ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿಸ್‌ ದಿವಾ-ಯುನಿವರ್ಸ್‌ ಇಂಡಿಯಾ’ ರೇಸ್‌ನಲ್ಲಿ ಕನ್ನಡತಿ!

Last Updated 31 ಜನವರಿ 2020, 19:30 IST
ಅಕ್ಷರ ಗಾತ್ರ

ದೇಶದ ಫ್ಯಾಶನ್‌ ಜಗತ್ತು ಕುತೂಹಲದಿಂದ ಎದುರು ನೋಡುತ್ತಿರುವ ಲಿವಾ ‘ಮಿಸ್‌ ದಿವಾ–ಮಿಸ್‌ ಯುನಿವರ್ಸ್‌ ಇಂಡಿಯಾ 2020’ ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿರುವ 20 ಸುಂದರಿಯರು ಬೆಂಗಳೂರಿಗೆ ಬಂದಿಳಿದಿದ್ದಾರೆ.

ಎಲೆಕ್ಟ್ರಾನಿಕ್‌ ಸಿಟಿ ವೆಲಂಕಣಿ ಟೆಕ್‌ಪಾರ್ಕ್‌ನಲ್ಲಿರುವ ದಿ ಒಟೆರಾ ಹೋಟೆಲ್‌ನಲ್ಲಿ ಫೆಬ್ರುವರಿ 1ರಂದು (ಶನಿವಾರ) ರಾತ್ರಿ ನಡೆಯಲಿರುವ ಫ್ಯಾಶನ್‌ ಷೋದಲ್ಲಿ ಕ್ಯಾಟ್‌ವಾಕ್‌ ಮಾಡಲು ಸಜ್ಜಾಗಿದ್ದಾರೆ.

ನಟಿ ರಾಗಿಣಿ ದ್ವಿವೇದಿ, ಕ್ರಿಕೆಟರ್‌ ಅಭಿಷೇಕ್‌ ಶರ್ಮಾ, ನಟ, ಗಾಯಕ ಬೆಹ್ರಮ್‌ ಸಿಂಗಾಪೂರಿಯಾ, ಕೋರಿಯೊಗ್ರಾಫರ್‌ ತುಷಾರ್‌ ಕಾಲಿಯಾ ಮತ್ತು ಮಿಸ್ಟರ್ ಇಂಡಿಯಾ ರಾಹುಲ್‌ ರಾಜಶೇಖರನ್‌ ನಾಯರ್‌ ತೀರ್ಪುಗಾರರಾಗಿರುತ್ತಾರೆ.

ಫೆ. 22ರಂದು ಮುಂಬೈನಲ್ಲಿ ನಡೆಯಲಿರುವ ‘ಮಿಸ್‌ ದಿವಾ’ ಸ್ಪರ್ಧೆಗೂ ಮುನ್ನ ಫೈನಲಿಸ್ಟ್‌ಗಳ ತಂಡ ಬೆಂಗಳೂರು, ದೆಹಲಿ, ಜೈಪುರಕ್ಕೆ ಪ್ರವಾಸ ಕೈಗೊಂಡಿದೆ. ಇಲ್ಲಿ ನಡೆಯುವಫೋಟೊಶೂಟ್‌ ಮತ್ತು ಫ್ಯಾಶನ್‌ ಷೋಗಳಲ್ಲಿ ಇವರೆಲ್ಲರ ಪ್ರತಿಭೆ, ಸೌಂದರ್ಯ ಅನಾವರಣಗೊಳ್ಳಲಿದೆ.

ಅಪ್ಪಟ ಕನ್ನಡದ ಹುಡುಗಿ

‘ಮಿಸ್‌ ಯುನಿವರ್ಸ್‌ ಇಂಡಿಯಾ–2020’ ಸ್ಪರ್ಧೆಯ ಅಂತಿಮ ಸುತ್ತು ಪ್ರವೇಶಿಸಿರುವ 20 ಫೈನಲಿಸ್ಟ್‌ಗಳ ಪೈಕಿ ಕನ್ನಡದ ಹುಡುಗಿಯೂ ಇದ್ದಾಳೆ!ಬೆಂಗಳೂರಿನ 18ರ ಹರೆಯದ ಮುದ್ದು ಮುಖದ ಸುಂದರಿ ವೈಷ್ಣವಿ ಗಣೇಶ್‌ ವೈಲ್ಡ್‌ ಕಾರ್ಡ್‌ ಮೂಲಕಅಂತಿಮ ಸುತ್ತಿಗೆ ಎಂಟ್ರಿ ಪಡೆದಿದ್ದಾಳೆ.

‘ಮಿಸ್‌ ದೀವಾ’ ವಿಜೇತರು ‘ಮಿಸ್‌ ಯುನಿವರ್ಸ್‌’ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. 1994ರಲ್ಲಿ ಸುಷ್ಮಿತಾ ಸೇನ್‌ ಮತ್ತು 2000ರಲ್ಲಿ ಲಾರಾ ದತ್ತಾ ‘ಮಿಸ್‌ ಯುನಿವರ್ಸ್‌’ ಕಿರೀಟ ಧರಿಸಿದ್ದರು. ಈ ಬಾರಿಕನ್ನಡತಿಗೆ ‘ಮಿಸ್‌ ಯುನಿವರ್ಸ್‌’ ಸ್ಪರ್ಧೆಗೆ ಆಯ್ಕೆಯಾಗುವ ಅಪರೂಪದ ಅವಕಾಶ ದೊರೆತಿದೆ.

ನೀಳಕಾಯದ ಕಿರಿಯ ಸ್ಪರ್ಧಿ

ಸ್ಪರ್ಧೆಯಲ್ಲಿರುವ 20 ಜನರ ಪೈಕಿ ವೈಷ್ಣವಿಯೇ ಅತ್ಯಂತ ಕಿರಿಯ ಸ್ಪರ್ಧಿ.5.10 ಅಡಿ ಎತ್ತರದ ಈಕೆ ಉಳಿದೆಲ್ಲ ಸ್ಪರ್ಧಿಗಳಿಗಿಂತ ಎತ್ತರದ ಹುಡುಗಿ. ನೀಳಕಾಯವೇ ಈಕೆಯ ಪ್ಲಸ್‌ ಪಾಯಿಂಟ್‌. ಪದವಿ ಓದುತ್ತಿರುವ ವೈಷ್ಣವಿ ಉತ್ತಮ ಬ್ಯಾಡ್ಮಿಂಟನ್‌ ಮತ್ತು ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿ ಕೂಡ ಹೌದು. ಉತ್ತಮ ಕ್ರೀಡಾಪಟುವಾಗುವ ಭರವಸೆ ಮೂಡಿಸಿದ್ದ ಹುಡುಗಿ ಫ್ಯಾಶನ್‌ ಲೋಕ ಪ್ರವೇಶಿಸಿದ್ದು ಆಕಸ್ಮಿಕ.

ಈಕೆ ತೊಡುವ ಎಲ್ಲ ಆಕರ್ಷಕ ಉಡುಪುಗಳಿಗೂ ಆಕೆಯ ತಾಯಿಅನಿತಾ ಎಚ್‌.ಎಂ. ಫ್ಯಾಶನ್‌ ಡಿಸೈನರ್‌. ಈ ಸ್ಪರ್ಧೆಗೆ ಐದು ಹೊಸ ಆಕರ್ಷಕ ಗೌನ್‌, ಹತ್ತು ಕಾಕ್‌ಟೇಲ್‌ ಡ್ರೆಸ್‌, ಫಾರ್ಮಲ್ಸ್‌, ಸೆಮಿ ಫಾರ್ಮಲ್ಸ್‌, ಬಣ್ಣ, ಬಣ್ಣದ ಹ್ಯಾಟ್‌, ಪಾರ್ಟಿವೇರ್‌ ಡ್ರೆಸ್‌ಗಳನ್ನು ವಿನ್ಯಾಸ ಮಾಡಿದ್ದಾರೆ.

ಸಾಂಪ್ರದಾಯಿಕ ಮತ್ತು ಮಾಡ್ ಡ್ರೆಸ್‌ಗಳಿಗೆ ಹೇಳಿ ಮಾಡಿಸಿದಂತಹ ಮೈಮಾಟ ಹೊಂದಿರುವ ಈಕೆ ನೇಟಿವ್‌ ಮತ್ತು ಕಲ್ಚರಲ್‌ ಡ್ರೆಸ್‌ ರೌಂಡ್‌ನಲ್ಲಿ ಕನ್ನಡ ನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಡ್ರೆಸ್‌ ತೊಡಲಿದ್ದಾಳೆ. ಹೊಯ್ಸಳ ಶಿಲ್ಪಕಲಾ ವೈಭವದ ಹೆಗ್ಗುರುತಾಗಿರುವ ದರ್ಪಣ ಸುಂದರಿಯ ವೇಷ ತೊಡಲಿದ್ದಾಳೆ.

ಬೆಂಗಳೂರು ಬೆಡಗಿ ಅದೃಷ್ಟ!

ಬೆಂಗಳೂರು ಸೇರಿದಂತೆ ದೇಶದ 10 ನಗರಗಳಲ್ಲಿನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಲಿವಾ ‘ಮಿಸ್‌ ದಿವಾ 2020’ ಸ್ಪರ್ಧೆಯ ಮೊದಲ ಆಡಿಷನ್‌ ನಡೆದಿತ್ತು.ಮುಂಬೈ ಅಂತಿಮ ಆಡಿಷನ್‌ನಲ್ಲಿ ಪಾಲ್ಗೊಂಡಿದ್ದ ಐದು ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳಲ್ಲಿ 19 ಜನ ಆಯ್ಕೆಯಾದರು.

ಒಬ್ಬ ಸ್ಪರ್ಧಿಯನ್ನು ವೈಲ್ಡ್‌ಕಾರ್ಡ್‌ ಮೂಲಕಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಐವರು ಸ್ಪರ್ಧಿಗಳಲ್ಲಿ ಆ ಅದೃಷ್ಟ ಒಲಿದು ಬಂದದ್ದು ಬೆಂಗಳೂರಿನ ಬೆಡಗಿ ವೈಷ್ಣವಿಗೆ. ಅತಿ ಹೆಚ್ಚು ಓಟ್‌ ಮತ್ತು ತೀರ್ಪುಗಾರರ ಅಂಕ ಪಡೆದ ಆಕೆ ಈಗ ಅಂತಿಮ ಸುತ್ತಿನಲ್ಲಿದ್ದಾಳೆ. ಮಿಸ್‌ ದಿವಾ ಕಿರೀಟ ಧರಿಸಲು ಒಂದು ಹೆಜ್ಜೆ ಮಾತ್ರ ಬಾಕಿ ಉಳಿದಿದೆ!

‘ಮಿಸ್‌ ಯುನಿವರ್ಸ್‌’ ಸ್ಪರ್ಧೆಯಲ್ಲಿ ಭಾರತವನ್ನು ಯಾರು ಪ್ರತಿನಿಧಿಸುತ್ತಾರೆ ಎನ್ನುವುದು ಫೆ. 22ರಂದು ಮುಂಬೈನಲ್ಲಿ ನಡೆಯುವ ಅಂತಿಮ ಸ್ಪರ್ಧೆಯಲ್ಲಿ ನಿರ್ಧಾರವಾಗಲಿದೆ.

ಸ್ಪರ್ಧಿಗಳ ಆಯ್ಕೆಗೆ ಓಟಿಂಗ್‌ ಆರಂಭವಾಗಲಿದ್ದು ವೈಷ್ಣವಿಯನ್ನು ಬೆಂಬಲಿಸಲು ಸಾರ್ವಜನಿಕರು ಆಕೆಯ ಇನ್‌ಸ್ಟಾಗ್ರಾಂ ಖಾತೆ vaishnavi_ganesh_nayaka ಫಾಲೋ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT