ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಭಾಯಮಾನ ಪಂಚಾಯಿತಿಗಳ ಕಥನ....

Published 23 ಮಾರ್ಚ್ 2024, 23:47 IST
Last Updated 23 ಮಾರ್ಚ್ 2024, 23:47 IST
ಅಕ್ಷರ ಗಾತ್ರ

ಕ್ರಿಯಾಶೀಲ ಮನಸ್ಸು, ಬದ್ಧತೆ ಮತ್ತು ಕನಸುಗಳನ್ನು ಹೊಂದಿರುವ ಅಧಿಕಾರಿ ಹೇಗೆ ಬದಲಾವಣೆ ತರಬಲ್ಲರು ಎನ್ನುವುದಕ್ಕೆ ಶೋಭಾರಾಣಿ ಮಾದರಿಯಾಗಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಆಗಿ ಕಾರ್ಯನಿರ್ವಹಿಸುತ್ತಿರುವ ಇವರು, 14 ವರ್ಷಗಳಿಂದ ಕೆಲಸ ಮಾಡಿದ ಪಂಚಾಯಿತಿಗಳಲ್ಲಿ ತಮ್ಮದೇ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಸುಧಾರಣೆಗೆ ವಿನೂತನ ಕಾರ್ಯಕ್ರಮಗಳನ್ನು ಕೈಗೊಂಡು ‘ಚೇಂಜ್‌ ಮೇಕರ್‌’ ಆಗಿಯೂ ಹೊರಹೊಮ್ಮಿದ್ದಾರೆ.

ಮೊದಲು ನಿಯೋಜನೆಗೊಂಡಿದ್ದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಮಾಲಂಗಿ ಗ್ರಾಮ ಪಂಚಾಯಿತಿಗೆ. ಅದು ಕಾಡಂಚಿನ ಹಾಗೂ ಬುಡಕಟ್ಟು ಜನರು ಇರುವ ಊರುಗಳನ್ನು ಒಳಗೊಂಡ ಪಂಚಾಯಿತಿ. ಅಲ್ಲಿ ಕಚ್ಚಾಮನೆಗಳೇ ಹೆಚ್ಚು, ಶೌಚಾಲಯಗಳೂ ಇರಲಿಲ್ಲ. ಕುಡಿಯುವ ನೀರಿನ ಸಮಸ್ಯೆಯೂ ಇತ್ತು. ಕೊಡಗಿನ ಕಾಫಿತೋಟಗಳಿಗೆ ಕೂಲಿಗೆ ಹೋಗುವವರು ತಮ್ಮೊಂದಿಗೆ ಮಕ್ಕಳನ್ನೂ ಕರೆದೊಯ್ಯುತ್ತಾರೆ. ಈ ಸಮಸ್ಯೆಗಳನ್ನು ಅರಿತ ಶೋಭಾರಾಣಿ, ಮಕ್ಕಳನ್ನು ಆಕರ್ಷಿಸಲು ಆಶ್ರಮ ಶಾಲೆಗಳನ್ನು ಸ್ಮಾರ್ಟ್‌ ಮಾಡಿದರು. ಕ್ರೀಡೆಗೆ ಉತ್ತೇಜನ ನೀಡಿ, ಶಾಲೆ ಬಿಟ್ಟ ಮಕ್ಕಳನ್ನೆಲ್ಲ ಶಾಲೆಗೆ ಮರಳುವಂತೆ ಮೋಡಿ ಮಾಡಿದರು.

ಅಧಿಕಾರಿಗೆ ಕನಸುಗಳು ಇರಬಹುದು. ಆದರೆ, ಅನುಷ್ಠಾನಕ್ಕೆ ಪಂಚಾಯಿತಿಯಲ್ಲಿ ಹಣವೇ ಇರುವುದಿಲ್ಲ. ಇಂತಹ ಕೊರತೆಯನ್ನು ಸಮುದಾಯದ ಸಹಭಾಗಿತ್ವದಲ್ಲಿ ನೀಗಿಸಬಹುದು ಎನ್ನುವುದನ್ನು ಇವರು ತೋರಿಸಿಕೊಟ್ಟಿದ್ದಾರೆ. ಸ್ವಯಂ ಸೇವಾ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳ ಸಹಾಯ ಪಡೆದು ತಮ್ಮ ವ್ಯಾಪ್ತಿಯ ಎಂಟು ಸರ್ಕಾರಿ ಶಾಲೆಗಳನ್ನು ‘ಸ್ಮಾರ್ಟ್‌ ಕ್ಲಾಸ್’ಗಳನ್ನಾಗಿ ಮಾಡಿದರು. ಸ್ವೆಟರ್, ಶೂ– ಸಾಕ್ಸ್ ಕೊಡಿಸಿದರು. ಮಾಲಂಗಿ ಗ್ರಾಮವನ್ನು ಸೌರ ಗ್ರಾಮವನ್ನಾಗಿ ಮಾಡಿದರು. ಇದಕ್ಕಾಗಿ ಪಂಚಾಯಿತಿಯಿಂದ ನಯಾಪೈಸೆಯನ್ನೂ ಬಳಸಲಿಲ್ಲ. ಸಂಪನ್ಮೂಲವನ್ನು ಸಮುದಾಯದಿಂದಲೇ ಸಂಗ್ರಹಿಸಿದರು.

ಮಾಲಂಗಿಯಲ್ಲಿ ಒತ್ತುವರಿಯಾಗಿದ್ದ 22 ಎಕರೆ ಸರ್ಕಾರಿ ಭೂಮಿಯನ್ನು ಜೇನುಕುರುಬ ಸಮುದಾಯದ ಹೋರಾಟಗಾರ್ತಿ ಜಾನಕಮ್ಮ ಅವರ ನೆರವಿನೊಂದಿಗೆ ತೆರವುಗೊಳಿಸಿದರು. ಆ ಜಾಗದಲ್ಲಿ ಕಿತ್ತೂರು ರಾಣಿ ಮತ್ತು ಇಂದಿರಾಗಾಂಧಿ ವಸತಿ ಶಾಲೆ ಮೈದಳೆದಿವೆ. ಉಳಿದ ಜಾಗ ಸ್ಮಶಾನಕ್ಕೆ ಮೀಸಲಿಡಲಾಗಿದೆ. ಈ ಪಂಚಾಯಿತಿಗೆ ರಾಜ್ಯ ಸರ್ಕಾರದಿಂದ ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ, ಬಯಲು ಶೌಚಮುಕ್ತ ಗ್ರಾಮ ಪಂಚಾಯಿತಿ ಪುರಸ್ಕಾರ ಸಿಕ್ಕಿವೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವಾಲಯದಿಂದ ನೀಡುವ ನಮ್ಮ ಗ್ರಾಮ ನಮ್ಮ ಯೋಜನೆ ಪುರಸ್ಕಾರ -2018ಕ್ಕೆ ಆಯ್ಕೆಯಾದ ರಾಜ್ಯದ ಏಕೈಕ ಪಂಚಾಯಿತಿ.

ಜಯಪುರ ಹೋಬಳಿಯ ಹಾರೋಹಳ್ಳಿ ಡಿಜಿಟಲ್‌ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳು ಲಭ್ಯವಿರುವಂತೆ ಮಾಡಿದರು. ಅದನ್ನು ಬಳಸಿಕೊಂಡ ಇಬ್ಬರು ಸರ್ಕಾರಿ ನೌಕರಿಯನ್ನು (ಎಫ್‌ಡಿಎ, ಎಸ್‌ಡಿಎ) ಪಡೆದಿದ್ದಾರೆ. ಅಂಗನವಾಡಿಗಳ ಉನ್ನತೀಕರಣ ಕಾರ್ಯವೂ ಅಲ್ಲಿ ನಡೆಯಿತು. ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇದ್ದ ಬೆಲೆಬಾಳುವ 30 ಗುಂಟೆ ಜಾಗ ಅನ್ಯರ ಪಾಲಾಗಿತ್ತು. ಅದನ್ನು ವಶಪಡಿಸಿಕೊಂಡು ಎಂಟು ತಿಂಗಳಲ್ಲೇ ಗ್ರಾಮ ಪಂಚಾಯಿತಿ ಕಟ್ಟಡ ತಲೆ ಎತ್ತಿನಿಂತಿತು.

‘ಆರು ವರ್ಷಗಳ ಹಿಂದೆ ನಾಗವಾಲ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಿಸಿಕೊಂಡೆ. ಮೈಸೂರು ನಗರಕ್ಕೆ ಹೊಂದಿಕೊಂಡ, ಜನಸಂಖ್ಯೆ ಜಾಸ್ತಿ ಇರುವ ಪಂಚಾಯಿತಿ ಅದು. ತ್ಯಾಜ್ಯ ವಿಲೇವಾರಿಗೆ ಹೆಚ್ಚು ಒತ್ತು ನೀಡಿದೆ. ಹಸಿ–ಒಣ ಕಸವನ್ನು ಮೂಲದಲ್ಲೇ ವಿಂಗಡಿಸಿ ವಿಲೇವಾರಿ ಮಾಡಲಾಗುತ್ತಿದೆ. ಜಾಗೃತಿ ಮೂಡಿಸಿದ ಪರಿಣಾಮ ಅಲ್ಲಿನ ಮಹಿಳೆಯರೆಲ್ಲರೂ ಮುಟ್ಟಿನ ಕಪ್‌ಗಳನ್ನು ಬಳಸುತ್ತಿದ್ದಾರೆ’ ಎಂದು ಶೋಭಾರಾಣಿ ಖುಷಿಪಟ್ಟರು.

ಶೋಭಾರಾಣಿ, ನಾಗವಾಲದ 29 ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಬಲೀಕರಣಕ್ಕೂ ಒತ್ತು ನೀಡಿದರು. ಪಂಚಾಯಿತಿಗಳ ಏನೇ ಕೆಲಸವಿದ್ದರೂ ಈ ಸಂಘಗಳಿಂದ ಮಾಡಿಸಿದರು. ಪಂಚಾಯಿತಿ ಕಾರ್ಯಕ್ರಮಗಳಿಗೆ ಸಂಘಗಳಿಂದಲೇ ಊಟ ತರಿಸಲಾಗುತ್ತದೆ. ಇದನ್ನು ಜಿಲ್ಲಾ ಪಂಚಾಯಿತಿ ಕಾರ್ಯಕ್ರಮಗಳಿಗೂ ವಿಸ್ತರಿಸಿದ್ದು ವಿಶೇಷ. 

‘ಬದಲಾವಣೆ, ಬಲವರ್ಧನೆ ಹಳ್ಳಿಗಳ ಹಂತದಲ್ಲಿ ಮೊದಲು ಆಗಬೇಕು. ನಾಲ್ಕು ಗೋಡೆಗಳ ನಡುವೆಯೇ ಕುಳಿತಿದ್ದರೆ ಜನ ನನ್ನನ್ನು ಪ್ರೀತಿಸುತ್ತಿರಲಿಲ್ಲ; ನನ್ನ ಕೆಲಸಕ್ಕೆ ಸಹಕಾರ ಕೊಡುತ್ತಿರಲಿಲ್ಲ’ ಎನ್ನುತ್ತಾರೆ ಶೋಭಾರಾಣಿ.

ಇವರು ಕೆಲವು ಕಾರಣಗಳಿಗಾಗಿ ರಾಜೀನಾಮೆ ನೀಡಲು ಮುಂದಾಗಿದ್ದರು. ಆಗ ಪಂಚಾಯಿತಿ ಸದಸ್ಯೆಯೊಬ್ಬರು ‘ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯನೇರ ಬಯಸುವರು ವೀರರೂ ಅಲ್ಲ, ಧೀರರೂ ಅಲ್ಲ. ನಿಮ್ಮ ಕೆಲಸವನ್ನು ಪ್ರೀತಿಸಿ ನೋಡಿ ಬದಲಾವಣೆ ತರಬಹುದು’ ಎಂದು ಹೇಳಿದರು. ಆ ಮಾತು ಮನಸ್ಸಿಗೆ ನಾಟಿತು. ರಾಜೀನಾಮೆ ಪತ್ರ ಕಸದ ಬುಟ್ಟಿ ಸೇರಿತು.

‘ಹಳ್ಳಿಗಳು ಪ್ರಗತಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಸೃಜನಾತ್ಮಕವಾಗಿ ಯೋಚಿಸಿದರೆ ಹೆಚ್ಚು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಪಿ.ಎಚ್‌ಡಿ ಬಳಿಕ ವಿಜ್ಞಾನಿಯಾಗಿ ಕೆಲಸ ಮಾಡಬೇಕು ಎಂದುಕೊಂಡಿದ್ದೆ. ಇಷ್ಟಪಟ್ಟು ಈ ವೃತ್ತಿಗೆ ಬರಲಿಲ್ಲ. ಬಳಿಕ ಇಷ್ಟಪಡುತ್ತಾ ಹೋದೆ’ ಎನ್ನುತ್ತಾರೆ ಶೋಭಾರಾಣಿ.

ಶೋಭಾರಾಣಿ ಕೈಗೊಂಡ ಕಾರ್ಯಕ್ರಮಗಳನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಮುಕ್ತಕಂಠದಿಂದ ಪ್ರಶಂಸಿಸಿ ವಿಸ್ತರಣೆಗೆ ಹಾಗೂ ಹಲವೆಡೆ ಅನುಷ್ಠಾನಕ್ಕೆ ಕ್ರಮ ತೆಗೆದುಕೊಂಡಿದ್ದಾರೆ. ಸಮುದಾಯದ ಸಹಭಾಗಿತ್ವವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದು ಇವರ ಹೆಗ್ಗಳಿಕೆ. ಪಿಡಿಒ ಕೂಡ ವಿವಿಧ ರೀತಿಯಲ್ಲಿ ಸಂಪನ್ಮೂಲವನ್ನು ಕ್ರೋಢೀಕರಿಸಿ ಹಳ್ಳಿಗಳಲ್ಲಿ ರಚನಾತ್ಮಕ ಬದಲಾವಣೆ ತರಬಹುದು ಎನ್ನುವುದಕ್ಕೆ ಹಲವಾರು ಮಾದರಿಗಳನ್ನು ಕೊಟ್ಟಿದ್ದಾರೆ.

ಪಿಡಿಒ ಆದ ವಿಜ್ಞಾನಿ

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹುಣಸೇಮರದದೊಡ್ಡಿಯ ಶೋಭಾರಾಣಿ ಓದಿದ್ದೆಲ್ಲವೂ ನಗರದಲ್ಲೇ. ವಿಜ್ಞಾನಿ ಆಗುವ ಕನಸು ಹೊತ್ತಿದ್ದ ಇವರು ಎಂ.ಎಸ್ಸಿ ಸ್ನಾತಕೋತ್ತರ ಪದವಿ ನಂತರ ‘ರೇಷ್ಮೆ ಕೃಷಿಯಲ್ಲಿನ ಪ್ರೊಟೀನ್‌ ಅನಾಲಿಸಿಸ್’ ವಿಷಯದಲ್ಲಿ ಪಿ.ಎಚ್‌ಡಿ ಪದವಿ ಪಡೆದರು. ಜಾರ್ಖಂಡ್ ವಿಶ್ವವಿದ್ಯಾಲಯದ ರಾಧೇಶ್ಯಾಮ್ ಪ್ರತಿಷ್ಠಾನದಿಂದ ಯುವ ವಿಜ್ಞಾನಿ ಪ್ರಶಸ್ತಿಗೂ ಭಾಜನರಾದರು.

ಜೀವವಿಜ್ಞಾನಿ ಆಗಬೇಕು ಎಂದುಕೊಂಡಿದ್ದ ಇವರು, ಬೆಂಗಳೂರಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ರಿಸರ್ಚ್‌ ಸ್ಕಾಲರ್ ಆಗಿ ಕೆಲಸ ಮಾಡುತ್ತಿದ್ದರು. ಅದು ಅವರ ಆಸಕ್ತಿಯ ಕ್ಷೇತ್ರವೇ ಆಗಿತ್ತು. ಈ ನಡುವೆ ರಾಜ್ಯ ಸರ್ಕಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ‘ಅನುಭವಕ್ಕಾಗಿ, ನಿಮ್ಮ ಸಾಮರ್ಥ್ಯ ಅರಿಯಲು ಪರೀಕ್ಷೆ ಎದುರಿಸಿ’ ಎಂದು ಗೈಡ್ ಹೇಳಿದರು. ಪರೀಕ್ಷೆ ಬರೆದರು, ಪಾಸಾದರು, ಕೆಲಸವೂ ಸಿಕ್ಕಿತು.

ಪಿಡಿಒ ಆದ ವಿಜ್ಞಾನಿ
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹುಣಸೇಮರದದೊಡ್ಡಿಯ ಶೋಭಾರಾಣಿ ಓದಿದ್ದೆಲ್ಲವೂ ನಗರದಲ್ಲೇ. ವಿಜ್ಞಾನಿ ಆಗುವ ಕನಸು ಹೊತ್ತಿದ್ದ ಇವರು ಎಂ.ಎಸ್ಸಿ ಸ್ನಾತಕೋತ್ತರ ಪದವಿ ನಂತರ ‘ರೇಷ್ಮೆ ಕೃಷಿಯಲ್ಲಿನ ಪ್ರೊಟೀನ್‌ ಅನಾಲಿಸಿಸ್’ ವಿಷಯದಲ್ಲಿ ಪಿ.ಎಚ್‌ಡಿ ಪದವಿ ಪಡೆದರು. ಜಾರ್ಖಂಡ್ ವಿಶ್ವವಿದ್ಯಾಲಯದ ರಾಧೇಶ್ಯಾಮ್ ಪ್ರತಿಷ್ಠಾನದಿಂದ ಯುವ ವಿಜ್ಞಾನಿ ಪ್ರಶಸ್ತಿಗೂ ಭಾಜನರಾದರು. ಜೀವವಿಜ್ಞಾನಿ ಆಗಬೇಕು ಎಂದುಕೊಂಡಿದ್ದ ಇವರು ಬೆಂಗಳೂರಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ರಿಸರ್ಚ್‌ ಸ್ಕಾಲರ್ ಆಗಿ ಕೆಲಸ ಮಾಡುತ್ತಿದ್ದರು. ಅದು ಅವರ ಆಸಕ್ತಿಯ ಕ್ಷೇತ್ರವೇ ಆಗಿತ್ತು. ಈ ನಡುವೆ ರಾಜ್ಯ ಸರ್ಕಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ‘ಅನುಭವಕ್ಕಾಗಿ ನಿಮ್ಮ ಸಾಮರ್ಥ್ಯ ಅರಿಯಲು ಪರೀಕ್ಷೆ ಎದುರಿಸಿ’ ಎಂದು ಗೈಡ್ ಹೇಳಿದರು. ಪರೀಕ್ಷೆ ಬರೆದರು ಪಾಸಾದರು ಕೆಲಸವೂ ಸಿಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT