ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು ಬೋಲ್ಡ್‌ ಆದ್ರೆ ಪ್ರಳಯ! ಪ್ರತಿಭಾ ನಂದಕುಮಾರ್ ಲೇಖನ

Last Updated 11 ಮಾರ್ಚ್ 2023, 23:45 IST
ಅಕ್ಷರ ಗಾತ್ರ

ಲಾಗಾಯ್ತಿನಿಂದಲೂ ತನ್ನ ಅಭಿವ್ಯಕ್ತಿಗೆ ಬಗೆ ಬಗೆಯ ದಾರಿಯನ್ನು ಕಂಡುಕೊಂಡವಳು ಹೆಣ್ಣು. ಆದರೆ, ಅಂತಹ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವನ್ನು ಗಂಡಾಳ್ವಿಕೆಯ ಮನೋಭಾವ ಮಾಡುತ್ತಲೇ ಇದೆ. ‘ಕುಂಕುಮ ಪ್ರಕರಣ’ ಅಂತಹ ಮತ್ತೊಂದು ಸೇರ್ಪಡೆಯಷ್ಟೆ

––––

‘ಮೇಡಂ ನಾನು ನಿಮ್ಮ ಬರಹಗಳ ಅಭಿಮಾನಿ, ನಿಮ್ಮ ಎಲ್ಲಾ ಪುಸ್ತಕ ಇಟ್ಟುಕೊಂಡಿದ್ದೀನಿ, ನನ್ನ ಹೆಂಡತಿ ಮಾತ್ರ ಓದದೇ ಇರೋ ಥರ ನೋಡ್ಕೊಂಡಿದ್ದೀನಿ... ಆಮೇಲೆ ಅವಳೂ ನಿಮ್ ಥರ ಬೋಲ್ಡ್ ಆಗಿಬಿಟ್ರೆ!’

***

ಹೆಂಗಸರು ಬೋಲ್ಡ್ ಆಗಿಬಿಟ್ಟರೆ ಪ್ರಳಯ.

ಈ ಬೋಲ್ಡ್ ಅನ್ನೋ ಪದಕ್ಕೆ ಕೆಟ್ಟ ಅರ್ಥ ಬಂದಿರುವುದೇ ಹೆಂಗಸರಿಗೆ ಅನ್ವಯವಾಗುವುದರಿಂದ. ಗಂಡಸರು ‘ಬೋಲ್ಡ್’ ಆಗುವುದಿಲ್ಲ, ಅವರು ಧೈರ್ಯವಂತರು, ಖಡಕ್ ಮಂದಿ, ನಿಷ್ಠುರವಾದಿಗಳು, ಎದೆಗಾರಿಕೆಯುಳ್ಳ ಜನ. ಹೆಂಗಸರನ್ನು ಬೋಲ್ಡ್ ಅನ್ನುವುದಕ್ಕೆ ಇರುವ ಪರ್ಯಾಯ ಪದಗಳು ‘ಗಂಡುಬೀರಿ, ಬಜಾರಿ, ಘಟವಾಣಿ, ಹಟಮಾರಿ, ಮಾರಿ...’

***

ಹಚ್ಚಡದಾ ಪದರಾಗ ಅಚ್ಚಮಲ್ಲಿಗಿ ಹೂವ

ಬಿಚ್ಚಿ ನನಾ ಮ್ಯಾಲಾ ಒಗೆವಂಥ ರಾಯರನ

ಬಿಟ್ಹ್ಯಾಂಗ ಬರಲೇ ಹಡದವ್ವಾ

ಅಂತ ಒಂದು ಜಾನಪದ ಗೀತೆ. ಆಕೆ ಮಲ್ಲಿಗೆ ಹೂವಿನ ಬಗ್ಗೆ ಹಾಡುತ್ತಿದ್ದಾಳೆ. ಇದನ್ನು ಸಾರ್ವಜನಿಕವಾಗಿ ಹಾಡಲು ಏನೂ ತಕರಾರಿಲ್ಲ. ಅದು ಸಭ್ಯ ಸಮಾಜದ ಒಪ್ಪಿತ ರೀತಿರಿವಾಜಿನ ಪರಿಧಿಯೊಳಗೇ ಇದೆ.

ಆದರೆ, ಅಲ್ಲಿ ಹೆಣ್ಣು ಹಾಡುತ್ತಿರುವುದು ಮಲ್ಲಿಗೆಯ ಬಗ್ಗೆ ಅಲ್ಲವೇ ಅಲ್ಲ. ಅವಳು ವರ್ಣಿಸುತ್ತಿರುವುದು ರಾತ್ರಿ ಹಾಸಿಗೆಯಲ್ಲಿ ತನ್ನ ಲೈಂಗಿಕ ದಾಹವನ್ನು ಅಚ್ಚುಕಟ್ಟಾಗಿ ತಣಿಸುವ ಗಂಡಿನ ಮೋಹದ ಬಗ್ಗೆ ಬಿಡುಬೀಸಾಗಿ ಬಿಚ್ಚಿ ಬಿಚ್ಚಿಯೇ ತನ್ನ ಹಡೆದವ್ವನಿಗೆ ನಿರೂಪಿಸುತ್ತಿದ್ದಾಳೆ. ಅದನ್ನು ಹೇಳಲು ಅವಳು ಹಚ್ಚಡದಲ್ಲಿ ಮಲ್ಲಿಗೆಯನ್ನು ತನ್ನ ಮೇಲೆ ಬಿಸಾಡುವ ರೂಪಕವನ್ನು ಬಳಸಿಕೊಂಡಿದ್ದಾಳೆ.

ಶತಮಾನಗಳಿಂದ ಹೆಣ್ಣು ತನ್ನನ್ನು ನೂರೆಂಟು ವಿಧದಲ್ಲಿ ಅಭಿವ್ಯಕ್ತಿಗೊಳಿಸಿಕೊಳ್ಳಲು ಬಳಸುತ್ತಿರುವುದು ಈ ರೂಪಕದ ಪರದೆಯನ್ನೇ. ರೂಪಕ ಉಪಮೆಗಳ ರೇಷ್ಮೆ ದಾರದಲ್ಲಿ ಕಟ್ಟಿ ತನ್ನ ಎಲ್ಲಾ ಕಾಮನೆಗಳನ್ನು, ಚಿಂತನೆಗಳನ್ನು, ಅತೃಪ್ತಿ ತಹತಹಗಳನ್ನು ಹೆಣ್ಣು ಸಲೀಸಾಗಿ ಅಭಿವ್ಯಕ್ತಿಸುತ್ತಿದ್ದಾಳೆ. ಅರ್ಥವಾಗದವರಿಗೆ ಅದು ಸಮಸ್ಯೆಯಲ್ಲ, ಅರ್ಥವಾದವರಿಗೂ ಅದು ಖುಲ್ಲಂಖುಲ್ಲಾ ಅಲ್ಲವೆಂದು ಸಮಸ್ಯೆಯಲ್ಲ. ಆದರೆ ಒಂದು ಮಾತು ಮಾತ್ರ ಖಂಡ ಸತ್ಯ - ಹೆಣ್ಣು ಮಾತು, ನಡೆ, ನಿರ್ಧಾರ, ವೇಷ ಭೂಷಣ, ಹಾವಭಾವ, ಹಾಡು, ಹಸೆ, ಕಲೆ, ಅಡುಗೆ.... ಎಲ್ಲಾ ಲಭ್ಯ ಅಲಭ್ಯ ವಿಧಾನಗಳನ್ನೂ ಬಳಸಿ ತನ್ನನ್ನು ಸಾವಿರ ವಿಧಗಳಲ್ಲಿ ಅಭಿವ್ಯಕ್ತಿಗೊಳಿಸಿಕೊಳ್ಳುತ್ತಿರುತ್ತಾಳೆ.

ಕೊನೆಗೆ ಅವಳ ಮೌನವೂ ಒಂದು ಅಭಿವ್ಯಕ್ತಿಯೇ.

ಯಾಕೆಂದರೆ ಅವಳು ಹೇಳಬೇಕಾದ್ದನ್ನು ಹೇಳಿಯೇ ತೀರುವ ಛಲಗಾತಿ.

ಪುರುಷರ ಅಭಿವ್ಯಕ್ತಿಗೆ ಹಾಗಾದರೆ ಯಾವುದೇ ರೀತಿಯ ಕಟ್ಟುಪಾಡು, ಇತಿ ಮಿತಿ ಇಲ್ಲವೋ? ಖಂಡಿತಾ ಇದೆ. ಆದರೆ, ಹೆಣ್ಣಿಗಿರುವಷ್ಟು ಇಲ್ಲ. ಕುವೆಂಪು ಅಂತಹ ಪುರುಷ ಸರಸ್ವತಿಗಳೂ ‘ನೀನು ಸುರ ಸರೋವರ ನಾನು ದೇವ ಕುಂಜರ’ ಎನ್ನುವ ಅಪ್ಪಟ ಲೈಂಗಿಕ ಅನುಭವವನ್ನು ಕೊಳಕ್ಕಿಳಿಯುವ ಆನೆಯ ರೂಪಕದಲ್ಲಿ ವರ್ಣಿಸಿ, ಆಮೇಲೆ ‘ಹೃದಯ ಕಮಲದಿ ಮಧುರ ಪ್ರೇಮ ಮಕರಂದವಿದೆ, ಅಧರ ಚುಂಬನದಿಂದೆ ಸವಿಯದನು ಬಾ’ ಎಂದು ಬರೆಯಲು ಸಾಧ್ಯವಾಗಿದ್ದು. ಗಂಗಾಧರ ಚಿತ್ತಾಲರು ‘ಭೂಗರ್ಭ ತೆರೆದಿತ್ತು ಜೊಲ್ಲುಬಾಯಿ / ನಾವಂದು ಮನುಕುಲದ ತಂದೆತಾಯಿ’ ಅಂತ ಬರೆದಿದ್ದು.

ಹೆಣ್ಣಿನ ವಿಷಯಕ್ಕೆ ಬಂದರೆ ಇದು ಲೈಂಗಿಕತೆಯ ಅಭಿವ್ಯಕ್ತಿಗೆ ಮಾತ್ರ ಸೀಮಿತವಲ್ಲ, ಅವಳು ಯಾವ ಒಪ್ಪಿತ ರೀತಿಯನ್ನು ಉಲ್ಲಂಘಿಸಿದರೂ ಅದು ನಿಷಿದ್ಧವೇ. ಏನೀಗ ಅಂತ ಹೇಳಲೇಬಾರದು ಹೆಣ್ಣು ಅಂತ ಗಂಭೀರ ನಿರೀಕ್ಷೆ. ಹೆಣ್ಣಾಗಿ ಹೀಗೆ ಹೇಳಬಹುದೇ ಅನ್ನುವುದು ಬದುಕಿನ ಪ್ರತಿಯೊಂದು ವಿಷಯಕ್ಕೂ ಇದೆ: ಹೆಣ್ಣಾಗಿ ಹೀಗೆ ಡ್ರೆಸ್ ಮಾಡಿಕೊಳ್ಳಬಹುದೇ, ಹೆಣ್ಣಾಗಿ ಹೀಗೆ ಮಾಡಬಹುದೇ, ಹೆಣ್ಣಾಗಿ ಅನ್ನಬಹುದೇ, ಹೆಣ್ಣಾಗಿ ಹೀಗೆ ಚಿಂತಿಸಬಹುದೇ, ಹೆಣ್ಣಾಗಿ ಹೀಗೆ.... ಕೊನೆಯಿಲ್ಲದ ಪಟ್ಟಿ ಇದು. ಇದಕ್ಕೆ ಸಾಮಾಜಿಕ ಸಂಬಂಧಗಳ ನಿಗದಿತ ಸ್ಥಾನವಂತೂ ಇನ್ನಷ್ಟು ಮೊಳೆ ಹೊಡೆದು ಹೆಣ್ಣನ್ನು ಅವಳ ಸ್ಥಾನದಲ್ಲಿ ಭದ್ರ ಕೂರಿಸುತ್ತಲೇ ಇರುತ್ತದೆ. ಆದರೆ, ಸತ್ಯ ಅಂದರೆ ಎಷ್ಟೇ ಕಡಿವಾಣಗಳು, ಸರಪಳಿಗಳು, ನಿಷೇಧಗಳನ್ನು ಹೇರಿದರೂ ಸಾವಿರಾರು ವರ್ಷಗಳಿಂದ ಹೆಣ್ಣು ತನ್ನನ್ನು ಅಭಿವ್ಯಕ್ತಿಗೊಳಿಸುತ್ತಲೇ ಬಂದಿದ್ದಾಳೆ.

ಅತ್ತೆಯ ಮನೆಯಲ್ಲಿ ತೊತ್ತಾಗಿ ಇರಬೇಕು,

ಹೊತ್ತಾಗಿ ನೀಡಿದರೂ ಉಣಬೇಕು

ಅಂತ ಹೇಳಿ ಮಗಳನ್ನು ತಯಾರು ಮಾಡುತ್ತಿದ್ದ ತಾಯಿ ಈಗ ಬದಲಾಗಿದ್ದಾಳೆ. ಮಗಳಿಗೆ ಹೊತ್ತಾಗಿ ಯಾಕೆ ಊಟ ನೀಡುತ್ತಿರಿ ಒಟ್ಟಿಗೇ ಊಟ ಮಾಡಲಿ ಎಂದು ಕೇಳುತ್ತಿದ್ದಾಳೆ. ಒಂದು ಕಾಲದಲ್ಲಿ ಹೆಣ್ಣು ತನ್ನ ಮನದಿಂಗಿತವನ್ನು ಕಣ್ಣ ಸನ್ನೆಯಲ್ಲಿ, ಕೈಗಳ ಬಳೆ, ಕಾಲಿನ ಗೆಜ್ಜೆಯ ಸದ್ದಿನಲ್ಲಿ ವ್ಯಕ್ತಪಡಿಸಬೇಕೆನ್ನುವುದನ್ನು ರಮ್ಯವಾಗಿ ‘ಕಾಂತಾಸಮ್ಮಿತ’ ಎಂದು ವರ್ಣಿಸಿ ಸುಖಿಸುತ್ತಿದ್ದ ಜನಸಮುದಾಯ ಈಗಿಲ್ಲ. ಯಾಕೆಂದರೆ ಆಗ ಅದಕ್ಕೆ ಸ್ಪಂದಿಸುತ್ತಿದ್ದ ಸೆನ್ಸಿಟಿವ್ ಪುರುಷ ವರ್ಗ ಈಗಿಲ್ಲ. ಈಗ ಜೋರು ಗಂಟಲಿನಿಂದ ಹೊಡೆದುಕೊಂಡರೂ ಕೇಳಿಸದ ದಪ್ಪ ಚರ್ಮದವರು ತಮ್ಮನ್ನು ಎಲ್ಲ ಕಡೆ ಪ್ರತಿಷ್ಠಾಪಿಸಿಕೊಂಡಿದ್ದಾರೆ. ಅದನ್ನು ಅರಿತ ಹೆಣ್ಣು ಈಗ ಇದ್ದದ್ದನ್ನು ಇದ್ದಂತೆ ಮೈಕಿನಲ್ಲಿ ವೇದಿಕೆಯ ಮೇಲಿಂದ ಘಂಟಾಘೋಷವಾಗಿ ಹೇಳುತ್ತಿದ್ದಾಳೆ.

ದೊಡ್ಡ ಪಲ್ಲಟ

ಎಲ್ಲಕಿಂತ ಮುಖ್ಯವಾಗಿ ಡಿಜಿಟಲ್ ಮೀಡಿಯಾ ಅವಳಿಗೆ ಮುಕ್ತ ವೇದಿಕೆಯನ್ನು ತೆರೆದು ಕೊಟ್ಟಿದೆ. ಈಗ ಇಡೀ ದೇಶದ ಹೆಂಗಸರು ಕ್ಷಣಾರ್ಧದಲ್ಲಿ ತಮ್ಮ ಮೊಬೈಲ್‌ಗಳಿಂದ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನು ದಾಖಲಿಸಬಹುದು, ಅದನ್ನೂ ಮೀರಿ ತಮ್ಮ ಸೃಜನಾತ್ಮಕ ತುಡಿತಗಳನ್ನು ಟಿಕ್‌ಟಾಕ್ ಮಾಡಿ ಅಪ್‌ಲೋಡ್ ಮಾಡಬಹುದು. ಒಂದು ಪ್ರೇಮ ನಿವೇದನೆಗೆ ತಿಣುಕಾಡುತ್ತಿದ್ದ ಹುಡುಗಿ ಈಗ ಸಲೀಸಾಗಿ ಒಂದು ಮೆಸೇಜ್ ಕಳಿಸುತ್ತಾಳೆ. ಆ ಕಡೆಯಿಂದ ಪಾಸಿಟಿವ್ ಪ್ರತಿಕ್ರಿಯೆ ಬಂದರೆ ಸರಿ, ಇಲ್ಲವಾದರೆ ಕತ್ತೆ ಬಾಲ, ಮತ್ತೊಂದು ನಂಬರ್ ಇದ್ದೇ ಇದೆ. ಏಕಕಾಲಕ್ಕೆ ಐದಾರು ಕಡೆ ನಿವೇದಿಸಿಕೊಳ್ಳಲು ಅಭ್ಯಂತರವೇನು?

ಕೇವಲ ಇಪ್ಪತ್ತು- ಮೂವತ್ತು ವರ್ಷಗಳ ಹಿಂದೆ ಸಿನಿಮಾಗಳಲ್ಲಿ, ಕತೆ ಕಾದಂಬರಿಗಳಲ್ಲಿ, ಅತ್ಯಾಚಾರಕ್ಕೆ ಒಳಗಾದ ಹೆಣ್ಣಿಗೆ ಸಾಯುವುದೊಂದೇ ದಾರಿ ಅಂತ ಹೇಳುತ್ತಿದ್ದರಲ್ಲವೇ? ಯಾಕೆ? ಈಗ #ಮೀ ಟೂ ಅಂತ ಹೇಳಿಕೊಳ್ಳಲು ಹಿಂಜರಿಕೆ ಇಲ್ಲ. ‘ನನ್ನ ತಂದೆಯಿಂದಲೇ ಲೈಂಗಿಕ ಶೋಷಣೆಗೆ ಒಳಗಾಗಿದ್ದೆ, ಅದನ್ನು ಹೇಳಿಕೊಳ್ಳಲು ನನಗೆ ನಾಚಿಕೆ ಇಲ್ಲ, ಪಾಪ ಮಾಡಿದವರು ನಾಚಿಕೊಳ್ಳಬೇಕು, ನಾನಲ್ಲ’ ಎಂದು ಖ್ಯಾತ ನಟಿಯೊಬ್ಬಳು ಹೇಳಿಕೊಳ್ಳಬಹುದು, ಜನ ಅದನ್ನು ಒಪ್ಪಿಕೊಳ್ಳಬಹುದು. ಹೆಣ್ಣಿನ ಅಭಿವ್ಯಕ್ತಿಯ ವಿಧಗಳು ಬದಲಾಗಿವೆ.

ಅದರ ಹಿಂದಿನ ಚಿಂತನೆ ಬದಲಾಗಿದೆ. ಈಗ ಹೆಣ್ಣು ಮನಸು ಮಾಡಬೇಕಷ್ಟೆ - ತನ್ನನ್ನು ಅಭಿವ್ಯಕ್ತಿಗೊಳಿಸಿಕೊಳ್ಳಲು ಅಥವಾ ಬೇರೆ ರೀತಿಯಲ್ಲಿ ಅದನ್ನು ಹ್ಯಾಂಡಲ್ ಮಾಡಲು.

ಮುಕ್ತ ಸಂವಹನ ಮಾಧ್ಯಮಗಳು ತಂದ ಅತಿಮುಖ್ಯ ಬದಲಾವಣೆ ಅಂದರೆ ಎಲ್ಲರಿಗೂ ಎಲ್ಲವೂ ಮುಕ್ತವಾಗಿ ಸಿಗುವುದು. ಇಲ್ಲಿ ಮಲ್ಲೇಶ್ವರದ ತನ್ನ ಸುಭದ್ರ ಮನೆಯ ರಕ್ಷೆಯಲ್ಲಿ ಕೂತ ಹೆಣ್ಣುಮಗಳಿಗೂ ನೇರವಾಗಿ ಜಗತ್ತಿನ ಎಲ್ಲ ಅಭದ್ರತೆಗಳನ್ನು ತೋರಿಸುವ ಸುಲಭ ಸಂವಹನ ಸಾಧ್ಯವಾಗಿಬಿಟ್ಟಿದೆ. ಹಾಗಾಗಿ ಎಲ್ಲೋ ಬಿಹಾರದಲ್ಲಿ ದಲಿತ ಹುಡುಗಿಯೊಬ್ಬಳನ್ನು ರೇಪ್ ಮಾಡಿ, ಸುಟ್ಟು ಹಾಕಿ ಅರೆಸ್ಟ್ ಆಗಿ, ಮತ್ತೆ ಏನಿಲ್ಲವೆಂದು ಖುಲಾಸೆಯಾಗಿ ಮೆರವಣಿಗೆಯಲ್ಲಿ ಮನೆಗೆ ಬರುವ ಸಂಗತಿಯನ್ನು ಬ್ರೇಕಿಂಗ್ ನ್ಯೂಸಾಗಿ ಬಿತ್ತರಿಸುವ ಮಾಧ್ಯಮ ಅಡುಗೆ ಮನೆಯೊಳಗೂ ಬಂದು ಕೂತು ಬಿಟ್ಟಿದೆ. ಹುಡುಗಿ ತಕ್ಷಣ ಪ್ರತಿಕ್ರಿಯಿಸುತ್ತಾಳೆ - ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ.

ಇತ್ತ ಒಬ್ಬ ಜನಪ್ರತಿನಿಧಿ ದಬಾಯಿಸುತ್ತಾನೆ: ‘ಯಾಕೆ ಬೊಟ್ಟಿಟ್ಟಿಲ್ಲಾ? ಗಂಡ ಇಲ್ಲವಾ?’ ತಕ್ಷಣ ಸಾವಿರಾರು ಮಹಿಳೆಯರು ಅವರ ಕತ್ತಿನ ಪಟ್ಟಿ ಹಿಡಿದು ಕೇಳುತ್ತಾರೆ: ‘ನೀನ್ಯಾರು ಕೇಳಲು?’ ಹೆಣ್ಣು ಅಭಿವ್ಯಕ್ತಿಗೆ ಅವಕಾಶಕ್ಕಾಗಿ ಕಾಯಬೇಕಿಲ್ಲ ಈಗ. ಕಾಂತಾಸಮ್ಮಿತವಂತೂ ಖಂಡಿತಾ ಅಲ್ಲ - ಇದು ಜೋರುದನಿಯಲ್ಲಿ ಖಡಕ್ಕಾಗಿ ಜಪ್ಪಿಸಿ ಕೇಳುವ ದನಿ.

ಆದರೂ ಸನಾತನ ಮಾನಸಿಕ ನಂಬಿಕೆಗಳು ಇನ್ನೂ ಹೆಣ್ಣನ್ನು ಅತ್ತ ಇತ್ತ ಎಳೆಯುತ್ತಲೇ ಇವೆ - ಒಂದು ಕಡೆ ಸಂಪ್ರದಾಯ ಹಾಕಿಟ್ಟ ಚೌಕಟ್ಟು, ಇನ್ನೊಂದು ಕಡೆ ಜಾಗತೀಕರಣ ತಂದೊಡ್ಡಿದ ಮುಕ್ತತೆ. ನಮ್ಮ ಮನೆಯಲ್ಲಿ ಎಲ್ಲ ಹಳೆಯದೇ ಇರಲಿ, ನಿಮ್ಮ ಮನೆಯಲ್ಲಿ ತಂದಿಟ್ಟಿರುವ ಹೊಸ ಟಿ.ವಿಯನ್ನು ನಮಗೂ ತೋರಿಸಿ ಅನ್ನುವ ಧಾಟಿ. ಮೇಲ್ ಗೇಜ್ - ಪುರುಷ ದೃಷ್ಟಿಯ - ಮನರಂಜನೆಗೆ ಐಟಂ ಹುಡುಗಿಯರು ನಗ್ನರಾಗಿ ಕುಣಿಯುತ್ತಿರಲಿ, ನಮ್ಮ ಮನೆಯಲ್ಲಿ ಬೊಟ್ಟಿಟ್ಟು, ಸೆರಗು ಹೊದ್ದ ಹೆಂಗಸರು ಅಡುಗೆ ಮಾಡಿಕೊಂಡಿರಲಿ ಎನ್ನುವ ವೈರುಧ್ಯ ಎಂದಿನಂತೆ ಇಂದೂ ಮುಂದುವರಿದಿದೆ. ಆದರೆ, ಈಗ ಹೆಣ್ಣು ತನ್ನ ಅಭಿವ್ಯಕ್ತಿಯ ಬಗ್ಗೆ ಹಿಂಜರಿಯುತ್ತಿಲ್ಲ. ಅಡುಗೆಯಲ್ಲಿ ಅತಿ ಖಾರ ಬೆರೆಸಿ ನೀರು ಕುಡಿಸುವ ಕಲೆ ಹೆಣ್ಣಿಗೆ ಯಾವಾಗಲೋ ಸಿದ್ಧಿಸಿದ ವಿದ್ಯೆ. ಈಗ ಅದಕ್ಕೆ ಹೊಸ ವೇದಿಕೆಗಳು, ಹೊಸ ರೂಪಕಗಳು ನೆರವಾಗುತ್ತಿವೆ.

ಮಹಿಳೆ ಮತ್ತು ಅಭಿವ್ಯಕ್ತಿ ಅನ್ನುವ ವಿಚಾರ ಸಂಕಿರಣಗಳಲ್ಲಿ ಈಗ ಸೀತೆ, ಸಾವಿತ್ರಿ, ಮಂಡೋದರಿಗಳ ಉದಾಹರಣೆಗಳಿಂದ ಮಾತು ಪ್ರಾರಂಭವಾಗುವುದಿಲ್ಲ. ಹಿಜಾಬು ಧರಿಸಲು ಕಟ್ಟುನಿಟ್ಟು ಮಾಡುವ ಹುಡುಗಿಯ ಕಣ್ಣಮುಂದೆ ಸಾನಿಯಾ ಮಿರ್ಜಾ ಟೆನಿಸ್ ಆಡುತ್ತಾಳೆ. ಮತಾಂತರವಾಗದೇ ಮದುವೆಯಾದ ಗೌರಿ ಖಾನ್ ನಗುತ್ತಾಳೆ. ಎಲ್‌ಜಿಬಿಟಿಕ್ಯೂ ದಂಪತಿಗಳು ಮನೆಗೆ ಊಟಕ್ಕೆ ಕರೆಯುತ್ತಾರೆ. ಹತ್ತನೇ ಕ್ಲಾಸ್ ಫೇಲ್ ಆದ ರಂಜಿತಾ ಟಿಕ್‌ಟಾಕ್ ಕ್ವೀನ್ ಆಗಿ ವೈರಲ್ ಆಗುತ್ತಾಳೆ. ಶ್ರುತಿ ತಾವಡೆ ರ‍್ಯಾಪ್‌ ಮಾಡುತ್ತಾಳೆ: ‘ಮೈ ನಹಿ ತೋ ಕೌನ್ ಭೈ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT