ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್ ಏರುವ ಮುನ್ನ: ಭದ್ರತೆ - ಮುಂಜಾಗ್ರತಾ ಕ್ರಮಗಳ ಬಗ್ಗೆ ಬೈಕರ್‌ಗಳ ದನಿ

Published 8 ಮಾರ್ಚ್ 2024, 23:30 IST
Last Updated 8 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಟ್ರಾವೆಲ್‌ ವ್ಲಾಗರ್‌ ಆಗಿದ್ದ ವಿದೇಶಿ ಮಹಿಳೆಯೊಬ್ಬರ ಮೇಲೆ ಜಾರ್ಖಾಂಡ್‌ನ ದುಮ್ಕಾ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣ ಮಹಿಳಾ ಬೈಕರ್‌ಗಳ ಭದ್ರತೆಯ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿದೆ. ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಬೈಕರ್‌ಗಳು ದನಿಯಾಗಿದ್ದಾರೆ .

ಬ್ಯಾಕ್‌ಪ್ಯಾಕ್‌ ಸಜ್ಜುಗೊಳಿಸುವ ಮೊದಲು...

* ಊರು ಸುತ್ತಬೇಕು ಎಂದು ಉತ್ಸಾಹದಲ್ಲಿರುವವರೆಲ್ಲ ಮೊದಲಿಗೆ ಪಯಣಿಸುವ ದಾರಿ, ಬಳಸುವ ಬೈಕ್‌ / ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಮುಖ್ಯ. ದಾರಿ ತಪ್ಪಿದಾಗ, ಬೈಕ್ ಕೆಟ್ಟಾಗ ಏನು ಮಾಡಬೇಕು ಎಂಬುದು ಗೊತ್ತಿರಲಿ. ಸ್ವಯಂ ರಿಪೇರಿ ಮಾಡಿಕೊಳ್ಳುವಷ್ಟು ಕೌಶಲ ಬೆಳೆಸಿಕೊಳ್ಳಿ.  

* ಎಲ್ಲರೊಂದಿಗೆ ಬೆರೆತು ಪ್ರವಾಸ ಮಾಡುವುದು ಖುಷಿಯೇ ಆದರೂ ಎಷ್ಟು ಬೆರೆಯಬೇಕು? ಅಪರಿಚಿತರೊಟ್ಟಿಗೆ, ಸಹ –ಬೈಕರ್‌ಗಳೊಟ್ಟಿಗೆ ಎಷ್ಟರ ಮಟ್ಟಿಗೆ ಸಲುಗೆ ಇಟ್ಟುಕೊಳ್ಳಬೇಕು ಎಂಬುದಕ್ಕೆ ಮಿತಿ ಹಾಕಿಕೊಳ್ಳಿ. 

* ಎಷ್ಟೇ ಆಡಿಯೊ, ವಿಡಿಯೊ ನೋಡಿದರೂ ಸ್ಥಳೀಯರಿಂದ ಸಿಗುವ ಮಾಹಿತಿ ಎಂದಿಗೂ ಮೌಲ್ಯಯುತವಾಗಿರುತ್ತದೆ. ಸ್ಥಳೀಯರಿಂದ ಆ ಪ್ರದೇಶ, ಭದ್ರತೆಯ ಬಗ್ಗೆ ನಿಖರ ಮಾಹಿತಿ ಪಡೆಯಿರಿ. ಕತ್ತಲು, ನಿರ್ಜನ ಪ್ರದೇಶಗಳಿಂದ ದೂರವಿರಿ. ಅಪರಿಚಿತರೊಟ್ಟಿಗೆ ಸಂಭಾಷಣೆ ನಡೆಸುವುದನ್ನು ತಪ್ಪಿಸಿ. 

* ಎಲ್ಲಿ ಕ್ಯಾಂಪಿಂಗ್ ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟ ಅರಿವಿರಲಿ. ಗುಂಪಾಗಿ ಕ್ಯಾಂಪಿಂಗ್ ಮಾಡಿ. 

* ಬೈಕ್ ಓಡಿಸುವುದು ಒಂದು ಕೌಶಲ. ಅದರೆಡೆಗೆ ಪರಿಣತಿ ಸಾಧಿಸಿ. ಎಂಥ ಕಷ್ಟದ ಸಮಯದಲ್ಲಿಯೂ ಅಪಾಯದಿಂದ ಪಾರಾಗುವಷ್ಟರ ಮಟ್ಟಿಗೆ ಚಾಕಚಕ್ಯತೆಯನ್ನು ಬೆಳೆಸಿಕೊಳ್ಳಿ. 

ಜಾಗೃತಿ ಮೂಡಲಿ

ಹೆಣ್ಣುಮಕ್ಕಳಿರಲಿ, ಗಂಡು ಮಕ್ಕಳೇ ಆಗಲಿ ಬೈಕ್ ಏರುವ ಮುನ್ನ, ಒಬ್ಬೊಬ್ಬರೇ ಪ್ರವಾಸ ಹೊರಡುವ ಮುನ್ನ , ನಂಗೇನೂ ಆಗಲ್ಲ ಎನ್ನುವ ಭಂಡ ಧೈರ್ಯವನ್ನು ಬಿಡಬೇಕು. ಹತ್ತು ಕಡೆಗಳಲ್ಲಿ ಸುರಕ್ಷಿತವಾಗಿ ಕ್ಯಾಂಪಿಂಗ್‌ ಮಾಡಿದ್ದಿರಬಹುದು. ಆದರೆ, ಹನ್ನೊಂದನೇ ಬಾರಿಯೂ ಅದೇ ಅನುಭವ ಆಗಬೇಕಿಂದಿಲ್ಲ. ನಾವು ನೋಡಬೇಕು ಅಂದುಕೊಂಡಿರುವ  ಪ್ರದೇಶಗಳೆಲ್ಲವೂ ಅಪರಿಚಿತವಾಗಿರುವುದರಿಂದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ಕ್ಯಾಂಪಿಂಗ್ ಮಾಡಲೇಬೇಕು ಎಂಬ ಇಚ್ಛೆಯಿದ್ದರೆ 10ರಿಂದ 12 ಮಂದಿ ಒಟ್ಟಾಗಿ ಗುಂಪಿನಲ್ಲಿ ಕ್ಯಾಂಪಿಂಗ್ ಮಾಡುವುದು ಒಳಿತು. ಸತತ ಎರಡು ವರ್ಷಗಳಿಂದ ಬೈಕ್ ಓಡಿಸುತ್ತಿದ್ದೀನಿ. ಒಬ್ಬಳೇ ಲಡಾಕ್‌ಗೂ ಹೋಗಿ ಬಂದಿದ್ದೀನಿ. ಕತ್ತಲಿನಲ್ಲಿ, ನಿರ್ಜನ ಪ್ರದೇಶಗಳಲ್ಲಿ, ಕಾಡಿನ ದಾರಿಯಲ್ಲಿ ಒಬ್ಬಳೇ ಹೋಗುವುದನ್ನು ತಪ್ಪಿಸುತ್ತೀನಿ. ಮಧ್ಯರಾತ್ರಿ 2 ಗಂಟೆಗೆ ರಸ್ತೆಯ ಮಧ್ಯೆ ಅಪರಿಚಿತರೊಬ್ಬರು ಅಡ್ಡ ಹಾಕಿದ ಪ್ರಸಂಗ ಇದೆ. ನಾನಂತೂ ಗಾಡಿ ನಿಲ್ಲಿಸದೆ 80ರ ವೇಗದಲ್ಲಿ ಗಾಡಿ ಓಡಿಸಿದ್ದೀನಿ. ಇನ್ನೇನೂ ಗಾಡಿ ಅವರಿಗೆ ತಾಗಬೇಕು ಎನ್ನುವಷ್ಟರಲ್ಲಿ, ಅವರು ರಸ್ತೆಯ ಬದಿಗೆ ಹಾರಿಕೊಂಡಿದ್ದು ಇದೆ. ಅಪಘಾತವಾದಂತೆ ನಾಟಕವಾಡುವ ಟ್ರ್ಯಾಪ್‌ ಪ್ರಕರಣಗಳು ಈಗೀಗ ಹೆಚ್ಚುತ್ತಿವೆ. ಬೈಕ್ ಓಡಿಸುವವರು ಇವುಗಳ ಬಗ್ಗೆ ತಿಳಿದುಕೊಳ್ಳುವುದು ಒಳಿತು. ಗುಂಪಿನಲ್ಲಿ ಬೈಕ್ ಓಡಿಸಲು ಇಷ್ಟಪಡುತ್ತೀನಿ. ಪ್ರವಾಸೋದ್ಯಮ ಇಲಾಖೆಯು ಅಲ್ಲಲ್ಲಿ ರಸ್ತೆಯ ನಕ್ಷೆ ಇರುವ ಫಲಕಗಳನ್ನು ಹಾಕುವುದು ಒಳಿತು. ಬೈಕರ್‌ಗಳ ನಡುವೆ ಜಾಗೃತಿ ಮೂಡಬೇಕು. ಬೈಕ್‌ನಲ್ಲಿಯೇ ಜಿಪಿಎಸ್‌ ಟ್ರ್ಯಾಕರ್ ಇರುವಂತೆ ನೋಡಿಕೊಂಡರೆ ದಾರಿ ತಪ್ಪಿದಾಗಲೂ ಸಹ –ಬೈಕರ್‌ಗಳಿಗೆ ಇದರ ಬಗ್ಗೆ ಅರಿವಿರುತ್ತದೆ. 

-ಪ್ರಿಯಾಂಕ ಎಂ.ಪಿ.

ಭದ್ರತೆಗೆ ಸಿಗಲಿ ಆದ್ಯತೆ

ಹೆಚ್ಚೇನೂ ಅಭಿವೃದ್ಧಿಗೊಳ್ಳದ ಪ್ರದೇಶಗಳಲ್ಲಿ ಬೈಕ್ ಓಡಿಸುವುದನ್ನು ಆದಷ್ಟು ತಪ್ಪಿಸುತ್ತೇನೆ. ಭದ್ರತೆಯ ದೃಷ್ಟಿಕೋನದಿಂದ ಸಾಧ್ಯವಾದಷ್ಟು ಪೆಟ್ರೋಲ್‌ ಬಂಕ್‌ ಹಾಗೂ ಧಾರ್ಮಿಕ ಕೇಂದ್ರಗಳ ಸಮೀಪ ಸಿಸಿಟಿವಿ ಕ್ಯಾಮೆರಾ ಹಾಗೂ ಶೌಚಾಲಯ ವ್ಯವಸ್ಥೆ  ಇರುವ ಕಡೆಗಳಲ್ಲಿ ಟೆಂಟ್ ಹಾಕುತ್ತೇನೆ.  ಈ ವಿಚಾರದಲ್ಲಿ ನಾನು ಅದೃಷ್ಟವಂತೆ. ಭಯ ಎನಿಸುವ ಅನುಭವಗಳೇನೂ ಆಗಿಲ್ಲ. ಆದರೆ 2022ರಲ್ಲಿ ಲಡಾಕ್‌ನಲ್ಲಿ ಬೈಕ್ ಓಡಿಸುವಾಗ ಸಹ– ಬೈಕರ್‌ಗಳಿಗಿಂತ ಹಿಂದೆ ಉಳಿದುಬಿಟ್ಟೆ. ಯಾವುದೋ ನಿರ್ಜನ ಪ್ರದೇಶದಲ್ಲಿ ಕಳೆದುಹೋಗಿದ್ದೆ. ಕತ್ತಲಾಗುತ್ತಿತ್ತು. ನೆಟ್‌ವರ್ಕ್‌ ಬೇರೆ ಇರಲಿಲ್ಲ. ಆಗ ತುಂಬಾ ಭಯ ಆಗಿತ್ತು. ಆದರೆ, ಭಾರತೀಯ ಸೈನಿಕರು ನೆರವಾದರು.  ಸರಿ ದಿಕ್ಕು ತೋರಿಸಿ, ಮತ್ತೆ ನಾನು ನನ್ನ ಸಹ –ಬೈಕರ್‌ಗಳೊಟ್ಟಿಗೆ ತಲುಪುವಂತೆ ನೋಡಿಕೊಂಡರು. ಇದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. 

ವಿದೇಶಿ ದಂಪತಿ ಜನನಿಬಿಡ ಪ್ರದೇಶದಲ್ಲಿ ಕ್ಯಾಂಪಿಂಗ್ ಮಾಡಬೇಕಿತ್ತು. ಅಪರಿಚಿತ ಜನರೊಟ್ಟಿಗೆ ಅತಿಯಾದ ಮಾತು, ಸ್ನೇಹ ಬೆಳೆಸುವುದು ಇವೆಲ್ಲ ಮಾಡಲೇಬಾರದು. ಸಾಧ್ಯವಾದಷ್ಟು ಪೆಪ್ಪರ್‌ಸ್ಪ್ರೇ ಬಾಟಲಿಗಳನ್ನು ನಮ್ಮೊಟ್ಟಿಗೆ ಇಟ್ಟುಕೊಳ್ಳುವುದು ಒಳಿತು. 

-ವಿಲ್ಮಾ ಕರ್ವಾಲೊ

ಕಾಯುವ ‘ಆರನೆಯ ಇಂದ್ರಿಯ’

ಹೆಣ್ಣಮಕ್ಕಳು ಬೈಕ್  ಓಡಿಸ್ತಾರೆ. ಆತ್ಮವಿಶ್ವಾಸದಿಂದ ಬೈಕ್ ಓಡಿಸ್ತಾರೆ ಅನ್ನುವ ವಿಷಯವನ್ನೇ ಹಲವು ಗಂಡಸರಿಗೆ ಇನ್ನು ಒಪ್ಪಿಕೊಳ್ಳಲು ಆಗಿಲ್ಲ .ಅಂಥದ್ದರಲ್ಲಿ ಹೆಣ್ಣಮಕ್ಕಳು ಒಬ್ಬೊಬ್ಬರೇ ಬೈಕ್‌ ಏರಿ, ಇಷ್ಟದ ಜಾಗವನ್ನು ತಲುಪಿ, ಬದುಕನ್ನು ಆಸ್ವಾದಿಸುವಾಗ ಅಡ್ಡಿ, ಆತಂಕಗಳೆಲ್ಲ ಇರುವುದು ಸಹಜ. ಅದಕ್ಕೆ ತಲೆಕೆಡಿಸಿಕೊಳ್ಳಬೇಕಿಲ್ಲ. ಹಾಗೆಂದು ಅಪಾಯವನ್ನು ಮೈಮೇಲೆ ಎಳೆದುಕೊಂಡು ಬೈಕ್‌ ಬಿಡಬೇಕಿಲ್ಲ. ಹೆಣ್ಣುಮಕ್ಕಳಿಗೆ ಪ್ರಕೃತಿದತ್ತವಾಗಿ ಆರನೆಯ ಇಂದ್ರಿಯ ಸದಾ ಜಾಗೃತ ಸ್ಥಿತಿಯಲ್ಲಿ  ಇರುತ್ತದೆ. ನಾನು ನನ್ನ ಬಹುತೇಕ ಪ್ರವಾಸಗಳಲ್ಲಿ ಇದರ ಮಾತನ್ನೇ ಕೇಳುತ್ತೇನೆ. 

 ಪಾಂಡಿಚೇರಿ ತಿರುವಣ್ಣಾಮಲೈ ದಾರಿ ಅಷ್ಟೂ ಸುರಕ್ಷಿತವಲ್ಲ. ಹಗಲಿನ ಹೊತ್ತೇ ದರೋಡೆಗಳು ನಡೆಯುತ್ತವೆ ಎಂದು ಕೇಳಿದ್ದೀನಿ. ಹೀಗಿದ್ದರೂ ಹಗಲು ಮತ್ತು ರಾತ್ರಿ ವೇಳೆಗಳಲ್ಲಿ ಒಬ್ಬಳೇ ಬೈಕ್‌ ರೈಡ್‌ ಮಾಡಿದ್ದೀನಿ. ಲಡಾಕ್‌ಗೆ ಹೋದಾಗ ದಾರಿ ತಪ್ಪಿದ್ದಿದೆ. ಆದರೆ ಜನ ಸಹಾಯ ಮಾಡಿದ್ದಾರೆ. ಆದಷ್ಟು ಬೆಳಕಿರುವ ಕಡೆಗಳಲ್ಲಿ ಬೈಕ್‌ ಓಡಿಸುತ್ತೇನೆ. ಕತ್ತಲು ಹಾಗೂ ನಿರ್ಜನ ಪ್ರದೇಶಗಳಲ್ಲಿ ಎಂದಿಗೂ ಬೈಕ್ ನಿಲ್ಲಿಸುವುದಿಲ್ಲ. ಜನ ಸಮೂಹವಿರುವ, ಮನೆಗಳು ಯಥೇಚ್ಛವಾಗಿರುವ ಕಡೆಗಳಲ್ಲಿ ಬೈಕ್ ನಿಲ್ಲಿಸುತ್ತೇನೆ. ಈವರೆಗಿನ ಬೈಕ್‌ ಟ್ರಿಪ್‌ಗಳಲ್ಲಿ ಪೆಪ್ಪರ್‌ ಸ್ಪ್ರೇ ಬಳಸಿಲ್ಲ. ನನಗೆ ದೂರದೂರುಗಳಿಗೆ ಹೋಗುವಾಗ ಯಾವ ತೊಂದರೆಯೂ ಆಗಿಲ್ಲ. ಜನರು ಬಹಳ ಇಷ್ಟಪಟ್ಟು ಸಹಾಯ ಮಾಡುತ್ತಾರೆ. ಆದರೆ, ಬೆಂಗಳೂರಿನಂಥ ಮಹಾನಗರದಲ್ಲಿ ಬೈಕ್ ಓಡಿಸುವಾಗ ಹಲವು ಗಂಡಸರು ಪ್ರದರ್ಶಿಸುವ ಅಹಂನ ಧೋರಣೆಯನ್ನು ಸಹಿಸುವುದು ಕಷ್ಟ. ಸುಖಾಸುಮ್ಮನೆ ಬೈಕಿನ ಹ್ಯಾಂಡಲ್‌ ತಾಗುವಂತೆ ಮಾಡಿ, ಬೀಳುತ್ತಾಳಾ ಅಥವಾ ಬೈಯುತ್ತಾಳಾ? ಎಂದು ತಾಳ್ಮೆ ಪರೀಕ್ಷೆ ಮಾಡುವ ಗಂಡಸರನ್ನು ನೋಡಿದ್ದೇನೆ. ಗೆಳೆತಿಯೊಬ್ಬಳು ಮಲೆ ಮಹದೇಶ್ವರ ಬೆಟ್ಟದಲ್ಲಿ ಬೈಕ್ಓಡಿಸುವಾಗ ಖಾಸಗಿ ಬಸ್ಸಿನ ಡ್ರೈವರ್‌ ಬೇಕಂತಲೆ ಅವಳ ಗಾಡಿಗೆ ತಾಗಿಸಿ, ಅವಳು ಬಿದ್ದು, ಸೊಂಟದ ಭಾಗ ಸ್ವಾಧೀನ ಕಳೆದುಕೊಂಡ ಉದಾಹರಣೆ ಕಣ್ಮುಂದಿದೆ.  ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವಾದಾಗ ಸಮಾಜ ಮೊದಲು ಕೇಳುವುದು ಪುರಾವೆ. ಬೈಕ್‌ ಓಡಿಸುವಾಗ ಆಕಸ್ಮಿಕ ದಾಳಿಗಳು ನಡೆಯುತ್ತವೆ. ಪುರಾವೆ ಒದಗಿಸಲು ಸಾಧ್ಯವಾಗದೇ ಹೋಗಬಹುದು. ಹಾಗಾಗಿ ಎಂದಿಗೂ ಹೆಣ್ಣುಮಕ್ಕಳ ತಂಟೆಗೆ ಹೋಗಲೇಬಾರದು ಎನ್ನುವ ಭಯ ಸಮಾಜದಲ್ಲಿ ಹುಟ್ಟಬೇಕು. 

 -ನೀಲು. ಆರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT