ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಿಗೆ ಬಿಗಿದ ಎಳೆಗರು

Last Updated 12 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ತೊಂಬತ್ತು ವರ್ಷಗಳ ಕೆಳಗೆ ಬಾಲ್ಯವಿವಾಹ ನಿಷೇಧ ಕಾನೂನನ್ನು ಬ್ರಿಟಿಷರು ಜಾರಿಗೊಳಿಸಿದ್ದರೂ ಬಾಲ್ಯವಿವಾಹಗಳು ಇಂದಿಗೂ ಅವ್ಯಾಹತವಾಗಿ ನಡೆಯುತ್ತಿವೆ. ಭಾರತದ ಶೇಕಡ 27ರಷ್ಟು ಹುಡುಗಿಯರು ವಯಸ್ಕರಾಗುವ ಮುನ್ನವೇ ವಿವಾಹಿತರು. ಒಂದೆಡೆ ಕಲಿತ, ಆರ್ಥಿಕ ಸ್ವಾವಲಂಬನೆ ಸಾಧಿಸಿದ ಕೆಲವು ಹೆಣ್ಣುಗಳು ಮದುವೆಯಾಗಲೊಲ್ಲದೆ, ವಿವಾಹ ಬೆಸುಗೆಯೇ ಬೇಡದ ಲಿವಿಂಗ್ ಇನ್ ಸಂಬಂಧ ಬಯಸುತ್ತಿದ್ದರೆ; ಮತ್ತೊಂದೆಡೆ ಲೋಕಕ್ಕೆ ಕಣ್ತೆರೆಯದ ಕಿಶೋರಿಯರು ಬಗಲಲ್ಲೊಂದು, ಹೊಟ್ಟೆಯಲ್ಲೊಂದು ಕೂಸಿನ ಭಾರಕ್ಕೆ ನಲುಗುತ್ತಿರುವ ವೈರುಧ್ಯದ ಸನ್ನಿವೇಶ ಕಂಡುಬರುತ್ತಿದೆ.

ಗ್ರಾಮೀಣ ಭಾರತದ ನೂರು ಬಸುರಿಯರಲ್ಲಿ ಒಂಬತ್ತು ಜನ ಹದಿವಯಸ್ಸಿನವರು. ನಗರಗಳಲ್ಲಿ ನೂರು ಬಸುರಿಯರಲ್ಲಿ ಐವರು ಹದಿವಯಸ್ಸಿನವರು. ಹೀಗಿರುತ್ತ ಭಾರತದಲ್ಲಿ ಮದುವೆಯ ವಯಸ್ಸನ್ನು ಹದಿನೆಂಟರಿಂದ ಇಪ್ಪತ್ತೊಂದಕ್ಕೆ ಏರಿಸುವ ಪ್ರಸ್ತಾಪ ಮಾಡಲಾಗಿದೆ.

ಭಾರತದಲ್ಲಿ ಮದುವೆಯ ವಯಸ್ಸು ಎನ್ನುವುದನ್ನು ತಾಯಿಯಾಗುವ ವಯಸ್ಸು ಎಂದೇ ಓದಿಕೊಳ್ಳಬೇಕು. ಮದುವೆಯಾದ ಮರುತಿಂಗಳಿನಿಂದಲೇ ವಧುವಿನ ಮುಟ್ಟಿನ ಲೆಕ್ಕ ಹಿರಿಯರ ಬಾಯಿಯಲ್ಲಿ ದಾಖಲಾಗತೊಡಗುತ್ತದೆ. ಮದುವೆಯ ಉದ್ದೇಶ ಮಕ್ಕಳ ಅಮ್ಮ, ಅಪ್ಪನಾಗುವುದು ಎಂದಾಗಿರುವುದರಿಂದ ಮದುವೆಯಾದ ದಂಪತಿ ಎದುರಿಸುವ ಮೊದಲ ಪ್ರಶ್ನೆ ಮಕ್ಕಳ ಕುರಿತಾಗಿಯೇ ಇರುತ್ತದೆ. ಮಗು ಬರುವ ಕಾಲವು ಗಂಡನಲ್ಲಿ ಉತ್ಸಾಹ, ನಿರೀಕ್ಷೆ, ಹೆಮ್ಮೆಯನ್ನು ತುಂಬಿದರೆ, ಹೆಂಡತಿಯಲ್ಲಿ ಉದ್ವೇಗ, ಭಯ, ಸವಾಲುಗಳನ್ನು ಒಡ್ಡುತ್ತದೆ. ಏಕೆಂದರೆ ಗಂಡ ಮತ್ತು ಮಗುವೆಂಬ ಎರಡು ಸಂಕೀರ್ಣ ಸಂಗತಿಗಳ ಸಂಪೂರ್ಣ ಜವಾಬ್ದಾರಿ ಹೊತ್ತು ನಿಭಾಯಿಸುವುದೆಂದರೆ ಸುಮ್ಮನಲ್ಲ.

ಸಮಾಜ ಜೀವಶಾಸ್ತ್ರಜ್ಞರ ಪ್ರಕಾರ ಪಾಲಕತನವೆಂಬ ಬಂಡವಾಳದಲ್ಲಿ ಹೆಣ್ಣಿನ ಪಾಲು ಹೆಚ್ಚು, ಗಂಡಿನದು ಕಡಿಮೆ. ಕೋಟ್ಯಂತರ ವೀರ್ಯಾಣುಗಳಲ್ಲಿ ಗಂಡು ಒಂದನ್ನು ಹೂಡಿಕೆ ಮಾಡಿದರೆ ಹೆಣ್ಣು ಇರುವ ಒಂದೇ ಒಂದು ತತ್ತಿಯನ್ನು ಹೂಡಿಕೆ ಮಾಡುತ್ತಾಳೆ. ಗರ್ಭ ಧರಿಸಿದಾಗಲೂ ಹೆಣ್ಣಿನ ದೈಹಿಕ ‘ಹೂಡುವಿಕೆ’ ಅತಿಹೆಚ್ಚು. ಹೆರಿಗೆಯ ಪೂರಾ ಶ್ರಮ ಅವಳದೇ. ಆದ್ದರಿಂದ ಗಂಡಿನ ಆಯ್ಕೆಯಲ್ಲಿ, ಮಕ್ಕಳು ಬೇಕು-ಬೇಡ ಎನ್ನುವುದರಲ್ಲಿ ಸ್ವಾಯತ್ತವಾಗಿರಬಯಸುವ ಹೆಣ್ಣು, ವಿಶಿಷ್ಟ ಮಾನಸಿಕ ಸಂದಿಗ್ಧಗಳನ್ನು ಎದುರಿಸುತ್ತಾಳೆ. ಹೀಗಿರುವಾಗ ಭಾರತದಲ್ಲಿ ಮದುವೆಯ ವಯಸ್ಸನ್ನು ಇಪ್ಪತ್ತೊಂದಕ್ಕೆ ಏರಿಸಲು ಹೊರಟಿರುವುದು ಸುರಕ್ಷಿತ ತಾಯ್ತನದ ದೃಷ್ಟಿಯಿಂದ, ಜನಸಂಖ್ಯಾ ಸ್ಫೋಟವನ್ನು ತಡೆಯುವ ನಿಟ್ಟಿನಿಂದ ಒಳ್ಳೆಯ ನಿರ್ಧಾರ. ಇದನ್ನು ಹೆಣ್ಣಿನ ಪ್ರಜನನ ಆರೋಗ್ಯ ಹಾಗೂ ನಾಗರಿಕ ಹಕ್ಕುಗಳೆಂಬ ಎರಡು ಆಯಾಮಗಳಿಂದ ಪರಿಶೀಲಿಸುವ ಅಗತ್ಯವಿದೆ.

ಬದಲಾದ ಜೀವನ ಶೈಲಿ, ಆಹಾರ-ನಿದ್ರೆಯ ಏರುಪೇರುಗಳು, ಕಿಶೋರಿಯರ ಮನೋದೈಹಿಕ ಒತ್ತಡಗಳ ಕಾರಣವಾಗಿ ಬರುಬರುತ್ತ ನಾಲ್ಕು, ಐದನೇ ತರಗತಿಯ ಹುಡುಗಿಯರೂ ‘ದೊಡ್ಡವರಾಗು’ತ್ತಿದ್ದಾರೆ. ಋತುಚಕ್ರ ಉಂಟಾಗಲು ಕಾರಣವಾಗುವ ರಸದೂತಗಳ ಏರಿಳಿತವು ಭಾವನಾತ್ಮಕ ಏರಿಳಿತಗಳಿಗೂ, ಸ್ವಭಾವಗಳಿಗೂ ದಾರಿ ಮಾಡಿಕೊಡುತ್ತದೆ. ತನ್ನ ಅಸಮ ದೈಹಿಕ ಬೆಳವಣಿಗೆಗೆ ಗೊಂದಲಗೊಳ್ಳುವ ಹದಿಹರೆಯದ ಮನಸ್ಸು ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಬಹುದು ಅಥವಾ ಒಪ್ಪದೆ ಇರಬಹುದು. ನಂತರ ಲೈಂಗಿಕ ಜೀವನದ ಹೊಂದಾಣಿಕೆಯಲ್ಲಿ ಈ ಮನೋಭಾವ ಪ್ರಮುಖ ಪಾತ್ರ ವಹಿಸುತ್ತದೆ. ತನ್ನ ದೇಹದ ಬಗ್ಗೆಯೇ ಗಮನ ಹರಿಸುವ ಸ್ವಪ್ರಜ್ಞೆಯ ಹುಡುಗಿಯರು ಮುಖದ ಮೇಲಿನ ಮೊಡವೆ, ಎತ್ತರ, ದನಿ ಬದಲಾವಣೆಗೆ ಗೊಂದಲಗೊಳ್ಳುತ್ತಾರೆ. ಸ್ರಾವಪೂರ್ವ ಆತಂಕ, ಸ್ರಾವಪೂರ್ವ ಖಿನ್ನತೆಯೇ ಮೊದಲಾದ ಸಮಸ್ಯೆಗಳು ಹದಿವಯಸ್ಸಿನ ತರುಣಿಯರನ್ನು ಬಾಧಿಸುತ್ತವೆ. ಅಂತಹ ಎಳೆಯ ಜೀವಗಳಿಗೆ ಮದುವೆಯಾದರೆ ಲೈಂಗಿಕತೆಯ ಕುರಿತು ಅನಾಸಕ್ತಿ, ಪೂರ್ವಗ್ರಹ ಹೊಂದಿರುವ ಸಾಧ್ಯತೆ ಹೆಚ್ಚು. ಇದು ದೌರ್ಜನ್ಯಕ್ಕೂ ಕಾರಣವಾಗಬಹುದು.

ಹದಿಹರೆಯದ ಹುಡುಗಿಯರಲ್ಲಿ ನಿದ್ರೆ-ಆಹಾರವೇ ಮುಂತಾದ ದಿನಚರಿಗಳು ಶಿಸ್ತಿನಿಂದ ಇರುವುದಿಲ್ಲ. ದೇಹಾರೋಗ್ಯಕ್ಕಿಂತ ದೇಹ ಸೌಂದರ್ಯದ ಬಗೆಗೆ ಕಾಳಜಿ ಹೆಚ್ಚಿರುತ್ತದೆ. ಜೊತೆಗೆ ಭಾರತದ ಸಮಾಜೋ ಆರ್ಥಿಕ ಪರಿಸ್ಥಿತಿಯೂ ಸೇರಿಕೊಂಡು 15ರಿಂದ 19 ವರ್ಷ ವಯೋಮಾನದ ಅರ್ಧದಷ್ಟು ಹುಡುಗಿಯರು ರಕ್ತಹೀನತೆಯಿಂದ, ಅಪೌಷ್ಟಿಕತೆಯಿಂದ ಬಳಲುತ್ತಾರೆ. ಬಸುರಿಯಾದ ಶೇಕಡ 28ರಷ್ಟು ಹುಡುಗಿಯರಷ್ಟೇ ಕಬ್ಬಿಣಾಂಶದ ಮಾತ್ರೆಗಳನ್ನು ಸೇವಿಸುವುದರಿಂದ ಅಪೌಷ್ಟಿಕತೆ, ರಕ್ತಹೀನತೆ ಸಮಸ್ಯೆಗಳು ಹಾಗೆಯೇ ಉಳಿಯುತ್ತವೆ. ಇದು ಅಧಿಕ ರಕ್ತದೊತ್ತಡ, ಅವಧಿಪೂರ್ವ ಹೆರಿಗೆ, ಗರ್ಭಪಾತಕ್ಕೆ ಕಾರಣವಾಗಬಹುದು. ವಿಳಂಬ ಹೆರಿಗೆಯು ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಕಾರಣವಾದೀತು. ತಾಯಿಯ ರಕ್ತಹೀನತೆ ಮಗುವಿನ ಮೇಲೂ ಪರಿಣಾಮ ಬೀರಿ ಕಡಿಮೆ ತೂಕದ ಶಿಶು ಹುಟ್ಟಬಹುದು. ಗರ್ಭಿಣಿಯರ ಸಕ್ಕರೆ ಕಾಯಿಲೆ, ಶಿಶುಮರಣ, ತಾಯಿ ಮರಣ, ಬಾಣಂತಿ ನಂಜು, ಬಾಣಂತಿ ಸನ್ನಿಯೇ ಮೊದಲಾದ ಸಂಕೀರ್ಣ ಸಮಸ್ಯೆಗಳೆಲ್ಲ ಕಾಡಬಹುದು.

10ರಿಂದ 14 ವರ್ಷ, 15ರಿಂದ 19ವರ್ಷ, 20ರಿಂದ 24ವರ್ಷ -ಹೀಗೆ ತಾಯಿಯ ವಯಸ್ಸನ್ನು ಮೂರು ವಯೋಮಾನದ ಗುಂಪುಗಳಾಗಿ ವಿಂಗಡಿಸಿದರೆ 20ರಿಂದ 24 ವರ್ಷ ವಯಸ್ಸಿನವರಲ್ಲಿ ಸಂಭವಿಸುವ ತಾಯಿ ಮರಣದ ಎರಡು ಪಟ್ಟು 15ರಿಂದ 19 ವರ್ಷದವರಲ್ಲಿ ಕಂಡುಬರುತ್ತದೆ. 10ರಿಂದ 14ವರ್ಷದೊಳಗಿನ ತಾಯಂದಿರಲ್ಲಿ ಇದು ಐದು ಪಟ್ಟು ಹೆಚ್ಚಾಗುತ್ತದೆ. ತಾಯಿಯ ವಯಸ್ಸು 20ಕ್ಕಿಂತ ಕಡಿಮೆಯಾಗುತ್ತ ಹೋದಹಾಗೆ ಬಸುರಿನ ತೊಂದರೆಗಳಿಂದ ಸಂಭವಿಸುವ ತಾಯಿ ಮರಣದ ಪ್ರಮಾಣ ಹೆಚ್ಚುತ್ತ ಹೋಗುತ್ತದೆ. 15ರಿಂದ 19 ವರ್ಷ ವಯೋಮಾನದ ಹುಡುಗಿಯರ ಮರಣದ ಮುಖ್ಯ ಕಾರಣ ಕಷ್ಟದ ಹೆರಿಗೆಯೇ ಆಗಿದೆ.

ಹದಿವಯಸ್ಸಿನ ತಾಯಿಯ ಕೂಸು ಸಾಧಾರಣವಾಗಿ ಕಡಿಮೆ ತೂಕದ್ದಾಗಿರುತ್ತದೆ. ತಾಯಿಯಿಂದ ಮಗುವು ಹಿತದ ಸ್ಪರ್ಶ, ಕಾಳಜಿ, ಲಾಲನೆ, ಪಾಲನೆಗಳನ್ನು ಪಡೆಯುವುದು ಸ್ವಲ್ಪ ದುಸ್ತರವೇ. ಏಕೆಂದರೆ ತಾಯಿಯೆನಿಸಿಕೊಳ್ಳಲು ಭಾವನಾತ್ಮಕ ಮಾಗುವಿಕೆ ಅತ್ಯವಶ್ಯ. ಲೋಕವನ್ನು ಇನ್ನೂ ಬೆರಗಿನಿಂದ ಕಣ್ತುಂಬಿಕೊಳ್ಳುತ್ತಿರುವ ಹದಿವಯಸ್ಸಿನ ಹುಡುಗಿಯು ತಾಯ್ತನವನ್ನು ಸಂಭ್ರಮಿಸಲಾರಳು. ಮುಂದೇನಾಗುವುದೋ ಎಂಬ ಭಯ, ಹುಟ್ಟಲಿರುವ ಮಗು ಹೆಣ್ಣೋ ಗಂಡೋ ಎಂಬ ಭಯದ ಕಾರಣವಾಗಿ ಮಗುವು ಸಂಭ್ರಮ, ಸಂತಸ ತರುವುದರ ಜೊತೆ ಜೊತೆಗೆ ಅವಳ ಸ್ವಾತಂತ್ರ್ಯ ಹರಣದ ಅನುಭವವನ್ನೂ ಹೊತ್ತು ತರುತ್ತದೆ. ಮಗುವಿನ ಅನಾರೋಗ್ಯ, ಹಟ, ಮನೆಯ ಜವಾಬ್ದಾರಿ-ಸಮಸ್ಯೆಗಳು ಎಳೆಯ ತಾಯಂದಿರಲ್ಲಿ ಕಿರಿಕಿರಿ, ಖಿನ್ನತೆ, ಅತಿ ಆತಂಕ, ನಿದ್ರಾಹೀನತೆ, ಹಿಂಸಾತ್ಮಕ ಯೋಚನೆಗಳಿಗೆ ಕಾರಣವಾಗುತ್ತವೆ. ತಾಯ್ತನದ ಒತ್ತಡಗಳು ಬಾಣಂತಿ ಸನ್ನಿಗೆ ಕಾರಣವಾಗಲೂಬಹುದು. ಮಕ್ಕಳು ಶಿಕ್ಷೆ, ಹಿಂಸೆಗೆ ಒಳಗಾಗುವ ಸಾಧ್ಯತೆಯೂ ಇದೆ.

ಒಂದು ಹೆತ್ತ ನಂತರ ಕುಟುಂಬ ಯೋಜನಾ ವಿಧಾನ ಅಳವಡಿಸಿಕೊಳ್ಳಬೇಕು. ಆದರೆ ಅದರಲ್ಲೂ ಹದಿವಯಸ್ಸಿನ ತಾಯಿಯರು ಹಿಂದಿರುತ್ತಾರೆ. ಸಂಕೋಚ, ಅಜ್ಞಾನ, ಅವಕಾಶವಿಲ್ಲದಿರುವುದು, ಆರ್ಥಿಕ ಸಂಕಷ್ಟಗಳ ಕಾರಣವಾಗಿ ಕುಟುಂಬ ಯೋಜನಾ ವಿಧಾನಗಳ ಬಳಕೆ, ಆ ಕುರಿತ ಸಲಹೆ ಪಡೆಯುವುದು ಕಷ್ಟವಾಗಿ ಒಂದಾದ ಮೇಲೊಂದು ಬಸುರು ಸಂಭವಿಸುತ್ತದೆ. ಹಲವು ಮಕ್ಕಳ ತಾಯಿಯಾಗಲು ತಾನೇ ಮಗುವಿನಂತಿರುವ ತಾಯಿ ಪ್ರಯಾಸಪಡುತ್ತಾಳೆ.

***

ಇಷ್ಟೆಲ್ಲ ಸಮಸ್ಯೆಗಳು ಎಲ್ಲ ಎಳೆಯ ತಾಯಂದಿರಲ್ಲೂ ಕಾಣಿಸಿಕೊಳ್ಳುವುದಿಲ್ಲ. ಆದರೆ ಬಾಲ್ಯವಿವಾಹವೆಂದರೆ ಆರೋಗ್ಯ ಸಮಸ್ಯೆ ಮಾತ್ರವಲ್ಲ. ಈ ಕಾಲದ ಮಹಿಳೆಯು ಸಮಾನತೆ, ಸ್ವಾಯತ್ತತೆ, ಘನತೆಯ ಬದುಕಿಗಾಗಿ ವಿವಾಹ ವಯಸ್ಸನ್ನು ಇಪ್ಪತ್ತೊಂದೇಕೆ, ಇನ್ನೂ ಕೆಲವು ವರ್ಷ ಮುಂದೆ ಹಾಕಲು ಸಾಧ್ಯವಾಗಬೇಕು. ಬಯಸಿದ ಶಿಕ್ಷಣ ಪಡೆಯಲು, ತನ್ನ ಕಾಲ ಮೇಲೆ ತಾನು ನಿಲ್ಲಲು, ಸಾಮಾಜಿಕ, ರಾಜಕೀಯ ಜಾಗೃತಿಯನ್ನು ಹೊಂದಲು, ತನ್ನ ಸಂಗಾತಿಯನ್ನು ತಾನೇ ಆಯ್ದುಕೊಳ್ಳಲು ಸಾಧ್ಯವಾಗಬೇಕು.

ಆದರೆ ಹೆಣ್ಣಿನ ದೇಹ, ಗಳಿಕೆ, ಸೇವೆ, ಪ್ರಜನನ ಶಕ್ತಿಗಳು ಸಾಧ್ಯವಾದಷ್ಟು ಬೇಗ ತನಗೆ ಲಭ್ಯವಾಗಲೆಂದು ಸಮಾಜ ಬಯಸುವುದೇ ಹೊರತು ಅವಳ ಬೌದ್ಧಿಕ ಶಕ್ತಿ ಯಾರಿಗೂ ಬೇಡವಾಗಿದೆ. ಹಕ್ಕುಗಳಿಂದ ವಂಚಿಸಲ್ಪಟ್ಟ, ಆಯ್ಕೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲದ ಹೆಣ್ಣು ಕುಟುಂಬ ವ್ಯವಸ್ಥೆ ಕುರಿತು ಭ್ರಮನಿರಸನ ಹೊಂದತೊಡಗಿದ್ದಾಳೆ. ದೇಹ ಮತ್ತು ಬುದ್ಧಿ ಬಲಿಯುವ ಮುನ್ನವೇ ಎಳೆಗರುವನ್ನು ನೊಗಕ್ಕೆ ಕಟ್ಟಿ ಎಳೆ ಎಂದದ್ದಕ್ಕೆ, ಹೆರುವ, ಹೊರುವ ಜವಾಬ್ದಾರಿಯಾಚೆ ಬೌದ್ಧಿಕ ಸಂಪನ್ಮೂಲವಾಗಿ ಹೆಣ್ಣನ್ನು ಬಳಸಿಕೊಳ್ಳಲು ಸಮಾಜ ಹಿಂಜರಿದಿದ್ದಕ್ಕೆ ಕುಟುಂಬ ವ್ಯವಸ್ಥೆಯು ಇವತ್ತು ಹಲವು ಸವಾಲುಗಳನ್ನು ಎದುರಿಸುತ್ತಿದೆ.

ವಿಘಟನೆಯತ್ತ ಕುಟುಂಬ ಚಲಿಸಬಾರದೆಂದರೆ ದುರ್ಭರ ಮೌನದಲ್ಲಿ ಹೆಣ್ಣಿನ ದನಿಯು ಮಾಯವಾಗದಂತೆ ಸಮಾಜ ನೋಡಿಕೊಳ್ಳಬೇಕು. ಮದುವೆಯ ವಯಸ್ಸನ್ನು ಏರಿಸುವಂತೆಯೇ ಅವಳ ಸ್ವತಂತ್ರ ಆಲೋಚನೆ, ಬದುಕುಗಳನ್ನು ಸಮಾಜ ಗೌರವಿಸಬೇಕು. ಆಗ ಮಾತ್ರ ನಿಜದ ಹೆಣ್ಣಿನ ಶಕ್ತಿಯನ್ನೂ ಸಾಂಗತ್ಯದ ಸೌಂದರ್ಯವನ್ನೂ ಅನುಭವಿಸಲು ಲೋಕಕ್ಕೆ ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT