವ ಇರಾನ್‌ ಪ್ರವೃತ್ತಿಗೆ ಕಡಿವಾಣ ಹಾಕಲಾಗಿದೆ’ ಎಂದು ಇರಾನ್‌ನಲ್ಲಿನ ಅಮೆರಿಕದ ವಿಶೇಷ ಪ್ರತಿನಿಧಿ ಬ್ರಿಯಾನ್‌ ಹುಕ್‌ ತಿಳಿಸಿದ್ದಾರೆ. 

ಇರಾನ್‌ನೊಂದಿಗೆ 2015ರಲ್ಲಿ ಮಾಡಿಕೊಳ್ಳಲಾದ ಅಣು ಒಪ್ಪಂದವನ್ನು ಅಮೆರಿಕ ಕಳೆದ ವರ್ಷ ಹಿಂತೆಗೆದುಕೊಂಡಾಗಿನಿಂದ ಈ ವಲಯದಲ್ಲಿ ಉಭಯ ದೇಶಗಳ ನಡುವೆ ಘರ್ಷಣೆ ಉಂಟಾಗಿದೆ.

 ಜಿ 20 ಶೃಂಗಸಭೆಯಲ್ಲಿ ಪುಟಿನ್‌, ಜಿನ್‌ಪಿಂಗ್‌ ಭೇಟಿ: ಟ್ರಂಪ್‌ 

ವಾಷಿಂಗ್ಟನ್‌(ಪಿಟಿಐ): ಜಪಾನ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಜಿ–20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರನ್ನು ಭೇಟಿ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ. 

ಭಾರತದಲ್ಲಿ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಹೊಸ ಸರ್ಕಾರ ರಚನೆಯಾಗಲಿದ್ದು, ಭಾರತದ ನೂತನ ಪ್ರಧಾನಿ ಮತ್ತು ಅಮೆರಿಕ ಅಧ್ಯಕ್ಷರ ಭೇಟಿಗೂ ಇದು ಸುಸಮಯವಾಗಲಿದೆ.

ಜಿನ್‌ಪಿಂಗ್‌ ಮತ್ತು ಪುಟಿನ್‌ ಅವರ ಭೇಟಿಯ ಹೊರತಾಗಿ, ಇನ್ನಾವುದೇ ರಾಷ್ಟ್ರದ ಮುಖಂಡರೊಂದಿಗೆ ನಡೆಸಬಹುದಾದ ಮಾತುಕತೆಯ ಬಗ್ಗೆ ಟ್ರಂಪ್‌ ಪ್ರಸ್ತಾಪ ಮಾಡಿಲ್ಲ. ಅಮೆರಿಕ ಮತ್ತು ಚೀನಾ ನಡುವೆ ವಾಣಿಜ್ಯ ಬಿಕ್ಕಟ್ಟು ತಲೆ ತೋರಿದ್ದು, ಉಭಯ ರಾಷ್ಟ್ರಗಳು ಸುಂಕ ಹೆಚ್ಚಳದ ಜಟಾಪಟಿಯಲ್ಲಿ ತೊಡಗಿವೆ. ಈ ಕಾರಣದಿಂದಾಗಿ ಜಪಾನ್‌ನಲ್ಲಿ ನಡೆಯಲಿರುವ ಟ್ರಂಪ್‌ ಮತ್ತು ಜಿನ್‌ಪಿಂಗ್‌ ಭೇಟಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಕಳೆದ ನವೆಂಬರ್‌ನಲ್ಲಿ ಅರ್ಜೆಂಟಿನಾದ ಜಿ–20 ಶೃಂಗಸಭೆಯಲ್ಲಿಯೂ ಉಭಯ ನಾಯಕರ ನಡುವೆ ಪ್ರತ್ಯೇಕ ಭೇಟಿ ಏರ್ಪಟ್ಟಿತ್ತು.

ಈ ಭೇಟಿ ಫಲಪ್ರದವಾಗುವ ವಿಶ್ವಾಸವಿದೆ ಎಂದಿರುವ ಟ್ರಂಪ್‌, ಸುಂಕ ಹೆಚ್ಚಳವನ್ನು ಸಮರ್ಥಿಸಿಕೊಂಡಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.