ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಗುಂದಿಯ ರಸ್ತೆ ದುರಸ್ತಿಗೆ ಒತ್ತಾಯಿಸಿ ಧರಣಿ: ನಗರಕ್ಕೆ ತೈಲ ಪೂರೈಕೆ ಸ್ಥಗಿತ

Last Updated 27 ಜನವರಿ 2018, 19:55 IST
ಅಕ್ಷರ ಗಾತ್ರ

ಬೆಂಗಳೂರು: ಮಾಲೂರಿನ ದೇವನಗುಂದಿಯ ತೈಲ ಹಾಗೂ ಅಡುಗೆ ಅನಿಲ ದಾಸ್ತಾನು ಘಟಕದಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದ ದುರಸ್ತಿಗೆ ಒತ್ತಾಯಿಸಿ ತೈಲ ಪೂರೈಕೆ ಟ್ಯಾಂಕರ್‌ ಚಾಲಕರು ಹಾಗೂ ಸಹಾಯಕರು ಶನಿವಾರ ಧರಣಿ ಆರಂಭಿಸಿದ್ದಾರೆ.

ಟ್ಯಾಂಕರ್‌ ಓಡಾಟವನ್ನು ಬಂದ್‌ ಮಾಡಿ ಚಾಲಕರು ಹಾಗೂ ಸಹಾಯಕರು ಮುಷ್ಕರದಲ್ಲಿ ಪಾಲ್ಗೊಂಡರು. ಟ್ಯಾಂಕರ್‌ಗಳನ್ನು ರಸ್ತೆಯಲ್ಲೇ ನಿಲ್ಲಿಸಲಾಗಿತ್ತು. ಇದರಿಂದ ನಗರಕ್ಕೆ ತೈಲ ಪೂರೈಕೆ ಆಗಿಲ್ಲ.

‘ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌, ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌, ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ನ ಹಾಗೂ ಅಡುಗೆ ಅನಿಲದ ದಾಸ್ತಾನು ಘಟಕಗಳು ದೇವನಗುಂದಿಯಲ್ಲಿವೆ. ಬೆಂಗಳೂರು, ತುಮಕೂರು ಹಾಗೂ ಕೋಲಾರಕ್ಕೆ ಇಲ್ಲಿಂದಲೇ ತೈಲ ಪೂರೈಕೆ ಆಗುತ್ತದೆ’ ಎಂದು ತೈಲ ಪೂರೈಕೆ ಟ್ಯಾಂಕರ್‌ಗಳ ಚಾಲಕರ ಸಂಘದ ಅಧ್ಯಕ್ಷ ಶ್ರೀರಾಮ್ ತಿಳಿಸಿದರು.

‘ಘಟಕದಿಂದ ಮುಖ್ಯರಸ್ತೆವರೆಗಿನ 8 ಕಿ.ಮೀ ರಸ್ತೆ ಹಾಳಾಗಿದ್ದು, ಇಲ್ಲಿ ತಗ್ಗುಗಳೇ ಹೆಚ್ಚಿವೆ. ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದು, ರಸ್ತೆಯ ದುರಸ್ತಿಗೆ ಇದುವರೆಗೂ ಕ್ರಮ ಕೈಗೊಂಡಿಲ್ಲ. ನಿತ್ಯವೂ ಸಾವಿರಾರು ಟ್ಯಾಂಕರ್‌ಗಳು ಈ ರಸ್ತೆಯ ಮೂಲಕ ಸಂಚರಿಸುತ್ತವೆ. ರಸ್ತೆಯ ಅವ್ಯವಸ್ಥೆಯಿಂದಾಗಿ ಅಪಘಾತಗಳು ಹೆಚ್ಚಾಗುತ್ತಿದ್ದು, ಚಾಲಕರು ಹಾಗೂ ಸಹಾಯಕರ ಜೀವಕ್ಕೆ ಕುತ್ತು ಬರುತ್ತಿದೆ’ ಎಂದರು.

‘ರಸ್ತೆಯ ದುರಸ್ತಿಗೆ ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆ ನಡೆಸಿದ್ದೆವು. ಪ್ರತಿ ಬಾರಿಯೂ ಭರವಸೆಯಷ್ಟೇ ಸಿಕ್ಕಿದ್ದು, ಕೆಲಸ ಮಾತ್ರ ಆಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೊಂದಲ:ಹದಗೆಟ್ಟಿರುವ ರಸ್ತೆಯ ಅರ್ಧಭಾಗವು ಬಿಬಿಎಂಪಿಗೆ ಹಾಗೂ ಇನ್ನರ್ಧ ಭಾಗವು ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ದುರಸ್ತಿ ಕೆಲಸ ಕೈಗೊಳ್ಳಲು ಅಧಿಕಾರಿಗಳ ನಡುವೆ ಗೊಂದಲವಿದೆ. ಹೀಗಾಗಿ, ಇದುವರೆಗೂ ರಸ್ತೆಯ ದುರಸ್ತಿ ಆಗಿಲ್ಲವೆಂದು ಚಾಲಕರು ಆರೋಪಿಸಿದ್ದಾರೆ.

‘ನಮಗೆ ಯಾವ ಇಲಾಖೆ ಎಂಬುದು ಮುಖ್ಯವಲ್ಲ. ರಸ್ತೆ ಸುಧಾರಣೆ ಮುಖ್ಯ. ಸರ್ಕಾರದ ಉನ್ನತ ಅಧಿಕಾರಿಗಳು ಮಧ್ಯಪ್ರವೇಶಿಸಿ ಬೇಡಿಕೆ ಈಡೇರಿಸಬೇಕು. ಧರಣಿಯು ಹೀಗೆ ಮುಂದುವರಿದರೆ, ನಗರಕ್ಕೆ ತೈಲ ಪೂರೈಕೆ ಸಂಪೂರ್ಣ ಬಂದ್‌ ಆಗಲಿದೆ. ಅದರಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರವೇ ಹೊಣೆ’ಎಂದರು.

‘ವೈಟ್‌ಫೀಲ್ಡ್‌ನಿಂದ ಹೂಡಿವರೆಗೆ ರಸ್ತೆ ಉತ್ತಮ’

‘ವೈಟ್‌ಫೀಲ್ಡ್‌ ಹೋಪ್ ಫಾರ್ಮ್ ಜಂಕ್ಷನ್‍ನಿಂದ ಹೂಡಿ ಹಾಗೂ ನಗರದತ್ತ ಬರುವ ರಸ್ತೆಯನ್ನು ಮಾತ್ರ ಬಿಬಿಎಂಪಿ ನಿರ್ವಹಣೆ ಮಾಡುತ್ತದೆ. ಈ ರಸ್ತೆ ಉತ್ತಮ ಸ್ಥಿತಿಯಲ್ಲಿದೆ’ ಎಂದು ಬಿಬಿಎಂಪಿ ಜಂಟಿ ಆಯುಕ್ತರು (ಪಶ್ಚಿಮ) ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ದಕ್ಷಿಣ ಪಿನಾಕಿನಿ ನದಿ ಮತ್ತು ಕಾಡುಗೋಡಿ ನಡುವಿನ 15 ಮೀಟರ್‍ ರಸ್ತೆಯಲ್ಲಿ ಸಣ್ಣ ನೀರಾವರಿ ಇಲಾಖೆ ಪೈಪ್‍ಲೈನ್ ಅಳವಡಿಸುತ್ತಿದೆ. ಆ ಕೆಲಸ 15 ದಿನಗಳಲ್ಲಿ ಮುಗಿಯಲಿದೆ’ ಎಂದು ತಿಳಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಅನುಮಾನ

ಈ ಪ್ರತಿಭಟನೆಯಿಂದಾಗಿ ನಗರದ ಹಲವು ಬಂಕ್‌ಗಳಲ್ಲಿ ಭಾನುವಾರ ಪೆಟ್ರೋಲ್‌ ಹಾಗೂ ಡೀಸೆಲ್ ಸಿಗುವುದು ಅನುಮಾನ.

ಮಹದಾಯಿ ಬಂದ್ ಹಾಗೂ ಗಣರಾಜ್ಯೋತ್ಸವದ ಪ್ರಯುಕ್ತ ಎರಡೂ ದಿನವೂ ನಗರದ ಹಲವು ಬಂಕ್‌ಗಳಿಗೆ ತೈಲ ಪೂರೈಕೆ ಆಗಿಲ್ಲ. ಶನಿವಾರವೂ ಟ್ಯಾಂಕರ್‌ಗಳು ನಗರಕ್ಕೆ ಬಾರದಿದ್ದರಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಸ್ವಂತ ಟ್ಯಾಂಕರ್‌ ಇಟ್ಟುಕೊಂಡಿರುವ ಬಂಕ್‌ ಮಾಲೀಕರು, ಬೇಡಿಕೆಗೆ ತಕ್ಕಷ್ಟು ತೈಲವನ್ನು ತರಿಸಿಕೊಳ್ಳುತ್ತಿದ್ದಾರೆ. ಹಲವು ಬಂಕ್‌ ಮಾಲೀಕರು, ಖಾಸಗಿಯವರ ಟ್ಯಾಂಕರ್‌ಗಳನ್ನು ನೆಚ್ಚಿಕೊಂಡಿದ್ದಾರೆ. ಅವರ ಬಂಕ್‌ಗಳಿಗೆ ನಿಗದಿಯಂತೆ ಟ್ಯಾಂಕರ್‌ಗಳು ಬಂದಿಲ್ಲ. ಇದರಿಂದಾಗಿ ಭಾನುವಾರದಿಂದ ಆ ಬಂಕ್‌ಗಳಲ್ಲಿ ‘‍ತೈಲ ಸಂಗ್ರಹವಿಲ್ಲ’ ಎಂಬ ನಾಮಫಲಕ ನೇತಾಡಲಿದೆ.

ಅಡುಗೆ ಅನಿಲ ವ್ಯತ್ಯಯ: ದೇವನಗುಂದಿ ಬಳಿ ಅಡುಗೆ ಅನಿಲ (ಎಲ್‌ಪಿಜಿ) ದಾಸ್ತಾನು ಘಟಕ ಇದೆ. ಎಲ್‌ಪಿಜಿ ಪೂರೈಕೆ ಮಾಡುವ ಲಾರಿ ಚಾಲಕರು ಸಹ ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ. ಎಲ್‌ಪಿಜಿ ಪೂರೈಕೆಯಲ್ಲೂ ಭಾನುವಾರ ವ್ಯತ್ಯಯ ಉಂಟಾಗಲಿದೆ.

ಅಂಕಿ–ಅಂಶ

* 450 ನಗರದಲ್ಲಿರುವ ಪೆಟ್ರೋಲ್ ಬಂಕ್‌ಗಳು

* 1,800 ತೈಲ, ಎಲ್‌ಪಿಜಿ ಪೂರೈಕೆ ಟ್ಯಾಂಕರ್‌ಗಳು

* 18 ಲಕ್ಷ ಲೀಟರ್‌ ಶನಿವಾರ ಪೂರೈಕೆಯಾಗದ ತೈಲದ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT