ಗುರುವಾರ , ಮಾರ್ಚ್ 4, 2021
29 °C

ಪ್ರೀತಿಗೊಂದು ಎಲ್ಲೆ ಎಲ್ಲಿದೆ...ಸ್ನೇಹಾನೇ ಪ್ರೀತಿ ಎಂದವರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ನೇಹದ ಗೋಡೆ ಕಟ್ಟಿ, ನಂಬುಗೆಯ ಕಿಟಕಿಗಳನಿಟ್ಟು, ಬದ್ಧತೆಯ ಬಾಗಿಲಿಗೆ, ಅನುರಾಗದ ಹೊಸ್ತಿಲು ಹಾಕಿ, ಒಲುಮೆಯ ತೋರಣ ತೊಡಿಸಿ, ದಾಂಪತ್ಯವೆಂಬ ದೀಪದಡಿ ಸಾರ್ಥಕ ಬದುಕಿಗೆ ಅರ್ಥ ತುಂಬಿಕೊಂಡವರ ಬಿಡಿಬಿಡಿ ಕತೆಗಳಿವು...

***

ಪ್ರೀತಿ ಎಂದರೆ ಅದು ಪ್ರೀತಿಯಷ್ಟೇ ಅಲ್ಲ... ಪ್ರೀತಿ ಎಂದರೆ ಬದುಕು, ಭಾಷೆ, ಭವಿಷ್ಯ, ಕನಸು, ನಗು, ಹಾಡು, ಹರಟೆ, ಗೆಳೆತನ, ತುಂಟಾಟ, ಗಾಂಭೀರ್ಯ... ಇನ್ನೂ ಏನೆಲ್ಲಾ! ಇಂಥ ಪ್ರೀತಿಯನ್ನು ಬದುಕಿರುವತನಕ ಜಿನುಗುವ ಪ್ರೇಮಸೆಲೆಯಾಗಿ ಉಳಿಸುವ–ಬೆಳೆಸುವ–ತಾಳಿಸುವ ವ್ರತವೇ ’ದಾಂಪತ್ಯ’

***

‘ಪ್ರೀತಿ ಕುರುಡು'. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪವಿದು. ಸಂಸಾರದ ಹೊರೆ ಹೆಗಲೇರಿದಾಗ ಪ್ರೇಮದ ಪೊರೆ ಕಳಚುತ್ತದೆ ಎನ್ನುವ ಮಾತಿದೆ. ಆದರೆ ಈಗೀಗ ಪ್ರೀತಿಯ ವರಸೆ ಬದಲಾಗಿದೆ.  ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು, ಪ್ರಬುದ್ಧವಾಗುವತನಕ, ಗೌರವಾಧಾರ, ನಂಬುಗೆಗಳ ಅಡಿಪಾಯದಲ್ಲಿ ನಿಜಾರ್ಥದ ಅನುರಾಗ ಅರಳುವತನಕ ಕಾಯುವ ತಂತ್ರ ಈಗಿನದು. ಬಾಳಪೂರ್ತಿ ಜೊತೆಬರುವ ಪ್ರೀತಿಯ ಗಟ್ಟಿತನವನ್ನು ಒಂದಲ್ಲ, ಹತ್ತು ಬಾರಿ ಪರೀಕ್ಷಿಸುವ, ಪೊಳ್ಳೆನಿಸಿದರೆ ಕೈಬಿಡುವ, ತಾಳುವುದನ್ನು ಮಾತ್ರ ಆಯ್ದುಕೊಳ್ಳುವ ಪ್ರೀತಿಯ ಹೊಸ ಪರಿ ಇದು... 

***

ಏನಾದರೂ ಅನ್ನಿ... ಪ್ರೀತಿಗೆ ಕಣ್ಣಿಲ್ಲ, ಕಿವಿಯಿಲ್ಲ, ಪ್ರೀತಿಯಲ್ಲಿ ಬಿದ್ದವರಿಗೆ ಇನ್ನೊಬ್ಬರ ಬುದ್ಧಿಮಾತು ತಲೆಗೆ ಹೋಗುವುದಿಲ್ಲ,  ಅದೊಂದು ಆಕರ್ಷಣೆಯ ಅಮಲು... ನಶೆ ಇಳಿದ ಮೇಲೆ ಪ್ರೀತಿಯ ನಿಜವಾದ ಬಣ್ಣ ಬಯಲಾಗುತ್ತದೆ… ಇತ್ಯಾದಿ ಇತ್ಯಾದಿ ಆಪಾದನೆಗಳಲ್ಲೇ ಇತಿಹಾಸ ಬರೆಯುತ್ತ ಬಂದಿದೆ ಪ್ರೀತಿ. ಇಗೀಗ ಈ ಆರೋಗಳನ್ನೆಲ್ಲಾ ಸುಳ್ಳಾಗಿಸಿ ಹೊಸ ಅರ್ಥದಲ್ಲಿ ಪ್ರೀತಿಯನ್ನು ಅನ್ವೇಷಿಸಿಕೊಳ್ಳುವ ಉಮೇದು ಆರಂಭವಾಗಿದೆ. ಪ್ರೀತಿಯೇ ಸರ್ವಸ್ವವಲ್ಲ, ಆದರೆ ಬದುಕಿನ ಈ ಬಹುಮುಖ್ಯ ಅಧ್ಯಾಯವನ್ನು ಅಷ್ಟೇ ಜತನದಿಂದ, ಅದಕ್ಕಿರುವ ಆಳ–ಅರ್ಥವನ್ನೊಮ್ಮೆ ಮನಗಂಡು, ಆಲೋಚಿಸಿ, ಅಭ್ಯಸಿಸಿ ಆಯ್ದುಕೊಳ್ಳುವ ಪ್ರವೃತ್ತಿ ಪ್ರೀತಿಗೆ ಹೊಸ ಅರ್ಥವನ್ನೇ ತುಂಬಿದೆ. ಅದು ಕೇವಲ ಭಾವೋದ್ವೇಗದ ಭ್ರಮಾಲೋಕವಾಗಿ ಉಳಿದಿಲ್ಲ. ವಾಸ್ತವದ ಭೂತಗನ್ನಡಿಯಲ್ಲಿಟ್ಟು ಪರೀಕ್ಷಿಸಿ ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಜಮಾನಾ ಈಗಿನದು. ಈ ಬದಲಾದ ನೋಟ, ಪ್ರೀತಿಯ ಕೆಲ ಸಾಂಪ್ರದಾಯಿಕ ಸೂತ್ರಗಳನ್ನೂ ಬದಲಿಸಿದೆ. ‘ಮೊದಲ ನೋಟದ ಪ್ರೇಮ’ದ ಜಾಗದಲ್ಲೀಗ ‘ಸ್ನೇಹ’ವನ್ನಿಟ್ಟು ತೂಗುತ್ತಿದೆ. ಪರಸ್ಪರ ಅರಿತು–ಬೆರೆತು ಬಾಳುವ ವಾಗ್ದಾನವಾಗಿ ಪ್ರೀತಿ ಅರಳುತ್ತಿದೆ. ಹೀಗೆ ಅರಳಿದ ಪ್ರೀತಿಯ ನೆರಳಿನಲ್ಲಿ ದಾಂಪತ್ಯದ ಕವಿತೆ ಕಟ್ಟುವುದೆಂದರೆ ಸುಮ್ಮನಲ್ಲ. ಇಬ್ಬರೂ ಒಬ್ಬರಾಗುವ ಜೊತೆಗೆ ಎರಡು ಮನೆತನಗಳನ್ನೂ ಒಟ್ಟಿಗೆ ತರುವ, ಎರಡು ಸಂಸ್ಕೃತಿಗಳು ಬೆರೆತು ಒಂದಾಗುವ ಗಳಿಗೆಯದು. ಹೀಗೆ ಸ್ನೇಹದ ಗಿಡದಲ್ಲಿ ಅರಳಿದ ಪ್ರೀತಿಯ ಹೂವುಗಳು, ಸಂಸಾರದ ಹಾರದಲ್ಲಿ ಒಂದಾಗುವುದರ ಅನುಭವ ಸಾರ ಇಲ್ಲಿದೆ ನೋಡಿ– 

***

ಪ್ರತಿ ಮುಂಜಾವು ಹೊಸದೆ...

ಪ್ರೀತಿ ಪದಗಳಿಗೆ ಸಿಗದ ಅನುಭೂತಿ, ವಿವರಣೆಗೆ ದಕ್ಕದ ತಾದಾತ್ಮ್ಯ. ಯಾರಿಗೂ ಗೋಚರಿಸದ ಅಂತರ್ಗತ ಸೆಳೆತವೊಂದು ಎರಡು ಹೃದಯಗಳನ್ನು ಬೆಸೆಯುತ್ತದೆ ಎನ್ನುವುದು ನಮ್ಮ ನಂಬಿಕೆ. ಇಬ್ಬರ ನಡುವಿನ ಅಂತಹ ಅನೂಹ್ಯ ಸ್ನೇಹ, ಪ್ರೇಮದ ಅನುಬಂಧವಾಗಿ ಬೆಳೆಯಲು ಏಳು ವರ್ಷಗಳೇ ಹಿಡಿದವು. ಏಳು ವರ್ಷಗಳು ನಮಗೆ ದೊಡ್ಡದೆನಿಸಲೇ ಇಲ್ಲ. ಸ್ನೇಹ ಜೀವನ ಪರ್ಯಂತದ ಬದ್ಧತೆಯಾಗಿ ಅರಳಲು ಒಂದಷ್ಟು ಸಮಯ ಬೇಕೇ ಬೇಕು. ನಮ್ಮಿಬ್ಬರನ್ನು ಬಿಡಿಸಿಕೊಳ್ಳಲಾಗದ ಬಾಂಧವ್ಯದಲ್ಲಿ ಬೆಸೆದಿದ್ದು ಸಂಗೀತ ಮತ್ತು ನೃತ್ಯ. ಸಂಗೀತ–ನೃತ್ಯ ಒಂದರೊಳಗೊಂದು ಬೆಸೆದುಕೊಂಡೇ ಇದ್ದರೂ ಹೇಗೆ ತಮ್ಮದೇ ಆದ ಅಸ್ತಿತ್ವವನ್ನು ಉಳಿಸಿಕೊಂಡಿವೆಯೊ, ಒಂದನ್ನೊಂದು ಗೌರವಿಸುತ್ತ, ಪ್ರೇಮಿಸುತ್ತ ಸಾಗಿವೆಯೊ, ಹಾಗೇ ನಾವೂ ಒಬ್ಬರೊಳಗೊಬ್ಬರಾಗಿಯೂ, ನಮ್ಮದೇ ಆದ ಅಸ್ಮಿತೆಯನ್ನು ಬೆಳೆಸಿಕೊಂಡು ಹೊರಟಿದ್ದೇವೆ.

ಪ್ರೀತಿ ಯಾವುದೇ ಅಂತರ್ಗತವಾದ ವ್ಯಾಖ್ಯಾನಕ್ಕೆ ಎಂದಿಗೂ ಸಿಗದು ಎನ್ನುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಕೂಡಿ ಬಾಳುವಾಗ ಎದುರಾಗುವ ಸವಾಲುಗಳನ್ನು ಬಿಸುಟಿ, ಮತ್ತೆ ಮಾರನೇ ಬೇಳಿಗ್ಗೆ ನಗುತ್ತ ಹಾಸಿಗೆಯಿಂದ ಏಳುತ್ತೇವೆ. ಹಿಂದಿನ ದಿನಕ್ಕಿಂತ ಹೆಚ್ಚಿಗೇ ಪ್ರೀತಿಸಿಕೊಳ್ಳುತ್ತೇವೆ. 

 – ದಿವ್ಯಾ ರವಿ & ಶರಣ್ ಸುಬ್ರಮಣಿಯನ್

 ***

ನೇರವಂತಿಕೆಯೇ ನಮ್ಮ ಪ್ರೀತಿ

ಯಾವುದೋ ಒಂದು ಗಳಿಗೆಯಲ್ಲಿ ಗೊತ್ತಿಲ್ಲದಂತೆ ಹುಟ್ಟಿ, ಭ್ರಮೆಯಲ್ಲಿಯೇ ಬೆಳೆವ ಕತ್ತಲಾಟವಲ್ಲ ಪ್ರೀತಿ. ನೇರವಂತಿಕೆ ಪ್ರೀತಿಯ ಬಹುಮುಖ್ಯ ಅಂಶ. ಕಿಟ್ಟಿಯಲ್ಲಿ ನಾನು ನೋಡಿದ್ದು, ಮೆಚ್ಚಿದ್ದು ಅದೇ ನೇರವಂತಿಕೆಯನ್ನು. ಇಂದಿಗೂ ನಮ್ಮ ನಡುವೆ ಮೊದಲ ದಿನದಷ್ಟೇ ಪ್ರೇಮದ ತೀವ್ರತೆ ಉಳಿದುಕೊಳ್ಳಲು ಈ ನೇರವಂತಿಕೆಯೇ ಕಾರಣ.


ಭಾವನಾ ಬೆಳಗೆರೆ & ಶ್ರೀನಗರ ಕಿಟ್ಟಿ

ಕಿಟ್ಟಿ ಯಾವತ್ತೂ ನನಗೆ ಆಕಾಶದಿಂದ ನಕ್ಷತ್ರಗಳನ್ನು ತಂದು ಮುಡಿಸುವಂತಹ ಫ್ಯಾಂಟಸಿಗಳನ್ನು ಕಟ್ಟಿಕೊಡಲಿಲ್ಲ. ನೆರವೇರಿಸಲಾಗದ ಸುಳ್ಳು ಸುಳ್ಳು ಭರವಸೆ ನೀಡಿ ಹೇಗಾದರೂ ಮಾಡಿ ನನ್ನನ್ನು ತನ್ನವಳನ್ನಾಗಿಸಿಕೊಳ್ಳಬೇಕೆಂಬ ಧಾವಂತ ಅವನಲ್ಲಿ ಇರಲಿಲ್ಲ. ನಾನಿರುವುದು ಹೀಗೆ, ಇದು ನನ್ನ ಪ್ರಪಂಚ, ಇಷ್ಟೇ ನನ್ನ ಕಾಯಕಲ್ಪ… ಎಂದ ಅವನ ನಿಷ್ಕಲ್ಮಶ ಪ್ರೀತಿಗೆ ನಾನು ಸೋತೆ. ಪರಿಚಯ ಸ್ನೇಹವಾಗಿ, ಸ್ನೇಹ ಬಾಂದವ್ಯವಾಗಿ ಬೆಳೆಯಲು ಆರು ವರ್ಷಗಳೇ ಬೇಕಾಯ್ತು. ನಮ್ಮಿಬ್ಬರ ದಾಂಪತ್ಯಕ್ಕೆ 10 ವರ್ಷಗಳಾಗಿವೆ.  ನಾ  ಕಂಡ ಮೊದಲ ದಿನ ಕಿಟ್ಟಿ ಹೇಗಿದ್ದನೊ ಇಂದಿಗೂ ಹಾಗೇ ಇದ್ದಾನೆ. ಅದೇ ನಗು, ಅದೇ ಪ್ರೀತಿ... 

ವೃತ್ತಿ–ಪ್ರವೃತ್ತಿಯೇ ಪ್ರೀತಿಗೆ ಕಾರಣ 

ನಮ್ಮಿಬ್ಬರ ಪರಿಚಯವಾಗಿದ್ದು, ಸ್ನೇಹಿತರಾಗಿದ್ದು, ಕೂಡಿ ಬಾಳುವ ಬಯಕೆ ಹುಟ್ಟಿದ್ದು... ಇದಕ್ಕೆಲ್ಲಾ ಕಾರಣ ನಮ್ಮ ವೃತ್ತಿ–ಪ್ರವೃತ್ತಿ. ಕೆಲಸದ ನಿಮಿತ್ತ ಭೇಟಿಯಾದೆವು, ಕೆಲಸ ಮಾಡುತ್ತಲೇ ಸ್ನೇಹಿತರಾದೆವು. ಪ್ರೀತಿಸಬೇಕು–ಮದುವೆಯಾಗಬೇಕು ಎನ್ನುವ ಉದ್ದೇಶ ಇರಲೇಇಲ್ಲ. ಕೆಲಸದ ಬಗ್ಗೆ ಅವಳಿಗಿದ್ದ ದೃಷ್ಟಿಕೋನ, ಶಿಸ್ತು, ಶ್ರದ್ಧೆ... ಈ ಗುಣಗಳೇ ನನ್ನನ್ನು ಸೆಳೆದುಕೊಂಡಿದ್ದು. ಆದರೆ ನಾವು ಪ್ರೀತಿ–ಪ್ರೇಮ–ಪ್ರಣಯ–ಮದುವೆ ವಿಚಾರವಾಗಿ ಮಾತನಾಡಿದ್ದು, ಚರ್ಚಿಸಿದ್ದು ಕಡಿಮೆಯೇ. ಯಾವಾಗ ಸಿಕ್ಕರೂ ಮೊದಲು ಕೆಲಸದ ಬಗ್ಗೆಯೇ ಮಾತಾಗುತ್ತಿತ್ತು. 

ಅಷ್ಟಕ್ಕೂ ಪ್ರೀತಿಸಲು, ಅದರಲ್ಲೂ ವಿವಾಹ ಎನ್ನುವ ಮುಂದಿನ ಹಂತಕ್ಕೆ ಪ್ರೀತಿಯನ್ನು ತೆಗೆದುಕೊಂಡು ಹೋಗಲು ದೊಡ್ಡ ಮಟ್ಟದ ಬದ್ಧತೆ ಬೇಕು, ದೈರ್ಯವೂ ಬೇಕು. ನಮಗೇ ಗೊತ್ತಿಲ್ಲದೇ ನಮ್ಮ ನಡುವೆ ಅಂಥದ್ದೊಂದು ಬದ್ಧತೆ ಬೆಳೆದು ನಿಂತಿತ್ತು. ನಂತರವೇ ನಾವು ಕೂಡಿ ಬಾಳಲು ನಿರ್ಧರಿಸಿದ್ದು. ಈಗಲೂ ಅಷ್ಟೇ, ನಾವು ಗಂಡ–ಹೆಂಡಿರಂತೆ ಅಲ್ಲ, ಸ್ನೇಹಿತರಂತೆ ಬಾಳುತ್ತಿದ್ದೇವೆ. ಸಂಜೆಯಾಗುತ್ತಿದ್ದಂತೆ ಮನೆಗೆ ಬರಬೇಕು, ಸಿನಿಮಾಕ್ಕೆ ಕರೆದುಕೊಂಡು ಹೋಗಬೇಕು ಅಂತ ಅವಳು ಬಯಸಲ್ಲ. ಬೆಳಿಗ್ಗೆದ್ದು ಬೆಡ್‌ ಕಾಫಿ ತಂದು ಕೊಡಬೇಕು ಅಂತ ನಾನು ಬಯಸಲ್ಲ. ಪ್ರೀತಿ ಮುಖ್ಯವಾದಾಗ ಉಳಿದದ್ದೆಲ್ಲ ಗೌಣವಾಗುತ್ತದೆ.

– ಅರವಿಂದ ಕೌಶಿಕ್ & ಶಿಲ್ಪಾ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು