ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಜ್ಜೆ ಹಿಂತೆಗೆಯದಿರಿ: ಪೌರಕಾರ್ಮಿಕ ಮಹಿಳೆ ಮಮತಾ ಮಾತು

Last Updated 6 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ನಾನು ಹೆಚ್ಚು ಓದಿದವಳಲ್ಲ. ಏಳನೇ ತರಗತಿ ತನಕ ಓದಿದ್ದೇನೆ. ಹೆಣ್ಣುಮಕ್ಕಳ ಬಗ್ಗೆ ಬೇರೆಯವರಂತೆ ನನಗೆ ಮಾತನಾಡಲು ಗೊತ್ತಿಲ್ಲ. ಆದರೆ, ನಾನೂ ಒಬ್ಬ ಹೆಣ್ಣಾಗಿ ಜೀವನ ಎದುರಿಸುತ್ತಿರುವ ಬಗ್ಗೆ ಹೇಳಬಲ್ಲೆ. ನಮ್ಮ ಕುಟುಂಬದಲ್ಲಿ ನಮ್ಮತ್ತೆ, ನಮ್ಮೆಜಮಾನ್ರು ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಹಾರ್ಟ್ ಪ್ರಾಬ್ಲಂ ಇದ್ದುದ್ದರಿಂದ ನನ್ನ ಗಂಡ ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡ್ರು. ನಾನೀಗ ಪೌರ ಕಾರ್ಮಿಕಳಾಗಿ ಕೆಲಸ ಮಾಡ್ತಾ ಇದ್ದೀನಿ. ಗಂಡ ಬದುಕಿರುವ ತನಕ ನಾನು ಹೊರಗಡೆ ಕೆಲಸಕ್ಕೆ ಹೋಗಿರಲಿಲ್ಲ.

ನಮ್ಮ ಸುತ್ತಮುತ್ತ ಚೆನ್ನಾಗಿರೋ ಹೆಣ್ಣುಮಕ್ಕಳನ್ನು ನೋಡಿದಾಗ ನನಗೂ ಅವರಂತೆ ಇರಬೇಕು ಅನಿಸುತ್ತೆ. ಅದಕ್ಕಾಗಿ ನಾನು ದುಡಿಯುತ್ತಿದ್ದೇನೆ. ಅವರಂತೆ ದೊಡ್ಡ ಕೆಲಸ ನನಗಿಲ್ಲ. ಆದರೆ, ನನ್ನ ಪಾಲಿಗೆ ನನ್ನ ಕೆಲಸವೇ ದೊಡ್ಡದು. ಇದರಲ್ಲೇ ದುಡಿದು ನನ್ನ ಇಬ್ಬರು ಮಕ್ಕಳ ಭವಿಷ್ಯ ಚೆನ್ನಾಗಿ ರೂಪಿಸಬೇಕು. ನನ್ನ ಮಕ್ಕಳು ಈ ವೃತ್ತಿಗೆ ಬರಬಾರದು ಅನ್ನುವ ಆಸೆ ನನ್ನದು.

ಹೆಣ್ಣುಮಕ್ಕಳು ಈಗ ಎಲ್ಲಾ ಫೀಲ್ಡಿನಲ್ಲಿದ್ದಾರೆ. ಅಂಥವರನ್ನು ನೋಡಿ ಖುಷಿ ಆಗುತ್ತೆ. ನನ್ನ ಪ್ರಕಾರ ಎಂಥದ್ದೇ ನೋವು ಬರಲಿ ಹೆಣ್ಣುಮಕ್ಕಳು ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕೆ ಸರಿಸಬಾರದು. ಸಮಾಜ ಏನೇ ಅನ್ನಲಿ, ಅದಕ್ಕೆ ತಲೆಕೆಡಿಸಿಕೊಳ್ಳದೇ ನಮ್ಮ ಕೆಲಸ ನಾವು ಮಾಡಬೇಕಷ್ಟೆ. ಅವರಿವರ ಮಾತಿಗೆ ತಲೆಕೆಡಿಸಿಕೊಂಡರೆ ನಮ್ಮ ಬದುಕಿಗೆ ಅವರ‍್ಯಾರೂ ಬರೋದಿಲ್ಲ. ನಮ್ಮ ಅನ್ನ ನಾವೇ ಸಂಪಾದಿಸಬೇಕು. ಗಂಡ–ಹೆಂಡತಿ ಜತೆಗಿರಲಿ, ಬಿಡಲಿ ನಮ್ಮ ಅಸ್ತಿತ್ವವನ್ನು ನಾವು ಉಳಿಸಿಕೊಳ್ಳಬೇಕು. ಮತ್ತೊಬ್ಬರಿಗಾಗಿ ನಾವು ಬದುಕಬಾರದು. ನಮಗಾಗಿ ನಾವು ಬದುಕಬೇಕು.

ಬಹಳ ಜನ ಹೆಣ್ಣುಮಕ್ಕಳಿಗೆ ಕೆಲಸದ ಜಾಗದಲ್ಲಿ ತೊಂದರೆ ಆಗುತ್ತೆ ಅಂತ ಹೇಳ್ತಾರೆ. ಆದರೆ, ನಾನು ಕೆಲಸ ಮಾಡೋ ಜಾಗದಲ್ಲಿ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಅನುಸರಿಸಿಕೊಂಡು ಕೆಲಸ ಮಾಡ್ತೀವಿ.
ಹೆಣ್ಣು–ಗಂಡು ಇಬ್ಬರಿಗೂ ಒಂದೇ ಕೆಲಸ ಕೊಡ್ತಾರೆ. ಅದನ್ನು ಹಂಚಿಕೊಂಡು ಮಾಡ್ತೀವಿ. ನಮ್ಮ ನಡುವೆ ಯಾವತ್ತಿಗೂ ಭೇದ ಭಾವ ಬಂದಿಲ್ಲ.

ನಿರೂಪಣೆ: ಮಂಜುಶ್ರೀ ಎಂ. ಕಡಕೋಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT