ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯದ ಜೊತೆ ಮಾತನಾಡಿ

Last Updated 25 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ನಾನು ಏಳು ವರ್ಷಗಳಿಂದ ಉಪನ್ಯಾಸಕ. ದಿನವೂ 128 ಕಿ.ಮೀ. ಪ್ರಯಾಣ ಮಾಡಬೇಕಾಗಿದೆ. ಮದ್ಯವ್ಯಸನಿಯಾಗಿದ್ದ ತಂದೆ ಆತ್ಮಹತ್ಯೆ ಮಾಡಿಕೊಂಡರು. ಮನೆ, ಉದ್ಯೋಗ, ಹೊಲ, ವಿವಾಹ, ತಿರುಗಾಟಗಳ ಮಧ್ಯೆ ಜನ ಮಾತನಾಡಿಸಿದರೆ, ಸುಮ್ಮನೆ ಒಂದು ನಿಮಿಷ ನಿಂತರೆ ನಡುಗಲಾರಂಭಿಸಿದೆ. ಈಗ ಎಲ್ಲಾ ಸಂದರ್ಭಗಳಲ್ಲಿಯೂ ನಡುಕವುಂಟಾಗುತ್ತದೆ. ಮಾತ್ರೆ ತೆಗೆದುಕೊಂಡರೆ ಸುಧಾರಣೆ ಆಗುತ್ತದೆ. ಭಯಪಡುವ ಕಾರಣವಿಲ್ಲ ಎಂದು ನನಗೆ ಅರಿವಿದೆ. ಆದರೂ ವಿದ್ಯಾರ್ಥಿಗಳ ಎದುರು ನಿಂತಾಗ, ಪ್ರಾರ್ಥನೆ ಮಾಡುವಾಗ ನಡುಕ ಪ್ರಾರಂಭವಾಗುತ್ತದೆ. ಭಯದಿಂದ ಹೊರಬರಲು ನಾನೇನು ಮಾಡಬೇಕು?
–ಹೆಸರು, ಊರು ಬೇಡ

ಉತ್ತರ: ಭಯ ನಿಮ್ಮ ದೇಹಕ್ಕೆ ನೀಡುವ ಸೂಚನೆಯನ್ನು ನಡುಕ ಎಂದು ತಿಳಿದು ಅದಕ್ಕೆ ಮಾತ್ರೆ ತೆಗೆದುಕೊಳ್ಳುತ್ತಿದ್ದೀರಿ. ಭಯ ನಿಮ್ಮದೇ ವ್ಯಕ್ತಿತ್ವದ ಬಗ್ಗೆ ನಿಮ್ಮ ಮನಸ್ಸಿನಾಳದಲ್ಲಿ ಇರುವ ಕೆಲವು ಅನಿಸಿಕೆಗಳನ್ನು ಸೂಚಿಸುತ್ತಿದೆ. ಅವುಗಳನ್ನು ಗಮನಿಸಿದ್ದೀರಾ? ಅದನ್ನು ತಿಳಿಯಲು ಒಂದು ಪ್ರಯೋಗ ಮಾಡಿ. ಏಕಾಂತದಲ್ಲಿ ಒಂದು ಖಾಲಿ ಕುರ್ಚಿಯನ್ನು ನಿಮ್ಮೆದುರು ಇಟ್ಟು ಕುಳಿತುಕೊಳ್ಳಿ. ನಿಮ್ಮ ಭಯಕ್ಕೆ ಒಂದು ಮನುಷ್ಯನ ಆಕಾರವನ್ನು ನೀಡಿ ಕುರ್ಚಿಯಲ್ಲಿ ಕೂರಿಸಿ ಏನು ಬೇಕಾದರೂ ಮಾತನಾಡಲು ಹೇಳಿ. ಆ ಭಯವನ್ನು ನಿಮ್ಮದು ಎಂದುಕೊಳ್ಳದೆ ಸುಮ್ಮನೆ ಗಮನಿಸಿ ‘ನೀನು ಅಯೋಗ್ಯ, ನಿನಗೆ ಮನೆ, ಹೆಂಡತಿ, ಮಕ್ಕಳು, ಹೊಲ, ಉದ್ಯೋಗ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ, ನೀನು ಎಲ್ಲಾ ಕಡೆ ಸೋತು ಅಪಮಾನದಿಂದ ನರಳುತ್ತೀಯಾ, ಕೊನೆಗೆ ನನ್ನಿಂದ ತಪ್ಪಿಸಿಕೊಳ್ಳಲು ಕುಡಿತಕ್ಕೆ ಶರಣಾಗಿ ನಿಮ್ಮಪ್ಪನಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತೀಯಾ....’ ಹೀಗೆ ಭಯ ಏನೇನೋ ಹೇಳಲು ಸಾಧ್ಯವಿದೆ.

ಹೆದರಿಕೆಯಾದರೆ ನಡುಗಿ, ದುಃಖವಾದರೆ ಅತ್ತುಬಿಡಿ, ಆದರೆ ಭಯಕ್ಕೆ ಉತ್ತರಿಸಬೇಡಿ ಮತ್ತು ಅಲ್ಲಿಂದ ಓಡಿಹೋಗಬೇಡಿ. ಭಯ ಹೇಳಿದ ಅಭಿಪ್ರಾಯಗಳನ್ನು ಬರೆದಿಟ್ಟುಕೊಂಡು ನಂತರ ಸಮಾಧಾನದಲ್ಲಿ ಅವು ನಿಜವೇ ಎಂದು ಯೋಚಿಸಿ. ಕೆಲವು ದಿನಗಳ ನಂತರ ಮತ್ತೆ ಭಯವನ್ನು ಕುರ್ಚಿಯಲ್ಲಿ ಕೂರಿಸಿ, ‘ನೀನು ನನ್ನಲ್ಲಿ ನಡುಕವುಂಟು ಮಾಡದೆ ನನ್ನೊಡನೆ ಸ್ನೇಹದಿಂದಿರಲು ಏನು ಮಾಡಬೇಕು?’ ಎಂದು ಕೇಳಿ. ಆಗ ಭಯ ಹೇಳುವ ಪರಿಹಾರಗಳನ್ನು ಬರೆದಿಟ್ಟುಕೊಂಡು ಆಗಾಗ ನೆನಪು ಮಾಡಿಕೊಂಡು ಅನುಸರಿಸಿ.

ಮೊದಲ ಒಂದೆರೆಡು ಪ್ರಯತ್ನದಲ್ಲಿ ವಿಫಲರಾದರೂ ಪ್ರಯೋಗವನ್ನು ಬದಲಾವಣೆಗಳೊಂದಿಗೆ ಮುಂದುವರೆಸಿ. ನಿಮ್ಮ ಬಗೆಗೆ ನಿಮಗೇ ಗೊತ್ತಿರದ ಹಲವಾರು ಅಂಶಗಳನ್ನು ಭಯ ಹೇಳುತ್ತದೆ.

**

ಸರ್, ನಂದು ಬಿ.ಇ. ಆಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ಮನೆಯಲ್ಲಿ ಆಂಟಿ ಓದೋಕೆ ಬಿಡಲ್ಲ, ಬರೀ ಬೈತಿರ್ತಾರೆ. ನನಗೆ ಹಿಂಸೆ ಆಗುತ್ತದೆ. ಹೊರಗಡೆ ಹೋಗಿ ಓದೋಕೂ ಬಿಡ್ತಿಲ್ಲ. ಏನು ಮಾಡಬೇಕು ಗೊತ್ತಾಗ್ತಿಲ್ಲ.
–ಶಿಲ್ಪಾ, ಊರು ಬೇಡ

ಉತ್ತರ: ನೀವು ಕುಟುಂಬದ ಪೂರ್ಣ ವಿವರ ನೀಡಿಲ್ಲ. ನೀಡಿರುವ ವಿವರಗಳನ್ನು ನೋಡಿದರೆ ನಿಮ್ಮ ಕುಟುಂಬದಲ್ಲಿ ಸೌಹಾರ್ದಯುತ ವಾತಾವರಣವಿದ್ದಂತಿಲ್ಲ. ನಿಮಗೆ ಕುಟುಂಬದ ಬೆಂಬಲವಿರುವ ಸಾಧ್ಯತೆಗಳು ಕಡಿಮೆ. ಇಂತಹ ವಾತಾವರಣದಲ್ಲಿ ಓದಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವುದು ಸಾಧ್ಯವೇ? ಪಡೆಯದಿದ್ದಾಗ ಮತ್ತೆ ಮನೆಯವರಿಂದ ಹಿಂಸೆಯನ್ನು ಎದುರಿಸಬೇಕಲ್ಲವೇ? ಬಿ.ಇ. ಆಗಿರುವುದರಿಂದ ನೀವು ಉದ್ಯೋಗವನ್ನು ಅರಸಿ ಆರ್ಥಿಕವಾಗಿ ಸ್ವಂತಂತ್ರವಾಗುವುದರ ಬಗ್ಗೆ ಏಕೆ ಯೋಚಿಸುತ್ತಿಲ್ಲ? ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನೂ ಮುಂದುವರಿಸಿ. ನಿಮಗೆ ಸಿಗುವ ಸ್ವಾತಂತ್ರ್ಯದಿಂದ ಮನಸ್ಸು ನಿರಾಳವಾಗಿದ್ದಾಗ ಓದು ಸುಲಲಿತವಾಗಿ ಸಾಗಬಹುದಲ್ಲವೇ? ಹೆಚ್ಚೆಂದರೆ ಸಮಯದ ಕೊರತೆಯಿಂದ ಸ್ವಲ್ಪ ನಿಧಾನವಾಗಬಹುದು. ಹಾಗೊಮ್ಮೆ ಉತ್ತೀರ್ಣರಾಗದಿದ್ದರೂ ನಿಮ್ಮ ಆತ್ಮಗೌರವವನ್ನು ಯಾರೂ ಕಸಿದುಕೊಳ್ಳಲಾರರು. ‘ಹಂಗಿನರಮನೆಗಿಂತ ವಿಂಗಡದ ಗುಡಿ (ಗುಡಿಸಲು) ಲೇಸು’ ಎನ್ನುವ ಸರ್ವಜ್ಞನ ವಚನ ಕೇಳಿಲ್ಲವೇ?

**
ನಾನು 9ನೇ ತರಗತಿ ಓದುತ್ತಿದ್ದೇನೆ. ಓದಿರೋದೆಲ್ಲ ಅರ್ಥವಾಗುತ್ತೆ, ಆದರೆ ನಾಳೆ ಕೇಳಿದರೆ ಉತ್ತರ ಬರಲ್ಲ. ಪರೀಕ್ಷೆಯಲ್ಲೂ ಹಾಗೆಯೇ ಆಗುತ್ತದೆ. ದಯವಿಟ್ಟು ಸಲಹೆ ನೀಡಿ.
–ಚಂದ್ರಶಿಲ್ಪ, ಊರು ಬೇಡ

ಉತ್ತರ: ಮಗೂ ಇನ್ನೂ 9ನೇ ತರಗತಿಯಲ್ಲಿರುವಾಗ ನಿನಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಲಹೆ ಕೇಳುವ ದಿಟ್ಟತನ, ಪ್ರಾಮಾಣಿಕತೆ ತೋರಿಸುತ್ತಿದ್ದೀಯಾ. ನನಗೆ ನಿನ್ನ ಗುಣಗಳು ತುಂಬಾ ಮೆಚ್ಚುಗೆಯಾದವು. ಈ ಧೈರ್ಯ, ಪ್ರಾಮಾಣಿಕತೆಯನ್ನು ಯಾವಾಗಲೂ ಕಳೆದುಕೊಳ್ಳಬೇಡ.

ನಿನಗೊಂದು ಪ್ರಶ್ನೆ. ಜಾತ್ರೆಗೆ ಹೋದಾಗ ಸಾವಿರಾರು ಮುಖಗಳನ್ನು ನೋಡುತ್ತೀಯಲ್ಲವೇ? ಮರುದಿನ ಅವುಗಳಲ್ಲಿ ಎಷ್ಟು ನೆನಪಿರುತ್ತದೆ? ಒಂದೂ ನೆನಪಿರಲ್ಲ. ನೀನು ಜಾತ್ರೆಯಲ್ಲಿ ಮುಖಗಳನ್ನು ನೋಡುವಂತೆ ಓದುತ್ತಿದ್ದೀಯಾ. ವಿಷಯಗಳನ್ನು ಗ್ರಹಿಸಿ ಅರ್ಥ ಮಾಡಿಕೊಂಡು ನಿನ್ನ ಮೆದುಳಿನಲ್ಲಿ ದಾಖಲಿಸುತ್ತಿಲ್ಲ. ನಿನ್ನ ನೋಟ್ಸ್ ಪ್ರಶ್ನೋತ್ತರಗಳನ್ನು ಬದಿಗಿಟ್ಟು ಮೊದಲು ಪಠ್ಯಗಳನ್ನು ಓದಿ ಅರ್ಥಮಾಡಿಕೊ. ನೀನೇ ಪ್ರಶ್ನೆಗಳನ್ನು ಹಾಕಿಕೊಂಡು ಉತ್ತರ ಹುಡುಕು. ನಂತರ ನೋಟ್ಸ್‌ಗಳನ್ನು ಓದು. ಶುಭವಾಗಲಿ.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT