ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿಲ್ಲದ ಆ ದಿನಗಳು!

Last Updated 21 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಮೊನ್ನೆ ಎರಡು ದಿನಗಳ ಮಟ್ಟಿಗೆ ಊರಿಗೆ ಹೊರಡಬೇಕಾಗಿ ಬಂತು. ಹೊರಡುವ ದಿನ ಮನೆಯಲ್ಲಿರುವವರಿಗಾಗಿ ದೋಸೆಹಿಟ್ಟು ರುಬ್ಬಿ, ಸಾರು ಮಾಡಿಟ್ಟು, ಮರುದಿನಕ್ಕೆಂದು ಡಿಕಾಕ್ಷನ್ ಹಾಕಿ, ಮಕ್ಕಳ ಸಮವಸ್ತ್ರ ಇಸ್ತ್ರಿ ಮಾಡಿ ನನ್ನ ಬ್ಯಾಗ್‌ ಅನ್ನು ರೆಡಿ ಮಾಡಿಕೊಳ್ಳುವಷ್ಟರಲ್ಲಿ ಹೈರಾಣಾಗಿ ಹೋದೆ. ಮಾಮೂಲಿ ದಿನಗಳಿಗಿಂತ ದುಪ್ಪಟ್ಟು ಶ್ರಮ. ಇಷ್ಟೆಲ್ಲಾ ಮಾಡಿ ಹೋದರೂ ಅಲ್ಲಿ ನೆಮ್ಮದಿ ಇದೆಯೆಂದು ತಿಳಿದಿರಾ? ‘ಅಮ್ಮಾ, ಇನ್ನೊಂದು ಸಾಕ್ಸ್ ಸಿಗ್ತಾಯಿಲ್ಲ’, ‘ಇಕ್ಕಳ ಎಲ್ಲಿದೆ?’, ‘ಹಾಲು ಒಡೆದು ಹೋಗಿದೆ..’ ಎಂದು ಫೋನಿನ ಮೇಲೆ ಫೋನು. ಆದಷ್ಟು ನೆನಪಿನಿಂದ ಎಲ್ಲಾ ವ್ಯವಸ್ಥೆ ಮಾಡಿಟ್ಟು ಬಂದಿದ್ದರೂ ಆತಂಕ ಮಾತ್ರ ನನ್ನನ್ನು ತಪ್ಪಲಿಲ್ಲ. ಮದುವೆ ಮುಗಿಸಿ ಮನೆಗೆ ತಲುಪಿದಾಗ ಇಟ್ಟಲ್ಲಿ ಒಂದೂ ಇಲ್ಲದೆ ಚೆಲ್ಲಾಪಿಲ್ಲಿಯಾದ ಮನೆ ಯಕ್ಷಗಾನದ ಚೌಕಿಯನ್ನು ನೆನಪಿಸಿತು. ಇಡೀ ಮನೆಯನ್ನು ಒಂದು ಹದ್ದುಬಸ್ತಿಗೆ ತರುವಷ್ಟರಲ್ಲಿ ವಾರ ಕಳೆಯಿತು.

ಪ್ಯಾಕಿಂಗ್ ಕೂಡಾ ಕಷ್ಟವೇ!

ತಿಂಗಳ ಹಿಂದೆ ಗಂಡ ಹೊರಗೆ ಹೋದಾಗ ಬಸ್ಸು ಬರುವ ಅರ್ಧ ಗಂಟೆ ಮುಂಚೆ ಪ್ಯಾಕ್ ಮಾಡಿಕೊಂಡಿದ್ದು ನೆನಪಿಗೆ ಬಂತು. ‘ಅದು ಹಾಕ್ಕೊಂಡ್ರಿಯಾ, ಇದು ಮರೆತಿಲ್ಲ ತಾನೆ’ ಎಂದು ನೆನಪಿಸಿಕೊಟ್ಟರೂ, ’ಅದು ಇಲ್ಲದಿದ್ದರೆ ಏನಾಗೋದಿಲ್ಲ, ಅಷ್ಟು ಬೇಕಾಗಿದ್ರೆ ತಮ್ಮನದ್ದು ಇದೆ’ ಎಂದಾಗ ಗಂಡಸರು ಅದೆಷ್ಟು ಪುಣ್ಯ ಪುರುಷರಪ್ಪಾ ಅಂದುಕೊಳ್ಳುವಂತಾಯಿತು. ಅದೇ ಮಹಿಳೆಯರಿಗೆ ಅವರದ್ದಿದೆ, ಇವರದ್ದಿದೆ ಅನ್ನಲಿಕ್ಕಾಗುತ್ತದೆಯೇ? ಪುಟ್ಟಮಕ್ಕಳ ತಾಯಂದಿರಿಗಂತೂ ಸಿರಿಲ್ಯಾಕ್, ಡಯಾಪರ್, ಪೌಡರ್, ಪೇಸ್ಟು, ಬ್ರಶ್‌, ಶಿಶುಗಳದ್ದೇ ಅಗತ್ಯದ ಬಟ್ಟೆಗಳು ಎಂದು ಎಲ್ಲವನ್ನೂ ನೆನಪಿನಲ್ಲಿಟ್ಟುಕೊಂಡು ಪ್ಯಾಕ್ ಮಾಡಿಕೊಳ್ಳದಿದ್ದರೆ ಹೋದಮೇಲೆ ಅಧ್ವಾನವೇ ಸರಿ.

ದುಬೈವಾಸಿಯಾಗಿದ್ದ ನನ್ನ ಗೆಳತಿ ವರ್ಷದ ರಜೆಗೆಂದು ಮಗಳೊಂದಿಗೆ ಭಾರತಕ್ಕೆ ಬರುವಾಗ, 10 ದಿನ ಬಿಟ್ಟು ಬರುವ ಗಂಡನಿಗಾಗಿ ಅಷ್ಟು ದಿನಗಳಿಗಾಗುವಷ್ಟು ಹುಳಿ, ಅನ್ನಕ್ಕೆ ಕಲೆಸಿಕೊಂಡು ದಿಢೀರ್ ಆಗಿ ತಿನ್ನಲು ಅನುಕೂಲವಾಗುವಂತೆ ಆ ಪುಡಿ, ಈ ಪುಡಿ ಮಾಡಿಟ್ಟೇ ಬರುತ್ತಿದ್ದಳಂತೆ. ಇದಕ್ಕೆ ತಯಾರಿ ವಾರದ ಮುಂಚೆಯೇ ಆರಂಭವಾಗುತ್ತದೆ. ಇದ್ದ ಅಷ್ಟೂ ದಿನ ಹೊರಗಿನ ಆಹಾರ ತಿಂದರೆ ಆರೋಗ್ಯದ ಗತಿ ನೆನಪಿಸಿಕೊಂಡೇ, ಕಷ್ಟವಾದರೂ ಚಿಂತೆಯಿಲ್ಲ ಎಂದು ಮಾಡಲೇಬೇಕಾದ ಅನಿವಾರ್ಯತೆ ಇದು.

ಹಳ್ಳಿಯ ಮಹಿಳೆಯರೂ ಹೊರತಲ್ಲ..

ನಗರದಲ್ಲಿರುವ ಮಹಿಳೆಯರ ಕತೆ ಇದಾದರೆ, ಇನ್ನು ಹಳ್ಳಿಯಲ್ಲಿರುವ ಮಹಿಳೆಯರು ಮನೆಯಿಂದ ಆಚೆ ಹೋಗುವುದೆಂದರೆ ದೇವರಿಗೇ ಪ್ರೀತಿ. ಮೇಲಿನಂತಹ ಮನೆವಾರ್ತೆಯ ಕೆಲಸವಲ್ಲದೆ ಹಟ್ಟಿಯಲ್ಲಿರುವ ಹಸುಗಳ ಹಾಲು ಕರೆಯಲು, ಹುಲ್ಲು ಹಾಕಲು, ಸೆಗಣಿ ಬಾಚಲು, ತೋಟದ ಕೆಲಸಗಳಿಗೆ ನಂಬಿಕಸ್ಥ ಜನರ ವ್ಯವಸ್ಥೆ ಮಾಡಬೇಕು. ಬೆಳಿಗ್ಗೆ ಹೋದರೆ ಸಂಜೆ ಮರಳುವ ಗಂಡ, ಮಕ್ಕಳನ್ನು ನಂಬಿದರೆ ನಡೆವ ಕೆಲಸಗಳು ಇವಲ್ಲ. ಇಂಥ ಕೆಲಸಕ್ಕೆ ಜನ ಸಿಕ್ಕುವುದೇ ದುರ್ಲಭವಾಗಿರುವಾಗ ಇಷ್ಟೆಲ್ಲಾ ವ್ಯವಸ್ಥೆ ಮಾಡಿಟ್ಟು ಹೊರಡುವ ಬದಲು, ಮನೆಯಲ್ಲಿರುವುದೇ ಜಾಣತನ ಅನ್ನಿಸುತ್ತದೆ. ಹೀಗಾಗಿ ಆದಷ್ಟು ಮನೆಬಿಡುವುದನ್ನು ತಪ್ಪಿಸಿಕೊಳ್ಳುವುದು ಇದೇ ಕಾರಣಕ್ಕೆ. ಇನ್ನು ಮನೆಯಲ್ಲಿ ಹಿರಿಯರಿದ್ದರೆ, ಅನಾರೋಗ್ಯಪೀಡಿತರಿದ್ದರೆ ಅವರನ್ನೂ ಗಮನದಲ್ಲಿಟ್ಟುಕೊಂಡೇ ಅವರ ದಿನಚರಿಗಳಿಗೆ ಚ್ಯುತಿ
ಬಾರದಂತೆ ವ್ಯವಸ್ಥೆ ಮಾಡುವುದೆಂದರೆ ತಮಾಷೆಯಲ್ಲ.

ಉದ್ಯೋಗಸ್ಥ ಮಹಿಳೆಯರಿಗೆ ದಿನಚರಿಯ ಭಾಗವೇ ಆಗಿ ಹೋಗಿವೆ ಇಂಥ ಕೆಲಸಗಳು. ಸಂಜೆ ಬರುವಾಗ ಗಾಳಿ ಹೋದ ಟಯರ್‌ನಂತೆ ಬಸವಳಿದು ಹೋಗಿರುತ್ತಾಳೆ.

ಗೃಹಿಣಿ ಮನೆ ಹೊರಗೆ ಕಾಲಿಡುವ ಮುನ್ನ ಮನೆಮಂದಿಯ ಹಿತರಕ್ಷಣೆಗಾಗಿ ಎಷ್ಟೆಲ್ಲ ವ್ಯವಸ್ಥೆಗಳನ್ನು ಮಾಡಬೇಕು! ಗೃಹಿಣಿ ಮನೆಯಲ್ಲಿಲ್ಲ ಅಂದರೆ ಮನೆಯ ನಿರ್ವಹಣೆ ಇಲ್ಲದೆ ಮನೆ ಕಳಾಹೀನವಾಗಿರುತ್ತದೆ.

ಗೃಹಿಣಿಯೇಕೆ ಗೇಲಿಯ ವಸ್ತು?

ಕೇವಲ ಮನೆಗೆಲಸಕ್ಕೆ ಇಷ್ಟೊಂದು ಅವತಾರವೇ ಎಂದು ಗೇಲಿಗೊಳಗಾಗುವ ಗೃಹಿಣಿ, ಸಮಾಜದ ಕಣ್ಣಲ್ಲಿ ಯಾವತ್ತೂ ಸಸಾರವೇ. ಮನೆಯಲ್ಲಿ ಆರಾಮವಾಗಿ ಟಿವಿ ನೋಡುತ್ತಾ, ನಿದ್ದೆ ಮಾಡುತ್ತಾ ಕಾಲಕಳೆಯುವವಳು ಎಂದು ಬಹಳವಾಗಿ ನಂಬಿಕೊಂಡಿರುವ ಸಮಾಜಕ್ಕೆ ಅವಳ ಬೆಲೆ ಗೊತ್ತಾಗುವುದು ಅವಳು ಮನೆಯಲ್ಲಿಲ್ಲದಾಗಲೇ. ಹೇಗೆ ವಸ್ತುವೊಂದು ನಮ್ಮ ಬಳಿ ಇದ್ದಾಗ ಅದರ ಬೆಲೆ ತಿಳಿಯದೋ ಹಾಗೆಯೇ. ಯಾರಿಗೆ ಯಾವ ಕೆಲಸ ನಿಯೋಜನೆಗೊಂಡಿರುತ್ತದೋ ಅವರ ಬದಲು ಬೇರೆ ಯಾರೂ ಅದನ್ನು ಮಾಡಲು ಸಾಧ್ಯವಿಲ್ಲ. ಸಾಧ್ಯವಿದ್ದರೂ ಅವರಂತೆ ಸಂಪೂರ್ಣ ನ್ಯಾಯ ಒದಗಿಸಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT