ಮಂಗಳವಾರ, ಆಗಸ್ಟ್ 4, 2020
22 °C

ಕವಿತೆ | ಆ ಹೆಸರಿಡದಿದ್ದರೆ…

ನಿನ್ನ ಹುಚ್ಚು ಹಿಡಿತದಿಂದ
ತಪ್ಪಿಸಿಕೊಳ್ಳುತ್ತ ಹೋದೆ
ವಸ್ತ್ರಗಳನ್ನೆಲ್ಲಾ ಸರಿಪಡಿಸಿಕೊಂಡು
ಮಂಚದಿಂದ ಇಗೋ ನೆಗೆದು
ಕದ ತೆಗೆದು
ಮೆಟ್ಟಿಲುಗಳ ಇಳಿದು...

ಇನ್ನೂ ಉರಿಯುತ್ತಿದೆ ಬೀದಿ ದೀಪ
ಪಿಸುರುಗಣ್ಣ ಬಿಡಿಸಲೆಸಳುವ ಮಗು
ಅಡ್ಡಾದಿಡ್ಡಿ ಬಿದ್ದ ಖಾಲಿ ಬಾಟಲಿ
ಕಾರ್ಪೋರೇಷನ್ ತೊಟ್ಟಿಯಲ್ಲಿ ಅನ್ನದ ಕವರು

ಚುರುಗುಡುತ್ತಿರುವ ಹೊಟ್ಟೆ
ನೀ ಕೊಟ್ಟ ನೋಟಿನ ಕಂತೆ
ಎಂದೆಂದೂ ಮುಚ್ಚಿದಂತಿರುವ ಹೋಟೆಲು
ನುಜ್ಜುಗುಜ್ಜಾದ ಸಿರಂಜು
ಗಾಜುಗಣ್ಣಿನ ಹುಡುಗರು
ಫ್ಲೈಓವರಿನ ಪಕ್ಕ ನಿಂತ ಕಾರು

ರಾತ್ರಿಯ ಮಾತು ರಾತ್ರಿಗೆ
ಮೂಗುತಿ ಬದಲಿಸು ಎನ್ನುತ್ತಿ
ಹೊಸ ರವಿಕೆ ತರುತ್ತಿ
ಬಲ್ಬಿಗೆ ಬಣ್ಣದ ಕಾಗದ ಹಚ್ಚುತ್ತಿ
ನನಗೂ ಹೆಸರಿಡುತ್ತಿ

ಆ ಹೆಸರಿಡದಿದ್ದರೆ,
ಆ ಒಂದು ಹೆಸರು ಇಡದೇ ಇದ್ದರೆ
ನಿಜಕ್ಕೂ ನನಗೊಂದು ಹೆಸರೇ ಇರದಿದ್ದರೆ
ಅಂದುಕೊಳ್ಳುವಾಗ
ಹಕ್ಕಿಯೊಂದು ಫಡಫಡಿಸಿದ ಸದ್ದು.

-ಡಿ.ಕೆ. ರಮೇಶ್