
‘ಅತ್ತೆ–ಸೊಸೆ ಸಂಬಂಧ ಹಾವು–ಮುಂಗುಸಿಯಂತೆ’ ಎಂಬ ರೂಢಿಗತ ಭಾವನೆಯನ್ನೇ ನಮ್ಮ ಚಲನಚಿತ್ರಗಳು ಹಾಗೂ ಕಿರುತೆರೆ ಧಾರಾವಾಹಿಗಳು ಸಹ ಚಿತ್ರಿಸುತ್ತಾ ಬಂದಿವೆ. ಆದರೆ, ಇದೀಗ ಕನ್ನಡದ ಕೆಲವು ಪ್ರಮುಖ ಧಾರಾವಾಹಿಗಳು ಅಂಥದ್ದೊಂದು ಭಾವನೆಯನ್ನು ಬುಡಮೇಲು ಮಾಡಲು ಹೊರಟಿವೆ. ಅತ್ತೆ–ಸೊಸೆ ನಡುವೆ ಅನನ್ಯ ಬಾಂಧವ್ಯ, ಅನ್ಯೋನ್ಯತೆ, ಅನುಪಮ ಸಂಬಂಧ ಸೃಷ್ಟಿಸಿ ಪ್ರೇಕ್ಷಕರಲ್ಲಿ ಸಂಚಲನ ಮೂಡಿಸುತ್ತಿವೆ. ಸಂಬಂಧಗಳಿಗೆ ಸೌಹಾರ್ದದ ಭಾಷ್ಯ ಬರೆಯುತ್ತಿರುವ ಈ ಹೊಸ ಟ್ರೆಂಡ್ ಕುರಿತು, ಮನೆಮಾತಾಗಿರುವ ಕೆಲವು ಧಾರಾವಾಹಿಗಳ ಅತ್ತೆ–ಸೊಸೆ ಪಾತ್ರಧಾರಿಗಳು ಇಲ್ಲಿ ಮಾತನಾಡಿದ್ದಾರೆ.
ನಮ್ಮ ಧಾರಾವಾಹಿಯಲ್ಲಿ ಅತ್ತೆ– ಸೊಸೆಯರದು ಹಿತವಾದ ಸಂಬಂಧ. ಅತ್ತೆ ಗಿರಿಜಾ ಪಾತ್ರಕ್ಕೆ ಜನ ತುಂಬಾ ಪ್ರೀತಿ ತೋರುತ್ತಿದ್ದಾರೆ. ಮನೆ ಮುರಿಯುವ ಪಾತ್ರಗಳು ಜನರಿಗೂ ಇಷ್ಟವಿಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಮದುವೆಯಾಗಿ ಗಂಡನ ಮನೆಗೆ ಬರುವ ಹೆಣ್ಣು ಕೆಟ್ಟವಳಾಗೇನೂ ಇರುವುದಿಲ್ಲ. ಅವಳಿಗೆ ಅವಳದ್ದೇ ಆದ ಜವಾಬ್ದಾರಿ ಇರುತ್ತದೆ. ಆದರೆ ಅತ್ತೆ ಮನೆಯ ವಾತಾವರಣ, ಅಲ್ಲಿನವರು ನಡೆಸಿಕೊಳ್ಳುವ ರೀತಿಯಿಂದ ಅವಳ ಜೀವನದೃಷ್ಟಿ ಬದಲಾಗುತ್ತದೆ. ಅತ್ತೆ–ಮಾವ ಸಹ ಕೆಟ್ಟವರಾಗಿ ಇರುವುದಿಲ್ಲ. ಅವರ ವಯಸ್ಸಿನ ಅಂತರ, ಜೀವನಶೈಲಿಯ ಬದಲಾವಣೆ, ಯೋಚನೆ ಎಲ್ಲವೂ ಸೊಸೆಯ ಮೇಲೆ ಪರಿಣಾಮ ಬೀರಿ ಪರಸ್ಪರ ಭಿನ್ನಾಭಿಪ್ರಾಯ ಮೂಡಬಹುದು. ಆದರೆ, ಪ್ರೀತಿ, ತಾಳ್ಮೆ, ತ್ಯಾಗ ಅನ್ನುವ ತಳಪಾಯ ಇದ್ದರೆ ಎಲ್ಲವೂ ಸುಗಮವಾಗುತ್ತದೆ ಅನ್ನುವುದನ್ನು ಈ ಧಾರಾವಾಹಿಯಲ್ಲಿ ತೋರಿಸಲಾಗಿದೆ. ಮುಖ್ಯವಾಗಿ ಅತ್ತೆ–ಸೊಸೆ ‘ನಾನು’ ಅನ್ನುವ ಅಹಂ ಬಿಟ್ಟರೆ ಎಲ್ಲವೂ ಸರಿಯಾಗುತ್ತದೆ.–ಅಮೃತಾ ನಾಯ್ಡು, ಅತ್ತೆ ‘ಗಿರಿಜಾ’ ಪಾತ್ರಧಾರಿ
ವೈಯಕ್ತಿಕವಾಗಿ ಹೇಳುವುದಾದರೆ, ನನಗೆ ಅತ್ತೆ ಅಲ್ಲ. ಹಾಗಾಗಿ, ಅತ್ತೆ–ಸೊಸೆಯ ಸಂಬಂಧ ಹೇಗಿರುತ್ತದೆ ಅನ್ನುವುದು ನನ್ನ ಅನುಭವಕ್ಕೆ ಬಂದಿಲ್ಲ. ಅತ್ತೆಯಂದಿರು ಹೀಗೆ ಇರುತ್ತಾರೆ ಎಂದು ಹೇಳುವುದನ್ನು ಕೇಳಿದ್ದೇನೆ. ನಾವು ಅತ್ತೆಯನ್ನು ಅಮ್ಮನ ಥರ ಎಂದು ಎಷ್ಟೇ ಅಂದುಕೊಂಡರೂ, ಅತ್ತೆಯಂದಿರಿಗೆ ಸ್ವಲ್ಪವಾದರೂ ಪೊಸೆಸಿವ್‌ನೆಸ್ ಇದ್ದೇ ಇರುತ್ತದೆ. ಇವಳು ಬಂದಳು, ಮಗ ಹೆಂಡತಿ ಕಡೆಗೆ ವಾಲಿಕೊಂಡ, ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾನೆ ಎಂದು ಅನ್ನಿಸಬಹುದು. ಆದರೆ, ನಮ್ಮ ಧಾರಾವಾಹಿಯಲ್ಲಿ ಸೊಸೆಗೆ ಮಗ ಸಹಾಯ ಮಾಡುತ್ತಿದ್ದರೆ ಅತ್ತೆ ಅಸೂಯೆ ಪಡುವುದಿಲ್ಲ. ಸೊಸೆಯನ್ನು ಮಗಳ ರೀತಿಯೇ ನಡೆಸಿಕೊಳ್ಳುತ್ತಾರೆ. ನಿಜಜೀವನದಲ್ಲಿ ಅತ್ತೆ ಹೀಗೆ ಇರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ನಾವಂತೂ ಪಾತ್ರ ಮಾಡುವಾಗ ತುಂಬಾ ಎಂಜಾಯ್ ಮಾಡುತ್ತೇವೆ. ಹೌದಲ್ಲ, ಅತ್ತೆ– ಸೊಸೆ ಅಂದರೆ ಹೀಗಿರಬೇಕಲ್ಲವೇ ಅನ್ನಿಸುತ್ತದೆ. ನನಗಂತೂ ಸ್ನೇಹಿತೆಯರಂತೆ ಇರುವುದು ಇಷ್ಟ. ಅತ್ತೆಯ ಸ್ಕಿನ್ ಕೇರ್‌ನಿಂದ ಹಿಡಿದು ಮನೆಯವರ ಹೆಲ್ತ್ ಕೇರ್ ತನಕ ಕಾಳಜಿ ವಹಿಸುವ ಪಾತ್ರ ಮೀನಾಳದ್ದು. ತುಂಬಾ ಜನ ‘ನಿಮ್ಮ ಥರ ಸೊಸೆ ಇರಬೇಕು’ ಅಂತ ಹೇಳುತ್ತಾರೆ. ಆದರೆ, ಸೊಸೆಯಷ್ಟೇ ಅಲ್ಲ ಅತ್ತೆ ಕೂಡ ಹಾಗೇ ಇರಬೇಕು. ಹಾಗಿದ್ದರೆ ಮಾತ್ರ ಅವರಿಬ್ಬರ ನಡುವೆ ಸ್ನೇಹ ಇರಲು ಸಾಧ್ಯ.ಮೇಘಶ್ರೀ ಎಸ್.ವಿ., ಸೊಸೆ ‘ಮೀನಾ’ ಪಾತ್ರಧಾರಿ
ಅತ್ತೆ– ಸೊಸೆ ನಡುವಿನ ಚಿಕ್ಕಪುಟ್ಟ ಅಸಮಾಧಾನಗಳನ್ನು ಮನೆಯವರು ತಳ್ಳಿಹಾಕುವುದೋ ನಿರ್ಲಕ್ಷ್ಯ ಮಾಡುವುದೋ ಹೆಚ್ಚು. ಇಂತಹ ಅಸಮಾಧಾನಗಳೇ ಬೆಳೆದು ಮುಂದೆ ಮನೆ ಮುರಿಯುವಷ್ಟು ದೊಡ್ಡವಾಗಬಹುದೇನೊ. ಆದರೆ, ನಮ್ಮ ಧಾರಾವಾಹಿಯಲ್ಲಿನ ಅತ್ತೆ ಹಾಗಲ್ಲ. ಸೊಸೆಗೆ ಮಾರ್ಗದರ್ಶನ ಮಾಡಿ ಕಲಿಸುತ್ತಾರೆ. ವಿಶೇಷವೆಂದರೆ, ಈ ಧಾರಾವಾಹಿಯಲ್ಲಿ ಅತ್ತೆ, ಮಾವ ಒಳ್ಳೆಯವರು, ಗಂಡನೇ ಕೆಟ್ಟವನು. ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದೆ ಮನೆಯಿಂದ ಹೊರಹಾಕುವವನು. ಅವನನ್ನು ವಿರೋಧಿಸುವ ನಾನು ಒಂದು ಹಂತದಲ್ಲಿ ಮನೆಯನ್ನೇ ಬಿಟ್ಟುಹೋಗಿ ಅತ್ತೆ–ಮಾವನ ಜತೆಗೆ ಇರುತ್ತೇನೆ. ನಿಜಜೀವನದಲ್ಲೂ ಇಂಥ ಒಳ್ಳೆಯ ಅತ್ತೆಯರು ಇರುತ್ತಾರೆ. ಅದರಲ್ಲಿ ಅನುಮಾನವಿಲ್ಲ. ಇದಕ್ಕೆ ನನ್ನ ಸ್ವಂತ ಅತ್ತೆಯೇ ಉದಾಹರಣೆ. ಅಭಿಪ್ರಾಯ ಭೇದ ಎಲ್ಲ ಕುಟುಂಬಗಳಲ್ಲೂ ಇರುತ್ತದೆ. ‘ಓ ನಮ್ಮತ್ತೆ... ನಮ್ಮಮ್ಮನೇ’ ಅಂತ ಹೇಳುತ್ತಾ ಹಗ್ ಮಾಡಿಕೊಂಡು ಇನ್‌ಸ್ಟಾಗ್ರಾಂನಲ್ಲಿ ಹಾಕುವ ರೀತಿಯ ತೋರಿಕೆಯ ಅತ್ತೆ ನನ್ನವರಲ್ಲ. ನಮ್ಮಿಬ್ಬರಲ್ಲಿ ಪರಸ್ಪರ ಅರ್ಥೈಸಿಕೊಳ್ಳುವ ಗುಣ ಇದೆ. ಸಹಜವಾಗಿಯೇ ನನಗಿಂತ ಹಿರಿಯರಾದ ನಮ್ಮತ್ತೆ ಕಂಡಷ್ಟು ಬದುಕನ್ನು ನಾನು ಕಂಡಿಲ್ಲ. ಅವರಿಗೆ ಮಾಡಲು ಬರುವಷ್ಟು ಅಡುಗೆ, ಅವರಿಗೆ ಗೊತ್ತಿರುವಷ್ಟು ವಿಚಾರಗಳು ನನಗೆ ಗೊತ್ತಿಲ್ಲ. ಅತ್ತೆಗಿಂತ ನನಗೇ ಚೆನ್ನಾಗಿ ಗೊತ್ತಿದೆ ಅನ್ನುವಂಥ ಸ್ಪರ್ಧಾತ್ಮಕ ಮನೋಭಾವ ನನ್ನದಲ್ಲ. ಅವರಿಗೂ ಅಂಥ ಭಾವನೆ ಇಲ್ಲ.ಲಕ್ಷ್ಮಿ ಹೆಗಡೆ, ಸೊಸೆ ‘ವೀಣಾ’ ಪಾತ್ರಧಾರಿ
ಅತ್ತೆ– ಸೊಸೆ ಓಬಿರಾಯನ ಕಾಲದಲ್ಲಿ ಪರಸ್ಪರ ಡಾಮಿನೇಟ್ ಆಗಿರಬಹುದು. ಆದರೆ, ಈಗ ಕಾಲ ಬದಲಾಗಿದೆ. ಅತ್ತೆಯರು ಈ ಹಿಂದೆ ಸೀರೆ ಉಡುತ್ತಿದ್ದರು. ಆದರೆ, ಕೆಲವರು ಈಗ ಚೂಡಿದಾರ್, ಸ್ಕರ್ಟ್‌ಗೆ ಬಂದಿದ್ದಾರೆ. ಊಟ, ಉಡುಗೆಯಲ್ಲಿ ಆಧುನಿಕತೆ ರೂಢಿಸಿಕೊಂಡಂತೆ ಯೋಚನಾ ಧಾಟಿಯೂ ಆಧುನಿಕವಾಗಿ ಇರಬೇಕಲ್ಲವೇ? ಧಾರಾವಾಹಿಯಲ್ಲಿ ಅತ್ತೆಯಾಗಿ ನಾನು ಸೊಸೆಯರ ಮೇಲೆ ಅಧಿಕಾರ ಚಲಾಯಿಸುವುದಿಲ್ಲ, ಅಹಂ ಮೆರೆಯುವುದಿಲ್ಲ. ನನ್ನ ಪಾತ್ರದಂತೆಯೇ ನಿಜಜೀವನದಲ್ಲೂ ಎಲ್ಲ ಅತ್ತೆಯಂದಿರೂ ಇರಬೇಕು, ಜನ ಸಹ ನಮ್ಮನ್ನು ನೋಡಿ ಒಳ್ಳೆಯದನ್ನು ಅಳವಡಿಸಿಕೊಳ್ಳಬೇಕು ಎಂಬುದು ನನ್ನಾಸೆ. ಸೀರಿಯಲ್ ನೋಡಿ ಹೆಣ್ಣುಮಕ್ಕಳು ಹಾಳಾಗುತ್ತಾರೆ ಎಂದು ಈಚೆಗೆ ಅಧಿಕಾರಿಯೊಬ್ಬರು ಹೇಳಿದ್ದನ್ನು ಕೇಳಿಸಿಕೊಂಡೆ. ಬಹುಶಃ ಅವರು ನಮ್ಮ ಧಾರಾವಾಹಿಯ ಲಕ್ಷ್ಮಿ–ವೀಣಾಳ ಪಾತ್ರ ನೋಡಿದ್ದರೆ ಹಾಗೆ ಹೇಳುತ್ತಿರಲಿಲ್ಲ. ನಿಜಜೀವನದಲ್ಲಿ ನನಗೆ ಸಿಕ್ಕ ಅತ್ತೆ ಒಳ್ಳೆಯವರು. ನನ್ನ ಮದುವೆಯಾಗಿ 30 ವರ್ಷ ಅವರು ನಮ್ಮೊಂದಿಗಿದ್ದರು. ನಾನು ಸಿನಿಮಾ ಕ್ಷೇತ್ರದಲ್ಲಿದ್ದರೂ ನನ್ನತ್ತೆ ಒಂದು ದಿನವೂ ‘ಎಲ್ಲಿಗೆ ಹೋಗ್ತೀಯಾ, ಶೂಟಿಂಗ್ ಎಲ್ಲಿ, ಯಾವ ಪಾತ್ರ, ಯಾವ ರೀತಿಯ ಬಟ್ಟೆ ಹಾಕ್ತೀಯಾ’ ಅಂತೆಲ್ಲ ಕೇಳಲೇ ಇಲ್ಲ. ನನ್ನ ಮಗ ಚಿಕ್ಕವನಿದ್ದಾಗ ನಾನು ಅವಿವಾಹಿತೆ, ನಾಯಕಿಯ ಪಾತ್ರ ಮಾಡುತ್ತಿದ್ದೆ. ಆಗೆಲ್ಲ ತಾಳಿ, ಕಾಲುಂಗುರ ಬಿಚ್ಚಿಟ್ಟು ಶೂಟಿಂಗ್‌ಗೆ ಹೋಗುತ್ತಿದ್ದೆ. ಆಗಲೂ ಅವರು ‘ಯಾಕೆ ಇದನ್ನೆಲ್ಲ ತೆಗೆದೆ?’ ಅಂತ ಕೇಳಲಿಲ್ಲ. ಹಳ್ಳಿಯ ಹೆಣ್ಣುಮಗಳಾದರೂ ಅವರಲ್ಲಿ ವಿಶಾಲ ಮನೋಭಾವ, ಪ್ರಬುದ್ಧತೆ ಇತ್ತು. ನನ್ನ ವೃತ್ತಿಪರತೆ ಬಗ್ಗೆ ಅರಿವಿತ್ತು. ಅರ್ಥ ಮಾಡಿಕೊಳ್ಳುವ ಗುಣ, ತಾಳ್ಮೆ ಇದ್ದಲ್ಲಿ ಎಲ್ಲ ಅತ್ತೆ– ಸೊಸೆಯಂದಿರೂ ಗೆಳತಿಯರಂತೆ ಇರಬಹುದು.– ಮಾಧುರಿ, ಅತ್ತೆ ‘ಲಕ್ಷ್ಮಿ’ ಪಾತ್ರಧಾರಿ
ನಮ್ಮ ಧಾರಾವಾಹಿಯಲ್ಲಿ ಸೊಸೆ ಭಾಗ್ಯಾಗೆ ಅತ್ತೆ ಎಷ್ಟೇ ಬೈದರೂ ಅವಳಿಗೆ ಸ್ವಾವಲಂಬಿ ಜೀವನ ಕಲ್ಪಿಸುವ ಮಹದಾಸೆ ಅವರಿಗೆ ಇದೆ. ಮಗ ನಿರ್ಲಕ್ಷಿಸಿದ ಸೊಸೆಯ ಬಗ್ಗೆ ಅಪಾರವಾದ ಪ್ರೀತಿ ಇದೆ. ಸೊಸೆಯನ್ನು ಓದಿಸಲೇಬೇಕು ಎಂದು ಹಟ ತೊಟ್ಟು ಅವಳಿಗೆ ಶಿಕ್ಷಣ ಕೊಡಿಸುತ್ತಾರೆ. ಅವಳ ಜೀವನವನ್ನು ಸರಿ ಮಾಡಬೇಕು ಎಂದುಕೊಳ್ಳುತ್ತಾರೆ. ಅತ್ತೆ ಇಷ್ಟು ಪ್ರೀತಿಯಿಂದ ಸೊಸೆಯ ಪರವಾಗಿ ನಿಲ್ಲುವುದು ತೀರಾ ಅಪರೂಪ. ಮಗನನ್ನು ಬಿಟ್ಟುಬಿಡು, ಬೇರೆ ಮದುವೆ ಆಗು ಎಂಬ ಸಲಹೆಯನ್ನು ಯಾವ ಅತ್ತೆಯೂ ನೀಡುವುದಿಲ್ಲ. ಮಗ ಎಷ್ಟೇ ಕೆಟ್ಟವನಾಗಿದ್ದರೂ ಸೊಸೆ ಅವನ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗಲಿ ಎನ್ನುವ ಸ್ವಾರ್ಥವೇ ಹೆಚ್ಚಿನವರಲ್ಲಿ ತುಂಬಿರುತ್ತದೆ. ಆದರೆ ‘ನನ್ನ ಮಗನ ಜೊತೆ ನಿನ್ನ ಜೀವನ ಸರಿಹೋಗಲಿಲ್ಲ. ಅದಕ್ಕಾಗಿ ನಿನ್ನ ಬದುಕು ಹಾಳಾಗುವುದು ಬೇಡ. ನೀನು ಹೊಸ ಜೀವನ ಕಟ್ಟಿಕೊ’ ಎನ್ನುವ ವಿಶಾಲ ಮನೋಭಾವದ ಅತ್ತೆ ಇಲ್ಲಿದ್ದಾರೆ. ಇಂತಹ ಅತ್ತೆ ಸಮಾಜದಲ್ಲಿ ನಿಜವಾಗಿಯೂ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಭಾಗ್ಯಾ-ಕುಸುಮಾ ಸಂಬಂಧ ಸಮಾಜದಲ್ಲಿ ತುಂಬಾ ಪ್ರಭಾವ ಬೀರಿದೆ. ಭಾಗ್ಯಾ ಓದಲು ಶುರುಮಾಡಿದ ಮೇಲೆ ಅನೇಕರು ಮದುವೆಯ ನಂತರವೂ ತಮ್ಮ ಶಿಕ್ಷಣವನ್ನು ಮುಂದುವರಿಸಿದ್ದಾರೆ. ಪ್ರೇಕ್ಷಕರಿಂದ ಸ್ವತಃ ಈ ಮಾತನ್ನು ಕೇಳಿದ್ದೇನೆ. ಮಕ್ಕಳು ತಮ್ಮ ಅಮ್ಮಂದಿರಿಗೆ ಓದಿಸುತ್ತಿದ್ದೇವೆ ಎಂದೂ ಹೇಳಿದ್ದಾರೆ. ನಮ್ಮ ಧಾರಾವಾಹಿ ಮನರಂಜನೆಗೆ ಮಾತ್ರ ಅಲ್ಲದೆ, ಸಕಾರಾತ್ಮಕ ಪ್ರಭಾವವನ್ನೂ ಬೀರುತ್ತಿರುವುದು ನಿಜಕ್ಕೂ ಹೆಗ್ಗಳಿಕೆಯ ಸಂಗತಿ. ಒಳ್ಳೆಯ ಸಂದೇಶ ಕೊಡುವುದೇ ಇಲ್ಲಿನ ಉದ್ದೇಶ.– ಸುಷ್ಮಾ ರಾವ್, ಸೊಸೆ ‘ಭಾಗ್ಯಾ’ ಪಾತ್ರಧಾರಿ
ಅತ್ತೆ–ಸೊಸೆ ಗೆಳತಿಯರಂತೆಯೂ ಇರಬಹುದು ಎನ್ನುವುದನ್ನು ತೋರಿಸಿರುವುದು ನಮ್ಮ ಧಾರಾವಾಹಿಯ ಹೆಗ್ಗಳಿಕೆ. ಮಕ್ಕಳ ತಾಯಿ ಕೂಡ ಓದು ಮುಂದುವರಿಸಬಹುದು ಎನ್ನುವುದನ್ನು ಎತ್ತಿ ಹಿಡಿದಿರುವುದು ಈ ಕಥೆಯ ದೊಡ್ಡ ಮೈಲುಗಲ್ಲು ಎನ್ನುವುದನ್ನು ಮರೆಯುವಂತಿಲ್ಲ. ಬೇರೆ ಹೆಣ್ಣುಮಗಳನ್ನು ನಮ್ಮ ಮನೆಗೆ ಸೊಸೆಯನ್ನಾಗಿ ಕರೆತಂದಿರುವಾಗ ಆಕೆಯನ್ನೂ ನಮ್ಮ ಮಕ್ಕಳಂತೆಯೇ ನೋಡಬೇಕಲ್ಲವೇ? ಮನೆಯ ಯಜಮಾನಿಗೆ ತನ್ನ ಹೆಣ್ಣುಮಕ್ಕಳು ಜೀನ್ಸ್, ಸ್ಕರ್ಟ್ ಧರಿಸುವುದು ಸಹ್ಯವಾಗುತ್ತದೆ. ಆದರೆ ಅದನ್ನೇ ಸೊಸೆ ಹಾಕಿಕೊಂಡರೆ ಮಾತ್ರ ಮನೆಯ ಮರ್ಯಾದೆ ಏನಾಗುತ್ತದೋ ಎನ್ನುವ ಪ್ರಶ್ನೆ ಕಾಡುತ್ತದೆ. ನಮ್ಮ ಮನೆಯ ಹೆಣ್ಣುಮಕ್ಕಳೂ ನಾಳೆ ಮತ್ತೊಂದು ಮನೆಗೆ ಸೊಸೆಯರಾಗಿ ಹೋಗುತ್ತಾರೆ ಎಂದು ಯೋಚಿಸಿದರೆ ಸಂಬಂಧದ ಮಹತ್ವ ಗೊತ್ತಾಗುತ್ತದೆ. ಅತ್ತೆಯು ಸೊಸೆ ಮತ್ತು ತನ್ನ ಹೆಣ್ಣುಮಕ್ಕಳ ನಡುವೆ ತಾರತಮ್ಯ ತೋರಬಾರದು. ಅತ್ತೆ–ಸೊಸೆ ಸಂಬಂಧ ಕೌಟುಂಬಿಕ ಬಾಂಧವ್ಯಕ್ಕಿಂತ ನ್ಯಾಯ, ಅನ್ಯಾಯವನ್ನು ವಿವೇಚಿಸುತ್ತದೆ. ಇಲ್ಲಿ ಅತ್ತೆ ನ್ಯಾಯದ ಪರ ಹೋರಾಟಕ್ಕೆ ನಿಲ್ಲುತ್ತಾಳೆ. ಅದು ನ್ಯಾಯೋಚಿತ ಸಹ. ಸಂಬಂಧದಲ್ಲಿ ಮಗನೇ ಇರಬಹುದು. ಆದರೆ ಆತ ಸೊಸೆಗೆ ನಿಷ್ಠನಾಗಿ ಬದುಕುತ್ತಿಲ್ಲ. ಹೀಗಿರುವಾಗ ಸೊಸೆಗೆ ನ್ಯಾಯವನ್ನು ಕಲ್ಪಿಸಬೇಕಾದುದು ಅತ್ತೆಯ ಧರ್ಮ. ‘ಭಾಗ್ಯಲಕ್ಷ್ಮಿ’ ಜಾಗೃತಿ ಮೂಡಿಸುವ ಕಾರ್ಯಕ್ರಮ ಅಲ್ಲ. ಆದರೆ ಅದರ ಸೌಂದರ್ಯ ಇರುವುದು ಮನರಂಜನೆಯ ಜೊತೆಗೆ ಸಮಾಜಕ್ಕೆ ಸ್ಪೂರ್ತಿಯನ್ನು ತುಂಬುತ್ತಿರುವ ನೆಲೆಯಲ್ಲಿ.– ಪದ್ಮಜಾ ರಾವ್, ಅತ್ತೆ ‘ಕುಸುಮಾ’ ಪಾತ್ರಧಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.