ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ | ತರಗೆಲೆ

Last Updated 12 ಜುಲೈ 2020, 15:33 IST
ಅಕ್ಷರ ಗಾತ್ರ

ಮರದಡಿಯ ನೆರಳಲ್ಲಿ
ಬೆಚ್ಚಗೆ ಇತ್ತು ತರಗೆಲೆ
ಕಾಲಾಂತರದ ಕರಿಯಪ್ಪುಗೆಯಲ್ಲಿ
ಮೂಂದೊಂದು ದಿನ ಹಾಗೇ
ಕೊಳೆತು ಹೋಗುವುದಿತ್ತು
ಮರಳಿ ಮಣ್ಣಡಿ ಸೇರಿ

ದಿಗ್ಗನೇ ಬೆಳಗಿದ ನಾಜೂಕು
ಬೆಳಕಿನ ಹೊಳಪು
ಅದೇಕೋ ಅರಿವ ಹೊಸೆವ
ಅನಂತದ ನೆರಳಡಿ ತಂದು ನಿಲ್ಲಿಸಿತು

ತರಗಲೆಯ ಮಾಸಿದ ಬಣ್ಣಕ್ಕೆ
ಹೊಂಬಣ್ಣದ ಹೊಳಪು
ಮತ್ತೆ ಚಿಗುರಿದಂತೆ ಸಂಭ್ರಮ,
ನೆಲದ ನಿಯಮದ ಹಾಗೆ.
ಮಬ್ಬು ಸರಿಸಿ ‘ಕಾಣ ಬಯಸಿದ್ದ ಮನಗಾಣು’
ಎಂದು ಎದೆ ತೆರೆದು
ಅಪ್ಪಿ ಮುದ್ದಿಸಿತು ಬೆಳಕು

ಬೆಳಕಿನ ದಾರಿಯಲ್ಲಿ ಕಣ್ಣಿಗೆಣ್ಣೆ
ಬಿಟ್ಟು ಹಾಗೇ ನೋಡುತ್ತಲೇ
ಇತ್ತು ತರಗೆಲೆ
ತಪದಂತೆ ಸೈರಿಸಿ ಬೆಳಕ ಕಿರಣ
ಹೊಳಪುಂಡು ಶಕ್ತ ನಿಲುವಲಿ
ನಿರಾಳ ಉಸಿರಾಡುತ್ತ
ಕಾಯುತ್ತಲೇ ಇತ್ತು.

ಪ್ರತಿಮಿಸುವ ಪ್ರತಿ ಪದವೂ
ಒಳಗಣ್ಣ ತೆರೆಸಿ, ವಿಸ್ಮಯದ ಅಂಚು
ಎಲೆಯ ಸುತ್ತುಗಟ್ಟಿ
ತಾರೀಪುಗಳ ಹೊತ್ತ
ಎಲೆಯ ಭಿತ್ತಿಯ
ಮೇಲೆ ನೂರಾರು ಚಿತ್ರಗಳ
ಚಲನೆ, ಚಿಂತನೆ
ನಿಂದನೆಯ ಎಣ್ಣೆಯಲ್ಲಿ ಹುರಿದು
ಕಮಟು ವಾಸನೆ ಬಡಿಸಿ,
ಮರುಗಳಿಗೆ
ತುಪ್ಪ ಮೂಗಿಗೆ ಸವರಿ,
ಬೆಳಕು ಹದವರಿತು ತರಗೆಲೆಯ
ನುಡಿಸಿತ್ತು.

ಉರಿವ ಬೆಳಕಿಂದ
ಜಿಗಿಯಬಲ್ಲ ಬೆಂಕಿಯ ತಾಪ
ಹೊಮ್ಮಿಸುವ ಭಯ.

ಆದರೂ ತರಗೆಲೆಗೆ ತೀರದ ವ್ಯಾಮೋಹ.
ಹಾರುವ ಪುಟ್ಟ ಗುಬ್ಬಿಯ ಬಾಯೇರಿ
ಮೊಟ್ಟೆಗೆ ಮಂದರಿಯಾಗಿ,
ಪುಟಪುಟ ನೆಗೆತದ
ಮರಿಗುಬ್ಬಿಗಳ ಕಾಲಡಿಗೆ
ರೋಮಾಂಚನಗೊಳ್ಳಬೇಕು
ಚಿಲಿಪಿಲಿಯೂದುವ ತೊದಲು ನುಡಿಗಳಿಗೆ
ಕಿವಿಯಾಗಬೇಕು.

ಜೀವವಿಲ್ಲದ ಒಣ ಎಲೆಯೆಂದವರ
ಕಡೆಗೊಮ್ಮೆ ನಲ್ಮೆಯ ನಗೆ ಬೀರಬೇಕು.
-ನಾಗರೇಖಾ ಗಾಂವಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT