ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗಾಗಿ ಅಜ್ಜಿಯರ ಬೊಂಬೆ ಉದ್ಯಮ

ವರ್ಷಪೂರ್ತಿ ಕಲಾಕೃತಿಗಳ ತಯಾರಿಕೆ. ಮನೆಯಂಗಳವೇ ಮಾರುಕಟ್ಟೆ
Last Updated 17 ಮಾರ್ಚ್ 2023, 20:00 IST
ಅಕ್ಷರ ಗಾತ್ರ

ಕರಕುಶಲ ಕಲೆಗಳ ತವರು ಕೊಪ್ಪಳ ಜಿಲ್ಲೆಯ ಕಿನ್ನಾಳದಲ್ಲಿ ನೆಲೆಸಿರುವ ಸೀತಮ್ಮ ಚಿತ್ರಗಾರ ಬಿರುಬಿಸಿಲಿನ ನಡುವೆ ಮರದ ನೆರಳಲ್ಲಿ ಕುಳಿತು ಬೊಂಬೆಗಳಿಗೆ ಅಂತಿಮ ರೂಪ ಕೊಡುತ್ತಿದ್ದರು. ಅವರ ಎದುರಿದ್ದ ಚೆಂದದ, ಸಹಜ ಸೌಂದರ್ಯದ ಬೊಂಬೆಗಳು ಈಗ ಎದ್ದು ಕುಣಿಯುತ್ತವೆಯೇನೊ ಎನ್ನುವಷ್ಟರ ಮಟ್ಟಿಗೆ ಆಕರ್ಷಕವಾಗಿದ್ದವು.

78 ವರ್ಷದ ಸೀತಮ್ಮ ಬೊಂಬೆಗಳನ್ನು ತಯಾರಿಸುವ, ಅವುಗಳ ಸೌಂದರ್ಯಕ್ಕೆ ಜೀವ ತುಂಬುವ ಕೆಲಸ ಆರಂಭಿಸಿ ಐದೂವರೆ ದಶಕಗಳಾಗಿವೆ. ಮದುವೆಯಾಗಿ ಗಂಡನ ಮನೆಗೆ ಬಂದ ಮೇಲೆ ಅತ್ತೆ, ಮಾವ ಮಾಡುತ್ತಿದ್ದ ಕಿನ್ನಾಳ ಬೊಂಬೆಗಳ ತಯಾರಿಕೆ ನೋಡಿ ಕಲಿತಿದ್ದಾರೆ. ತಮ್ಮ ಸೊಸೆಗೂ ಕಲಿಸಿದ್ದಾರೆ. ಬದುಕಿನ ಇಳಿವಯಸ್ಸಿನಲ್ಲಿ ಮೊದಲಿನಷ್ಟೇ ವೇಗವಾಗಿ ಕಲಾಕೃತಿಗಳನ್ನು ತಯಾರಿಸುತ್ತಾರೆ. ಅತ್ತೆ ಮಾಡಿದ ಕಿನ್ನಾಳ ಕಲೆಗಳನ್ನು ಸೊಸೆ ಮಂಜುಳಾ ಹಾಗೂ ಮಗ ಮೈಲಾರಪ್ಪ ಚಿತ್ರಗಾರ ದೇವರ ಆರಾಧನೆ, ಜಾತ್ರೆಗಳಲ್ಲಿ ಮಾರಾಟ ಮಾಡುತ್ತಾರೆ. ಅನೇಕ ಬಾರಿ ಮನೆಯ ಅಂಗಳವೇ ಮಾರುಕಟ್ಟೆ!

ಸೀತಮ್ಮನ ಮನೆ ಸಮೀಪದಲ್ಲಿರುವ ಭಾಗ್ಯಮ್ಮ ಚಿತ್ರಗಾರ ಅವರಿಗೆ ಈಗ 75 ವರ್ಷ ವಯಸ್ಸು. ಹುಟ್ಟೂರು ಕಿನ್ನಾಳದಲ್ಲಿ ತಮ್ಮ ತಾಯಿಯಿಂದ ಕಲಿತ ಕಲಾಕೃತಿಗಳ ತಯಾರಿಕೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಐದು ವರ್ಷದವರಿದ್ದಾಗ ಕುಟುಂಬದವರ ಜೊತೆಗೂಡಿ ಕಲಿತ ಕೆಲಸ ಅವರನ್ನು ಕೈ ಹಿಡಿದಿದೆ. ಕಲಾ ವಸ್ತುಗಳ ಮಾರಾಟದಿಂದ ಬರುವ ಹಣವೇ ಜೀವನಕ್ಕೆ ಆಸರೆಯಾಗಿದೆ. ಕಲಿಯಲು ಆಸಕ್ತಿ ತೋರುವವರಿಗೆ ತರಬೇತಿ ನೀಡುತ್ತಾರೆ.

ಅದೇ ವಠಾರದಲ್ಲಿರುವ ಲಕ್ಷ್ಮಮ್ಮ ಚಿತ್ರಗಾರ ಅವರಿಗೆ 62 ವರ್ಷ ವಯಸ್ಸು. ಪರಂಪರಾಗತವಾಗಿ ಕಲಿತ ಕಲಾಕೃತಿಗಳ ತಯಾರಿಕೆ ಇಳಿವಯಸ್ಸಿನಲ್ಲಿಯೂ ಮಾಡುತ್ತಿದ್ದಾರೆ. ಮನೆ ಅಲಂಕಾರಿಕ ವಸ್ತುಗಳು, ಕಿನ್ನಾಳ ಕಲೆಯಲ್ಲಿ ಹಣ್ಣುಗಳ ತಯಾರಿಕೆ ಇವರ ಪ್ರಧಾನ ಕೆಲಸ. ಹೀಗೆ ಹಿರಿಯ ವಯಸ್ಸಿನಲ್ಲಿಯೂ ಅತೀವ ಉತ್ಸಾಹದಿಂದ ಕಿನ್ನಾಳ ಕಲೆಯನ್ನು ಪ್ರಚುರಪಡಿಸುತ್ತಿರುವ ಈ ಮೂವರಿಗೆ ಕೈಗಳೇ ಬಂಡವಾಳ; ಅನುಭವವೇ ಜೀವಾಳ.

ಈ ಕಲಾವಿದೆಯರು ದುರ್ಗಾದೇವಿ, ಕೀಲುಗೌರಿ, ಕೀಲುಗೊಂಬೆ, ಗೃಹ ಅಲಂಕಾರಕ್ಕೆ ಬಳಸುವ ಸಾಮಗ್ರಿಗಳು, ಆಕಳು, ಆನೆ, ಲಕ್ಷ್ಮಿ, ಸರಸ್ವತಿ, ಗಣೇಶ, ಮತ್ಸ್ಯ, ಚೈತ್ರಮಾಸದ ಗೊಂಬೆ, ಡಿಸಿ ಗೌರಿ, ಉಯ್ಯಾಲೆ ಗೊಂಬೆ, ಸೂತ್ರದ ಬೊಂಬೆ, ನೂಲುಗೊಂಬೆ, ಗೌರಿಗೊಂಬೆ, ಕೊಂತಿ ಪಟ್ಟಿ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ, ಪ್ರಾಣಿಗಳು, ಪಕ್ಷಿಗಳು, ತರಕಾರಿಗಳು, ಹಣ್ಣುಹಂಪಲುಗಳು ಹೀಗೆ ಅನೇಕ ಕಲಾಕೃತಿಗಳನ್ನು ಕಿನ್ನಾಳ ಕಲೆಯ ಶೈಲಿಯಲ್ಲಿ ತಯಾರಿಸುತ್ತಾರೆ.

ಕಿನ್ನಾಳ ಕಲೆಗೆ ಕಸುಬುದಾರಿಕೆಯೇ ಪ್ರಧಾನವಾದ ಕಾರಣ ಪೂರ್ವಸಿದ್ಧತೆಗೆ ಹೆಚ್ಚು ಸಮಯ ಬೇಕು. ನೂರಾರು ವರ್ಷ ಬಾಳಿಕೆ ಬರುವಂತೆ ಮಾಡಲು ಮೂಲವಾಗಿ ಪೊಳಕಿಮರ ಹಾಗೂ ಟಣಕಿನ ಮರದ ಹಗುರವಾದ ಕಟ್ಟಿಗೆಗಳು ಇರಬೇಕು. ಸೆಣಬು ನೆನಸಿ ತುಂಡುಗಳಾಗಿ ಕತ್ತರಿಸಿ, ಒಣಗಿಸಿ ಪುಡಿಮಾಡುತ್ತಾರೆ. ಕಟ್ಟಿಗೆಯ ಪುಡಿ ಮತ್ತು ಹುಣಸೆ ಬೀಜದ ಪೇಸ್ಟಿನೊಂದಿಗೆ ಬೆರೆಸಿ ಕಿಟ್ಟಾ ತಯಾರಿಸುತ್ತಾರೆ. ಕಟ್ಟಿಗೆಯ ಪುಡಿಯನ್ನು ನೀರಿನಲ್ಲಿ ಕಲಿಸಿ ಹದಗೊಳಿಸಿ ಉಂಡೆಗಳಾಗಿ ಮಾಡಿ ಒಣಗಿಸುತ್ತಾರೆ. ಆಕೃತಿಗಳನ್ನು ಜೋಡಿಸಿದ ನಂತರ ಕಿಟ್ಟಾ ಹಚ್ಚಲಾಗುತ್ತದೆ. ಈ ಕಿಟ್ಟಾ ಗೊಂಬೆಗಳಿಗೆ ಸುಂದರ ರೂಪ, ಗುಣಮಟ್ಟ, ನೂರಾರು ವರ್ಷ ಬಾಳಿಕೆ ಬರಲು ಕಾರಣವಾಗುತ್ತದೆ. ಸೀತಮ್ಮ, ಭಾಗ್ಯಮ್ಮ ಮತ್ತು ಲಕ್ಷ್ಮಮ್ಮ ವಿಜಯನಗರ ಅರಸರ ಕಾಲದಿಂದಲೂ ಖ್ಯಾತಿ ಹೊಂದಿರುವ ಕಿನ್ನಾಳ ಕಲಾ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಕಿನ್ನಾಳದಲ್ಲಿ 75 ಚಿತ್ರಗಾರ ಸಮುದಾಯದ ಕುಟುಂಬಗಳು ಇದ್ದರೂ ಕೆಲ ಮಹಿಳೆಯರಷ್ಟೇ ಈ ಕಲಾ ಪರಂಪರೆ ಮುಂದುವರಿಸಿಕೊಂಡು ಕಿನ್ನಾಳ ಕಲೆ ಉಳಿಸುವ ’ರಾಯಭಾರಿ’ಗಳು ಎನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT