ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ತೆ –ಸೊಸೆಯ ಸಂಬಂಧ ಕದನವಲ್ಲ, ಕವಿತೆ! ಗೀತಾ ಕುಂದಾಪುರ ಲೇಖನ

ಅತ್ತೆ –ಸೊಸೆಯ ಸಂಬಂಧ ಕದನವಲ್ಲ, ಕವಿತೆ! ಗೀತಾ ಕುಂದಾಪುರ ಲೇಖನ
Published 5 ಆಗಸ್ಟ್ 2023, 0:03 IST
Last Updated 5 ಆಗಸ್ಟ್ 2023, 0:03 IST
ಅಕ್ಷರ ಗಾತ್ರ

ಯಾವುದೇ ಸಂಬಂಧವಿರಲಿ ಅದರದ್ದೇ ಆದ ಮಧುರತೆಯಿರುತ್ತದೆ, ಪ್ರೀತಿಯ ಅಂಟಿನ ನಂಟಿರುತ್ತದೆ, ಪ್ರೀತಿ ಇದ್ದಲ್ಲಿ ಹಕ್ಕೊತ್ತಾಯ, ಅಭಿಪ್ರಾಯ ಹೇರುವಿಕೆ ಮುಂತಾದವುಗಳು ಬಂದೇ ಬರುತ್ತದೆ, ಆದರೊಂದಿಗೆ ಚಿಕ್ಕ, ಪುಟ್ಟ ಭಿನ್ನಾಭಿಪ್ರಾಯ, ಮನಸ್ತಾಪವೂ. ಸಂಬಂಧದಲ್ಲಿ ಉಂಟಾದ ಕಹಿ ಕಾಲ ಕಳೆದಂತೆ ಕಳೆಯುವುದೂ ಇದೆ, ಮೊಳೆತು ಕೊಳೆಯುವುದೂ ಇದೆ.

ಅತ್ಯಂತ ಹೆಚ್ಚು ಟೀಕೆಗೆ ಒಳಗಾದ ಸಂಬಂಧವೆಂದರೆ ಅತ್ತೆ ಸೊಸೆಯದು, ಅದು ಒಂದು ಪ್ರಾಂತ್ಯ, ಕಾಲ ಅಥವಾ ದೇಶಕ್ಕೆ ಸೀಮಿತವಾಗಿಲ್ಲ, ಸಾರ್ವತ್ರಿಕ ಎನ್ನುವಷ್ಟು ಸಾರಾ ಸಗಟಾಗಿದೆ. ಇದು ಪುರುಷ ಸಮಾಜದವರು ಹೊರಿಸಿದ ಹೊರೆಯೇ? ಇಲ್ಲಾ ಮಹಿಳೆಯರೇ ಇದಕ್ಕೆ ಕಾರಣರೇ? ಮಹಿಳೆಯರಿಗಂಟಿದ ಈ ಕಪ್ಪು ಚುಕ್ಕೆ ಯಾಕೆ ಮಾಸದು?

ಯಾವುದೇ ಧಾರ್ಮಿಕ ಗ್ರಂಥಗಳ ಪುಟ ಮೊಗಚಿದರೂ, ಇತಿಹಾಸದ ಪುಟಗಳಲ್ಲಿ ಹಣಕಿದರೂ ಅತ್ತೆ, ಸೊಸೆಯ ಜಗಳದ ಬಗ್ಗೆ ಎಲ್ಲೂ ಉದಾಹರಣೆ ಕಾಣಿಸುತ್ತಿಲ್ಲ. ಶತಕದಿಂದೀಚಿನ ಕೂಡು ಕುಟುಂಬದ ವ್ಯವಸ್ಥೆಯಲ್ಲಿ ಅತ್ತೆ, ಸೊಸೆಯ ಕದನ ಬಗ್ಗೆ ಹೆಚ್ಚು, ಹೆಚ್ಚು ಕೇಳಿ ಬಂತು, ಕುಟುಂಬ ವ್ಯವಸ್ಥೆ ಬದಲಾಗುತ್ತಿದ್ದಂತೆ ಸಂಬಂಧಗಳ ಆಯಾಮ ಬದಲಾಗುತ್ತಾ ಬಂದರೂ ಅತ್ತೆ, ಸೊಸೆ ಎಂದರೆ ಎರಡು ದ್ರುವಗಳು ಎಂದು ಚಿತ್ರಿಸುವುದನ್ನು ಬಿಟ್ಟಿಲ್ಲ. ಅತ್ತೆ-ಸೊಸೆಯ ವೈಮನಸ್ಸಿನ ವಿಚಾರವನ್ನು ತುಸು ಹೆಚ್ಚೇ ಬಣ್ಣ ಹಚ್ಚಿ ವೈಭವೀಕರಿಸಲ್ಪಟ್ಟಿದೆ.  

ಅತ್ತೆ, ಸೊಸೆಯನ್ನು ದೂರ ಮಾಡುವಲ್ಲಿ ನಮ್ಮ ಸಿರಿಯಲ್ಲುಗಳ ಕೈವಾಡ ಸಣ್ಣದಲ್ಲ, ಒಂದೇ ಅತ್ತೆ ಖಳನಾಯಕಿ, ಸೊಸೆ ಅಳುಬುರುಕಿ, ಇಲ್ಲ ಸೊಸೆ ಕ್ರೂರಿ, ಅತ್ತೆಯ ದಮನೀಯ ಸ್ಥಿತಿಯಲ್ಲಿರುತ್ತಾಳೆ, ಇದರ ಸುತ್ತವೇ ಕಥಾ ಹಂದರ ಹೆಣೆಯಲ್ಪಟ್ಟು ಅತ್ತೆ-ಸೊಸೆ ಸಂಬಂಧದ ವಿಚಾರದಲ್ಲಿ ಒಂದು ರೀತಿಯಲ್ಲಿ ಪೂರ್ವಗ್ರಹ  ಬೆಳೆಸಿಕೊಳ್ಳುತ್ತೇವೆ. ತಾಯಿ ಮಗಳ ಮಧ್ಯೆ ಬರುವ ಮನಸ್ತಾಪ ಕೆಲವೇ ದಿನಗಳಲ್ಲಿ ದೂರವಾಗಿ ಮತ್ತೆ ಮನಗಳು ಒಂದಾಗುತ್ತದೆ, ಅತ್ತೆ, ಸೊಸೆಯ ವಿಚಾರದಲ್ಲೂ ಹಾಗಾಗಬಹುದು ಪೂರ್ವಗ್ರಹವಿರದಿದ್ದರೆ.

ಹವ್ಯಾಸವಾಗಿ ನನ್ನ ಗೆಳತಿಯೋರ್ವಳು ಬರೆಯುತ್ತಿದ್ದಳು, ಅವಳು ಬರೆದ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು, ಫೇಸ್‌ ಬುಕ್ಕಿನಲ್ಲೂ ಆಕ್ಟೀವ್‌ ಆಗಿದ್ದು ತನ್ನ ಅಭಿಪ್ರಾಯಗಳನ್ನು ಯಾವ ಮುಲಾಜೂ ಇಲ್ಲದೆ ಬರೆದು ಸಾಕಷ್ಟು ಪ್ರಸಿದ್ಧಳಾಗಿದ್ದಳು. ಇತ್ತೀಚೆಗೆ ಪಕ್ಕನೆ ಸೈಲೆಂಟ್‌ ಆದಳು, ವಿಚಾರಿಸಿದಾಗ “ಸೊಸೆ ಹೆತ್ತಿದಾಳೆ ಕಣ್ರೀ, ಬಾಣಂತನದ ಕೆಲಸ, ಅವಳ ತಾಯಿ ಮನೆ ಹಳ್ಳಿಯಲ್ಲಿದೆ, ಹಾಗಾಗಿ ಬೆಂಗಳೂರಿನಲ್ಲೇ ಹೆತ್ತು 2 ವಾರಗಳ ನಂತರ ಅವಳೂರಿಗೆ ಹೋಗುವ ಪ್ಲಾನ್‌ ಇತ್ತು, ಕಡೆಗೆ ನಾನೇ ಬಾಣಂತನ ಮಾಡ್ತೀನಿ ಕಣೇ ಅಂತ ಇರಿಸಿಕೊಂಡಿದ್ದೀನಿ, ಮುಂದೆಯೂ ಬರೆಯಬಹುದು ಆದರೆ ಇಂತಹ ಸಮಯ ಮತ್ತೆ ಬಾರದು ಅಲ್ವಾ?” ಎಂದಾಗ ಗೆಳತಿಯ ಬಗ್ಗೆ ಹೆಮ್ಮೆ ಎನಿಸಿತು, ಇದು ಅತ್ತೆಯ ವಿಶಾಲ ಹೃದಯವನ್ನು ಸೂಚಿಸಿದರೆ ಆಧುನಿಕ ಸೊಸೆ ಕಡಿಮೆಯೇ?

ಪ್ರಶಸ್ತಿ ಸಮಾರಂಭವೊಂದರಲ್ಲಿ ಭೇಟಿಯಾದ ಸುಮಾರನ್ನು ಮಾತಾಡಿಸಿದೆ, ಎನ್ರೀ ನಾಲ್ಕು ವರ್ಷದ ಕೆಳಗೆ ನೀವು ಬರೆದದ್ದನ್ನು ಇಷ್ಟ ಪಟ್ಟೇ ಓದುತ್ತಿದ್ದೆ, ಕಡೆಗೆ ಪಕ್ಕನೆ ಕಣ್ಮರೆಯಾದವರು ಪುನಃ ಈ ವರ್ಷ ಮತ್ತೆ ಮಿಂಚುತ್ತಿದ್ದೀರಿ ಎಂದಾಗ, ಅತ್ತೆ ಬೆಡ್‌ ರಿಡನ್‌ ಆಗಿದ್ದರು, ಸಹಾಯಕ್ಕೆ ಕೆಲಸದವಳಿದ್ದರೂ ನನ್ನ ಮೇಲೂ ಜವಾಬ್ದಾರಿ ಇತ್ತು, ಹಾಗಾಗಿ ಬರವಣಿಗೆಗೆ ಫೋಕಸ್‌ ಮಾಡಲಾಗಲಿಲ್ಲ. 6 ತಿಂಗಳ ಕೆಳಗೆ ಅತ್ತೆ ತೀರಿಕೊಂಡರು, ಮತ್ತೆ ಬರೆಯಲು ಕೂತೆ ಎಂದರು, ಇಂತಹ ಘಟನೆಗಳು ಸಾಮಾನ್ಯ ಎನ್ನಿಸಿ ಎಲ್ಲೂ ದಾಖಲಾಗುವುದಿಲ್ಲ, ಅತ್ತೆ, ಸೊಸೆಗಾಗಿ ಅಥವಾ ಸೊಸೆ ಅತ್ತೆಯ ಸಹಾಯಕ್ಕೆ ನಿಂತಿದ್ದು ತ್ಯಾಗವೆನ್ನಿ, ಕರ್ತವ್ಯವೆನ್ನಿ ಅತ್ತೆ-ಸೊಸೆಯರ ಮಧುರ ಬಾಂಧವ್ಯಕ್ಕಂತೂ ಕನ್ನಡಿ ಹಿಡಿಯುತ್ತದೆ.

ಕೊರೋನಾ ಕೆಟ್ಟ ಕಾಲ ತಂದಿಕ್ಕಿತು, ಆದರೆ ಎಷ್ಟೋ ಮನೆಯಲ್ಲಿ ಅತ್ತೆ, ಸೊಸೆಯನ್ನು ಇನ್ನೂ ಹತ್ತಿರಕ್ಕೆ ತಂದಿದೆ. ನನ್ನ ಪರಿಚಯದ ರತ್ನಾ ಆಂಟಿ ಮತ್ತು ಗಂಡನಿಗೆ ವಯಸ್ಸಾಗಿದೆ, ಇಬ್ಬರು ಮಕ್ಕಳು, ಮಗ, ಮಗಳು, ಇಬ್ಬರಿಗೂ ಮದುವೆಯಾಗಿ ಬೇರೆ, ಬೇರೆ ಊರಿನಲ್ಲಿದ್ದಾರೆ. ಮಗ, ಸೊಸೆ ಇಬ್ಬರೂ ಕೆಲಸದಲ್ಲಿದ್ದಾರೆ, ಅವರಿಗೆ ಮೂರು ವರ್ಷದ ಮಗು, ಕೆಲಸಕ್ಕೆ ಹೋಗುವಾಗ ಮಗುವನ್ನು ಮೊದಲು ಡೇ ಕೇರನಲ್ಲಿ ಬಿಡುತ್ತಿದ್ದರು. ಕೊರೋನಾ ಹೆದರಿಕೆ ಹುಟ್ಟಿಸುತ್ತಾ ಬಂತು, ವರ್ಕ್‌ ಫ್ರಂ ಹೋಮ್‌ ಆಗಿ ಮೂವರೂ ಒಂದೇ ಸೂರಿನಡಿಯಲ್ಲಿ ದಿನದ 24 ಗಂಟೆಗಳು ಇದ್ದರೂ ಕೆಲಸ ಮಾಡುವಾಗ ಮಗುವನ್ನು ನೋಡಿಕೊಳ್ಳುವವರು ಯಾರು? ಮನಸ್ಸಿದ್ದರೆ ಖಂಡಿತ ಮಾರ್ಗವಿರುತ್ತದೆ, ಸೊಸೆ ಆಗಾಗ ವಿಡಿಯೋ ಕಾಲ್‌ ಮಾಡಿ ಮಗುವಿನ ಮುಂದೆ ಇಡುತ್ತಿದ್ದರು, ಅಜ್ಜ, ಅಜ್ಜಿ ವಿಡಿಯೋದಲ್ಲಿ ಮಗುವನ್ನು ಮಾತಾಡಿಸುತ್ತಾ, ಏನೇನೋ ಪ್ರಶ್ನೆಗಳನ್ನು ಕೇಳುತ್ತಾ, ಹಾಡು ಹೇಳುತ್ತಾ ಮಗುವನ್ನು ನೋಡಿಕೊಳ್ಳುತ್ತಿದ್ದರು, ಹೇಗಿದೆ ಟೆಕ್ನಾಲಜಿಯ ಸಹಾಯ ಹಾಗೂ ಸಂಬಂಧಗಳ ಮಧುರತೆ? ಇದು ಒಂದು ಮನೆಯ ಉದಾಹರಣೆ, ಇಂತಹದ್ದು ಎಷ್ಟೋ ಇವೆ.

ಈಗೀಗ ಒಂದೋ, ಎರಡೋ ಮಕ್ಕಳು, ಅಂತಹದ್ದರಲ್ಲಿ ಸೊಸೆಯನ್ನು ದೂರ ಮಾಡಿ ಮಗ, ಮೊಮ್ಮಕ್ಕಳಿಂದಲೂ ದೂರವಾಗುವ ಮೂರ್ಖತನವನ್ನು ಬುದ್ದಿವಂತ ಅತ್ತೆ ಮಾಡಲಾರಳು. ಹಾಗೆಯೇ ಸುಖವಿರಲಿ, ಕಷ್ಟವಿರಲಿ, ಎಲ್ಲಾ ಕಾಲದಲ್ಲೂ ಹೆಗಲುಗೊಡುವ ಅತ್ತೆಯಿಂದ ದೂರ ಓಡವ ಕೆಲಸವನ್ನು ಜಾಣ ಸೊಸೆ ಮಾಡಲಾರಳು.

ನಮ್ಮ ನೆಂಟರೊಬ್ಬರ ಮನೆಯ ಪೂಜೆಗೆ ಮಗ, ಸೊಸೆ, ಅತ್ತೆ ಬಂದಿದ್ದರು, ಯಾವುದೋ ಮಾತಿಗೆ ಸೊಸೆ ಪುಷ್ಪ ಎಂದರು “ನಾವು ಪೂಜೆ ಏನು ಮಾಡಿಸೋದಿಲ್ಲ, ಯಾವ ತೀರ್ಥಕ್ಷೇತ್ರಕ್ಕೂ ಹೋಗೋದಿಲ್ಲ, ಮನೆಯಲ್ಲಿ ಅತ್ತೆ ಇದ್ದಾರೆ ಅವರನ್ನು ನೋಡಿಕೊಂಡ್ರೆ ಸಾಕಲ್ವ?” ಎಂದಾಗ 90 ವರ್ಷದ ಹೇಮತ್ತೆಯ ಮುಖದಲ್ಲಿ ಕಂಡ ಸಂತೋಷ, ಕಣ್ಣ ಮಿಂಚು ಯಾವ ಮಾತು ಆಡದೆಯೂ ಎಲ್ಲವನ್ನೂ ಹೇಳುತ್ತಿತ್ತು.

ಗಂಡ, ಹೆಂಡತಿ, ಮಗು ಒಂದೇ ಸೂರಿನಡಿಯಲ್ಲಿದ್ದರೆ ಅದೇ ಕೂಡು ಕುಟುಂಬ ಎಂದು ಕುಹಕವಾಡುವ ಈ ಕಾಲದಲ್ಲಿ ವರ್ಕ್‌ ಫ್ರಂ ಹೋಂ ಎಂದು ಮನೆಯಲ್ಲೇ ಕೂತು ಕೆಲಸ ಮಾಡುವ ಸೊಸೆಗೆ ಗಂಟೆ, ಗಂಟೆಗೆ ಬಿಸಿ, ಬಿಸಿ ಚಹಾ ಮಾಡಿಕೊಡುವ ಅತ್ತೆ ನಮ್ಮ, ನಿಮ್ಮ ಮಧ್ಯೆ ಇದ್ದಾರೆ. ಅತ್ತೆ ಬೆನ್ನೋ, ಕತ್ತೋ ಉಳುಕಿಸಿಕೊಂಡಾಗ ಬಾಮ್‌ ಹಚ್ಚುವ ಸೊಸೆ, ಅತ್ತೆ ಹೋಗಬೇಕೆಂದ ಕಡೆ ಸ್ಕೂಟರಿನಲ್ಲೋ, ಕಾರಿನಲ್ಲೋ ಡ್ರಾಪ್‌ ಕೊಡುವ ಸೊಸೆ ಇದ್ದಾರೆ.

ಯಾವುದೇ ಸಂಬಂಧವಿರಲಿ ಪೂರ್ವಾಗ್ರಹವನ್ನು ಕೈಬಿಟ್ಟು ಒಳ್ಳೆಯದನ್ನು ನೋಡುವ ಹೃದಯವಂತಿಕೆ ಬೆಳೆಸಿಕೊಳ್ಳಬೇಕು. ಒಳ್ಳೆಯದನ್ನು ಕಂಡಾಗ ಭೇಷ್ ಎನ್ನಲು ಕಂಜೂಸಿ ಬೇಡ.

ಅತ್ತೆ–ಸೊಸೆ ಎಂದಾಕ್ಷಣ ಅಲ್ಲೊಂದು ಕದನವೇ ಸೃಷ್ಟಿಯಾಯಿತು ಎಂದು ನೋಡಲಾಗುತ್ತದೆ.ಆದರೆ, ಈ ಸಂಬಂಧ ಒಂದೇ ಏಟಿಗೆ ಅರ್ಥವಾಗದ ಕವಿತೆಯಂತೆ 

–––

ಲೇಖನ : ಗೀತಾ ಕುಂದಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT