ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ವನಾಗುವುದೆಂದರೆ...

Last Updated 23 ಜುಲೈ 2022, 1:02 IST
ಅಕ್ಷರ ಗಾತ್ರ

ತಾಯ್ತನವೆಂಬುದು ಕಳ್ಳುಬಳ್ಳಿಯಾಚೆಗೂ ಹಬ್ಬುವ ಹೂಬಳ್ಳಿ. ತಾಯಿಯಾಗುವ ಹಂಬಲದಲ್ಲಿ ಎದುರಿಸಿದ ಸಂಕಷ್ಟಗಳನ್ನು ರಂಗರೂಪಕ್ಕೆ ತರುತ್ತಿದ್ದಾರೆ ಕಲಾವಿದೆ ಪೂಜಾ. ಅವರ ಕಥನ ಇಲ್ಲಿದೆ..

ಇದು ಯಾರದ್ದೋ ಕಥೆ ಅಲ್ಲ. ಯಾರ ಉದಾಹರಣೆಯೂ ಅಲ್ಲ. ಇದು ನನ್ನದೇ ಕಥೆ. ಇವತ್ತೇ ಯಾಕೆ ಈ ಕಥೆ ಅಂದರೆ, ಇವತ್ತು ಹೇಳಿದರಷ್ಟೆ ಅದಕ್ಕೆ ಇನ್ನಷ್ಟು ಅರ್ಥ...

ಕುಂದಾನಗರಿ ಬೆಳಗಾವಿಯಲ್ಲಿ ಹುಟ್ಟಿ ಮಾಯಾನಗರಿ ಬೆಂಗಳೂರಿನಲ್ಲಿ ಆಗ ತಾನೆ ನೌಕರಿಗೆ ಸೇರಿದ್ದೆ. ಹಾಸನದ ರಘುನಂದನನೊಟ್ಟಿಗೆ 2012ರಲ್ಲಿ ಮದುವೆಯಾದೆ. ಹೊಸ ಜೀವನ. ತುಂಬು ಕುಟುಂಬ. ಕೆಲಸಕ್ಕೆ ಸೇರುವ ಯೋಚನೆಯೂ ಇರಲಿಲ್ಲ. ಹಾಗಾಗಿ, ಹೊಸ ಸ್ನೇಹಿತರ ಭೇಟಿ, ಕಾರ್ಯಕ್ರಮಗಳ ತಿರುಗಾಟ.. ಹೀಗೆ ದಿನಗಳು ಉರುಳಿತು.

ಆಗ ಹೋದಲೆಲ್ಲ ಅನ್ಯರಿಂದ ಧುತ್ತನೆ ಎದುರಾಗುತ್ತಿದ್ದದ್ದು ‘ಗುಡ್‌ ನ್ಯೂಸ್ ಇಲ್ವಾ’ ಅನ್ನೋ ಪ್ರಶ್ನೆ. ಬೇರೆಯವರ ವೈಯಕ್ತಿಕ ಬದುಕಿನ ಬಗ್ಗೆ ಜನರಿಗೆ ಯಾಕಿಷ್ಟು ಆಸಕ್ತಿ ಇರುತ್ತೆ ಅನ್ನೋದು ಈವರೆಗೂ ಬಿಡಿಸಲಾಗದ ಒಗಟು.

ಈ ಮಧ್ಯೆ ಗುಡ್‌ನ್ಯೂಸ್‌ಗೆ ರೆಡಿಯಾದೆವು. ಅದೇ ದಿನ ಸಂಜೆ ನಮ್ಮ ಅಮ್ಮ(ಅತ್ತೆ) ಸಿಹಿ ಹಂಚಿ ಸಂಭ್ರಮಿಸಿದರು. ದೇಹ ತಾಯ್ತನದ ಬದಲಾವಣೆಗೆ ಒಗ್ಗಿತು. ಮೂಡ್‌ ಸ್ವಿಂಗ್‌ ನಡುವೆಯೂ ಕಂದನ ಬಗ್ಗೆ ನಿರೀಕ್ಷೆ ಹೆಚ್ಚಿತು. ಆದರೆ, ಗರ್ಭಿಣಿಯಾದ ಸಂಭ್ರಮ ಬಹುಕಾಲ ಉಳಿಯಲಿಲ್ಲ. ಮೂರು ತಿಂಗಳಿಗೆ ನಾನು ನನ್ನ ಕನಸನ್ನು ಕಳೆದು ಕೊಂಡಿದ್ದೆ. ಹೀಗೆ ಸತತವಾಗಿ ಆರು ಬಾರಿ ಹೊಟ್ಟೆಯೊಳಗಿದ್ದ ಭ್ರೂಣಗಳು ತಂತಾನೇ ಜಾರಿ ಹೊರಬಂದಿದ್ದವು. ಈಗಲೂ ಆ ಮಕ್ಕಳೆಲ್ಲ ಹುಟ್ಟಿದ್ದರೆ ನಾನು ಆರು ಮಕ್ಕಳ ತಾಯಿಯಾಗಿರುತ್ತಿದ್ದೆ.

ಈ ಮಧ್ಯೆ ಎಷ್ಟೋ ಚಿಕಿತ್ಸೆಗಳು ನಡೆದವು. ಜತೆಗೆ ದೈವ ಬಲಕ್ಕಾಗಿ ಹರಕೆಯ ಮೊರೆ ಹೋದೆ.ಪ್ರತಿ ಬಾರಿ 45ನೇ ದಿನಕ್ಕೆ ಸರಿಯಾಗಿ ಮಗುವಿಗೆ ಹೃದಯಬಡಿತ ಗೋಚರಿಸುವಾಗ ಪಡುತ್ತಿದ್ದ ಸಂತಸ ಮೂರು ತಿಂಗಳ ಸ್ಕ್ಯಾನಿಂಗ್‌ನಲ್ಲಿ ಇಲ್ಲವಾಗುತ್ತಿತ್ತು.

ಈ ನಡುವೆ ಆತ್ಮೀಯಳೊಬ್ಬಳು ‘ಮಗು ಮಾಡಿ ಕೊಡ್ತೀನಿ ಕಣೇ. ನೀನೆ ಅದರ ಅಮ್ಮನಾಗು’ ಅಂತ ಹೇಳಿದಳು. ನಮ್ಮವರದೇ ಅನ್ನೋ ಸಮಾಧಾನ ಇತ್ತು. ಆದರೆ, ಆ ಪ್ರಕ್ರಿಯೆ ಮುಂದುವರಿಯಲೇ ಇಲ್ಲ.

ಹೀಗೆ ದೈಹಿಕ ಕಷ್ಟ, ಮಾನಸಿಕ ನೋವು, ಹಿಂಸೆ, ಜನರ ಪ್ರಶ್ನೆ ಎಲ್ಲದರ ಮಧ್ಯೆ ಒಂದು ಹೆಣ್ಣು ಮಗುವನ್ನೇ ದತ್ತು ತೆಗೆದುಕೊಳ್ಳಬೇಕೆಂದು ಗಟ್ಟಿ ನಿರ್ಧಾರ ಮಾಡಿದೆವು. ಈ ನಿರ್ಧಾರ ಮಾಡಿದಾಗ ನನಗೆ 26, ರಘುವಿಗೆ 30 ವರ್ಷ. ಮದುವೆಯಾಗಿ 6 ವರ್ಷ ಸಂದಿತ್ತು. ಸುಮ್ಮನೆ ಕಾಲಹರಣ ಮಾಡಿ ಮುಂದೆಂದೋ ದತ್ತು ಪಡೆಯುವ ಬದಲು ಈಗಲೇ ತೆಗೆದುಕೊಳ್ಳುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದೆವು.

ಮತ್ತದೇ ಜನರ ಪ್ರಶ್ನೆಗಳು. ‘ಯಾಕೆ ಇಷ್ಟು ಬೇಗ ಈ ನಿರ್ಧಾರ. ಇನ್ನೂ ಕಾಯಬಹುದಿತ್ತು, ಡಾಕ್ಟರ್‌ ಬದಲಾಯಿಸಿ, ಈ ದೇವರಿಗೆ ಹರಕೆ ಹೊತ್ತ್ಕೊಳ್ಳಿ, ನಾಟಿ ಔಷಧದಿಂದ ಸರಿ ಹೋಗುತ್ತೆ, ಈ ಪಥ್ಯ ಮಾಡಿ, ಹೊಸ ತಂತ್ರಜ್ಞಾನದಿಂದ ಮಗು ಪಡೀಬಹುದು’ ಹೀಗೆ ಹೆಜ್ಜೆ ಹೆಜ್ಜೆಗೂ ಸಲಹೆ ಸಿಗುತ್ತಿತ್ತು.

‘ಪ್ಲೀಸ್ ಸ್ಟಾಪ್ ಆಲ್ ದೀಸ್..’ ಅಂತ ಗಟ್ಟಿಯಾಗಿ ತಿರುಗಿ ಬಿದ್ದೆ. ಅಲ್ಲಿಗೆ ಜನರ ಬಾಯಿ ಮುಚ್ಚಿ ಹೋಯಿತು. ಕುಟುಂಬದ ಪ್ರೋತ್ಸಾಹ ನಮ್ಮನ್ನು ಇನ್ನಷ್ಟು ಗಟ್ಟಿಯಾಗಿಸಿತು.

ದತ್ತು ಪಡೆಯುವ ಪ್ರಕಿಯೆ ನಡೆಯಿತು ಹೀಗೆ....

ಕಾನೂನು ಪ್ರಕಾರ CARA ವೆಬ್‌ಸೈಟ್‌ ಮೂಲಕ ದತ್ತು ಪ್ರಕ್ರಿಯೆ ನಡೆಸುವುದು ಸರಿಯಾದ ಕ್ರಮ. ನಾವು ಅದರ ಮೂಲಕವೇ ನೋಂದಣಿ ಮಾಡಿ ಮಗಳ ಬರುವಿಕೆಗೆ ಎರಡೂವರೆ ವರ್ಷ ಕಾದೆವು.

‘ಲೀಗಲ್ ಅಡಾಪ್ಷನ್‘ ಎನ್ನುವುದು ಸುಲಭವಾದ ವಿಧಾನ; ಆದರೆ, ಅದು ಗೊತ್ತಿದ್ದವರಿಗೆ ಮಾತ್ರ. ಪಾಪ ನಿರಕ್ಷರರಿಗೆ ಇದು ಕಬ್ಬಿಣದ ಕಡಲೆ.

ನಿಯಮ ಏನು ಹೇಳುತ್ತೆ?

ಎಲ್ಲರೂ ಹೇಳ್ತಾರೆ ‘ನೀವು ದತ್ತು ತೊಗಳಬೇಕಾದ್ರೆ ನಿಮ್ಮ ಆಸ್ತಿ ಆ ಮಗುವಿನ ಹೆಸರಿಗೆ ಆಗಬೇಕು’ ಅಂತ. ಆದರೆ, ದತ್ತು ಪ್ರಕ್ರಿಯೆಯಲ್ಲಿ ಈ ತರಹದ ನಿಯಮ ಇಲ್ಲ. ಆದರೆ, ತಂದೆಯ ವರಮಾನ ನೋಡುತ್ತಾರೆ. ಕಾರಣ, ಆ ಕುಟುಂಬಕ್ಕೆ, ಮಗುವಿನ ಪೋಷಣೆ ಮಾಡಲು ಶಕ್ತಿ ಇದೆಯಾ ಎಂದು ಖಚಿತಪಡಿಸಿ ಕೊಳ್ಳುವುದಕ್ಕಾಗಿ. ಈ ಮೊದಲೇ ಮಗು ಅನಾಥವಾಗಿ ಆಶ್ರಮ ಸೇರಿರುತ್ತದೆ. ಮತ್ತೊಮ್ಮೆ ಅದಕ್ಕೆ ತೊಂದರೆಯಾಗಬಾರದು ಎಂಬುದು ಈ ನಿಯಮದ ಹಿಂದಿನ ಉದ್ದೇಶ.

ನೋಂದಣಿಯಾಗಿ ಎರಡೂವರೆ ವರ್ಷಗಳ ನಂತರ ಮಗು ಆಗಮನದ ಸಂದೇಶ ಬಂತು.ಮನೆಯವರ ಸಂತಸ ಹೇಳತೀರದು. ಇಂಥ ದಿನಗಣನೆಯ ಸಮಯದಲ್ಲಿಯೂ ಪರಿಚಯಸ್ಥರೊಬ್ಬರು ‘ಇನ್ನೂ ಸಮಯವಿದೆ ಯೋಚಿಸಿ. ಈ ದೇವಸ್ಥಾನದಲ್ಲಿ ಹರಕೆ ಮಾಡಿಕೊಂಡರೆ ನಿಮ್ಮದೇ ಮಗು ಪಡೆಯಬಹುದು’ ಎಂಬ ಆಲೋಚನೆ ಮುಂದಿಟ್ಟರು. ನನ್ನ ಉತ್ತರ ಸ್ಪಷ್ಟವಾಗಿತ್ತು. ‘ಅದೇ ದೇವರ ಅನುಗ್ರಹದಿಂದ ನನ್ನ ಮಗಳು ನಾಲ್ಕಾರು ದಿನಗಳಲ್ಲಿ ಮನೆಗೆ ಬರುತ್ತಿದ್ದಾಳೆ’ ಎಂದು ಅವರಿಗೆ ಹೇಳಿದೆ !

ಹೀಗೆ ಅಮ್ಮನಾದ ಬಗೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ನನಗೊಂದು ಅಲೌಕಿಕತೆಯೂ ಆಧ್ಯಾತ್ಮಿಕತೆಯೂ ಕಾಣುತ್ತಿದೆ.ನಮ್ಮ ಮಗು ಮೂರು ತಿಂಗಳ ಕಾಲ ಶ್ರೀಗಳೊಬ್ಬರ ಆಶ್ರಯ, ಆರೈಕೆಯಲ್ಲಿ ಬೆಳೆದಿತ್ತು. ನಂತರವೇ ನನ್ನ ಮಡಿಲ ಸೇರಿತು. ಮನೆಗೆ ಬಂದಾಗ ಅವಳನ್ನು ಅವಳ ಚಿಕ್ಕಪ್ಪ –ಚಿಕ್ಕಮ್ಮ, ಅಣ್ಣ ಬಹಳ ಅದ್ದೂರಿಯಾಗಿ ಬರಮಾಡಿಕೊಂಡಿದ್ದರು. ಈಗ ಅವಳಿಗೆ ಒಂದೂವರೆ ವರ್ಷ. ಅವಳು ಬಂದ ಮೇಲೆ ಪ್ರತಿ ದಿನವೂ ಸಡಗರವೇ.

ಮಕ್ಕಳು ಪಡೆಯುವ ವಿಚಾರದಲ್ಲಿ ನನ್ನಂತೆ ಹಲವರಿಗೆ ಗೊಂದಲವಿದ್ದಿರಬಹುದು. ಹಲವು ಚಿಕಿತ್ಸೆಗೆ ಒಳಗಾಗಿ ಅದು ಫಲಪ್ರದವಾಗದೇ ನೋವು ಅನುಭವಿಸಿರಬಹುದು. ಜನರ ಕುಹುಕವನ್ನು ಪಕ್ಕಕ್ಕಿಟ್ಟು ದತ್ತು ಪ್ರಕ್ರಿಯೆಯತ್ತ ಮನಸ್ಸು ಮಾಡುವುದು ಒಳಿತಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT