ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಬಲ್ ಗಣಿತ ತಜ್ಞೆಗೆ ಅಬೆಲ್ ಕಿರೀಟ

ಅಕ್ಷರ ಗಾತ್ರ

ವಿಶ್ವ ಗಣಿತದ ಇತಿಹಾಸದಲ್ಲೇ ಇದು ಮೊದಲು. ಗಣಿತ ಶಾಸ್ತ್ರ ವಿಷಯದಲ್ಲಿನ ಶ್ರೇಷ್ಠ ಸಾಧನೆಗೆ ನೀಡುವ ನಾರ್ವೆಯ ಗಣಿತ ತಜ್ಞ ನೀಲ್ಸ್ ಹೆನ್ರಿಕ್ ಅಬೆಲ್‍ನ ಹೆಸರಿನಲ್ಲಿರುವ ‘ಅಬೆಲ್ ಪ್ರಶಸ್ತಿ’ ಮೊಟ್ಟಮೊದಲ ಬಾರಿಗೆ ಮಹಿಳೆಗೆ ಸಂದಿದ್ದು, ಅವರ ಸಾಧನೆ ಹಲವು ತಜ್ಞರ ಮೆಚ್ಚುಗೆ ಗಳಿಸಿದೆ. ಇಂದಿಗೂ ಪುರುಷ ಪಾರಮ್ಯವನ್ನೇ ಹೊಂದಿರುವ ವಿಶ್ವ ವೈಜ್ಞಾನಿಕ ರಂಗದಲ್ಲಿ ಓರ್ವ ಮಹಿಳೆ ಅತ್ಯುನ್ನತ ಸಾಧನೆ ಮಾಡಿರುವುದು ಬಹು ಕಾರ್ಯಕ್ಷಮತೆ ಹೊಂದಿರುವ ಮಹಿಳೆಯರು ತಾವು ಯಾವುದರಲ್ಲೂ ಪುರುಷರಿಗಿಂತ ಕಮ್ಮಿ ಇಲ್ಲ ಎಂಬುದನ್ನು ರುಜುವಾತುಪಡಿಸಿದೆ.

ಅಮೆರಿಕದ ಕ್ಲೀವ್‍ಲ್ಯಾಂಡ್ ಮೂಲದ ಗಣಿತ ತಜ್ಞೆ ಕರೆನ್ ಲೆನ್‍ಬೆಕ್ ಈ ಸಾಧನೆ ಮಾಡಿದ್ದು ವಿಜ್ಞಾನ ರಂಗದಲ್ಲಿ ದುಡಿಯುತ್ತಿರುವ ಅನೇಕ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ವಿಶ್ವದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಪಾಲಿನ ಮಾದರಿಯಾಗಿ ಹೊರಹೊಮ್ಮಿದ್ದಾರೆ. 2002ರಲ್ಲಿ ಸ್ಥಾಪಿತವಾಗಿದ್ದ ಅಬೆಲ್ ಪ್ರಶಸ್ತಿ ಇದುವರೆಗೂ ಪುರುಷರಿಗೇ ಸಲ್ಲುತ್ತಿತ್ತು.

ಭಾಗಶಃ ವಿಭಿನ್ನತೆ ಹೊಂದಿರುವ ಡಿಫರೆನ್ಶಿಯಲ್ ಸಮೀಕರಣಗಳು ಮತ್ತು ಅವುಗಳನ್ನು ಬಳಸಿ ಸೋಪಿನ ನೊರೆಗುಳ್ಳೆಯಂತಹ ಚಿಕ್ಕ ವಸ್ತುಗಳ ಸದಾ ಬದಲಾಗುವ ಮೇಲ್ಮೈ ರಚನೆಯನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಿರುವ ರೇಖಾ ಗಣಿತದ ಸೂತ್ರಗಳನ್ನು ಪ್ರತಿಪಾದಿಸಿರುವ ಲೆನ್‍ಬೆಕ್‍ರ ಕೆಲಸ ಗಣಿತ ಕ್ಷೇತ್ರದ ಚಿಂತನಾ ವ್ಯವಸ್ಥೆಯನ್ನೇ ಬದಲಾಯಿಸಿದೆ ಎನ್ನುವ ಮಾತು ತಜ್ಞ ವಲಯದ್ದು. ನಾರ್ವೆಯ ರಾಜಧಾನಿ ಓಸ್ಲೋದಲ್ಲಿ ಮೇ 21 ರಂದು ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಕರೆನ್‍ಗೆ ಸ್ವತಃ ನಾರ್ವೆಯ ಸಾಮ್ರಾಟ ಐದನೆಯ ಹರಾಲ್ಡ್ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯ ಮೊತ್ತ ಏಳು ಲಕ್ಷ ಡಾಲರ್.

1942ರ ಅಗಸ್ಟ್ 24 ರಂದು ಜನಿಸಿದ ಕರೆನ್‍ಗೆ ಈಗ 76 ವರ್ಷ. ಟೆಕ್ಸಾಸ್ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕಿಯಾದ ಕರೆನ್, ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡಿ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಶಾಲಾ ದಿನಗಳಿಂದಲೂ ಟ್ರೆಕ್ಕಿಂಗ್, ಈಜು, ಸೈಕ್ಲಿಂಗ್, ಕೆನೊಯಿಂಗ್‍ಗಳಲ್ಲಿ ಆಸಕ್ತಿ ಹೊಂದಿದ್ದ ಕರೆನ್ ಸೋಲುವುದನ್ನು ಸೋಲುವವರನ್ನು ಇಷ್ಟಪಡುತ್ತಿರಲಿಲ್ಲ. ಎಂಜಿನಿಯರ್ ಆಗಿದ್ದ ತಂದೆ ಓದಲು ಮನೆಗೆ ತರುತ್ತಿದ್ದ ವಿಜ್ಞಾನ ಪುಸ್ತಕಗಳನ್ನೆಲ್ಲಾ ಅವಸರದಲ್ಲೇ ಓದಿ ಮುಗಿಸುತ್ತಿದ್ದ ಕರೆನ್, ಭೌತಶಾಸ್ತ್ರಜ್ಞ ಜಾರ್ಚ್ ಗ್ಯಾಮೊನ ಒನ್, ಟು, ಥ್ರೀ ಅಂಡ್ ಇನ್‌ಫಿನಿಟಿ ಎಂಬ ಪುಸ್ತಕ ಓದಿದ ನಂತರ ಗಣಿತದ ಕಡೆ ಆಕರ್ಷಿತರಾದರು.

ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ, ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿ ಸಂಪಾದಿಸಿ ಬ್ರಾಂಡಿಸ್ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸಿ 1968ರಲ್ಲಿ ಡಾಕ್ಟರೇಟ್ ಪದವಿ ಸಂಪಾದಿಸಿದರು. ಸಂಶೋಧನೆಯ ಅವಧಿಯಲ್ಲಿ ಯಾಂಗ್ – ಮಿಲ್ಸ್ ಥಿಯರಿ, ಕ್ಯಾಲ್ಕುಲಸ್ ಆಫ್ ವೇರಿಯೇಶನ್ಸ್, ಜಿಯೂಮೆಟ್ರಿಕ್ ಅನಾಲಿಸಿಸ್ ಆಫ್ ಮಿನಿಮಲ್ ಸರ್‍ಫೇಸಸ್, ಗೇಜ್ ಥಿಯೆರಿ... ಹೀಗೆ ಒಟ್ಟಿಗೆ ಗಣಿತದ ನಾಲ್ಕೈದು ವಿಷಯಗಳ ವಿಸ್ತೃತ ಅಧ್ಯಯನ ನಡೆಸಿ 1982 ರಲ್ಲಿ ಆರ್ಥರ್ ಫೆಲೊಶಿಪ್ ಮತ್ತು ಜರ್ಮನಿಯ ನಾಥರ್ ಪ್ರಾಧ್ಯಾಪಕಿ ಗೌರವ ಸಂಪಾದಿಸಿದರು.

ನಂತರ 2000ನೆಯ ಇಸವಿಯಲ್ಲಿ ರಾಷ್ಟ್ರೀಯ ವಿಜ್ಞಾನ ಪದಕ ಪಡೆದು 2007ರಲ್ಲಿ ಅಮೆರಿಕನ್ ಮಾಥಮ್ಯಾಟಿಕಲ್ ಸೊಸೈಟಿಯವರು ನೀಡುವ ಲೆರಾಯ್ ಸ್ಟೀಲಿ ಬಹುಮಾನ ಪಡೆದರು. ಈಗ 2019ರ ಸಾಲಿನ ಪ್ರತಿಷ್ಠಿತ ಅಬೆಲ್ ಬಹುಮಾನಕ್ಕೆ ಪಾತ್ರರಾಗಿದ್ದಾರೆ.

ಸ್ನಾತಕೋತ್ತರ ಪದವಿ ಗಳಿಸಿದ ಹೊಸದರಲ್ಲಿ ಮೆಸಾಚುಸ್ಯಾಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಬರ್ಕಲೀ ವಿಶ್ವವಿದ್ಯಾಲಯದಲ್ಲಿ ಕೆಲಸ ಪಡೆಯಲು ಸತತ ಪ್ರಯತ್ನ ನಡೆಸಿದರಾದರೂ ಅದು ಫಲ ನೀಡಲಿಲ್ಲ. ನಂತರ ಭೌತಶಾಸ್ತ್ರಜ್ಞ ಪತಿ ಓಲ್ಕ್ ಲೆನ್‍ಬೆಕ್ ಜೊತೆಗೆ ಅರ್ಬನಾದ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಕೆಲಸ ಗಿಟ್ಟಿಸಿ ಅಲ್ಪ ಕಾಲ ಸೇವೆ ಸಲ್ಲಿಸಿ ನಂತರ ಷಿಕಾಗೋದ ಇಲಿನಾಯ್ಸ್ ಕೇಂದ್ರದಲ್ಲಿ ಕೆಲಸ ಒಪ್ಪಿಕೊಂಡರು. ಈ ಮಧ್ಯ ಸತಿ- ಪತಿಗಳಿಬ್ಬರೂ ಒಪ್ಪಿಗೆಯ ವಿಚ್ಛೇದನ ಪಡೆದರು. ನಂತರ 1983ರಲ್ಲಿ ಗಣಿತ ತಜ್ಞ ರಾಬರ್ಟ್ ವಿಲಿಯಮ್ಸ್ ಅವರನ್ನು ಮದುವೆಯಾಗಿ ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ 1988 ರಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯಕ್ಕೆ ಸ್ಥಳಾಂತರಗೊಂಡರು.

ಅಭಿಯಾನದ ಆರಂಭ

ಕೆಲಸ ಮಾಡಿದ ಎಲ್ಲ ಸ್ಥಳಗಳಲ್ಲಿ ರೇಖಾಗಣಿತದ ಸಿದ್ಧಾಂತಗಳ ವಿಶ್ಲೇಷಣೆ, ಡಿಫರೆನ್ಶಿಯಲ್ ರೇಖಾಗಣಿತವನ್ನು ಪ್ರಯೋಗಿಸಿ ಡಿಫರೆನ್ಶಿಯಲ್ ಸಮೀಕರಣಗಳನ್ನು ಹೇಗೆ ಅಭ್ಯಸಿಸುವುದು ಎಂಬುದರ ಕುರಿತು ಸಮಗ್ರ ಅಧ್ಯಯನ ನಡೆಸಿ ಉಪಯುಕ್ತ ಪ್ರಬಂಧ ಬರೆದರು.

ಜೊತೆ ಜೊತೆಗೆ ಅಧ್ಯಯನ ಕೇಂದ್ರಗಳಲ್ಲಿ ಲಿಂಗ ತಾರತಮ್ಯ ಇರುವುದನ್ನು ಕಂಡ ಕರೆನ್ ವಿಜ್ಞಾನ ರಂಗದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನ ಸ್ಥಾನದಲ್ಲಿರಬೇಕು ಎಂದು ಅಗ್ರಹಿಸಿ ‘ತಾವು ಕೆಲಸ ಮಾಡುವ ವಿಭಾಗದಲ್ಲಿ, ಗಣಿತ ಕ್ಷೇತ್ರದಲ್ಲಿ ಹೆಚ್ಚು ಮಹಿಳೆಯರಿರಬೇಕು ಮತ್ತು ಅವರು ಆ ಕ್ಷೇತ್ರದಲ್ಲಿ ಮುಂದುವರೆಯಬೇಕು’ ಎಂದು ಅಭಿಯಾನವನ್ನೇ ಶುರುಮಾಡಿದರು.

ಸಂಶೋಧನೆ ಮತ್ತು ಅಧ್ಯಯನ ಕ್ಷೇತ್ರಕ್ಕೆ ಕಾಲಿಡಬಯಸುವ ಜಗತ್ತಿನ ಎಲ್ಲ ಮಹಿಳೆಯರ ಪಾಲಿಗೆ ತಾವು ಮಾದರಿಯಾಗಬೇಕೆಂಬ ಹಂಬಲ ಅವರಲ್ಲಿತ್ತು. ಮೊನ್ನೆ ಅಬೆಲ್ ಪ್ರಶಸ್ತಿ ಪ್ರಕಟವಾದ ದಿನ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ‘ನಾನು ಓದುವ ಕಾಲದಲ್ಲಿ ಗಣಿತ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿದ ಯಾವುದೇ ಮಹಿಳೆ ಇರಲಿಲ್ಲ ಆದ್ದರಿಂದ ಆ ಮಾದರಿ ನಾನೇ ಏಕೆ ಆಗಬಾರದು ಎಂದು ಪ್ರಶ್ನಿಸಿಕೊಂಡು ಆ ನಿಟ್ಟಿನಲ್ಲಿ ದುಡಿದದ್ದರಿಂದ ನಾನಿವತ್ತು ಏನನ್ನೋ ಸಾಧಿಸಿದ ಸಂತಸದಲ್ಲಿದ್ದೇನೆ’ ಎಂದರು. ನನಗಿದ್ದ ಏಕೈಕ ಮಾದರಿ ಎಂದರೆ ಅಮೆರಿಕಕ್ಕೆ ಫ್ರೆಂಚ್ಅಡುಗೆಯನ್ನು ಪರಿಚಯಿಸಿದ ಜುಲಿಯಾ ಚೈಲ್ಡ್ ಮಾತ್ರ. ಆಕೆಗೆ ಯಾವ ಟರ್ಕಿ ಕೋಳಿಯನ್ನು ಎಷ್ಟು ಹದವಾಗಿ ಬೇಯಿಸಿದರೆ ರುಚಿ ಜಾಸ್ತಿ ಎಂಬುದು ತಿಳಿದಿತ್ತು. ತಾವು ಅನುಸರಿಸಿದ್ದು ಅವಳನ್ನೇ ಎಂದು ತಮಾಷೆಯಾಗಿ ಹೇಳಿದರು. ಯಾವಾಗಲೂ ಜರ್ಮನಿಯಲ್ಲಿ ತಯಾರಾದ ಬರ್ಕೆನ್‍ಸ್ಟಾಕ್ ಚಪ್ಪಲಿ ಹಾಗೂ ಬಣ್ಣ - ಬಣ್ಣದ ಬಟ್ಟೆ ಧರಿಸುತ್ತಿದ್ದ ಕರೆನ್ ಓದುವ ಕೋಣೆಯನ್ನು ಅಷ್ಟೇನೂ ಶಿಸ್ತಾಗಿ ಇಟ್ಟುಕೊಳ್ಳುತ್ತಿರಲಿಲ್ಲ. ಅವರ ಬಿಡು ಬೀಸಾದ ಮಾತು ಮತ್ತು ವರ್ತನೆಯಿಂದಾಗಿ ಅವರನ್ನು ಗಡಿಬಿಡಿ ಚಿಂತಕಿ ಮತ್ತು ಗೊಂದಲಮಯ ಓದುಗಳು ಎಂದು ಕರೆಯಲಾಗುತ್ತಿತ್ತು. ಶಿಸ್ತಿನಿಂದ ನಡೆಯುವ, ಒಳೆಯ ಬಟ್ಟೆ ಧರಿಸಿ ಸುಂದರವಾಗಿ ಕಾಣುವವರು ಮಾತ್ರ ಯಶಸ್ಸು ಗಳಿಸುತ್ತಾರೆ ಎಂಬುದು ಸುಳ್ಳು, ಅದಕ್ಕೆ ತಾವೇ ಸಾಕ್ಷಿ ಎಂದಿರುವ ಕರೆನ್, ಲಿಂಗತಾರತಮ್ಯ ಮಾಡುತ್ತಿದ್ದ ಎಂ.ಐ.ಟಿ, ಸ್ಟಾನ್‍ಫರ್ಡ್, ಪ್ರಿನ್ಸ್‍ಟನ್ ವಿಶ್ವವಿದ್ಯಾಲಯಗಳಲ್ಲಿ ಮಹಿಳೆ ಎಂಬ ಕಾರಣಕ್ಕೆ ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ತಮಗೆ ಕೆಲಸ ಸಿಕ್ಕಿರಲಿಲ್ಲ ಎಂಬ ಕಹಿಯನ್ನು ಮರೆತಿಲ್ಲ ಎಂದಿದ್ದಾರೆ. ಸಂಶೋಧನೆಗೆ ಗಣಿತವನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ ಎಂಬ ಪ್ರಶ್ನೆಗೆ, ‘ಬೇರೆಯವರ ಮೇಲೆ ಅವಲಂಬಿತವಾಗದೇ ಕೆಲಸ ಮಾಡಲು ಇರುವ ಕ್ಷೇತ್ರವೆಂದರೆ ಗಣಿತ ಮಾತ್ರ, ಅದಕ್ಕೇ ಗಣಿತವನ್ನೇ ಆಯ್ಕೆ ಮಾಡಿಕೊಂಡೆ’ ಎಂದಿದ್ದಾರೆ.

ಆಧುನಿಕ ಅನ್ವಯಿಕ ಗಣಿತ ವಿಜ್ಞಾನದ ಮುಖ್ಯ ಶಾಖೆಗಳಲ್ಲಿ ಒಂದಾದ ಕ್ಯಾಲ್ಕುಲಸ್ (ಕಲನಶಾಸ್ತ್ರದ) ಆಫ್ ವೇರಿಯೇಶ್‍ನ್ಸ್ ಮೇಲೆ ಲೆನ್‍ಬೆಕ್ ಮಾಡಿದ ಸಂಶೋಧನೆಯ ಸಮಗ್ರ ಬರಹಗಳನ್ನು ‘ನೋಟಿಸಸ್ ಆಫ್ ಅಮೆರಿಕನ್ ಮ್ಯಾಥಮ್ಯಾಟಿಕಲ್ ಸೊಸೈಟಿ’ 2019ರ ಆವೃತ್ತಿಯಲ್ಲಿ ಪ್ರಕಟಿಸಿದ ಸಂಪಾದಕ ಸೈಮನ್ ಡೋನಾಲ್ಡ್‌ಸನ್, ಕರೆನ್‍ರ ಈ ಕೆಲಸ ಇದುವರೆಗೂ ಅಸ್ತಿತ್ವದಲ್ಲಿರುವ ಡಿಫರೆನ್ಶಿಯಲ್ ರೇಖಾಗಣಿತದ ಅನೇಕ ಸಿದ್ಧಾಂತಗಳ ಮೇಲೆ ಹೆಚ್ಚಿನ ಪ್ರಭಾವ ಬೀರುವುದಲ್ಲದೆ ಮುಂಬರುವ ದಿನಗಳ ಸಂಶೋಧನೆಗಳಿಗೆ ಕೇಂದ್ರ ಬಿಂದುವಾಗಿ ಕೆಲಸಮಾಡುತ್ತದೆ ಎಂದು ಶ್ಲಾಘಿಸಿ, ಈ ಬಾರಿಯ ಅಬೆಲ್ ಪ್ರಶಸ್ತಿ ಸರಿಯಾದ ವ್ಯಕ್ತಿಗೇ ದೊರೆತಿದೆ ಎಂದು ಹೊಗಳಿದ್ದಾರೆ. ಪ್ರಶಸ್ತಿ ಪ್ರಕಟವಾದ ನಂತರ ಏಪ್ರಿಲ್ 9ರಂದು ಸಂದರ್ಶನ ನಡೆಸಿದ ನ್ಯೂಯಾರ್ಕ್ ಟೈಮ್ಸ್ ‘ಕರೆನ್‍ಗೆ ಸೋಪಿನ ನೊರೆಗುಳ್ಳೆಗಳ ಮೂಲಕ ಇಡೀ ವಿಶ್ವದ ಗಣಿತವನ್ನು ನೋಡುವ ಶಕ್ತಿ ಇದೆ’ ಎಂದು ವರದಿ ಮಾಡಿದೆ. ಲಂಡನ್‍ನ ರಾಯಲ್ ಸೊಸೈಟಿಯ ಭೌತತಜ್ಞ ಜಿಮ್– ಅಲ್‍ಖಲೀಲಿ, ಕರೆನ್‍ರ ಕೊಡುಗೆ ಕಳೆದ ನಾಲ್ಕು ದಶಕಗಳ ಸಂಶೋಧನೆಗಳ ಮೇಲೆ ಅತೀವ ಪ್ರಭಾವ ಬೀರಿದೆ, ಆಕೆ ಗಣಿತ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲ ಹೆಣ್ಣು ಮಕ್ಕಳಿಗೆ ಮಾದರಿ ಎಂದಿದ್ದಾರೆ.

ಗಣಿತ ಸಾಧಕರಿಗೆ ಸಲ್ಲುವ ಸರ್ವಶ್ರೇಷ್ಠ ಪ್ರಶಸ್ತಿ ಎಂದರೆ ಫೀಲ್ಡ್ಸ್ ಮೆಡಲ್. ಇದು ನೊಬೆಲ್‍ಗೆ ಸರಿಸಮಾನವಾದುದು. ಗಣಿತ ಹೊರತು ಪಡಿಸಿ ವಿಜ್ಞಾನ ರಂಗದ ಎಲ್ಲ ಕ್ಷೇತ್ರಗಳಿಗೂ ನೊಬೆಲ್ ಪ್ರಶಸ್ತಿ ಸಲ್ಲುತ್ತದೆ. ಕಳೆದ 118 ವರ್ಷಗಳಲ್ಲಿ 607 ನೊಬೆಲ್ ಪ್ರಶಸ್ತಿಗಳು ವಿಜ್ಞಾನ ರಂಗದ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿದ ವ್ಯಕ್ತಿಗಳಿಗೆ ಸಂದಿವೆ. ಅದರಲ್ಲಿ ಮಹಿಳೆಯರ ಸಂಖ್ಯೆ ಕೇವಲ 19. ಮೇರಿ ಕ್ಯೂರಿ ಎರಡು ಬಾರಿ ಈ ಪ್ರಶಸ್ತಿ ಪಡೆದ ವೈಶಿಷ್ಟ್ಯಹೊರತುಪಡಿಸಿದರೆ ಮಹಿಳಾ ವಿಜ್ಞಾನಿ ಅಥವಾ ಸಂಶೋಧಕರನ್ನು ನೊಬೆಲ್ ಪ್ರಶಸ್ತಿ ಸಮಿತಿ ತುಸು ದೂರವೇ ಇರಿಸಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಕರೆನ್, ಪಾರ್ಕ್ ಸಿಟಿ ಮ್ಯಾಥಮ್ಯಾಟಿಕ್ಸ್ ಸಂಸ್ಥೆ ಕಟ್ಟಿ ಅಲ್ಲಿ ಅಧ್ಯಯನ ನಡೆಸಲು ಬರುವ ಯಾವುದೇ ಸಮಾನಾಂತರ ಸಮಾಜದ ಪ್ರಜೆಗೆ ಗಣಿತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಹಾಗೂ ವೃತ್ತಿಪರ ಬೆಳವಣಿಗೆಗೆ ಅವಕಾಶವಿರಬೇಕು ಎಂದು ಪ್ರತಿಪಾದಿಸುತ್ತಾರೆ. ವೈಜ್ಞಾನಿಕ ರಂಗವಷ್ಟೇ ಅಲ್ಲ, ಎಲ್ಲ ಬೌದ್ಧಿಕ ವಲಯಗಳಲ್ಲೂ ಮಹಿಳೆ ಪುರುಷರಷ್ಟೇ ಸಮಾನ ಸ್ಥಾನ ಪಡೆಯಬೇಕೆಂಬುದು ಕರೆನ್‍ರ ಆಸೆ. ಅದನ್ನು ಸಾಧಿಸಲು ಬೇಕಾದ ಅವಕಾಶವನ್ನು ಮಹಿಳೆಯರೇ ಪಡೆದುಕೊಳ್ಳಬೇಕು ಎಂದು ಕರೆನ್ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT