ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾಂಗಿ ಪೋಷಕಿಯರ ದ್ವಂದ್ವಗಳ ನಡುವೆ...

‘ವರ್ಕ್‌ ಫ್ರಂ ಹೋಮ್‌‘ ನಂತರದ ‘ಹೊಸ ವೇಳಾಪಟ್ಟಿ‘
Last Updated 29 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಕೂಡು ಕುಟುಂಬದಲ್ಲಿ ಮಕ್ಕಳ ಬೆಳವಣಿಗೆಯ ಕುರಿತು ಎಲ್ಲರಿಗೂ ಜವಾಬ್ದಾರಿ ಇದ್ದೇ ಇರುತ್ತದೆ. ಭಾವನ ಮಕ್ಕಳನ್ನು ಅತ್ತಿಗೆ ನೋಡಿಕೊಳ್ಳುತ್ತಿದ್ದರು, ಮಗನ ಮಕ್ಕಳನ್ನು ಅತ್ತೆ ಸಿದ್ಧಮಾಡುತ್ತಿದ್ದರು, ಮಗುವಿಗೆ ಸ್ನಾನ ಮಾಡಿಸಲು ನಾದಿನಿಗೆ ಚೆನ್ನಾಗಿ ತಿಳಿದಿತ್ತು ಅಥವಾ ಸಂಜೆ ಮಕ್ಕಳ ಪಟಾಲಂ ಅಜ್ಜನ ವಾಕ್ ಜೊತೆಗೆ ತೆರಳಿ ಮನೆ ಕೆಲಸಗಳಲ್ಲಿ ನಿರತರಾಗಿದ್ದ ಅಮ್ಮಂದಿರಿಗೆ ಬಿಡುವು ಸಿಗುತ್ತಿತ್ತು. ಕಚೇರಿಗೆ ಹೋಗಿ ವೃತ್ತಿ ನಿರ್ವಹಿಸುವ ಕಿರಿಸೊಸೆಗೆ ಮನೆಯಲ್ಲಿ ಬಿಟ್ಟು ಬಂದ ಮಗುವನ್ನು ಒಬ್ಬರಲ್ಲದಿದ್ದರೆ ಮತ್ತೊಬ್ಬರು ಮುದ್ದು ಮಾಡುವರು ಎಂಬ ಸಮಾಧಾನವಿರುತ್ತಿತ್ತು.

ಕೂಡು ಕುಟುಂಬವು ಪ್ರತ್ಯೇಕವಾಗಿ ‘ಒಂದು ಕುಟುಂಬಕ್ಕೆ ಒಂದು ಮನೆ’ಯೆಂದು ನಿಗದಿಯಾದಾಗ ಮಕ್ಕಳ ಜವಾಬ್ದಾರಿಯೆಲ್ಲ ಅಪ್ಪ ಅಮ್ಮನ ತಲೆಗೆ ಬಂದುಬಿಟ್ಟಿತು. ಅದಾದರೂ ಸರಿ, ಮಕ್ಕಳ ಬೇಕು ಬೇಡ ನೋಡಿಕೊಳ್ಳಲು ಇಬ್ಬರಿದ್ದರು. ಆದರೆ ಅಮ್ಮನೊಬ್ಬಳೇ ಮಕ್ಕಳನ್ನು ಸಾಕುವ ಅಥವಾ ಅಪ್ಪನೊಬ್ಬನೇ ಮಕ್ಕಳನ್ನು ನೋಡಿಕೊಳ್ಳುವ ಪರಿಸ್ಥಿತಿಗಳು ಇಂದು ಅನೇಕ ಕಡೆ ಇವೆ. ಇಂತಹ ಸಂದರ್ಭದಲ್ಲಿ ಮಕ್ಕಳ ಲಾಲನೆ ಪಾಲನೆ ಸುಲಭವಾದುದಲ್ಲ. ಏಕೆಂದರೆ ಮಕ್ಕಳ ಬೇಕು ಬೇಡಗಳನ್ನು ನೋಡಿಕೊಳ್ಳುವ ಸವಾಲು ಒಂದು ಕಡೆ, ದುಡಿಯುವ ಸವಾಲು ಮತ್ತೊಂದು ಕಡೆ ಇರುತ್ತದೆ. ಇದರ ಜೊತೆಗೆ ಏಕಾಂಗಿ ಬದುಕಿನಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು ಜೊತೆಯಿಲ್ಲದೇ ಉಂಟಾಗುವ ಮಾನಸಿಕ ಏರುಪೇರುಗಳನ್ನು ನಿಭಾಯಿಸುವ ಸವಾಲು ಇರುತ್ತದೆ. ಅಷ್ಟೇ ಅಲ್ಲ, ಕೆಲವೊಮ್ಮೆ ತನ್ನ ಮಾನಸಿಕ ಒಳತೋಟಿಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತದೋ ಎಂಬ ಭಯವೂ ಕಾಡುತ್ತದೆ.

ನನ್ನೊಳಗಿನ ಬೇಸರಕ್ಕೆ ಮಕ್ಕಳಿಗೆ ಬೈದುಬಿಟ್ಟೆನೇನೋ, ಅವರ ಮನೆಯವರ ಮೇಲಿನ ಸಿಟ್ಟಿನ ಭರದಲ್ಲಿ ಮಗಳು ಬರೆದ ಡ್ರಾಯಿಂಗ್ ಹೇಗಿದೆ ಎಂದು ನೋಡಿ ಅವಳಿಗೆ ‘ಗುಡ್’ ಎಂದು ಹೇಳುವುದನ್ನು ಮರೆತನೇನೋ... ಎಂಬೆಲ್ಲ ಅಳುಕುಗಳು ಕಾಡುತ್ತಲೇ ಇರುತ್ತದೆ. ಆದರೂ ಕಾಡುವ ಸಮಸ್ಯೆಗಳನ್ನು ನುಂಗಿಕೊಂಡು ಬಾಳನ್ನು ಮುಂದುವರೆಸಲು ಪ್ರಧಾನವಾಗಿ ಇರುವ ಚೇತನಗಳೆಂದರೆ ಮಕ್ಕಳೇ ಆಗಿದ್ದಾರೆ ಎಂಬ ನೆನಪು ಮೂಡಿ ಮತ್ತೆ ಮನಸ್ಸು ಲವಲವಿಕೆಗೊಳ್ಳುತ್ತದೆ.

ಪೋಷಕಿಯರಿಗೇ ಹೆಚ್ಚು ಸವಾಲು

ಒಂಟಿ ಪೋಷಕರ ಈ ಪಾಡು ಪೋಷಕಿಯರಿಗೆ ಮಾತ್ರವಲ್ಲ, ಪೋಷಕರನ್ನೂ ಕಾಡುತ್ತದೆ. ಆದರೆ ಪುರುಷರು ಒಂಟಿಯಾಗಿ ಮಕ್ಕಳನ್ನು ಸಲಹುವ ಪೂರ್ತಿ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಭಾರಿ ಅಪರೂಪ. ‘ಅದು ನಮ್ಮ ಕೈಲಾಗದ ಕೆಲಸ’ ಎಂದೇ ಅನೇಕರು ಅಂತಹ ಜವಾಬ್ದಾರಿಯಿಂದ ದೂರ ಸರಿದು ಬಿಡುತ್ತಾರೆ. ಅಂತಹ ಅನಿವಾರ್ಯ ಪರಿಸ್ಥಿತಿಗಳು ಬಂದಾಗ ಅಜ್ಜಿ ಮನೆಯಲ್ಲಿಯೋ, ಅಕ್ಕನ ಮನೆಯಲ್ಲಿಯೋ ಮಕ್ಕಳನ್ನು ಇರಿಸಿ, ಪಾಲನೆ ಪೋಷಣೆಗೆ ಸಂಪನ್ಮೂಲ ಒದಗಿಸುತ್ತಾರೆ. ಪುರುಷರು ಅಂತಹ ಅವಕಾಶಗಳನ್ನು ಹುಡುಕಿಕೊಂಡರೆ ಸಮಾಜವು ಯಾಕೋ ಅದನ್ನು ಸ್ವೀಕರಿಸಿಬಿಡುತ್ತದೆ. ಆದರೆ ಮಹಿಳೆಯರು ಅಂತಹ ಅವಕಾಶಗಳನ್ನು ಹುಡುಕಿದರೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವವಳು ಎಂಬುದೊಂದು ಟೀಕೆಯ ಧ್ವನಿ ಬಂದುಬಿಡುತ್ತದೆ. ಯಾಕೆ ಹೀಗೆ ಎಂದು ಪ್ರಶ್ನಿಸುವುದರಿಂದ ಪ್ರಸ್ತುತ ಹೆಚ್ಚಿನ ಲಾಭವಿಲ್ಲ. ಆದರೆ ವಾಸ್ತವವನ್ನು ಒಪ್ಪಿಕೊಂಡು, ಮಕ್ಕಳನ್ನು ಏಕಾಂಗಿಯಾಗಿ ಬೆಳೆಸುವುದು ಸುಲಭದ ಕೆಲಸವಂತೂ ಅಲ್ಲ. ಹಾಗಾಗಿ, ಸವಾಲುಗಳನ್ನು ಹೇಗೆ ಬಗೆ ಹರಿಸಬಹುದು ಎಂಬುದರತ್ತ ಮಾತ್ರ ಗಮನ ಹರಿಸಬಹುದು.

ಕಳೆದೆರಡು ವರ್ಷಗಳಿಂದ ಕೋವಿಡ್ ಸೋಂಕನ್ನು ತಡೆಯುವ ಸಲುವಾಗಿ ಲಾಕ್‌ಡೌನ್‌ಗಳನ್ನು ಆಗಾಗ ಹೇರಿದ್ದರಿಂದ ಅನೇಕರಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ದೊರೆತಿತ್ತು. ಹಾಗಾಗಿ ಏಕಾಂಗಿ ಪೋಷಕಿಯರಿಗೆ ಇದೊಂದು ವರದಾನವಾಗಿತ್ತು. ಇತ್ತ ಆನ್‌ಲೈನ್ ತರಗತಿಯೆಂದು ಶಾಲೆಗೆ ಹೋಗದೇ ಮನೆಯಲ್ಲಿಯೇ ಉಳಿಯುವ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವುದು ಸವಾಲಾದಾಗ, ಅವರಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ದೊರೆತದು ಬಯಸದೇ ಬಂದ ಭಾಗ್ಯವಾಗಿತ್ತು. ಆದರೆ ಈ ವರ್ಷ ಹಾಗಿಲ್ಲ. ಹೆಚ್ಚಿನ ಸಂಸ್ಥೆಗಳಲ್ಲಿ ಮನೆಯಿಂದ ಕೆಲಸ ಮಾಡುವ ಅವಕಾಶವನ್ನು ವಾಪಸ್ ತೆಗೆದುಕೊಳ್ಳುತ್ತಿದ್ದಾರೆ. ಕಚೇರಿಗೆ ಹೋಗುವುದು ಅನಿವಾರ್ಯವಾಗಿದೆ. ಮಗುವನ್ನು ಎಲ್ಲಿ ಬಿಡಬೇಕು, ಆಹಾರ ಸಿದ್ಧಪಡಿಸಲು ಏನೇನು ಟೈಮ್ ಟೇಬಲ್ ಹಾಕಿಕೊಳ್ಳಬೇಕು ಎಂಬೆಲ್ಲ ವಿಚಾರಗಳು ಅವರ ತಲೆಯಲ್ಲಿ ಗಿರಕಿ ಹೊಡೆಯಲಾರಂಭಿಸಿದೆ.

ಹೊಸ ಟೈಮ್ ಟೇಬಲ್

ಇದೀಗ ಮನೆಯಲ್ಲಿಯೂ ಮತ್ತೆ ಹೊಸ ಟೈಮ್ ಟೇಬಲ್ ಮಾಡಬೇಕಾಗಿದೆ. ಅಂತಹ ಸಂದರ್ಭದಲ್ಲಿ ನೆನಪಿಡಬೇಕಾದ ಕೆಲವು ಅಂಶಗಳು ಇಲ್ಲಿವೆ: ಮೊದಲನೆಯದಾಗಿ ಮಕ್ಕಳಿಗೆ ಬೇಕು ಬೇಕಾದ್ದನ್ನು ತಾನು ಕಲ್ಪಿಸಬೇಕು ಎಂಬ ಭಾವನೆಯನ್ನು ಮನಸ್ಸಿನಿಂದ ತೆಗೆದು ಹಾಕುವುದು. ಮಗು ಅಥವಾ ಮಕ್ಕಳು ನಮ್ಮ ಜೊತೆಗೆ ಪರಸ್ಪರರ ಅಗತ್ಯಗಳನ್ನು ಪೂರೈಸುತ್ತ ಬದುಕು ಸಾಗಬೇಕು ಎಂಬುದನ್ನು ಮಗುವಿಗೂ ಅರ್ಥ ಮಾಡಿಸುವುದು, ಸ್ವಯಂ ತಾವೂ ಅರ್ಥ ಮಾಡಿಕೊಳ್ಳುವುದು. ಇದರಿಂದ, ಪೋಷಕಿಯರ ಮನಸ್ಸಿನಲ್ಲಿ ತರ್ಕರಹಿತವಾಗಿ, ವಿನಾಕಾರಣ ಮೂಡುವ ತಪ್ಪಿತಸ್ಥ ಭಾವನೆಯನ್ನು ತೊಡೆದು ಹಾಕುವುದು ಸಾಧ್ಯವಾಗುತ್ತದೆ.

ಮಕ್ಕಳಿಗೆ ನಾವು ಎಲ್ಲ ಸೌಕರ್ಯಗಳನ್ನೂ ಮಾಡಿಕೊಡ ಬೇಕು ಎಂಬುದು ಸುಳ್ಳು. ಅವರಿಗೆ ಸೌಕರ್ಯಗಳನ್ನು ಮಾಡಿಕೊಳ್ಳಲು ಎಲ್ಲಿಯವರೆಗೆ ನೆರವು ಬೇಕೋ, ಅಲ್ಲಿಯವರೆಗೆ ನೆರವು ಕಲ್ಪಿಸುವುದಷ್ಟೇ ಪೋಷಕರ ಕರ್ತವ್ಯವಾಗಿದೆ. ಅದಕ್ಕೂ ಮಿಗಿಲಾಗಿ, ಅತಿ ಪ್ರೀತಿಯಿಂದ, ಮುದ್ದಿನಿಂದ ಹೆಚ್ಚುವರಿ ಸೌಕರ್ಯಗಳನ್ನು ಕಲ್ಪಿಸುತ್ತ ಹೋಗುವುದರಿಂದ ಮಕ್ಕಳ ಸಾಮರ್ಥ್ಯವು ಕುಗ್ಗುತ್ತದೆ ಎಂಬುದು ನೆನಪಿರಲಿ.

ಆದ್ದರಿಂದ ಅಡುಗೆ ಕಾಯಕದಲ್ಲಿ ಅವರು ಜೊತೆಯಾಗಲಿ, ಅವರ ಓದುವಿಕೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಅವರೇ ನಿಭಾಯಿಸಿಕೊಳ್ಳಲಿ. ಅದನ್ನೂ ಮೀರಿದಂತೆ, ಅವರು ತಮ್ಮ ದಿನದ ಕತೆಯನ್ನು ಹೇಳಿಕೊಳ್ಳಲು, ಬೇನೆ ಬೇಸರಗಳನ್ನು ಹಂಚಿಕೊಳ್ಳಲು ಅಮ್ಮನ ಸೆರಗನ್ನು ಬೇಡಿ ಬಂದೇ ಬರುತ್ತಾರೆ. ಹಾಗಾಗಿ ದಿನದಲ್ಲಿ ಇಷ್ಟು ಹೊತ್ತು ಮುಕ್ತ ಮಾತುಕತೆಗಾಗಿ ಮೀಸಲಿಡಿ. ಹಾಗೆ ಮಾತನಾಡುವಾಗ ಫೋನ್ ಅಥವಾ ಟಿವಿ, ಲ್ಯಾಪ್‌ಟಾಪ್‌ ಆಫ್ ಅಗಿರಲಿ. ಅವರಿಗೆಂದು ಮೀಸಲಿಟ್ಟ ಸಮಯ ಕೇವಲ ಅವರಿಗಾಗಿಯೇ ಇರಬೇಕು ವಿನಾ ವಾಟ್ಸ್‌ಆ್ಯಪ್‌ ಮೆಸೇಜ್ ಬಂದ ತಕ್ಷಣವೇ ಗಮನವು ಮೊಬೈಲ್‌ನತ್ತ ಹರಿಸುವ ಅಮ್ಮನು, ಅವರಿಗೆ ‘ಪರಿಪೂರ್ಣ ಅಮ್ಮ’ನಾಗಿ ಗೋಚರಿಸುವುದಿಲ್ಲ. ಹಾಗಾಗಿ ನಿರ್ದಿಷ್ಟ ಸಮಯವನ್ನು ಅವರಿಗೆಂದೇ ಮೀಸಲಿಡುವುದು ಮುಖ್ಯ.

ಉಳಿದಂತೆ ಮಕ್ಕಳು ಬೆಳೆದಂತೆ ಅಮ್ಮನ ಭಾವನೆಗಳನ್ನು ಮಕ್ಕಳು ಅರ್ಥ ಮಾಡಿಕೊಳ್ಳುವುದನ್ನು ಕಲಿಯುತ್ತಾರೆ. ಲಭ್ಯ ಅವಕಾಶದಲ್ಲಿ ನಮಗಾಗಿ ದುಡಿಯುವ ಅಮ್ಮನನ್ನು ಅರಿಯುವುದು ಅವರ ಕರ್ತವ್ಯ ಕೂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT