ಶುಕ್ರವಾರ, ನವೆಂಬರ್ 22, 2019
26 °C

ಮೇಕಪ್‌ಗೆ ಪರ್ಯಾಯ ಮೈಕ್ರೊ ಬ್ಲೇಡಿಂಗ್‌

Published:
Updated:

ಲೇಯರ್‌ ಸದ್ಯದ ಫ್ಯಾಷನ್‌ ಟ್ರೆಂಡ್‌. ಅದರಲ್ಲೂ ಈಗ ಹವಾಮಾನ ಬದಲಾವಣೆಯ ಪರ್ವಕಾಲ. ಜನವರಿ ಮಧ್ಯಭಾಗದವರೆಗೂ ನೀವು ಬ್ಲೇಝರ್‌ನಂತಹ ಲೇಯರ್‌ ಧರಿಸಿ ಬೆಚ್ಚನೆಯ ಅನುಭವ ಪಡೆಯಬಹುದು. ಫ್ಯಾಷನ್‌ ಲೋಕದಲ್ಲಿ ಈಗ ಯುವತಿಯರ ತರಾವರಿ ಬ್ಲೇಝರ್‌ಗಳು ದಾಂಗುಡಿಯಿಡುತ್ತಿದ್ದು, ಪ್ರಯೋಗಶೀಲತೆ ಹುಮ್ಮಸ್ಸಿರುವವರು ಧರಿಸಿ ಮೆರೆಯಬಹುದು.

ರೂಪ, ಬಣ್ಣ, ದೇಹದ ಒಟ್ಟಾರೆ ಸೌಂದರ್ಯ ಹುಟ್ಟಿನಿಂದಲೇ ಬರುತ್ತದೆ; ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬುದು ಈಗ ಹಳೆಯ ಮಾತಾಯಿತು. ಆಧುನಿಕ ತಂತ್ರಜ್ಞಾನ, ತರಹೇವಾರಿ ಕ್ರೀಂ, ಲೋಷನ್‌ ತ್ವಚೆಯ ಬಣ್ಣವನ್ನು ಮಾತ್ರವಲ್ಲ, ಮುಖದ ಅಂದವನ್ನು ಕೂಡ ಬದಲಾಯಿಸಿಬಿಡುತ್ತವೆ. ಕಾಸ್ಮೆಟಾಲಜಿ ಎನ್ನುವುದು ಬಹು ದೊಡ್ಡ ಕ್ಷೇತ್ರವಾಗಿ ಬೆಳೆದಿದ್ದು, ಅಂಗಾಂಗಗಳ ಡೊಂಕನ್ನು ತಿದ್ದಿ ತೀಡಿ ಸರಿಪಡಿಸುವ ಪ್ಲಾಸ್ಟಿಕ್‌ ಸರ್ಜರಿ, ಚರ್ಮದ ನೆರಿಗೆಯನ್ನು ತೆಗೆದು ಹಾಕಿ ವಯಸ್ಸನ್ನು ಮರೆಮಾಚುವ ಬೊಟಾಕ್ಸ್‌ ಚುಚ್ಚುಮದ್ದು, ತ್ವಚೆಯ ಮೇಲ್ಪದರವನ್ನು ತೆಗೆದು ಹಾಕುವ ‘ಡರ್ಮಾಬ್ರೇಸಿನ್‌’, ಕೂದಲು ಕಸಿ.. ಹೀಗೆ ವಿವಿಧ ಚಿಕಿತ್ಸೆಗಳು ಸಾಮಾನ್ಯರ ಕೈಗೆ ಎಟಕುವಷ್ಟು ಬೆಲೆಯಲ್ಲಿ ಕೂಡ ಲಭ್ಯ.

ಇದಕ್ಕೆ ಇತ್ತೀಚಿನ ಸೇರ್ಪಡೆ ಅರೆ ಶಾಶ್ವತ ಮೇಕಪ್‌. ಯಾವುದೇ ಗಾಯ, ಹೊಲಿಗೆ, ಚುಚ್ಚುಮದ್ದು, ನೋವಿನ ಸಮಸ್ಯೆಯಿಲ್ಲದೇ ಮುಖದ ಸೌಂದರ್ಯವನ್ನು ಇಮ್ಮಡಿಗೊಳಿಸುವ ಈ ತಂತ್ರಜ್ಞಾನವು ಕೇವಲ ಸೆಲೆಬ್ರಿಟಿಗಳಲ್ಲಿ ಮಾತ್ರವಲ್ಲ, ನಗರದ ಉದ್ಯೋಗಸ್ಥ ಮಹಿಳೆಯರಲ್ಲಿ ಕೂಡ ಜನಪ್ರಿಯವಾಗಿದೆ. ಕಚೇರಿಗೆ ಹೊರಡುವ ಧಾವಂತದಲ್ಲಿ ಮೇಕಪ್‌ ಮಾಡಿಕೊಳ್ಳಲು ಸಮಯವಿಲ್ಲ, ರಾತ್ರಿ ವಾಪಸ್‌ ಆದಾಗ ನಿದ್ದೆಯ ಮತ್ತಿನಲ್ಲಿ ಆ ಮೇಕಪ್‌ ತೆಗೆಯುವ ರಗಳೆಯಿಲ್ಲ ಎಂಬ ಶಿಫಾರಸು ಈ ಹೊಸ ತಂತ್ರಜ್ಞಾನಕ್ಕೆ.

ಉದಾಹರಣೆಗೆ ತುಟಿ ಹೇಗೆಯೇ ಇರಲಿ, ಬಿರಿದ ಚೆಂಗುಲಾಬಿ ಪಕಳೆಯಂತೆ ಮಾಡುವ ಶಕ್ತಿ ಈ ತಂತ್ರಜ್ಞಾನಕ್ಕಿದೆ. ಅರಳಿದ ರೆಪ್ಪೆಗಳು, ದಟ್ಟವಾಗಿ ಬಾಗಿದಂತೆ ಕಾಣುವ ಹುಬ್ಬು, ನೆರಿಗೆ, ಕಲೆಯಿಲ್ಲದೆ ಸ್ವಚ್ಛವಾಗಿ ಹೊಳೆಯುವ ಕೆನ್ನೆ... ಹೀಗೆ ಮುಖದ ಒಟ್ಟಾರೆ ಸೌಂದರ್ಯಕ್ಕೆ ಹೆಚ್ಚು ಸಮಯ ಕಳೆಯದೆ ಐದಾರು ವರ್ಷಗಳ ಕಾಲ ಅದನ್ನು ಉಳಿಸಿಕೊಳ್ಳಬಹುದು ಕೂಡ. ಕೆಲವರು ಇದಕ್ಕೆ ಹಚ್ಚೆ ಹಾಕುವುದು ಎಂದೂ ಕರೆಯುವುದುಂಟು. ಆದರೆ ಹಚ್ಚೆಯಲ್ಲಿ ಬಣ್ಣದ ಶಾಯಿ ಬಳಸಿದರೆ, ಈ ಅರೆ ಶಾಶ್ವತ ಮೇಕಪ್‌ನಲ್ಲಿ ವರ್ಣದ್ರವ್ಯವನ್ನು ಬಳಸಿ, ಮೈಕ್ರೊಬ್ಲೇಡಿಂಗ್‌ ಎಂಬ ತಂತ್ರಜ್ಞಾನದ ಮೊರೆ ಹೋಗಲಾಗುವುದು.

‘ವರ್ಣದ್ರವ್ಯದ ಕೆಲವು ಅಂಶಗಳನ್ನು ಚರ್ಮದ ಪದರಿನೊಳಗೆ ಸೇರಿಸಿ ಇಂತಹ ಅದ್ಭುತ ಬದಲಾವಣೆ ಮಾಡಬಹುದು’ ಎನ್ನುತ್ತಾರೆ ಚರ್ಮ ಮತ್ತು ಕೇಶ ತಜ್ಞ ಡಾ.ಎಸ್‌.ಎಲ್‌.ಅಬ್ರಹಾಂ.

ಚಿಕಿತ್ಸೆ ಹೇಗೆ?
ಈ ಬಗೆಯ ಚಿಕಿತ್ಸೆಯಿಂದ 2– 10 ವರ್ಷಗಳವರೆಗೂ ನೀವು ಲಾಭ ಪಡೆಯಬಹುದು. ಇದು ವರ್ಣದ್ರವ್ಯ ಮತ್ತು ಚಿಕಿತ್ಸೆಗೆ ಬಳಸಲಾದ ಯಂತ್ರೋಪಕರಣಗಳನ್ನು ಅವಲಂಬಿಸಿದೆ. ಉದಾಹರಣೆಗೆ ಹುಬ್ಬನ್ನು ಅಂದಗೊಳಿಸುವ ಪ್ರಕ್ರಿಯೆ ಅತ್ಯಂತ ನಾಜೂಕಾಗಿದ್ದು, 2–3 ವರ್ಷಗಳಲ್ಲಿ ಮಾಯವಾಗಬಹುದು. ಹಚ್ಚೆ ಹಾಕಲು ಬಳಸುವ ಎಲೆಕ್ಟ್ರಿಕ್‌ ಸಾಧನವನ್ನೇ ಇಲ್ಲಿ ಬಳಸುತ್ತಾರೆ. ಯಾವ ಜಾಗದಲ್ಲಿ ಚಿಕಿತ್ಸೆ ನೀಡಲಾಗುವುದೋ ಅಲ್ಲಿ ಮರಗಟ್ಟಿಸುವ ಲೋಷನ್‌ ಹಚ್ಚಿಕೊಂಡು ಬ್ರಷ್‌ ಮೂಲಕ ಸಾವಯವ ವರ್ಣದ್ರವ್ಯ ತೂರಿಸುತ್ತಾರೆ. ಅಂದರೆ ನಿಮಗೆ ಹುಬ್ಬು ದಟ್ಟವಾಗಿಲ್ಲ ಎಂದುಕೊಳ್ಳಿ. ಆಗ ಕಪ್ಪು ಬಣ್ಣದಲ್ಲಿ ಕೂದಲಿನ ಮಧ್ಯೆ ಇರುವ ಜಾಗದಲ್ಲಿ ಗೆರೆಯನ್ನು ಮೂಡಿಸಲಾಗುವುದು. ಇದನ್ನೇ ಮೈಕ್ರೊಬ್ಲೇಡಿಂಗ್‌ ಎನ್ನುವುದು. ಇದರಿಂದ ಯಾವುದೇ ನೋವಿನ ಅನುಭವ ಆಗಲಾರದು.

ಇದೇ ರೀತಿ ತುಟಿಗೆ ಕೂಡಾ ಚಿಕಿತ್ಸೆ ನೀಡಬಹುದು. ತುಟಿಯ ಅಂಚಿನಲ್ಲಿ ದಟ್ಟ ವರ್ಣ, ಮಧ್ಯದಲ್ಲಿ ತೆಳು ರಂಗು ಬಳಸಿ ತುಟಿ ತಂಬಿಕೊಂಡಂತೆ ಕಾಣಿಸುವ ಚಾಕಚಕ್ಯತೆ ಈ ಚಿಕಿತ್ಸೆಯಲ್ಲಿದೆ.

ಚಿಕಿತ್ಸೆಯ ನಂತರ..
ಒಮ್ಮೆ ಚಿಕಿತ್ಸೆ ನೀಡಿದ 10–12 ದಿನಗಳವರೆಗೆ ಯಾವುದೇ ರೀತಿಯ ಮಾಯಿಶ್ಚರೈಜರ್‌, ಮೇಕಪ್‌ ಅಥವಾ ಕ್ಲೆನ್ಸರ್‌ ಬಳಸಬಾರದು. ಒಂದು ತಿಂಗಳವರೆಗೆ ಆ ಜಾಗವನ್ನು ತುರಿಸುವುದು ಕೂಡಾ ನಿಷಿದ್ಧ. ಒಂದು ವಾರದವರೆಗೆ ನೀರು ಕೂಡ ತಾಗಿಸಬಾರದು ಎನ್ನುತ್ತಾರೆ ತಜ್ಞರು. ಮೊದಮೊದಲು ದಟ್ಟ ವರ್ಣದಲ್ಲಿ ಕಾಣುವ ಚಿಕಿತ್ಸೆ ಪಡೆದುಕೊಂಡ ಜಾಗ ಕ್ರಮೇಣ ಸಹಜ ಸ್ಥಿತಿಗೆ ಮರಳುವುದು.

ಮುಖದ ಮೇಲೆ ತೊನ್ನಿನ ಕಲೆ, ಗಾಯದ ಕಲೆಯನ್ನು ಕೂಡ ಕೆಲವುಮಟ್ಟಿಗೆ ಇದರಿಂದ ಮರೆಮಾಚಬಹುದು. ಆದರೆ ಕೆಲವೇ ವರ್ಷಗಳಲ್ಲಿ ಈ ವರ್ಣದ್ರವ್ಯ ಮಾಸುವುದರಿಂದ ಮೊದಲಿನ ಸ್ಥಿತಿಗೇ ಹೋಗಬಹುದು.

ಈ ಸೌಂದರ್ಯ ಚಿಕಿತ್ಸೆಗೆ ಒಳಗಾಗುವ ಮುನ್ನ ಕೆಲವು ಎಚ್ಚರಿಕೆ ತೆಗೆದುಕೊಳ್ಳುವುದು ಒಳಿತು. ನುರಿತ ತಜ್ಞರ ಬಳಿಗೇ ಹೋಗಿ. ಏನಾದರೂ ಅಲರ್ಜಿಯಿದ್ದರೆ ಹೇಳಿಕೊಳ್ಳಿ.

ಪ್ರತಿಕ್ರಿಯಿಸಿ (+)