ಹಿಂದುತ್ವದ ಅಪಹರಣ!

7

ಹಿಂದುತ್ವದ ಅಪಹರಣ!

Published:
Updated:
Deccan Herald

ಕೈಕಮಾಂಡಿನಿಂದ ನಮ್ಮ ಮಾಜಿ ಸಿಎಮ್ಮಯ್ಯರಿಗೆ ಬೆಳ್ಳಂಬೆಳಿಗ್ಗೆ ತುರ್ತು ಬುಲಾವ್ ಬಂತು. ಗೊರಕೆ ಹೊಡೆಯುತ್ತಲೇ ವಿಮಾನ ಹತ್ತಿದ ಮಾಜಿ ಸಿಎಮ್ಮಯ್ಯ ಕೆಲವೇ ಗಂಟೆಗಳಲ್ಲಿ ರಾಯಲ್ ಗಾಂಧಿ ಮುಂದೆ ಕುಳಿತಿದ್ದರು.

‘ಏನಿಲ್ಲ ಸಿಎಮ್ಮಯ್ಯಾಜೀ… ರಾತ್ರಿ ಒಂದು ಅದ್ಭುತ ಕನಸು ಬಿತ್ತು. ಅದರಲ್ಲಿ, ಬರುವ ಲೋಕಸಭೆ ಚುನಾವಣೆಯಲ್ಲಿ ನಾವು ಪ್ರಚಂಡ ಬಹುಮತದಿಂದ ಗೆಲ್ಲುವ ದೃಶ್ಯವನ್ನು ತ್ರಿ-ಡಿ ಯಲ್ಲಿ ನೋಡಿದಂತಾಯಿತು’.

‘ಓಹ್! ಅದು ನಿಜಕ್ಕೂ ಅದ್ಭುತ ಕನಸು ರಾಯಲ್‌ಜೀ! ಆದರೆ ಹಾಗೇ ಸುಖಾಸುಮ್ಮನೆ ಗೆಲ್ಲುವುದೆಂದರೆ ಹೇಗೆ? ಈ ಕನಸು ಮತ್ತು ಜ್ಯೋತಿಷಿಗಳನ್ನು ನಂಬುವ ಹಾಗಿಲ್ಲ‘.

‘ಇಲ್ಲ, ಸಿಎಮ್ಮಯ್ಯಜೀ… ಹಾಗೇ ಆರಾಮವಾಗಿ ಗೆದ್ದ ಕನಸೇನಲ್ಲ. ನಾವು ಹಿಂದುತ್ವವನ್ನು ಮುಂದಿಟ್ಟುಕೊಂಡು ಗೆದ್ದದ್ದು!’

‘ಅಂದರೆ ನೀವು ಹೇಳೋದು... ಮೃದು ಹಿಂದುತ್ವದ ಬಗ್ಗೆ…?’

‘ನೋ ನೋ! ಇದು ಬಾಜಪ್ಪರು ಉಪಯೋಗಿಸುತ್ತಿದ್ದ ಹಿಂದುತ್ವ. ನಮ್ಮ ಕುತಂತ್ರರೂರ್‌ಜೀ ಅದನ್ನು ಅಲ್ಲಿಂದ ಅಪಹರಿಸಿದ್ದಾರೆ’.

‘ಅಯ್ಯೋ! ಆ ಹಿಂದುತ್ವ ಬಹಳ ಡೇಂಜರು! ಬೇಡ, ರಾಯಲ್‌ಜೀ… ನಮಗೆ ಮೃದು ಹಿಂದುತ್ವ ಸಾಕು’.

‘ನೋಡಿ, ನಿಮಗೆ ಕೇಂದ್ರ ಸಚಿವರಾಗಬೇಕೋ ಬೇಡವೋ?’

‘ಖಂಡಿತ! ವಿತ್ತ ಸಚಿವನಾಗಬೇಕೂಂತ ತುಂಬಾ ಆಸೆಯಿದೆ’.

‘ಹಾಗಾದ್ರೆ ಸುಮ್ಮನೆ ಗುಟುರುಗಿಟುರು ಅನ್ನದೆ ನನ್ನ ಮಾತು ಕೇಳಿ. ನಮ್ಮ ಪಕ್ಷ  ಬಾಜಪ್ಪರ ಹಿಂದುತ್ವ ತಂತ್ರ ಬಳಸಿ ಹಿಂದೂಗಳನ್ನು ಬುಟ್ಟಿಗೆ ಹಾಕಿಕೊಳ್ಳೋಕೆ ನಾನಂತೂ ನಿರ್ಧರಿಸಿದ್ದೇನೆ’.

‘ಅದಕ್ಕೆ ಬೇಕಾದ ಸೂತ್ರಗಳೇನಾದರೂ ಕನಸಿನಲ್ಲಿ ಕಂಡಿದ್ದೀರಾ?’

‘ಸಿಎಮ್ಮಯ್ಯಾಜೀ, ತಮಾಷೆ ಮಾಡ್ತೀರೇನು? ಈಚೆಗೆ ನಾನು ಹೊಸ ಹೊಸ ಯೋಚನೆಗಳಿಗೆ ಬೇರೆಯವರ ತಲೆಯನ್ನು ಬಳಸಿಕೊಳ್ಳುತಿಲ್ಲ ಎಂದು ನಿಮಗೆ ಗೊತ್ತಿರಲಿ’.

‘ವೋಟಿಗಾಗಿ ದೇವಾಲಯಗಳಿಗೆ ಓಟ ಬಿಟ್ಟರೆ… ಗೆಲ್ಲಲು ಇನ್ಯಾವ ಸೂತ್ರವಿದೆ?’

‘ನಾನು ಬರೀ ದೇವಾಲಯಗಳಿಗೆ ಓಡಿದರೆ ಸಾಲದು. ನಮ್ಮ ಚುನಾವಣಾ ಪ್ರಣಾಳಿಕೆಯ ಪ್ರಮುಖ ಭರವಸೆಯೇ- ‘ನಾವು ರಾಮ ಮಂದಿರ ಕಟ್ಟುತ್ತೇವೆ!’

‘ಓ ಮೈ ಗಾಡ್! ನಮ್ಮ ಮುಸ್ಲಿಂ ವೋಟು ಬ್ಯಾಂಕಿನ ಗತಿ? ಬೇಡ, ಇದು ತಪ್ಪುಹೆಜ್ಜೆ!’

‘ರೀ! ನೀವು ವಿತ್ತ ಸಚಿವ ಆಗಬೇಕೋ ಬೇಡವೋ?’

‘ಆಗಬೇಕು... ಆದರೂ...’

‘ಹಾಗಾದ್ರೆ ಸುಮ್ನೆ ಕೋಲೆ ಬಸವನಂತೆ ಕೇಳಿ! ರಾಮ ಮಂದಿರ ಅಷ್ಟೇ ಅಲ್ಲ, ಅದರ ಪಕ್ಕದಲ್ಲೇ ಸರ್ದಾರ್ ಪ್ರತಿಮೆಗಿಂತ ಮೂರು ಪಟ್ಟು ದೊಡ್ಡ ಆಂಜನೇಯನ ಪ್ರತಿಮೆಯ ಸ್ಥಾಪನೆ ಕೂಡಾ ಇನ್ನೊಂದು ಭರವಸೆ. ಅವನು ಪರಿಶಿಷ್ಟ ಜಾತಿಗೆ ಸೇರಿದವನೂ ಆಗಿರುವುದರಿಂದ ಮತಗಳಿಕೆ ಸುಲಭ’.

‘ಯಾರು, ನಮ್ಮ ಮಾಜಿ ಸಚಿವ ಆಂಜನೇಯನೇ?’

‘ಅವರಲ್ರೀ! ಮೊನ್ನೆ ಬಾಜಪ್ಪರು ಆಂಜನೇಯ ಒಬ್ಬ ದಲಿತ ಅಂದಿದ್ದು ಗೊತ್ತಿಲ್ವಾ?’

ಓಹ್! ಹಾಗಾದರೆ ನಿಮ್ಮನ್ನು ಹನುಮಾನ್ ಭಕ್ತ ಎಂದು ಪ್ರಚಾರ ಮಾಡಬಹುದು!’

‘ನನ್ನನ್ನು ಈಗಾಗಲೇ ಜನ ಶಿವಭಕ್ತ ಎಂದು ಗುರುತಿಸಿದ್ದಾರಲ್ರೀ…’

‘ಹಾಗನ್ನಬೇಡಿ! ಎಲ್ಲಾ ಹಿಂದೂಗಳಂತೆ ಎಲ್ಲಾ ದೇವರಿಗೆ ನಿಮ್ಮ ಭಕ್ತಿ ಹಂಚದಿದ್ದರೆ, ನೀವೊಬ್ಬ ಹಿಂದೂವೇ ಅಲ್ಲ ಎಂಬ ಗುಮಾನಿ ಬಲವಾಗುತ್ತದೆ!‘

‘ಸರಿ, ಭಜರಂಗ ಬಲಿ ಕೀ ಜೈ!’

‘ಈಗಾಗಲೇ ಜನರು ನಿಮ್ಮನ್ನು ಆಜನ್ಮ ಬ್ರಹ್ಮಚಾರಿ ಎಂದು ತಿಳಿದುಕೊಂಡಿದ್ದಾರೆ. ನೀವೊಬ್ಬ ಹನುಮಾನ್ ಭಕ್ತ ಎಂದು ಗೊತ್ತಾದರೆ ಅವರಿಗೆ ನಿಮ್ಮ ಮೇಲೆ ಅಭಿಮಾನ ಇಮ್ಮಡಿಯಾಗುತ್ತದೆ’.

‘ಹೌದಲ್ಲ! ಹನುಮಾನ್ ಭಕ್ತನಾಗಿರುವುದರಿಂದ ನಾನು ರಾಮ ಮಂದಿರ ಕಟ್ಟೇ ಕಟ್ಟುತ್ತೇನೆ ಎಂದು ಜನ ದೃಢವಾಗಿ ನಂಬುತ್ತಾರೆ. ಜೈ ಭಜರಂಗ ಬಲಿಕೀ ಜೈ!’

‘ನಿಜ, ಜೈ ಭಜರಂಗ ಬಲಿಕೀ ಜೈ ಎಂಬ ಘೋಷ ವಾಕ್ಯವನ್ನು ಪ್ರತೀ ಭಾಷಣದ ಅಂತ್ಯದಲ್ಲಿ ಹೇಳಿದರೆ ಚೆನ್ನಾಗಿರುತ್ತೆ!’

‘ಅದಕ್ಕೇನಂತೆ? ಅದೂ ಹೇಳೋಣ. ಅಂದಹಾಗೆ ಬೆಂಗಳೂರು ರಾಜ್ಯದಲ್ಲಿ ಕೂಡಲೇ ವಿಷ್ಣು ಮಂದಿರ ನಿರ್ಮಿಸಲು ಹೇಳಿ. ವಿಷ್ಣು ಭಕ್ತರ ಮತ ಸಿಗಬೇಕಲ್ಲ’.

‘ಅದು ಬಿಟ್ಬಿಡಿ, ಆ ವಿಷ್ಣು ದೇವರಲ್ಲ. ಅದೆಲ್ಲಾ ಸರಿ, ನೀವು ಬಾಜಪ್ಪರ ಹಿಂದುತ್ವವನ್ನು ಹೀಗೆ ಸಾರಾಸಗಟಾಗಿ ಬಳಸುವಾಗ ಅವರೇನು ಸುಮ್ಮನಿರುತ್ತಾರೆಯೇ?’

‘ಅವರಿಗೆ ಈಗ ಹಿಂದುತ್ವವೇ ಬೇಡ. ಸಂಘ, ಸಂತರ ಸಹವಾಸವೂ ಸಾಕೆನಿಸಿದೆಯಂತೆ. ಯಾಕೆಂದರೆ ಅವರದ್ದು ಈಗ ಮೋದಿತ್ವ!’

‘ಯಸ್! ಹಾಗಾದರೆ ರಾಯಲ್‌ಜೀ, ಒಂದು ವಾರ ನಮ್ಮ ಹಳ್ಳಿಗೆ ಬನ್ನಿ. ಸಗಣಿ ಎತ್ತೋಕೆ ಕಲಿಸ್ತೀನಿ’.

‘ಅದ್ಯಾಕ್ರೀ?’

‘ನೀವೊಬ್ಬ ಗೋರಕ್ಷಕ ಎಂದೂ ಬಿಂಬಿಸಬೇಕಲ್ಲ...!’

Tags: 

ಬರಹ ಇಷ್ಟವಾಯಿತೆ?

 • 17

  Happy
 • 2

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !