ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಟ್ಟು: ಏನಿದರ ಒಳಗುಟ್ಟು?

Last Updated 9 ಸೆಪ್ಟೆಂಬರ್ 2019, 5:16 IST
ಅಕ್ಷರ ಗಾತ್ರ

ಅನುದಿನದ ಪ್ರಯತ್ನ ಅವಳದ್ದು. ಪ್ರತಿಕ್ಷಣವೂ ಒಂದೇ ಕನಸು. ಅದುವೇ ಹಾಕಿ ಮ್ಯಾಚ್‌ನಲ್ಲಿ ಗೆಲ್ಲಬೇಕೆಂಬ ಕನಸು... ‘ಆ ದಿನ’ ಹತ್ತಿರ ಬಂದಂತೆಲ್ಲಾ ಆತಂಕ ಹೆಚ್ಚಾಗಿ ಮೌನಕ್ಕೆ ಮೊರೆ ಹೋಗಿದ್ದ ಅವಳಿಗೆ ‘ಅದೊಂದು’ ಕಾರಣಕ್ಕೆ ಗೆಲುವು ಮರೀಚಿಕೆಯಾಗತ್ತದೆಂಬ ಭಯ...

12ರ ಹರೆಯದ ಮಗಳ ಹೆಗಲ ಮೇಲೆ ಕೈಹಾಕಿದ ತಾಯಿ ಹೇಳ್ತಾಳೆ ‘ಮಗಳೇ. ನಿನ್ನ ತಯಾರಿಯಲ್ಲಿ ಒಂದು ವಿಷಯ ಹೇಳೋದನ್ನೇ ಮರೆತಿದ್ದೆ... ತಗೋ ಈ ಸ್ಯಾನಿಟರಿ ನ್ಯಾಪಕಿನ್. ಆ ದಿನಗಳಲ್ಲಿ ನಿನ್ನ ಆತ್ಮವಿಶ್ವಾಸಕ್ಕಾಗಿ. ಡೋಂಟ್ ವರಿ ನೀನು ಗೆಲ್ತೀಯಾ’ ಅಂದಾಗ ಮಗಳ ಮುಖದಲ್ಲಿ ನೂರು ವೋಲ್ಟ್‌ ಬೆಳಕಿನಷ್ಟು ಪ್ರಖರ ನಗು. ‘ನಿನ್ನ ಧ್ಯಾನಪಿರಿಯಡ್ಸ್ ಕಡೆ ಅಲ್ಲ, ಗುರಿ ಕಡೆಗೆ’ ಅನ್ನುವ ಮಿದು ನುಡಿಯೊಂದಿಗೆ ಮುಕ್ತಾಯವಾಗುವ ಸ್ಯಾನಿಟರಿ ಪ್ಯಾಡ್‌ನ ಈ ಜಾಹೀರಾತು, ಮುಟ್ಟಿನ ಪ್ರಥಮ ಅನುಭವ ಪಡೆಯುವ ಹೆಂಗಳೆಯರ ಮುಖದಲ್ಲಿ ನಗು ಅರಳಿಸುವ ಸಂದೇಶವಾಹಕವೂ ಹೌದು.

ಬದಲಾಗುತ್ತಿರುವ ಜಾಗತಿಕ ದಿನಮಾನಗಳಲ್ಲಿ ಹೆಣ್ತನದ ಪರಿಭಾಷೆಯೂ ಬದಲಾಗುತ್ತಿದೆ. ಅದರಲ್ಲೂ ಹೆಣ್ಣಿನ ಜೀವನದ ಅವಿಭಾಜ್ಯ ಅಂಗವೇ ಆಗಿರುವ ಮುಟ್ಟಿನ ವಿಷಯ ಈಗ ಜಾಗತಿಕವಾಗಿಯೂ ಮನಮುಟ್ಟುವ ವಿಷಯವಾಗಿಯೂ ಬದಲಾಗುತ್ತಿರುವುದು ಶುಭಸೂಚಕ. ‘ಆ ದಿನಗಳು’ ಎಂಬ ಶಬ್ದಗಳು ‘ಮುಟ್ಟು.. ಪಿರಿಯಡ್‌..’ಗೆ ಬದಲಾಗಿದ್ದು ‘ಹ್ಯಾಪಿ ಟು ಬ್ಲೀಡ್‌’ ಎಂಬ ಪುಟ್ಟ ಆಂದೋಲನದಿಂದ.

ಋತುಮತಿ, ಪುಷ್ಪವತಿ... ಹೀಗೆ ನಾನಾ ಹೆಸರುಗಳಿಂದ ಮೊದಲ ಮುಟ್ಟನ್ನು ಸಂಭ್ರಮಿಸುವ ಪರಿಪಾಠವೂ ನಮ್ಮಲ್ಲಿದೆ. ಮೊದಲ ಮುಟ್ಟು ಸಾಮಾನ್ಯವಾಗಿ ಹೆಣ್ಣಿಗೆ ಹರೆಯದ ಲಕ್ಷಣಗಳು ಕಾಣಿಸಿಕೊಳ್ಳುವ ವೇಳೆಗಾಗುವ ಸಹಜ ಕ್ರಿಯೆ. 11–12ರ ಹರೆಯದಲ್ಲಿ ಹೆಣ್ಣಿನ ಸೂಕ್ಷ್ಮ ಅಂಗಾಂಗಗಳಲ್ಲಿ ಬದಲಾವಣೆಯ ಮೂಲಕ ಮುಟ್ಟಿನ ಲಕ್ಷಣಗಳು ನಿಧಾನವಾಗಿ ಗೋಚರಿಸ
ತೊಡಗುತ್ತವೆ. ಇದಕ್ಕಾಗಿ ಆತಂಕ ಪಡುವ ಅಗತ್ಯ ಖಂಡಿತ ಇಲ್ಲ.

ಮುಟ್ಟಿನ ಮಾಹಿತಿಗೆ ಆ್ಯಪ್‌

ಮೊದಲ ಬಾರಿಗೆ ಮುಟ್ಟಾಗುವ ಹುಡುಗಿಯರಿಗೆ ಇರುವ ಆತಂಕ ಈ ದಿನಗಳಲ್ಲಿ ಅಷ್ಟಾಗಿ ಇಲ್ಲ. ಮುಟ್ಟಿನ ಸ್ವಚ್ಛತೆ, ಸ್ಯಾನಿಟರಿ ನ್ಯಾಪಕಿನ್ ಬಳಕೆ ಕುರಿತು ತಿಳಿಸುವ ಹಲವು ಆ್ಯಪ್‌ಗಳಿವೆ. ನಗರ ಪ್ರದೇಶದ ಕೆಲವು ಶಾಲೆಗಳಲ್ಲಿ ಹದಿಹರೆಯದ ಹುಡುಗಿಯರಿಗೆ ಮೊದಲ ಮುಟ್ಟನ್ನು ಸಮರ್ಥವಾಗಿ ಎದುರಿಸುವ ಕುರಿತು ತಿಳಿ ಹೇಳುವ ಆಪ್ತ ಸಮಾಲೋಚಕರಿದ್ದಾರೆ. ಹುಡುಗರಿಗೂ ಈ ಬಗ್ಗೆ ತಿಳಿವಳಿಕೆ ಹೇಳುವ ಪ್ರಯತ್ನಗಳು ನಿಜಕ್ಕೂ ಉತ್ತಮ ಬೆಳವಣಿಗೆ. ಹಲವು ಶಾಲೆಗಳಲ್ಲಿ ಸ್ಯಾನಿಟರಿ ವೆಂಡಿಂಗ್ ಮಷಿನ್ ಕೂಡಾ ಇವೆ. ಆ ದಿನಗಳಲ್ಲಾಗುವ ಮಾನಸಿಕ ಏರಿಳಿತಗಳ ಕುರಿತು ತಿಳಿ ಹೇಳುವ ತರಗತಿಗಳನ್ನೂ ನಡೆಸಲಾಗುತ್ತದೆ. ಅಂತೆಯೇ ಮಹಿಳೆಯರು ಹೆಚ್ಚಾಗಿರುವ ಕಚೇರಿಗಳಲ್ಲಿ ಸ್ವಚ್ಛವಾಗಿರುವ ರೆಸ್ಟ್ ರೂಮ್‌ಗಳು, ಸ್ಯಾನಿಟರಿ ವೆಂಡಿಂಗ್ ಮಷಿನ್, ಮುಟ್ಟಿನ ನೋವು ನಿವಾರಣೆಗೆ ಬೇಕಾದ ಹಾಟ್‌ವಾಟರ್ ಬ್ಯಾಗ್, ಗುಳಿಗೆಗಳ ಸೌಕರ್ಯವೂ ಇದೆ.

ಅಪ್ಪಂದಿರಿಗೂ ಬೇಕು ಕಾಳಜಿ

ಬಹುತೇಕ ತಾಯಂದಿರು ತಮ್ಮ ಹೆಣ್ಣುಮಕ್ಕಳಲ್ಲಿ ಹರೆಯದ ಲಕ್ಷಣಗಳು ಕಾಣಿಸತೊಡಗಿದಂತೆ ಮುಟ್ಟಿನ ಬಗ್ಗೆ ಪ್ರಾಥಮಿಕ ತಿಳಿವಳಿಕೆ ಹೇಳುವ ವಾಡಿಕೆ ಇದೆ. ಎದೆಯ ಭಾಗ ಉಬ್ಬುವುದು, ಕಂಕುಳಲ್ಲಿ ಕೂದಲ ಬೆಳವಣಿಗೆ, ಖಾಸಗಿ ಭಾಗದಲ್ಲಿ ಬಿಳಿಯ ಲೋಳೆಪೊರೆ ಕಾಣಿಸಿಕೊಳ್ಳುವುದು...ಇವೆಲ್ಲಾ ಮುಟ್ಟಾಗುವ 6 ತಿಂಗಳು ಮುನ್ನ ಕಾಣಿಸಿಕೊಳ್ಳುವ ಲಕ್ಷಣಗಳು. ಇವುಗಳನ್ನು ಅರಿತ ಕೆಲವು ಕಿಶೋರಿಯರು ಮುಂಜಾಗ್ರತೆಯಾಗಿ ಬ್ಯಾಗ್‌ನಲ್ಲಿ ಸ್ಯಾನಿಟರಿ ಪ್ಯಾಡ್‌ ಇಟ್ಟುಕೊಂಡು ಹೋಗುವುದೂ ಇದೆ. ಇಷ್ಟೆಲ್ಲಾ ಅರಿವಿದ್ದರೂ ಕೆಲವೊಮ್ಮೆ ನೈರ್ಮಲ್ಯ ಮತ್ತು ಹಾರ್ಮೋನ್‌ಗಳ ಏರುಪೇರಿನಿಂದ ಆಗುವ ಮಾನಸಿಕ ತಾಕಲಾಟಗಳನ್ನು ಹೇಳಿಕೊಳ್ಳದೇ ಒದ್ದಾಡುವುದೂ ಇದೆ. ಇಂಥ ಸಮಯದಲ್ಲಿ ತಾಯಿ (ತಂದೆಯ ಬಳಿಯೂ) ಇಲ್ಲವೇ ಆತ್ಮೀಯರ ಬಳಿ ಭಾವನೆಗಳನ್ನು ಹಂಚಿಕೊಂಡು ಮನಸು ನಿರಾಳ ಮಾಡಿಕೊಳ್ಳುವುದು ಉತ್ತಮ.

ಸ್ವಚ್ಚ ಪರಿಸರವುಳ್ಳ ಟಾಯ್ಲೆಟ್ ಬಳಸುವುದು, ಪೌಷ್ಟಿಕ ಆಹಾರ ಸೇವನೆ, ಶುದ್ಧ ನೀರು ಕುಡಿಯುವುದು, ಸ್ಯಾನಿಟರಿ ನ್ಯಾಪ್‌ಕಿನ್‌, ಕಪ್‌ ಮೊದಲಾದವುಗಳನ್ನು ಬಳಸುವುದು ಸೇರಿದಂತೆ ಮನಸಿಗೆ ಹಿತವಾಗುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಮುಟ್ಟಿನ ದಿನಗಳನ್ನು ಎದುರಿಸುವ ಸಕಾರಾತ್ಮಕ ಚಟುವಟಿಕೆಗಳು.

ಹಿಂದೆ ಸರಿದ ಮೈಲಿಗೆ

ಉತ್ತರ ಕರ್ನಾಟಕದ ಕೆಲವೆಡೆ ಮೊದಲ ಬಾರಿಗೆ ಋತುಮತಿಯಾಗುವ ಹೆಣ್ಣುಮಕ್ಕಳನ್ನು ಒಂದು ತಿಂಗಳ ಕಾಲ ಮನೆಯ ಕೆಲಸದಿಂದ ಮುಕ್ತಿ ನೀಡಿ, ಆಕೆಗೆ ಅಗತ್ಯದ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಅಷ್ಟೆ ಅಲ್ಲ, ಸಂಜೆಯ ಹೊತ್ತು ಮನೆಯ ಹಜಾರದಲ್ಲಿ ಅವಳನ್ನು ಅಲಂಕರಿಸಿ ಕೂರಿಸಿ ಆರತಿ ಮಾಡಿ, ಊರಿನ ಹೆಂಗಳೆಯರು ಜನಪದ ಗೀತೆಗಳನ್ನು ಹಾಡಿ ಸಂಭ್ರಮಿಸಲಾಗುತ್ತದೆ. (ಇದು ಹೆಣ್ಣೊಬ್ಬಳು ಮದುವೆಗೆ ತಯಾರಾದಳು ಎನ್ನುವ ಸಂದೇಶ ಸಾರುವ ವಾಹಕ ಕೂಡ).ಕೆಲವು ಸಮುದಾಯಗಳ ಹೆಣ್ಣುಮಕ್ಕಳಲ್ಲಿ ಈ ಹಿಂದೆ ಮೈಲಿಗೆಯಂಬಂತೆ ಕಾಣಲಾಗುತ್ತಿದ್ದ ಮುಟ್ಟಿನ ಪದ್ಧತಿಯೀಗ ತುಸು ರಿಲ್ಯಾಕ್ಸ್ ಪಡೆದುಕೊಂಡಿದೆ.

ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯದ ವಿಷಯದಲ್ಲಿ ಗ್ರಾಮೀಣರಷ್ಟೇ ಅಲ್ಲ ಕೆಲವು ನಗರವಾಸಿ ಮಹಿಳೆಯರೂ ಹಿಂದೆ ಇದ್ದಾರೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಕೆಲ ಜಿಲ್ಲೆಗಳಲ್ಲಿ ಇಂದಿಗೂ ಕೆಲವರು ಮುಟ್ಟಿನ ಸಂದರ್ಭದಲ್ಲಿ ಬೂದಿ, ಕೊಳಕು ಬಟ್ಟೆ ಬಳಸುವ ವಾಡಿಕೆ ಇರುವುದು ಆತಂಕಕಾರಿ ಎನ್ನುತ್ತಾರೆ ಬುಡಕಟ್ಟುಗಳಲ್ಲಿ ಮುಟ್ಟಿನ ಆಚರಣೆ ಕುರಿತು ಸಂಶೋಧನೆ ಕೈಗೊಂಡಿರುವ ಜ್ಯೋತಿ ಹಿಟ್ನಾಳ್.

ಜೀವವೊಂದನ್ನು ಸೃಷ್ಟಿಸುವ ಸಾಮರ್ಥ್ಯ ನೀಡುವ ಮುಟ್ಟು ಹೆಣ್ಣಿಗೆ ಹೊರೆಯಾಗಬೇಕಿಲ್ಲ. ಅದು ಹೆಮ್ಮೆಯಾಗಬೇಕಿದೆ. ಈ ನಿಟ್ಟಿನಲ್ಲಿ ಮೊದಲ ಮುಟ್ಟಿನ ಹಂತದಿಂದಲೇ ಕಿಶೋರಿಯರನ್ನು ಮಾನಸಿಕ ಮತ್ತು ಸಾಮಾಜಿಕವಾಗಿ ತಯಾರು ಮಾಡುವ ತುರ್ತಿದೆ. ಅವಳ ಪಾಲಿಗೆ ‘ಆ ದಿನಗಳು’ ಸುದಿನಗಳಾಗಲಿ.

ಮೂಢನಂಬಿಕೆಗಳು

ಮುಟ್ಟಿನ ಮೂಢನಂಬಿಕೆಗಳನ್ನು ತೊರೆಯುವಲ್ಲಿ ಮಾಧ್ಯಮಗಳೂ ಹಿಂದೆ ಬಿದ್ದಿಲ್ಲ. ನಟ ಅಕ್ಷಯ್ ಕುಮಾರ್ ಅಭಿನಯದ ‘ಪ್ಯಾಡ್‌ಮ್ಯಾನ್’ ಸಿನಿಮಾ ವಿಭಿನ್ನ ಕಥಾಹಂದರದ ಕಾರಣಕ್ಕಾಗಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ‘ಪಿರಿಯಡ್ಸ್: ಎಂಡ್ ಆಫ್ ಸೆಂಟೆನ್ಸ್‌’ ಕಿರುಚಿತ್ರ, 91ನೇ ಆಸ್ಕರ್ ಪ್ರಶಸ್ತಿಯ ಕಿರುಚಿತ್ರ ವಿಭಾಗದಲ್ಲಿ ಪ್ರಶಸ್ತಿಯನ್ನೂ ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT