ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಆ ದಿನ ಇರಲಿ ಸಾಂತ್ವನ

Published 11 ಆಗಸ್ಟ್ 2023, 23:34 IST
Last Updated 11 ಆಗಸ್ಟ್ 2023, 23:34 IST
ಅಕ್ಷರ ಗಾತ್ರ

ಹೆಣ್ಣುಮಕ್ಕಳು ಎಳವೆಯಲ್ಲಿ ಋತುಮತಿಯಾಗುತ್ತಿದ್ದಾರೆ. ಮೊದಲ ಬಾರಿಗೆ ಋತುಮತಿಯಾಗುವ ಹೆಣ್ಣುಮಕ್ಕಳು ಶಾಲೆ, ಮನೆಗಳಲ್ಲಿ‌ ಕಸಿವಿಸಿ ಅನುಭವಿಸುತ್ತಿರುವ ಉದಾಹರಣೆಗಳಿವೆ. ಹಾಗಾದರೆ, ಈ ಬಗ್ಗೆ ಯಾರಿಗೆ, ಹೇಗೆ ಅರಿವು ಮೂಡಿಸಬೇಕು? ಈ ಕುರಿತು ಶಿವಮೊಗ್ಗದ ರೋಗ ಲಕ್ಷಣ ಶಾಸ್ತ್ರಜ್ಞೆ ಡಾ. ವಿನಯಾ ಶ್ರೀನಿವಾಸ್ ಒಂದಿಷ್ಟು ಕಿವಿಮಾತುಗಳನ್ನು ಹೇಳಿದ್ದಾರೆ.

ಗೊಂಬೆಗಳ ಮಧ್ಯೆ ಆಟವಾಡಿಕೊಂಡಿರುತ್ತಿದ್ದ ಮೂರನೇ ಕ್ಲಾಸಿನ  ಪುಟ್ಟ ಬಾಲಕಿ ಸಮನ್ಯಾಳಿಗೆ (ಹೆಸರು ಬದಲಾಯಿಸಲಾಗಿದೆ) ಒಂದು ವಾರದಿಂದ ಕಿಬ್ಬೊಟ್ಟೆ ನೋವು. ತಿಂದು ಅಜೀರ್ಣವಾಗಿರಬೇಕು ಎಂದುಕೊಂಡು ಪೋಷಕರು ಸುಮ್ಮನಾದರು. ಕೆಲ ದಿನ ಕಳೆದರೂ ಮನೆ ಮದ್ದಿಗೂ ಕಡಿಮೆಯಾಗದ ಆ ನೋವು ವೈದ್ಯರಲ್ಲಿ ತೋರಿಸಿ ಮದ್ದು ಪಡೆಯಬೇಕು ಎನ್ನುವಷ್ಟರಲ್ಲಿ ಋತುಸ್ರಾವ!.

ಹಾ! ಎಂಟು ವರ್ಷದ ಪೋರಿ ಋತುಮತಿಯಾಗುವುದಾ? ಎಂದು ಹುಬ್ಬೇರಿಸುವಂತಿಲ್ಲ. ಈಗೀಗ ಇಂಥ ಪ್ರಕರಣಗಳು ಹೆಚ್ಚುತ್ತಿವೆ. ಎಳವೆಯಲ್ಲಿ ಹೆಣ್ಣುಮಕ್ಕಳು ಋತುಮತಿಯಾಗುತ್ತಿದ್ದಾರೆ. 

ಹಿಂದೆ ಹದಿನಾರರ ಹರೆಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೊದಲ ಋತುಸ್ರಾವ ಈ ದಿನಗಳಲ್ಲಿ ಹತ್ತಕ್ಕೇ ಕಾಣಿಸಿ ಕೊಳ್ಳುತ್ತಿದೆ. ಆದರೆ, ಅದಕ್ಕೆ ಪೂರಕವಾಗಿ ಮಕ್ಕಳಿಗೆ ಮಾರ್ಗದರ್ಶನ ಮಾಡಲು ಪೋಷಕರು ಮತ್ತು ಶಾಲಾ ಶಿಕ್ಷಕರು ಅಣಿಯಾಗಿದ್ದಾರೆಯೇ ಎಂದು ಯೋಚಿಸಿದರೆ ಉತ್ತರ ಸಿಗುವುದು ಕಷ್ಟವೇ. 

ಇತ್ತೀಚೆಗೆ ಯುನೆಸ್ಕೊ ನಡೆಸಿದ ಸಮೀಕ್ಷೆ/ಅಧ್ಯಯನದ ಪ್ರಕಾರ ಋತುಮತಿಯಾಗುವ ವಿಷಯದ ಬಗ್ಗೆ  ಕಿಶೋರಿಯರಿಗೆ, ಶಿಕ್ಷಕರಾಗಲಿ, ಪೋಷಕರಾಗಲಿ ಮನಸ್ಸು ಬಿಚ್ಚಿ ತಿಳಿ ಹೇಳಿದಂತೆ ಕಾಣುತ್ತಿಲ್ಲ. ಆ ಕಾರಣಕ್ಕಾಗಿಯೇ ಎಷ್ಟೋ ಹೆಣ್ಣು ಮಕ್ಕಳು ಮೊದಲ ಬಾರಿಗೆ ಋತುಸ್ರಾವ ಕಂಡಾಗ ಗಾಬರಿಯಾಗುತ್ತಾರೆ ಮತ್ತು ಭಯಪಡುತ್ತಾರೆ. ಈ ನಿಟ್ಟಿನಲ್ಲಿ ಶಿಕ್ಷಕರಿಂದಲೂ ಕಿಶೋರಿಯರಿಗೆ ಅಗತ್ಯ ಸ್ಪಂದನೆ ಸಿಗುತ್ತಿಲ್ಲ. ಈ ಎಲ್ಲ ಅಂಶಗಳೂ ವರದಿಯಲ್ಲಿ ಉಲ್ಲೇಖವಾಗಿದೆ.

ಯಾರು ಮಾರ್ಗದರ್ಶನ ನೀಡಬೇಕು? 

ಈ ಹಂತದಲ್ಲಿ ತಾಯಿಯ ಮಾರ್ಗದರ್ಶನ ಬಹಳ ಮುಖ್ಯ. ತಾಯಿ ಅಥವಾ ಮನೆಯಲ್ಲಿ ಹಿರಿಯ ಅಕ್ಕ, ಅಜ್ಜಿ ಹೀಗೆ ಯಾರಾದರೂ ಮಾರ್ಗದರ್ಶನ ನೀಡಬಹುದು. ಮನೆಯಲ್ಲಿ ಬೆಳೆಯುತ್ತಿರುವ ಹೆಣ್ಣುಮಕ್ಕಳನ್ನು ತಾಯಂದಿರು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಕಿಶೋರಿಯರ ಕಂಕುಳಲ್ಲಿ ಮತ್ತು ಜನನಾಂಗದ ಭಾಗದಲ್ಲಿ ಕೂದಲಿನ ಬೆಳವಣಿಗೆ ಹಾಗೂ ಸ್ತನಗಳು ಗಾತ್ರದಲ್ಲಿ ದೊಡ್ಡದಾಗುವ ಲಕ್ಷಣಗಳು ಕಂಡಾಗ ಅಮ್ಮಂದಿರು ಮೊದಲು ಮಕ್ಕಳಿಗೆ ಆಪ್ತರಾಗಲು ಪ್ರಯತ್ನಿಸಬೇಕು. ಅವರನ್ನು ಕರೆದು ಯಾವುದೇ ಮುಜುಗರವಿಲ್ಲದೆ ಋತುಚಕ್ರ ಎಂಬ ಸಹಜ ಮಾಸಿಕ ಪ್ರಕ್ರಿಯೆಯ ಬಗ್ಗೆ ತಿಳಿ ಹೇಳಬೇಕು.

ಇವೆಲ್ಲವನ್ನೂ ತಿಳಿಸಿ ಹೇಳಬೇಕು :

* ಮುಂದೊಂದು ದಿನ ಋತುಸ್ರಾವ ಕಾಣಿಸಿಕೊಳ್ಳಬಹುದು. ಮೂತ್ರ ಮಾಡುವ ಭಾಗದಲ್ಲಿ ರಕ್ತ ಸ್ರಾವ ಕಂಡರೆ ಭಯ ಅಥವಾ ಆತಂಕ ಪಡುವ ಅಗತ್ಯವಿಲ್ಲ. ಮನೆಯಲ್ಲಿದ್ದಾಗ ಕಾಣಿಸಿದರೆ ಕೂಡಲೇ ತಾಯಿಯ ಗಮನಕ್ಕೆ ಅಥವಾ ಶಾಲೆಯಲ್ಲಿದ್ದಾಗ ಕಂಡು ಬಂದರೆ ತರಗತಿಯ ಶಿಕ್ಷಕಿಯ ಗಮನಕ್ಕೆ ತರಬೇಕು.
* ಅದೊಂದು ಸಹಜ ಮಾಸಿಕ ಪ್ರಕ್ರಿಯೆ. ಅದು ಅಪವಿತ್ರ ಅಥವಾ ಮೈಲಿಗೆಯಲ್ಲ. ಅದು ಕಾಯಿಲೆಯೂ ಅಲ್ಲ, ಹೆಣ್ಣು ಮಕ್ಕಳನ್ನು ಮುಂದಿನ ಸಂತಾನೋತ್ಪತ್ತಿ ಪ್ರಕ್ರಿಯೆಗೆ ಅಣಿ ಮಾಡುವ ಶಾರೀರಿಕ ಬದಲಾವಣೆ ಅಷ್ಟೇ.
*ಆ ಸಮಯದಲ್ಲಿ ಸ್ರಾವ ಹೊರಗಿನ ಬಟ್ಟೆಗಳಿಗೆ ಹರಿಯದಂತೆ ಬಟ್ಟೆ ಅಥವಾ ಪ್ಯಾಡ್‌ಗಳನ್ನು ಒಳ ಉಡುಪುಗಳ ಮೇಲಿರಿಸಿ ಬಳಸುವ ವಿಧಾನವನ್ನು ಆ ಮಕ್ಕಳಿಗೆ ತೋರಿಸಿ ಕೊಡಬೇಕು.
* ಋತುಸ್ರಾವ ಕಂಡು ಬರುವ ಮೊದಲು ಅಥವಾ ಆ ಅವಧಿಯಲ್ಲಿ ಕಾಣಿಸಿಕೊಳ್ಳುವ ಕಿಬ್ಬೊಟ್ಟೆ ನೋವು ಸಾಮಾನ್ಯ. ಉತ್ತಮ ಆಹಾರ ಮತ್ತು ಆಟೋಟಗಳಲ್ಲಿ ಭಾಗವಹಿಸುವುದರಿಂದ ಅದನ್ನು ನಿಯಂತ್ರಿಸಿಕೊಳ್ಳಬಹುದು.
* ಆರರಿಂದ ಎಂಟು ಗಂಟೆಗೊಮ್ಮೆ ಪ್ಯಾಡ್‌ಗಳನ್ನು ಬದಲಿಸಿಕೊಳ್ಳಬೇಕು.
* ಆ ಸಮಯದಲ್ಲಿ ಸ್ವಚ್ಛತೆ ಬಹಳ ಮುಖ್ಯ. ಋತುಸ್ರಾವವನ್ನು ತಡೆಯಲು ಬಳಸುವ ಪ್ಯಾಡ್‌ಗಳನ್ನು ಶೌಚಾಲಯದ ಗುಂಡಿಯೊಳಗೆ ಎಸೆಯಬಾರದು. ಅದಕ್ಕೆಂದೇ ಮೀಸಲಿಟ್ಟಿರುವ ಕಸದ ಬುಟ್ಟಿಯೊಳಗೆ ಕಾಗದದಲ್ಲಿ ಸುತ್ತಿ ಬಿಸಾಡಬೇಕು
*ಒಳ ಉಡುಪುಗಳನ್ನು ಸ್ವಚ್ಛವಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ಇದರಿಂದ ಆ ಭಾಗಕ್ಕೆ ತಗುಲುವ ಸೋಂಕನ್ನು ನಿಯಂತ್ರಿಸಬಹುದು.

ಶಿಕ್ಷಕ/ಶಿಕ್ಷಕಿಯರ ಜವಾಬ್ದಾರಿ :

ನಾಲ್ಕರಿಂದ ಏಳನೆಯ ತರಗತಿಯವರೆಗಿನ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕಿಯರು ಈ ತರಗತಿಗಳಿಗೆ ಬರುವ ವಯೋಮಾನದ  ಹೆಣ್ಣು ಮಕ್ಕಳು ಋತುಮತಿಯಾಗುತ್ತಾರೆ ಎಂಬ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಮಕ್ಕಳನ್ನು ಆಗಾಗ್ಗೆ ಪ್ರತ್ಯೇಕವಾಗಿ ಕರೆದು ಕೂರಿಸಿಕೊಂಡು, ಈ ವಯೋಮಾನದಲ್ಲಿ ಆಗುವಂತಹ  ಶಾರೀರಿಕ ಪ್ರಕ್ರಿಯೆಯನ್ನು ಎದುರಿಸಲು ಅವರನ್ನು ಅಣಿ ಮಾಡಬೇಕು. ‘ಯಾವುದೇ ಆತಂಕ ಪಡದೇ ತಮ್ಮನ್ನು ಭೇಟಿ ಮಾಡಿ ವಿಷಯವನ್ನು ಹೇಳಿಕೊಳ್ಳುವಂತೆ’ ತಿಳಿಸಿ ಅವರಲ್ಲಿ ಧೈರ್ಯ ತುಂಬಬೇಕು. ಒಂದೊಮ್ಮೆ ಶಾಲೆಯಲ್ಲೇ ಮೊದಲ ಬಾರಿಗೆ ಕಿಶೋರಿಯರು ಋತುಮತಿಯಾದರೆ, ಅವರನ್ನು ಮನೆಗೆ ಕಳುಹಿಸುವ ಅಥವಾ ತಂದೆ ತಾಯಿಯರನ್ನೇ ಶಾಲೆಗೆ ಕರೆಯಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು.

ಶಿಕ್ಷಕಿಯರಿಗೆ ಕಿವಿ ಮಾತು

ನಿಮ್ಮ ಶಾಲೆಯ ಹತ್ತಿರ ಮಹಿಳಾ ವೈದ್ಯರಿದ್ದರೆ ಅಥವಾ ಶುಶ್ರೂಷಕರಿದ್ದರೆ ಅವರನ್ನು ಆಹ್ವಾನಿಸಿ ನಿಮ್ಮ ವಿದ್ಯಾರ್ಥಿನಿಯರಿಗೆ ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಅರಿವು ಮೂಡಿಸಬಹುದು. ಋತುಸ್ರಾವಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮತ್ತು ಆ ಅವಧಿಯಲ್ಲಿ ಮಕ್ಕಳು ವಹಿಸಬೇಕಾದ ಎಚ್ಚರಗಳ ಬಗ್ಗೆಯೂ ಅವರಿಂದ ಮಾಹಿತಿಯನ್ನು ಪಡೆಯಬಹುದು.

ಇತ್ತೀಚಿನ ದಿನಗಳಲ್ಲಿ ಋತು ಸ್ರಾವವನ್ನು ಸುಲಭವಾಗಿ ನಿರ್ವಹಿಸಲು ಹೊಸ ಬಗೆಯ ಒಳ ಉಡುಪುಗಳು, ಮರುಬಳಕೆಗೆ ಯೋಗ್ಯವಾದ ಹತ್ತಿಯ ಪ್ಯಾಡ್‌ಗಳಿವೆ. ಇವುಗಳ ಬಗ್ಗೆ ವಿವರವಾದ ಮಾಹಿತಿಯನ್ನು ಹೆಣ್ಣುಮಕ್ಕಳಿಗೆ ತಿಳಿಸಬೇಕು. ಇದರಿಂದ ಅವರು ಮುಟ್ಟಿನ ನೈರ್ಮಲ್ಯದ ಬಗ್ಗೆ ಜಾಗೃತರಾಗುತ್ತಾರೆ. ಇದು ಎಲ್ಲ ಮಹಿಳೆಯರಲ್ಲಿಯೂ ಸಂಭವಿಸುವ ಸಹಜ ಕ್ರಿಯೆ ಎಂಬ ಅಂಶವನ್ನು ಮನನ ಮಾಡಿಕೊಂಡು ಅದರಿಂದ ಯಾವುದಕ್ಕೂ ವಿನಾಯಿತಿ ಪಡೆಯದೆ ಎಲ್ಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಮುಂದಾಗುತ್ತಾರೆ.

ಅಕಾಲದಲ್ಲಿ ಋತುಸ್ರಾವಕ್ಕೊಳಗಾಗುವ ಕಿಶೋರಿಯರಿಗೆ ಬಳಸಲು ಶಾಲೆಗಳಲ್ಲಿ ಪ್ಯಾಡ್‌ಗಳನ್ನು ಇಡುವ ವ್ಯವಸ್ಥೆಯೂ ಇರಬೇಕು. ಅವಕಾಶಗಳಿದ್ದಾಗ ಶಾಲಾ ಆಡಳಿತ ಮಂಡಳಿಯವರು ವೈದ್ಯರ ಸಂಘ ಸಂಸ್ಥೆಗಳ ನೆರವನ್ನು ಪಡೆಯಬೇಕು. ಈ ದಿನಗಳಲ್ಲಿ ಎಲ್ಲ ವೈದ್ಯ ಸಂಘಗಳಲ್ಲಿ ಮಹಿಳಾ ಘಟಕವೂ ಸಕ್ರಿಯವಾಗಿದ್ದು, ಮಹಿಳಾ ವೈದ್ಯರು ಇಂತಹ ಸಮಾಜಪರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅದರ ಸದುಪಯೋ ಗವನ್ನು ಆಡಳಿತ ಮಂಡಳಿ ಹಾಗೂ ಶಿಕ್ಷಕರು ಪಡೆಯಬೇಕು.

ಗಂಡುಮಕ್ಕಳಿಗೂ ಅರಿವು

ಋತುಸ್ರಾವದ ಬಗ್ಗೆ ಹೆಣ್ಣುಮಕ್ಕಳಂತೆ ಗಂಡುಮಕ್ಕಳಲ್ಲೂ ಅರಿವು ಮೂಡಿಸಬೇಕು. ಮನೆಯಲ್ಲಿ ತಾಯಿ, ಶಾಲೆಯಲ್ಲಿ ಶಿಕ್ಷಕಿಯರು ಮಾಡುವಂತಾಗಬೇಕು. ಋತುಸ್ರಾವದ ಬಗ್ಗೆ ಸರ್ಮಪಕವಾದ, ವೈಜ್ಞಾನಿಕವಾದ ಮಾಹಿತಿಯನ್ನು ಮಕ್ಕಳಿಗೆ ನೀಡಿದರೆ, ಅದರ ಬಗ್ಗೆ ಮುಜುಗರ, ಗೇಲಿಯ ಮಾತುಗಳು ಬರುವುದಿಲ್ಲ. 

ಋತುಸ್ರಾವವಾದ ಹೆಣ್ಣುಮಕ್ಕಳ ಬಗ್ಗೆ ಗೇಲಿ ಮಾಡುವುದಾಗಲಿ, ಮನಸ್ಸಿಗೆ ಗಾಸಿ ಉಂಟು ಮಾಡುವ ಮಾತು ಗಳನ್ನಾಗಲಿ ಆಡದೇ ಅವರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಸಹಪಾಠಿಗಳಿಂದ, ಸಹೋದರರಿಂದ ಆಗಬೇಕು.

ಮೂಢನಂಬಿಕೆಗಳನ್ನು ಬಿಡಿ

ಹೆಣ್ಣು ಮಕ್ಕಳಲ್ಲಿ ಕಂಡು ಬರುವ ಈ ಸಹಜ ಶಾರೀರಿಕ ಪ್ರಕ್ರಿಯೆಯೊಂದರ ಬಗ್ಗೆ ಅನೇಕ ಮೂಢನಂಬಿಕೆಗಳು ಮತ್ತು ತಪ್ಪು ಕಲ್ಪನೆಗಳು ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಇವೆ. ಬಹಳ ಹಿಂದಿನಿಂದಲೂ ಅಂಟಿಕೊಂಡಿ ರುವ ಈ ಅಪನಂಬಿಕೆಗಳನ್ನು ಒಮ್ಮೆಲೇ ಕಿತ್ತೊಗೆಯುವುದು ಕಷ್ಟ ಸಾಧ್ಯ. ಆದರೆ ಎಳವೆಯಿಂದಲೇ ಮಕ್ಕಳಿಗೆ ಈ ಬಗ್ಗೆ ವೈಜ್ಞಾನಿಕ ಮತ್ತು ಸಮರ್ಪಕ ಅರಿವು ಮೂಡಿಸಿದರೆ ಮುಂದೆ ಮೌಢ್ಯರಹಿತ ಸುದಿನಗಳನ್ನು ಕಾಣಬಹುದು.

ಅಂತೆಯೇ ಮನೆಯಲ್ಲಿ ರೂಢಿಸಿಕೊಂಡಿರುವ ಕೆಲವು ವಿಧಿವಿಧಾನಗಳನ್ನು ಒಮ್ಮೆಗೇ ವಿರೋಧಿಸದಿರಲು ಮಕ್ಕಳಿಗೆ ತಿಳಿಸಬೇಕು. ಹಂತ ಹಂತವಾಗಿ ಮಾತ್ರವೇ ಇದರಿಂದ ಸಂಪೂರ್ಣ ಹೊರಬರುವುದು ಸಾಧ್ಯ ಎಂದೂ ಕಿಶೋರಿಯರಿಗೆ ತಿಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT