ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯದ ಅಂತರ್ಗತ ನೆನಪುಗಳು

ಏನಾದರೂ ಕೇಳ್ಬೋದು
Last Updated 3 ಫೆಬ್ರುವರಿ 2023, 19:38 IST
ಅಕ್ಷರ ಗಾತ್ರ

*ಯವತಿ. ಚಿಕ್ಕಂದಿನಿಂದಲೂ ನನಗೆ ಕೀಳರಿಮೆ. ಬಡತನ, ಇನ್ನೊಬ್ಬರ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ, ಕುಡುಕ ಅಪ್ಪ, ಅಂಗವೈಕಲ್ಯ ಹೊಂದಿದ್ದ ಅಮ್ಮ, ಆವಾಗಿನಿಂದಲೂ ಮಾತನಾಡಲು ಹೆದರುತ್ತೇನೆ. ನಾಲ್ಕು ಜನ ಒಟ್ಟಾದರೆ ಏನೋ ಒಂದು ಬಗೆಯ ಗೊಂದಲ ಉಂಟಾಗುತ್ತದೆ. ಈಗ ಒಂದೊಳ್ಳೆ ಕೆಲಸದಲ್ಲಿದ್ದೇನೆ. ಆದರೆ ಈ ಕೀಳರಿಮೆ ಮಾತ್ರ ನಾನಾ ರೂಪ ಪಡೆದುಕೊಂಡಿದೆ. ಮಾತನಾಡಲು ಕಷ್ಟವಾಗುವುದಲ್ಲದೆ ನಾಲ್ಕು ಜನರ ಜತೆ ಸುಲಭವಾಗಿ ಬೆರೆಯಲು ಬಿಡುತ್ತಿಲ್ಲ. ನನ್ನ ವ್ಯಕ್ತಿತ್ವವೇ ಕುಂಠಿತಗೊಂಡಂತೆ ಅನಿಸುತ್ತಿದೆ. ಇದರಿಂದ ಹೊರಬರುವುದು ಹೇಗೆ?

ಹೆಸರು ಊರು ತಿಳಿಸಿಲ್ಲ.

ನಿಮ್ಮ ಪತ್ರದಲ್ಲಿರುವ ಸ್ಪಷ್ಟತೆ ಮೆಚ್ಚುಗೆಯಾಗುವಂತಿದೆ. ನಿಮ್ಮ ಕಷ್ಟಗಳೇನು? ಅವು ಎಲ್ಲಿಂದ ಬರುತ್ತಿವೆ? ಇವುಗಳನ್ನೆಲ್ಲಾ ಸರಿಯಾಗಿ ತಿಳಿದುಕೊಂಡಿದ್ದೀರಿ. ಇವುಗಳಿಂದ ಹೊರಬರುವುದು ಹೇಗೆ ಎನ್ನುವುದಷ್ಟೇ ಉಳಿದ ಪ್ರಶ್ನೆ.

ಬಾಲ್ಯದ ಅನುಭವಗಳು ನಮ್ಮ ಮಿದುಳು ನರಮಂಡಲಗಳಷ್ಟೇ ಅಲ್ಲ, ದೇಹದ ಕಣಕಣಗಳಲ್ಲಿಯೂ ಆಳವಾಗಿ ದಾಖಲಾಗಿರುತ್ತವೆ. ಅನುಭವಕ್ಕೆ ಸಂಬಂಧಿಸಿದ ಎಲ್ಲಾ ಘಟನೆಗಳ ವಿವರಗಳು ನೆನಪಿಲ್ಲದಿದ್ದರೂ ಅನುಭವದ ಕಹಿ ಮಾತ್ರ ಆಳವಾಗಿ ದಾಖಲಾಗಿರುತ್ತದೆ. ಇದನ್ನು “ಅಂತರ್ಗತ ನೆನಪು (Implicit Memory)” ಎನ್ನಲಾಗುತ್ತದೆ. ಇದು ನಮ್ಮ ಅರಿವಿಗೆ ಬರದೆ ತೊಂದರೆ ಕೊಡುತ್ತಿರುತ್ತದೆ. ಹಾಗಾಗಿ ಅವುಗಳಿಂದ ಹೊರಬರಲು ದೇಹ ಮನಸ್ಸುಗಳೆರೆಡಕ್ಕೂ ಸತತವಾಗಿ ತರಬೇತಿ ನೀಡಬೇಕು. ನಿಮ್ಮ ಹಿಂಜರಿಕೆ ಕೀಳರಿಮೆಗಳು ನಿಮ್ಮ ದೇಹದ ಯಾವ ಭಾಗಗಳಲ್ಲಿ ಒತ್ತಡದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಗಮನಿಸಿ. ದಿನಕ್ಕೆ 15 ನಿಮಿಷ ಏಕಾಂತದಲ್ಲಿ ಕುಳಿತು ದೀರ್ಘವಾಗಿ ಉಸಿರಾಡುತ್ತಾ ದೇಹದ ಆ ಭಾಗವನ್ನು ಗಮನಿಸಿ. ಒತ್ತಡವನ್ನು ಅನುಭವಿಸುತ್ತಿರುವ ದೇಹದ ಅಂಗಕ್ಕೆ ಒಂದು ಧ್ವನಿಯಿದ್ದಿದ್ದರೆ ಅದು ಏನು ಹೇಳಬಹುದಿತ್ತು ಎಂದು ಗಮನಿಸಿ. ನಿನ್ನನ್ನು ಎಲ್ಲರೂ ಕೀಳಾಗಿ ನೋಡುತ್ತಾರೆ, ನಿನಗೆ ಪ್ರೀತಿ ಗೌರವ ಸಿಗುವುದಿಲ್ಲ, ಪ್ರೀತಿ ಗೌರವಗಳನ್ನು ಪಡೆಯುವ ಯೋಗ್ಯತೆ ನಿನ್ನಲ್ಲಿಲ್ಲ, ನೀನು ಎಲ್ಲರೆದುರು ಮಾತನಾಡಿದರೆ ನೋವು ಅವಮಾನವನ್ನು ಅನುಭವಿಸುತ್ತೀಯಾ- ಮುಂತಾಗಿ ನಿಮ್ಮ ಅಂತರಂಗದ ಒಂದು ಧ್ವನಿ ಹೇಳುತ್ತಿರಬಹುದು. ಈ ಧ್ವನಿ ನಿಮಗೆ ಅಪಾರ ನೋವನ್ನು ಕೊಡುತ್ತಿರುತ್ತದೆ. ಆದರೆ ಆ ಧ್ವನಿಯನ್ನು ಹತ್ತಿಕ್ಕದೆ ಪ್ರೀತಿ ಸಹಾನುಭೂತಿಯಿಂದ ಸಂತೈಸಿ ಹೆಚ್ಚುಹೆಚ್ಚು ಮಾತನಾಡಲು ಅವಕಾಶ ಕೊಡಿ. ಆಗ ಬಾಲ್ಯದ ನೋವು ಕಹಿಗಳೆಲ್ಲವೂ ನಿಧಾನವಗಿ ಮನಸ್ಸಿನಲ್ಲಿ ಮೂಡುತ್ತಾ ಹೋಗುತ್ತದೆ. ಬಹಳ ಕಷ್ಟವಾದರೂ ಎಲ್ಲವನ್ನೂ ಮತ್ತೊಮ್ಮೆ ಅನುಭವಿಸಲು ಹಿಂಜರಿಯಬೇಡಿ.

ಬಾಲ್ಯದ ಆ ದುರ್ಭರ ಸಮಯದಲ್ಲಿ ಮೂಡಿದ ಹಿಂಜರಿಕೆ ಕೀಳರಿಮೆ ಅವತ್ತಿನ ಅನುಭವವಾಗಿತ್ತು. ಆಗ ನನ್ನ ಸುತ್ತಲೂ ಇದ್ದ ಜನರು ಮತ್ತು ಸಂದರ್ಭಗಳು ಈಗಿಲ್ಲ. ಹಾಗಾಗಿ ಅಂತಹ ಅನುಭವಗಳನ್ನು ಜೀವನವೆಲ್ಲಾ ನನ್ನ ದೇಹ ಮನಸ್ಸುಗಳಲ್ಲಿ ಹೊತ್ತುಕೊಂಡು ಬದುಕುವ ಅಗತ್ಯವಿಲ್ಲವೆಂದು ನೆನಪುಮಾಡಿಕೊಳ್ಳಿ. ದೀರ್ಘವಾಗಿ ಉಸಿರಾಡುತ್ತಾ ತಾಯಿಯೊಬ್ಬಳು ತನ್ನ ಮಗುವನ್ನು ಸಂತೈಸುವಂತೆ ನಿಮ್ಮ ದೇಹ ಮನಸ್ಸುಗಳನ್ನು ಪ್ರೀತಿಯಿಂದ ಸಮಾಧಾನಪಡಿಸಿ. ಮಧ್ಯೆ ಮನಸ್ಸು ಹದತಪ್ಪುಬಹುದು ಎನ್ನಿಸಿದರೆ ಪ್ರಯೋಗವನ್ನು ನಿಲ್ಲಿಸಿ ಮನಸ್ಸನ್ನು ಬೇರೆಡೆ ತಿರುಗಿಸಿ. ಆದರೆ ಈ ಪ್ರಯೋಗವನ್ನು ಆಗಾಗ ಮುಂದುವರೆಸಿ.

ಪರಿಶುದ್ಧ ಆತ್ಮವಾಗಿ ಜನಿಸಿರುವ ಮಗು ಬಾಲ್ಯದ ಕಹಿ ಅನುಭವಗಳಿಂದ ಮಾನಸಿಕವಾಗಿ ಗಾಸಿಗೊಳ್ಳುತ್ತದೆ. ಹಾಗಾಗಿ ನಿಮ್ಮೊಳಗಿರುವ ಆ ಗಾಯಗೊಂಡ ಮಗುವನ್ನು ನೀವೇ ಸಂತೈಸಲು ಕಲಿಯಿರಿ. ಮತ್ತೆಮತ್ತೆ ನೆನಪಾಗಿ ನೋವನ್ನು ಕೊಡುವ ಹಳೆಯ ಕಹಿಯನ್ನು ತಿರಸ್ಕರಿಸದೆ ಒಪ್ಪಿಕೊಳ್ಳುತ್ತಲೆ ಹೊಸ ಅನುಭವಗಳಿಗೆ ತೆರೆದುಕೊಳ್ಳಿ. ನಾವು ಇಷ್ಟಪಡದ ನಮ್ಮ ವ್ಯಕ್ತಿತ್ವದ ಅಂಶಗಳನ್ನು ಕೂಡ ದ್ವೇಷಿಸದೆ ಅವುಗಳಿಗೆ ಸಹಾನುಭೂತಿ ತೋರಿಸುವುದನ್ನು ಕಲಿತಾಗ ದೇಹ ಮನಸ್ಸುಗಳು ಶಾಂತಗೊಳ್ಳುತ್ತವೆ.

ನೆನಪಿಡಿ. ಇಲ್ಲಿ ಹೇಳಿರುವುದು ಒಂದು ತಂತ್ರವಲ್ಲ. ಆಗಾಗ ಮಾಡುತ್ತಲೇ ಇರಬೇಕಾದ ಅಭ್ಯಾಸ ಅಥವಾ ಸಾಧನೆ. ಹಾಗಾಗಿ ಒಂದೆರೆಡು ಸೋಲುಗಳಿಂದ ಹತಾಶರಾಗಬೇಡಿ. ಹಳೆಯ ಅನುಭವದ ಕಹಿ ಹೆಚ್ಚಾಗಿದ್ದಷ್ಟೂ ಹೆಚ್ಚಿನ ಸಮಯದ ಮತ್ತು ಶ್ರಮದ ಅಗತ್ಯವಿರುತ್ತದೆ. ಲಭ್ಯವಿದ್ದರೆ ತಜ್ಞ ಮನೋಚಿಕಿತ್ಸಕರ ಸೌಲಭ್ಯ ಪಡೆದುಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT