ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮಂದಿರಿಗೆ ಸ್ಟೈಲಿಷ್‌ ಡ್ರೆಸ್‌

Last Updated 7 ಜೂನ್ 2019, 19:30 IST
ಅಕ್ಷರ ಗಾತ್ರ

ಮೊದಲ ಬಾರಿ ಮಗುವೊಂದಕ್ಕೆ ತಾಯಿ ಎನಿಸಿಕೊಳ್ಳುವುದು ಹೊಸ ಹಾಗೂ ಅದ್ಭುತ ಲೋಕಕ್ಕೆ ಕಾಲಿಟ್ಟಂತೆ. ಈ ಸಂದರ್ಭದಲ್ಲಿ ಸಹಜವಾಗಿಯೇ ದೇಹದಲ್ಲಾಗುವ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಹಾಗಂತ ಅದೇ ಸಡಿಲವಾದ, ಆಕಾರವಿಲ್ಲದ ಮೆಟರ್ನಿಟಿ ಉಡುಪುಗಳಿಗೆ ಆತುಕೊಳ್ಳಬೇಕಾಗಿಲ್ಲ. ನೀವು ಒಟ್ಟಾರೆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು, ಪ್ರಸಕ್ತ ಮಾರುಕಟ್ಟೆಗೆ ದಾಂಗುಡಿ ಇಡುವ ಆಧುನಿಕ ಉಡುಪುಗಳನ್ನು ತೊಟ್ಟು ಖುಷಿಪಡಬಹುದು.

ನಿಮ್ಮ ವಾರ್ಡ್‌ರೋಬ್‌ಗೆ ಅತ್ಯಾಧುನಿಕ, ಸ್ಟೈಲಿಷ್‌ ಎನಿಸುವಂತಹ, ಆದರೆ ಆರಾಮದಾಯಕವೆನಿಸುವಂತಹ, ನಿಮ್ಮ ಕಂದಮ್ಮನ ಕೆಲಸಗಳಿಗೆ ಯಾವುದೇ ಅಡ್ಡಿ ಉಂಟು ಮಾಡದಂತಹ ಈ ಉಡುಪುಗಳ ಸಂಗ್ರಹ ಸೇರಿಸಬಹುದು.

ಜಂಪ್‌ಸೂಟ್‌: ಚೊಚ್ಚಲ ತಾಯಂದಿರಿಗೆ ಆರಾಮದಾಯಕ ಉಡುಪಿದು. ಧರಿಸಲೂ ಸುಲಭ. ಹೆರಿಗೆಯ ನಂತರ ಅಷ್ಟು ಫಿಟ್‌ ಇರದ ನಿಮ್ಮ ದೇಹವನ್ನು ಆರಾಮವಾಗಿ ಈ ಉಡುಪಿನೊಳಗೆ ತೂರಿಸಿ, ಝಿಪ್‌ ಎಳೆಯಬಹುದು. ಯಾವುದನ್ನು ಧರಿಸಲಿ, ಟಾಪ್‌ ಹಾಗೂ ಬಾಟಮ್‌ ಹೇಗೆ ಹೊಂದಿಸಲಿ ಎಂದು ಆಲೋಚಿಸಲು ಸಮಯ ಇಲ್ಲದಿದ್ದರೆ ಈ ಜಂಪ್‌ಸೂಟ್‌ ನಿಮಗೆ ಸರಿ ಹೊಂದುವಂತಹ ಔಟ್‌ಫಿಟ್‌. ಈ ಉಡುಪಿಗೆ ಜೋಡಿಯಾಗಿ ಒಂದು ಕೊತೆ ಸ್ನೀಕರ್‌ ಹಾಕಿಕೊಳ್ಳಿ. ಇದು ನಿಮ್ಮ ಉಲ್ಲಾಸಮಯವಾದ ಸಂಜೆಗೆ ಮುದ ನೀಡುತ್ತದೆ. ಹಾಗೆಯೇ ಪಾರ್ಟಿಗೆ ಹೋಗುವ ಇರಾದೆ ಇದ್ದರೆ ಒಂದು ಜೊತೆ ಹೈಹೀಲ್ಡ್‌ ಚಪ್ಪಲಿ ಧರಿಸಿ.

ಈ ಜಂಪ್‌ಸೂಟ್‌ ನೋಡಲು ಮಾತ್ರ ಅಂದವಲ್ಲ, ಶಿಶು ಸ್ನೇಹಿ ಕೂಡ.

ಸನ್‌ಡ್ರೆಸ್‌: ವಸಂತ ಕಾಲವೇ ಇರಲಿ ಅಥವಾ ಬೇಸಿಗೆ ಇರಲಿ, ಈ ಸ್ಟೈಲ್‌ ನಿತ್ಯ ನೂತನ. ಇದಕ್ಕೆ ಜೊತೆಯಾಗಿ ಚಪ್ಪಟೆಯಾದ ಚಪ್ಪಲಿ ಅಥವಾ ಕಣಕಾಲು ಮಟ್ಟದ ಶೂ ಧರಿಸಿ. ಮಗುವನ್ನು ಜೊತೆಗೆ ಕರೆದೊಯ್ಯುವುದಾದರೆ ಈ ಉಡುಪಿಗೆ ಶಾರ್ಟ್ಸ್‌ ಧರಿಸುವುದು ಒಳ್ಳೆಯದು. ಕೈಗೆ ಸಿಗದೆ ಓಡುವ, ತುಂಟಾಟವಾಡುವ ಮಗುವನ್ನು ಹಿಡಿದುಕೊಳ್ಳಲು ನೀವೂ ಓಡಬೇಕಾಗುತ್ತದೆ, ಬಗ್ಗಬೇಕಾಗುತ್ತದೆ. ಇದರ ಮೇಲೊಂದು ಜಾಕೆಟ್‌ ಧರಿಸಿದರೆ ಇನ್ನೊಂದಿಷ್ಟು ಗ್ಲಾಮರ್‌ ಸೇರಿಕೊಳ್ಳುತ್ತದೆ. ಜೊತೆಗೆ ಸ್ಟೇಟ್‌ಮೆಂಟ್‌ ಆಭರಣ ಧರಿಸಿ.

ಡೆನಿಮ್‌: ಈ ಫ್ಯಾಷನ್‌ ಯಾವತ್ತೂ ಹಳೆಯದು ಎನಿಸದು. ತಾಯಿಯಾದ ಮಾತ್ರಕ್ಕೆ ಸ್ಟೈಲ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿಲ್ಲದೇ ಈ ಉಡುಪು ಧರಿಸಬಹುದು. ಡೆನಿಮ್‌, ಶರ್ಟ್ಸ್‌, ಟ್ಯುನಿಕ್‌ನಂತಹ ಉಡುಪುಗಳನ್ನು ವಾರ್ಡ್‌ರೋಬ್‌ನ ಮೂಲೆಗೆ ತಳ್ಳದೆ ಆರಾಮವಾಗಿ ಧರಿಸಿ. ನೀಲಿ ಡೆನಿಮ್‌ ಜೊತೆ ತೆರೆದ ಶೂ ಹಾಕಿಕೊಂಡರೆ ಆರಾಮವಾಗಿ ಓಡಾಡಬಹುದು, ಮಗುವನ್ನು ಎತ್ತಿಕೊಂಡು ಬಿಡುಬೀಸಾಗಿ ನಡೆಯಬಹುದು. ಡೆನಿಮ್‌ ಅನ್ನು ಕಚೇರಿಗೂ ಹಾಕಿಕೊಂಡು ಹೋಗಬಹುದು. ಫಾರ್ಮಲ್‌ ಸಂದರ್ಭಗಳಿದ್ದರೆ ಮೇಲೊಂದು ಉದ್ದನೆಯ ಕೋಟ್‌ ಧರಿಸಬಹುದು. ಆದರೆ ಈ ಕೋಟ್‌ ಅಥವಾ ಬ್ಲೇಜರ್‌ ಆದಷ್ಟು ಫಿಟ್‌ ಆಗಿರಲಿ.

ಟೀ ಶರ್ಟ್‌ ಮತ್ತು ಜೀನ್ಸ್‌: ಈ ಉಡುಪಿನ ಸೆಟ್‌ ನಿತ್ಯ ನೂತನ ಎನ್ನಬಹುದು. ಮಗುವಿನ ಜೊತೆ ಓಡಾಡುವಾಗ ಅಥವಾ ಯಾರನ್ನಾದರೂ ಭೇಟಿಯಾಗಲು ಹೋಗುವಾಗ ಇದು ಅತ್ಯಂತ ಆರಾಮದಾಯಕ ಉಡುಪು. ಹೈ ವೇಸ್ಟ್‌ ಜೀನ್ಸ್‌ ಜೊತೆ ಬಿಳಿಯ ಶರ್ಟ್‌ ಅನ್ನು ಧರಿಸಿ ಹೋಗಿ. ಇದು ನಿಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.

ಜೆಗ್ಗಿಂಗ್ಸ್‌ ಮತ್ತು ಲೆಗ್ಗಿಂಗ್ಸ್‌: ಲೆಗ್ಗಿಂಗ್ಸ್‌ ಎಲಾಸ್ಟಿಕ್‌ ಹೊಂದಿರುವುದರಿಂದ ಮತ್ತು ಹೇಗೆ ಬೇಕಾದರೂ ಹಿಗ್ಗುವುದರಿಂದ ನಿತ್ಯದ ಉಡುಪಾಗಿ ಹೊಂದಿಕೊಳ್ಳುತ್ತದೆ. ಆದರೆ ವಿಪರೀತ ಬಿಗಿ ಇರುವುದನ್ನು ಧರಿಸಬೇಡಿ. ಇದು ಕಿರಿಕಿರಿ ಉಂಟು ಮಾಡುತ್ತದೆ ಮಾತ್ರವಲ್ಲ, ನಿಮ್ಮ ತ್ವಚೆಗೆ ಉಸಿರಾಡಲು ಕಷ್ಟವಾಗುತ್ತದೆ. ದಟ್ಟವಾದ ವರ್ಣದಲ್ಲಿರುವ ಲೆಗ್ಗಿಂಗ್ಸ್‌ಗೆ ಗಿಡ್ಡನೆಯ ಕುರ್ತಿ ಅಥವಾ ಉದ್ದನೆಯ ಕಮೀಜ್‌ ಯಾವುದನ್ನು ಬೇಕಾದರೂ ಧರಿಸಬಹುದು. ಟ್ಯುನಿಕ್‌ ಕೂಡ ಇದಕ್ಕೆ ಹೊಂದಿಕೊಳ್ಳುತ್ತದೆ.

ಡ್ರೇಪ್ಡ್‌ ಟ್ರೆಂಚ್‌: ಇದು ಉದ್ದನೆಯ ಓವರ್‌ ಕೋಟ್‌. ಚಿಕ್ಕ ಮಗುವಿದ್ದರೆ ಅದರ ಜೊಲ್ಲು ಅಂಟಿದ ಉಡುಪು, ಸಿಹಿ ತಿಂದ ಅದರ ಬಾಯಿ ಒರೆಸಿದ ಕೈಗಳನ್ನು ಮರೆ ಮಾಚಲು ಇದು ನೆರವಿಗೆ ಬರುತ್ತದೆ. ಜೊತೆಗೆ ಇದು ಎಲ್ಲರಿಗೂ ಹೊಂದುವಂತಹ ಉಡುಪು. ಸಾಕಷ್ಟು ಜೇಬುಗಳಿರುವುದರಿಂದ ಅನುಕೂಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT