ಶನಿವಾರ, ಫೆಬ್ರವರಿ 22, 2020
19 °C
ತೆಲುಗು ಲೇಖಕಿ ನಲ್ಲೂರಿ ರುಕ್ಮಿಣಿ ಸಂದರ್ಶನ

ಹೋರಾಟದ ಅನುಭವವೇ ಕಥನವಾಯ್ತು

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಬಂಡಾಯ ಸಾಹಿತ್ಯ ಸಂಘಟನೆಯು ಬಳ್ಳಾರಿಯಲ್ಲಿ ಏರ್ಪಡಿಸಿದ್ದ ‘ಜನವಳಿಗಳು ಮತ್ತು ಕನ್ನಡ ಸಾಹಿತ್ಯ’ ಕುರಿತ ರಾಜ್ಯಮಟ್ಟದ ಕಾರ್ಯಾಗಾರಕ್ಕೆ ಬಂದಿದ್ದ ತೆಲುಗಿನ ಕಾದಂಬರಿಗಾರ್ತಿ ನಲ್ಲೂರಿ ರುಕ್ಮಿಣಿ ‘ಭಾನುವಾರದ ಪುರವಣಿ’ಗೆ ಮನದಾಳವನ್ನು ತೆರೆದಿಟ್ಟರು..

‘ಸಾ ಹಿತ್ಯ ಹುಟ್ಟಿದ್ದೇ ಜನರ ಶ್ರಮದಿಂದ. ಆದಿಮಾನವರ ಮೊದಲ ಅಭಿವ್ಯಕ್ತಿಗೂ ಶ್ರಮ ಸಂಸ್ಕೃತಿಯೇ ಪ್ರೇರಣೆ. ಭಾಷೆಯೇ ಸರಿಯಾಗಿ ಹುಟ್ಟಿರದಿದ್ದ ಆ ಕಾಲದ ಜನರಿಗೆ ಸಂಸ್ಕೃತಿ, ಪ್ರಜಾಪ್ರಭುತ್ವದ ಕಲ್ಪನೆಯೂ ಇರಲಿಲ್ಲ. ಆ ಕಾಲ, ಈ ಕಾಲ, ಯಾವುದೇ ಕಾಲವಿರಲಿ, ಸಾಹಿತ್ಯ ಸದಾ ಕಾಲ ಜನರ ಒಳಿತಿಗಾಗಿಯೇ ಮೂಡಿಬರಬೇಕು. ಅದು ಜನರಿಗಾಗಿ, ಜನರಿಗೋಸ್ಕರ ಇದ್ದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಬಲ...’

ತೆಲುಗು ನಾಡು ಆಂಧ್ರದ ವಿಪ್ಲವ ರಚಯಿತ ಸಂಘಂನ (ಕ್ರಾಂತಿಕಾರಿ ಲೇಖಕರ ಸಂಘ) ನಲ್ಲೂರಿ ರುಕ್ಮಿಣಿ ಅವರ ಖಚಿತ ಮಾತುಗಳಿವು. ಸಾಹಿತ್ಯ ಮತ್ತು ಶ್ರಮ ಸಂಸ್ಕೃತಿ ಒಂದೇ ದಾರಿಯ ಪಥಿಕರು ಎಂಬ ನಂಬುಗೆಯಲ್ಲೇ ಅವರು ನಡೆದಿದ್ದಾರೆ.

ಬಂಡಾಯ ಸಾಹಿತ್ಯ ಸಂಘಟನೆಯು ಬಳ್ಳಾರಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ‘ಜನವಳಿಗಳು ಮತ್ತು ಕನ್ನಡ ಸಾಹಿತ್ಯ’ ಕುರಿತ ರಾಜ್ಯಮಟ್ಟದ ಕಾರ್ಯಾಗಾರಕ್ಕೆ ಬಂದಿದ್ದ ಅವರು ‘ಭಾನುವಾರದ ಪುರವಣಿ’ಗೆ ಮನದಾಳವನ್ನು ತೆರೆದಿಟ್ಟರು.

ಸಾಹಿತ್ಯ ಸದಾ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯಬೇಕು. ಸಾಹಿತಿ ಬರೆದು ಸುಮ್ಮನಾದರಷ್ಟೇ ಸಾಲದು. ತನ್ನ ಕಾಲದ ಜನರ ಕಷ್ಟಗಳಿಗೆ ಮಿಡಿಯದಿದ್ದರೆ, ಆ ಕುರಿತು ಬರೆಯದಿದ್ದರೆ ಯಾರಿಗೆ ಏನು ಪ್ರಯೋಜನ ಎಂಬ ಪ್ರಶ್ನೆ ಪದೇಪದೇ ಮೂಡಿಬಂತು.

ಬರಹಗಾರ್ತಿಯಾಗುವ ಮುನ್ನ ನಿಮ್ಮ ಹೋರಾಟ ಹೇಗಿತ್ತು?

ಪ್ರಕಾಶಂ ಜಿಲ್ಲೆಯ ಚೀಮಕುರ್ತಿ ನನ್ನ ಹುಟ್ಟೂರು. ನಲ್ಲೂರಿ ನಮ್ಮ ಮನೆತನದ ಹೆಸರು. ಅಲ್ಲಿಯೇ 8ನೇ ತರಗತಿವರೆಗೆ, ನಂತರ ಗುಂಟೂರಿನಲ್ಲಿ ಮೆಟ್ರಿಕ್‌ವರೆಗೆ ಓದಿದೆ. ಅಲ್ಲಿಯೇ ಮಹಿಳೆಯರ ಸರ್ಕಾರಿ ಕಾಲೇಜಿಗೆ ಸೇರಿದ ಬಳಿಕ ಎಡಪಂಥೀಯ ಚಿಂತನೆಗಳು ನನ್ನನ್ನು ಪ್ರಭಾವಿಸಿದವು.

ಹೋಟೆಲ್‌ಗಳಲ್ಲಿ ಪದಾರ್ಥಗಳ ದರ ಹೆಚ್ಚಳ, ತ್ರಿಭಾಷಾ ಸೂತ್ರದ ಹೇರಿಕೆ ವಿರುದ್ಧದ ಹೋರಾಟಗಳಲ್ಲಿ ಪಾಲ್ಗೊಂಡೆ. ಕಮ್ಯುನಿಸ್ಟ್‌ ಚಳವಳಿ ಸೆಳೆದುಕೊಂಡಿತು. ಗೋಡಪಲ್ಲಿ ನಾಗೇಶ್ವರರಾವ್‌, ಸಾಂಬಯ್ಯ, ಕೆ.ನಾರಾಯಣ ಪ್ರಭಾವಿಸಿದರು. ಪಕ್ಷದ ವಿದ್ಯಾರ್ಥಿ ಘಟಕದಲ್ಲಿ ನಿರಂತರ ಕೆಲಸ ಮಾಡಿದೆ. ಹೊರಲೋಕಕ್ಕೆ ನಾವು ಸಿಪಿಐ, ಎಐಎಸ್‌ಎಫ್‌ ಕಾರ್ಯಕರ್ತರು. ಒಳಗೆ ಕ್ರಾಂತಿಕಾರಿಗಳಾಗಿದ್ದೆವು.

ಹೋರಾಟದ ನಡುವೆಯೇ ನಿಮ್ಮ ಮದುವೆಯೂ ಆಯಿತಲ್ಲಾ?

ಹೌದು. ನನ್ನ ಹೋರಾಟದ ಸಂಗಾತಿ ಸಿಎಸ್‌ಆರ್‌ ಪ್ರಸಾದ್‌ ಅವರನ್ನೇ ಮದುವೆಯಾದೆ. ಅವರು ಕ್ರಾಂತಿಕಾರಿ ಲೇಖಕರ ಸಂಘದ ಹಿರಿಯ ಸದಸ್ಯರಾಗಿದ್ದರು. ಆಗ ನನಗೆ 19. ಅವರಿಗೆ 25.

ಜಾತಿ ಪದ್ಧತಿ ಹಾಗೂ ವರದಕ್ಷಿಣೆಯ ಕಟುವಿರೋಧಿಯಾಗಿದ್ದ ಅವರ ಮತ್ತು ನನ್ನ ಆಲೋಚನೆಗಳು ಒಂದೇ ಆಗಿದ್ದವು. ಆದರೆ ನಮ್ಮ ಮನೆಯಲ್ಲಿ ಒಪ್ಪಲಿಲ್ಲ. ಗುಂಟೂರಿನಲ್ಲೆ ಹಾರ ಬದಲಾಯಿಸಿಕೊಂಡು ಸರಳವಾಗಿ ಮದುವೆಯಾದೆವು. ಕೆ.ವಿ.ರಮಣಾರೆಡ್ಡಿ, ಬೀನಾದೇವಿ ನೇತೃತ್ವ ವಹಿಸಿದ್ದರು. ಮದುವೆ ಬಳಿಕ ಅಮರಾವತಿಯಲ್ಲಿ ವಾಸ್ತವ್ಯ ಹೂಡಿದೆವು. ಒಂದು ವರ್ಷದೊಳಗೆ ಮತ್ತೆ ಗುಂಟೂರಿಗೆ ವಾಪಸು ಬಂದೆವು. ಅವರು ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದರು. ಅನುವಾದಗಳನ್ನು ಮಾಡುತ್ತಿದ್ದರು. ನಮ್ಮ ಇಬ್ಬರು ಮಕ್ಕಳು ವರ್ಗೀಸ್‌ ಮತ್ತು ರಾಹುಲ್ ಅವರೂ ಅಂತರ್ಜಾತೀಯ, ಸರಳ ಮದುವೆಯಾದರು. ನಮ್ಮದು ‘ದಂಡಾಲ ಪೆಳ್ಳಿ’ಯ (ಹಾರ ಬದಲಾವಣೆಯ ಸರಳ ಮದುವೆ) ಕುಟುಂಬ.

ಕಾರ್ಯಕರ್ತೆಯಾಗಿದ್ದ ನೀವು ಲೇಖಕಿಯಾಗಿದ್ದು ಹೇಗೆ? ಏನು ಪ್ರೇರಣೆ?

ನಾನು ಲೇಖಕಿ ಎಂದುಕೊಳ್ಳುವುದಕ್ಕಿಂತಲೂ ಕಾರ್ಯಕರ್ತೆ ಎಂದುಕೊಳ್ಳುವುದರಲ್ಲೇ, ಹಾಗೆ ಇರುವುದರಲ್ಲೇ ಖುಷಿಪಡುವವಳು. ಕಾರ್ಯಕರ್ತೆಯಾಗಿದ್ದಾಗಲೂ ಹೆಚ್ಚೇನು ಓದುತ್ತಿರಲಿಲ್ಲ. ಆದರೆ ಒಮ್ಮೆ ಬಹಳ ತೀವ್ರವಾಗಿ ಅನ್ನಿಸಿತು; ನಾವೆಷ್ಟೇ ಕೆಲಸ ಮಾಡಿದರೂ, ಜನ ಲೇಖಕರನ್ನು ಮಾತ್ರ ಹೊತ್ತು ಕುಣಿಯುತ್ತಾರೆ. ನಾನೂ ಏನಾದರೂ ಬರೆಯಬೇಕು ಅನ್ನಿಸಿಬಿಟ್ಟಿತು.

ಆದರೆ ಏನನ್ನು ಬರೆಯಬೇಕು, ಹೇಗೆ ಬರೆಯಬೇಕು ಎಂಬುದೇ ಗೊತ್ತಿರಲಿಲ್ಲ. ಆಗ ಸ್ತ್ರೀವಾದ ಏರುಗತಿಯಲ್ಲಿತ್ತು. ಮಹಿಳೆಯರ ಮೇಲಿನ ಶೋಷಣೆಗಳ ವಿರುದ್ಧ ದನಿಗಳೆದ್ದಿದ್ದವು. ಆಗ ಬರೆಯಲಾರಂಭಿಸಿದೆ. ನನ್ನ ಹೋರಾಟದ ಬದುಕೇ ನನಗೆ ಬರೆಯುವ ದಾರಿಯನ್ನೂ, ವಸ್ತುಗಳನ್ನೂ ಹೆಕ್ಕಿ ಕೊಟ್ಟಿತು, ಹೋರಾಟದಲ್ಲಿ ಕಂಡುಂಡ ಅನುಭವಗಳೇ ಕತೆ, ಕಾದಂಬರಿ, ಕಾವ್ಯಗಳಾದವು.

ನಿಮ್ಮ ಮೊದಲ ಕತೆ ‘ಗೀತಲ ಕಾವಲ’ (ಗೆರೆಗಳ ಮೀರಿ) ಕುರಿತು ಹೇಳಿ..

ಆ ಕತೆ ಹುಟ್ಟಿದ್ದೇ ಒಂದು ಸೋಜಿಗದ ಸನ್ನಿವೇಶದಲ್ಲಿ, ನಮ್ಮ ಮನೆಯ ಸಮೀಪ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿದ್ದ ವಾಚ್‌ಮನ್‌ ಮತ್ತು ಆತನ ಹೆಂಡತಿಯೇ ಪ್ರೇರಣೆಯಾದರು. ಆತ ತಳಸಮುದಾಯದವನಂತೆ ಕಂಡರೆ, ಆಕೆ ಮಧ್ಯಮವರ್ಗದ ಸುಶಿಕ್ಷಿತ ಮಹಿಳೆಯಂತೆ ಕಾಣುತ್ತಿದ್ದುದೇ ನನ್ನಲ್ಲಿ ಕುತೂಹಲ ಮೂಡಿಸಿತ್ತು. ಆಕೆ ಆತನನ್ನು ರೆಡ್ಡಿಗಾರು ಎಂದು ಕರೆಯುತ್ತಿದ್ದಳು. ಆತ ಆಕೆಯನ್ನು ಏಕವಚನದಲ್ಲೇ ಕರೆಯುತ್ತಿದ್ದ. ಇಲ್ಲೇನೋ ವ್ಯತ್ಯಾಸವಾಗಿದೆ ಎನ್ನಿಸಿತ್ತು. ಹೋಗಿ ಮಾತನಾಡಿಸಿದೆ.

ಆಮೇಲೆ ಗೊತ್ತಾಯಿತು. ರೆಡ್ಡಿಗೆ ವಯಸ್ಸು ಮೀರಿದ್ದರಿಂದ ಮದುವೆಯೇ ಆಗಿರಲಿಲ್ಲ. ಆಕೆಯ ಗಂಡ ಸತ್ತು, ಇಬ್ಬರು ಮಕ್ಕಳಿದ್ದರು. ಆ ಇಬ್ಬರೂ ಒಟ್ಟಿಗೇ ಬದುಕಬೇಕಿತ್ತು. ಆದರೆ ಸಮಾಜ ಅಂಥ ಸಂಬಂಧಕ್ಕೆ ಅವಕಾಶ ಕೊಡುವುದಿಲ್ಲ ಎಂಬ ಕಾರಣದಿಂದಲೇ, ಅವರು ನಿಜವಾದ ಗಂಡ–ಹೆಂಡಿರಂತೆ ನಟಿಸುತ್ತಾ ಬದುಕುತ್ತಿದ್ದರು!

ಅದೊಂದು ವಿಚಿತ್ರ ಸಂಬಂಧ. ಆ ಕತೆ ಬಹಳ ಜನಪ್ರಿಯವಾಯಿತು. ನನ್ನ ಮೊದಲ ಕಥಾ ಸಂಕಲನಕ್ಕೆ ಅದೇ ಹೆಸರಿಟ್ಟೆ. ಅದೂವರೆಗೂ ನನಗೆ ಗೊತ್ತಿದ್ದ ಲೋಕದ ಬಗ್ಗೆ ಬರೆದೆ. ನಂತರ, ನನ್ನ ಹೋರಾಟದ ಬದುಕಿನ ಹುಡುಕಾಟದಲ್ಲಿ ಕಂಡದ್ದನ್ನು ಬರೆದೆ.

ಕ್ರಾಂತಿಕಾರಿ ಲೇಖಕರ ಸಂಘದ ಆಶಯ ಗೀತೆಯ ಸಾಲು ‘ನರ‍್ರೆಂಕ ಚೆಟ್ಟು ಕಿಂದ’ ನಿಮ್ಮ ಮೊದಲ ಕಾದಂಬರಿಯ ಹೆಸರಾಗಿದ್ದು ಹೇಗೆ?

ಹೌದು. ‘ನರ್‍ರೆಂಕ ಚೆಟ್ಟು ಕಿಂದ, ನರುಡೇ ಭಾಸ್ಕರುಡೇ’ ಹಾಡು ನಮ್ಮ ಆಶಯದ ಹಾಡು. ಗುಂಟೂರು ಜಿಲ್ಲೆಯಲ್ಲಿ ಕ್ರಾಂತಿಕಾರಿ ಹೋರಾಟದ ಕುರಿತ ಕಾದಂಬರಿ ಅದು. ಶ್ರೀಕಾಕುಳಂ ಹೋರಾಟದ ಸಂದರ್ಭದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಚೀಗಂಟಿ ಭಾಸ್ಕರ್‌ ನೆನಪಿಗಾಗಿ ಶಿವಸಾಗರ ಬರೆದ ಹಾಡು ಅದು. ಅದಕ್ಕಾಗಿಯೇ ಆ ಹೆಸರಿಟ್ಟೆ.

‘ಒಂಡ್ರುಮಟ್ಟಿ’ (ಫಲವತ್ತಾದ ಭೂಮಿ) ನನ್ನ ಎರಡನೇ ಕಾದಂಬರಿ. ಕರಂಚೆದು ಗ್ರಾಮದಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯವನ್ನು ಕುರಿತದ್ದು. ಅಲ್ಲಿ 1985ರ ಜುಲೈ 17ರಂದು ಆರು ಮಂದಿ ದಲಿತರ ಕೊಲೆಯಾಯಿತು. ಅದು ಆಂಧ್ರದಲ್ಲಿ ನಡೆದ ಮೊದಲ ದೊಡ್ಡ ಜಾತಿ ದೌರ್ಜನ್ಯ. ಆದರೆ ಕಾದಂಬರಿಯಲ್ಲಿ ಅದನ್ನಷ್ಟೇ ಬರೆಯಲಿಲ್ಲ. 1930ರಲ್ಲಿ ಬಕಿಂಗ್‌ಹ್ಯಾಂ ಕಾಲುವೆ ಬರುವವರೆಗೂ ಅಲ್ಲಿ ಬರಗಾಲವೇ ಇತ್ತು. ನಂತರ ಭೂಮಿಗಳು ಫಲವತ್ತಾದವು.

ವ್ಯಾಪಾರ ಚಟುವಟಿಕೆಗಳು ಹೆಚ್ಚಾದವು. ದಲಿತರ ಸ್ಥಿತಿಗತಿ ಗಳೂ ಬದಲಾದವು. ಆದರೆ ಅದನ್ನು ಭೂಮಾಲೀಕರು ಒಪ್ಪಲಿಲ್ಲ. ಆಗ ದಲಿತರ ಮೇಲೆ ಹಲ್ಲೆಗಳು ನಡೆದವು. ಅದರ ಉಲ್ಲೇಖದೊಂದಿಗೆ ಕಾದಂಬರಿಯನ್ನು ಮುಕ್ತಾಯ ಮಾಡಿದ್ದೇನೆ. ಮೂರನೇ ಕಾದಂಬರಿ ‘ನಿಷಿಧ’ ಚುಂಡೂರಿನಲ್ಲಿ ನಡೆದ ದಲಿತರ ಮೇಲೆ ಹಲ್ಲೆಗೆ ಸಂಬಂಧಿಸಿದ್ದು.

ನೀವು ಪ್ರಶಸ್ತಿಗಳನ್ನು ಏಕೆ ಸ್ವೀಕರಿಸುವುದಿಲ್ಲ?

ಪ್ರಶಸ್ತಿಗಳ ಮೇಲೆ ನನಗೆ ಆಸಕ್ತಿ ಇಲ್ಲ. ಏಕೆ ಎಂದು ನಿರ್ದಿಷ್ಟವಾಗಿ ನನಗೆ ಹೇಳಲು ಆಗುವುದಿಲ್ಲ. ಪ್ರಶಸ್ತಿ ಬೇಡ ಅಷ್ಟೇ. ಇತ್ತೀಚೆಗಷ್ಟೇ, ಜೀವನದಲ್ಲಿ ಮೊದಲ ಬಾರಿಗೆ ನಾನು ಒಂದು ಪ್ರಶಸ್ತಿಯನ್ನು ಸ್ವೀಕರಿಸಿದೆ. ಅನಂತಪುರದಲ್ಲಿ ದಲಿತ ಲೇಖಕ ಚಿಲುಕೂರು ದೇವಪುತ್ರ ಸ್ಮಾರಕ ಪ್ರಶಸ್ತಿಯನ್ನು ‘ನಿಷಿಧ’ ಕಾದಂಬರಿಗಾಗಿ ಪಡೆದುಕೊಂಡೆ.

ಕರ್ನಾಟಕಕ್ಕೆ ಈ ಮುನ್ನ ಭೇಟಿ ನೀಡಿದ್ರಾ?

ಇಲ್ಲ, ನನ್ನ ಬರಹಗಳನ್ನು ಗುರುತಿಸಿ ಆಹ್ವಾನಿಸಿದ್ದು ಇದೇ ಮೊದಲು. ನನ್ನ ಕೃತಿಗಳು ಅನುವಾದಗೊಳ್ಳದೇ ಇರುವುದು ಇದಕ್ಕೆ ಕಾರಣವಿರಬಹುದು.

ಕರ್ನಾಟಕದಲ್ಲಿ ದಲಿತ, ಬಂಡಾಯ ಸಾಹಿತ್ಯ ಚಳವಳಿ ಕುರಿತು ಏನು ಹೇಳುವಿರಿ?

ಇಲ್ಲಿ ದಲಿತ, ಬಂಡಾಯ ಸಾಹಿತ್ಯ ಚಳವಳಿ ಇದೆ ಎಂದು ಗೊತ್ತು. ನಿರಂಜನರ ‘ಚಿರಸ್ಮರಣೆ’ ನನ್ನ ಅಚ್ಚುಮೆಚ್ಚಿನ ಕೃತಿ.
ಪ್ರತಿಗಾಮಿ ಲೇಖಕ ಭೈರಪ್ಪನವರ ಕೆಲವು ಕೃತಿಗಳನ್ನೂ ಓದಿರುವೆ. ‘ಪರ್ವ’ ಪ್ರತಿಗಾಮಿಯಲ್ಲವಾದರೂ, ಮಹಾಭಾರತವನ್ನು ಚಾರಿತ್ರಿಕ ನೆಲೆಯಲ್ಲಿಟ್ಟು ಬರೆದ ವಿಶಿಷ್ಟ ಕೃತಿ.

ಕನ್ನಡದಲ್ಲಿ ಹೆಚ್ಚು ಕಾದಂಬರಿಗಳು ಬಂದಿವೆ. ತೆಲುಗಿನಲ್ಲಿ ಕವನ ಸಂಕಲನಗಳು ಹೆಚ್ಚು. ಕಾದಂಬರಿಗಳು ಹೆಚ್ಚಿರುವುದರಿಂದಲೇ ಕನ್ನಡಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ ಹೆಚ್ಚು ದೊರಕಿವೆ.

ಸಾಹಿತ್ಯವೆಂದರೆ ನಿಮ್ಮ ಪ್ರಕಾರ ಏನು?

ಜನರ ಒಳ್ಳೆಯದಕ್ಕಾಗಿ ಇರುವುದೇ ಸಾಹಿತ್ಯ. ಪ್ರಜಾಪ್ರಭುತ್ವವೆಂದರೆ ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ. ಸಾಹಿತ್ಯವೂ ಹಾಗೇ ಇರಬೇಕು.

ಈಗಿನ ಸಾಹಿತ್ಯ ಹಾಗೆ ಇದೆಯೇ?

ಇಲ್ಲ. ಜನರಿಂದ ಮೂಡಿದ ಸಾಹಿತ್ಯವನ್ನು ಜನರನ್ನು ನಿಯಂತ್ರಿಸಲೆಂದೇ ಪ್ರಭುತ್ವ ಬಳಸಿಕೊಂಡಿತು. ಮನುಸ್ಮೃತಿಯ ಮೂಲಕ ನಿಯಂತ್ರಣವನ್ನು ಹೇರಿದ್ದು ಹಳೆಯ ಮಾತು. ಈಗ ಹಲವು ನಮೂನೆಗಳು. ಜನರೇ ಜನಪರ ಸಾಹಿತ್ಯವನ್ನು ರೂಪಿಸಿಕೊಳ್ಳಬೇಕು. ಲೇಖಕರು ಜನಪರವಾಗಿದ್ದರೆ ಮಾತ್ರ ಅದು ಸಾಧ್ಯವಾಗುತ್ತದೆ.

 

ಕನ್ನಡಕ್ಕೆ ‘ನಿಷಿಧ’ ಕಾದಂಬರಿ

ಆಂಧ್ರದ ಪ್ರಕಾಶಂ ಜಿಲ್ಲೆಯ ಕರಂಚೆದು ಗ್ರಾಮದಲ್ಲಿ ಆರು ದಲಿತರ ಹತ್ಯೆ ನಡೆದಾಗ ಆಂಧ್ರಪ್ರದೇಶ ಸಿವಿಲ್‌ ಲಿಬರಿಟೀಸ್‌ ಕಮಿಟಿ ಜೊತೆಗೆ ಸತ್ಯಶೋಧನೆಗೆ ತೆರಳಿದವರಲ್ಲಿ ನಲ್ಲೂರಿ ರುಕ್ಮಿಣಿ ಕೂಡ ಒಬ್ಬರು. ಅಲ್ಲಿನ ಅನುಭವಗಳನ್ನೇ ಅವರು ತಮ್ಮ ‘ಒಂಡ್ರುಮಟ್ಟಿ’ ಕಾದಂಬರಿಯಲ್ಲಿ ದಾಖಲಿಸಿದ್ದಾರೆ.

ವಿಭಜನೆಯ ನಂತರ ಆಂಧ್ರದ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ ವಿಜಯವಾಡ ಮತ್ತು ಗುಂಟೂರಿನ ಸಾವಿರಾರು ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನದ ವಿರುದ್ಧ ಅವರು ಗಟ್ಟಿ ದನಿಯಾದವರು.

ಜನಪರ ಸಾಹಿತ್ಯ ಉತ್ಸವಗಳಲ್ಲಿ ಪಾಲ್ಗೊಂಡರೂ, ಅವರ ಕೃತಿಗಳು ತೆಲುಗೇತರ ಭಾಷೆಗಳಿಗೆ ಅನುವಾದಗೊಳ್ಳದೇ ಇರುವುದರಿಂದ, ಕ್ರಾಂತಿಕಾರಿ ಸಾಹಿತ್ಯ, ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಹೋರಾಟಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಕುರಿತು ಆಂಧ್ರದ ಹೊರಗಿನ ಜನರಿಗೆ ಹೆಚ್ಚು ಗೊತ್ತಿಲ್ಲ. ಅವರ ಕಾದಂಬರಿಗಳ ಕುರಿತು ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಸಂಶೋಧನೆ ಲೇಖನಗಳು ಪ್ರಕಟವಾಗಿವೆ. ಅನುವಾದಕ ನಗರಗೆರೆ ರಮೇಶ್‌ ಈಗ ಅವರ ‘ನಿಷಿಧ’ ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡುತ್ತಿದ್ದಾರೆ.

ಚಿತ್ರಗಳು: ಜಿ.ಟಿ.ರಮೇಶ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು