ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದದಲ್ಲಿ ಬಿರುಕೇ? ಮನೆಯಲ್ಲೇ ಇದೆ ಪರಿಹಾರ!

Last Updated 27 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಈ ಚಳಿಗಾಲದಲ್ಲಿ ತ್ವಚೆಯನ್ನು ಸಂಭಾಳಿಸುವುದೇ ಒಂದು ದೊಡ್ಡ ಕೆಲಸವಾಗಿಬಿಡುತ್ತದೆ. ಹುರುಪೆ ಏಳುವ ಮುಖ, ಕೈ– ಕಾಲಿನ ಚರ್ಮ ಒಂದು ಕಡೆಯಾದರೆ, ಪಾದದ ಹಿಮ್ಮಡಿಯಲ್ಲಿ ಬಿರುಕು ಬಿಟ್ಟು ಅದು ಕೊಡುವ ನೋವು ಇನ್ನೊಂದು ಕಡೆ. ತರಿತರಿಯಾದ ಪಾದ ಬಟ್ಟೆಗೆ ತಾಗಿದರಂತೂ ಕೇಳುವುದೇ ಬೇಡ. ಒಡೆದ ಪಾದ ಅಸಹ್ಯವಾಗಿ ಕಾಣುವುದು ಮಾತ್ರವಲ್ಲ, ಕೆಲವು ಸಲ ಇದರಿಂದ ರಕ್ತ ಒಸರಬಹುದು. ಹಾಗೆಯೇ ಸೋಂಕು ಕೂಡ ಉಂಟಾಗಬಹುದು.

ಸಾಮಾನ್ಯವಾಗಿ ಹಿಮ್ಮಡಿ ಒಡಕಿಗೆ ಕಾರಣ ತೇವಾಂಶದ ಕೊರತೆ. ಈ ಕೊರತೆಗೆ ಬೇರೆ ಬೇರೆ ಕಾರಣಗಳಿರಬಹುದು. ಚಳಿಗಾಲದ ಥಂಡಿ ಹವೆ, ಒಣ ಹವಾಮಾನ, ನಿರ್ಜಲೀಕರಣ, ದೀರ್ಘಕಾಲ ಬಿಸಿನೀರಿನಲ್ಲಿ ಪಾದ ಮುಳುಗಿಸುವುದು, ಮಾಯಿಶ್ಚರೈಸರ್‌ ಹಚ್ಚದಿರುವುದು, ಒಣ ಪಾದವನ್ನು ಉಜ್ಜುವುದು, ಮಾಲಿನ್ಯಕ್ಕೆ ಹೆಚ್ಚು ಕಾಲ ಒಡ್ಡಿಕೊಳ್ಳುವುದು.. ಇವೇ ಮೊದಲಾದವು ನಿಮ್ಮ ಒಡೆದ ಹಿಮ್ಮಡಿಗೆ ಕಾರಣಗಳಿರಬಹುದು. ಇದಲ್ಲದೇ ಇಸಬು, ಮಧುಮೇಹ, ಥೈರಾಯ್ಡ್‌, ಸೋರಿಯಾಸಿಸ್‌ ಮತ್ತಿತರ ವೈದ್ಯಕೀಯ ಕಾರಣಗಳಿಂದಲೂ ಪಾದ ಬಿರುಕು ಬಿಡಬಹುದು.

ಈ ಸಮಸ್ಯೆಗೆ ಗಾಬರಿಪಡಬೇಕಿಲ್ಲ. ಮನೆಯಲ್ಲೇ ಪರಿಹಾರೋಪಾಯಗಳನ್ನು ಮಾಡಿಕೊಳ್ಳಬಹುದು.

ಪಾದಕ್ಕೆ ಮಾಸ್ಕ್‌

ಒಂದು ಟಬ್‌ನಲ್ಲಿ ಉಗುರು ಬೆಚ್ಚಗಿನ ನೀರು ತೆಗೆದುಕೊಳ್ಳಿ. ಇದಕ್ಕೆ ನಿಂಬೆರಸ ಸೇರಿಸಿ. ಹಾಗೆಯೇ ಉಪ್ಪು, ಗ್ಲಿಸರಿನ್‌ ಮತ್ತು ಗುಲಾಬಿ ಪನ್ನೀರು ಹಾಕಿ. ಪಾದಗಳನ್ನು ಇದರಲ್ಲಿ ಮುಳುಗಿಸಿ 15– 20 ನಿಮಿಷಗಳ ಕಾಲ ಆರಾಂ ಮಾಡಿ. ನಂತರ ಪ್ಯುಮೈಸ್‌ ಕಲ್ಲು ಅಥವಾ ಸ್ಕ್ರಬರ್‌ನಿಂದ ಹಿಮ್ಮಡಿಯನ್ನು ಮೆಲ್ಲಗೆ ಉಜ್ಜಿ. ನಂತರ ಸ್ವಚ್ಛವಾದ ನೀರಿನಿಂದ ತೊಳೆದು, ಟವೆಲ್‌ನಿಂದ ಒತ್ತಿ ಒಣಗಿಸಿ. ಒಳ್ಳೆಯ ಗುಣಮಟ್ಟದ ಮಾಯಿಶ್ಚರೈಸರ್‌ ಹಚ್ಚಿ.

ಇದಲ್ಲದೇ ಗ್ಲಿಸರಿನ್‌, ಗುಲಾಬಿ ಪನ್ನೀರು (ರೋಸ್‌ ವಾಟರ್‌) ಮತ್ತು ನಿಂಬೆರಸ ಸೇರಿಸಿ ನಿಮ್ಮದೇ ಆದ ಮಾಸ್ಕ್‌ ತಯಾರಿಸಬಹುದು. ಇದನ್ನು ರಾತ್ರಿ ಹಿಮ್ಮಡಿಗೆ ಹಚ್ಚಿ. ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಿಂದ ತೊಳೆದರೆ ಬಿರುಕುಗಳು ಕಡಿಮೆಯಾಗುತ್ತವೆ. ಹಿಮ್ಮಡಿಯ ಚರ್ಮ ಮೃದುವಾಗುವವರೆಗೂ ಇದನ್ನು ಮುಂದುವರಿಸಿ.

ಎಣ್ಣೆ ಹಚ್ಚಿ

ಒಡೆದ ಹಿಮ್ಮಡಿಗೆ ಸಸ್ಯಜನ್ಯ ಖಾದ್ಯತೈಲ ಬಹಳ ಒಳ್ಳೆಯ ಮದ್ದು. ಪಾದವನ್ನು ತೊಳೆದ ನಂತರ ಕೊಬ್ಬರಿ ಎಣ್ಣೆಯನ್ನು ಹಿಮ್ಮಡಿಗೆ ಹಚ್ಚಿ. ದಪ್ಪ ಹತ್ತಿಯ ಕಾಲುಚೀಲವನ್ನು ತೊಟ್ಟು ಮಲಗಿ. 8– 10 ದಿನ ಮಾಡಿದರೆ ಸಾಕು, ಉತ್ತಮ ಫಲಿತಾಂಶ ಪಡೆಯಬಹುದು.

ಬಾಳೆಹಣ್ಣಿನ ಮಾಸ್ಕ್‌

ಬಾಳೆಹಣ್ಣು ಉತ್ತಮ ಮಾಯಿಶ್ಚರೈಸರ್‌ನಂತೆ ಕೆಲಸ ಮಾಡುತ್ತದೆ, ಗೊತ್ತೇ? ನಿಮ್ಮ ತ್ವಚೆಯನ್ನು ಮೃದುವಾಗಿ ಮತ್ತು ನಯವಾಗಿ ಮಾಡುವ ಶಕ್ತಿ ಇದಕ್ಕಿದೆ. ಒಡೆದ ಹಿಮ್ಮಡಿಗೆ ಬಾಳೆಹಣ್ಣಿನ ತಿರುಳನ್ನು ಹಚ್ಚಿ. 15– 20 ನಿಮಿಷದ ನಂತರ ತೊಳೆಯಿರಿ.

ಜೇನುತುಪ್ಪ

ಅರ್ಧ ಟಬ್‌ ಬೆಚ್ಚಗಿನ ನೀರಿಗೆ ಒಂದು ಕಪ್‌ ಜೇನುತುಪ್ಪ ಬೆರೆಸಿ. ಅದರಲ್ಲಿ 15– 20 ನಿಮಿಷಗಳ ಕಾಲ ಪಾದ ಮುಳುಗಿಸಿಟ್ಟುಕೊಳ್ಳಿ. ಒಣ ಚರ್ಮವನ್ನು ಉಜ್ಜಿ ತೆಗೆಯಿರಿ. ಜೇನುತುಪ್ಪ ನೈಸರ್ಗಿಕ ಸೋಂಕುನಿರೋಧಕದಂತೆ ಕೆಲಸ ಮಾಡುತ್ತದೆ.

ಅಡುಗೆ ಸೋಡಾ

ಅರ್ಧ ಬಕೆಟ್‌ ಉಗುರು ಬೆಚ್ಚಗಿನ ನೀರಿನಲ್ಲಿ ಅಡುಗೆ ಸೋಡಾ ಬೆರೆಸಿ. ನಂತರ ಪಾದಗಳನ್ನು 10–15 ನಿಮಿಷ ಕಾಲ ಮುಳುಗಿಸಿ. ಪ್ಯುಮೈಸ್‌ ಕಲ್ಲಿನಿಂದ ಉಜ್ಜಿ. ಅಡುಗೆ ಸೋಡಾ ಸತ್ತ ಒಣ ಚರ್ಮವನ್ನು ತೆಗೆದು ಹಾಕುವುದಲ್ಲದೇ, ಉರಿಯೂತ ಶಮನ ಮಾಡುವ ಶಕ್ತಿಯೂ ಇದಕ್ಕಿದೆ.

ಲೋಳೆಸರ

ರಾತ್ರಿ ಮಲಗುವ ಮುಂಚೆ ನಿತ್ಯ ಪಾದಗಳನ್ನು ತೊಳೆದು ಲೋಳೆಸರ ಜೆಲ್‌ ಹಚ್ಚಿ. ಇದು ಹಿಮ್ಮಡಿಯ ಒಡಕನ್ನು ಕಡಿಮೆ ಮಾಡುವುದಲ್ಲದೇ ತ್ವಚೆಯಲ್ಲಿ ಕೊಲಾಜೆನ್‌ ಹೆಚ್ಚಾಗುವಂತೆ ಮಾಡಿ ಬಿರುಕು ಬೇಗ ಕೂಡಿಕೊಳ್ಳುವಂತೆ ಮಾಡುತ್ತದೆ. ಇದರಲ್ಲಿರುವ ಅಮಿನೊ ಆಮ್ಲಕ್ಕೆ ತ್ವಚೆಯನ್ನು ಮೃದುಗೊಳಿಸುವ ಶಕ್ತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT