ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಅಶ್ಲೀಲ ನಿಂದನೆಯನ್ನೇ ಆಯುಧ ಮಾಡಿಕೊಂಡವರ ಪೊಳ್ಳುತನ ಕಂಡು ಮರುಕವಾಗುತ್ತದೆ'

Last Updated 8 ಮಾರ್ಚ್ 2019, 4:10 IST
ಅಕ್ಷರ ಗಾತ್ರ

ಫೇಸ್ ಬುಕ್ನಲ್ಲಿ ನಾನು ಮೊದಲ ಖಾತೆ ತೆರೆದಿದ್ದು 2009ರಲ್ಲಿ. ಈಗ ಫೇಸ್ ಬುಕ್’ನಲ್ಲಿ ಬರೀತಿರೋದೆಲ್ಲವನ್ನೂ ಆಗ ದೊಡ್ಡ ದೊಡ್ಡ ಲೇಖನಗಳಾಗಿ ಬ್ಲಾಗ್’ನಲ್ಲಿ ಬರೀತಿದ್ದರಿಂದ, ಬ್ಲಾಗ್ ಸ್ಪೇಸಿನಲ್ಲಿ ಚಿಕ್ಕಪುಟ್ಟ ಪ್ರತಿರೋಧ – ಜಗಳಗಳು ನಡೆದರೂ ಸೌಹಾರ್ದವೂ ಸಹಿಷ್ಣುವೂ ಆದ ವಾತಾವರಣವಿತ್ತು. 2012ರ ವೇಳೆಗೆ ಬ್ಲಾಗಿಂಗ್ ಏಕಾಏಕಿ ಕಡಿಮೆಯಾಗಿಹೋಯಿತು. ಫೇಸ್ ಬುಕ್ ಜನಪ್ರತಿಯತೆ ಪಡೆಯಲು ಆರಂಭಿಸಿದ್ದ ದಿನಗಳವು. ಆ ದಿನಗಳಲ್ಲಿ ನಮ್ಮ ನಮ್ಮ ಕಥೆ ಕವನ ಚಿತ್ರ ಇತ್ಯಾದಿಗಳ ‘ಪ್ರದರ್ಶನ’ಕ್ಕೊಂದು ವೇದಿಕೆಯಾಗಿ ಫೇಸ್ ಬುಕ್ ಒದಗಿಬಂತು. ಆ ಅವಧಿಯಲ್ಲಿ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಸಂಗತಿಗಳ ಚರ್ಚೆ ನಡೆಸುವುದಕ್ಕೂ ಫೇಸ್ ಬುಕ್ ವೇದಿಕೆಯಾಗಿ ರೂಪುಗೊಳ್ಳತೊಡಗಿತ್ತು. ಈ ಕ್ಷೇತ್ರಗಳ ಬಗ್ಗೆ ಸದಾ ಕುತೂಹಲ ಮತ್ತು ಆಸಕ್ತಿ ಇದ್ದ ನಾನು ಕೂಡಾ ವರ್ತಮಾನದ ವಿದ್ಯಮಾನ ಕುರಿತು ನನ್ನ ಅನ್ನಿಸಿಕೆಗಳನ್ನು ಹಂಚಿಕೊಳ್ಳಲಾರಂಭಿಸಿದೆ. ಭಯೋತ್ಪಾದನೆ, ಅತ್ಯಾಚಾರ, ರಾಜಕಾರಣ ಇತ್ಯಾದಿ ಸಂಗತಿಗಳ ಬಗ್ಗೆ ಬರೆದಾಗ ಅಸಮ್ಮತಿ, ಪ್ರತಿರೋಧಗಳು ಆಗಲೂ ಬರುತ್ತಿದ್ದವು. ಆದರೆ ಅವು ಪೊಳ್ಳಾಗಿರುತ್ತಿರಲಿಲ್ಲ, ದ್ವೇಷ ಕಾರುವಂತೆ ಇರುತ್ತಿರಲಿಲ್ಲ. ವೈಯಕ್ತಿಕವಾಗಿ ನಾನಂತೂ ಆ ಅವಧಿಯಲ್ಲಿ ಅಸಭ್ಯ – ಅಶ್ಲೀಲ ಕಮೆಂಟುಗಳನ್ನು ಎದುರಿಸಿರಲಿಲ್ಲ.

ಕೇವಲ ಒಂದೇ ವರ್ಷದ ಅವಧಿಯಲ್ಲಿ ಫೇಸ್ ಬುಕ್ ಚಹರೆ ಬದಲಾಗಿಹೋಯ್ತು. ನಿರ್ದಿಷ್ಟ ಸಿದ್ಧಾಂತದ ಬಗ್ಗೆ, ಮತೀಯವಾದದ ಬಗ್ಗೆ, ಒಂದು ರಾಜಕೀಯ ಪಕ್ಷದ ಬಗ್ಗೆ ವಿಮರ್ಶಾತ್ಮಕವಾಗಿ ಏನನ್ನು ಬರೆದರೂ; ಒಂದು ನಿರ್ದಿಷ್ಟ ಸಮುದಾಯದ ಪರವಾಗಿ, ಪ್ರಜ್ಞಾವಂತರ ಪರವಾಗಿ ಏನನ್ನು ಬರೆದರೂ ನಮ್ಮ ಕೆಲವು ಪರಿಚಿತರೇ ನಮ್ಮ ಮೇಲೆ ಹರಿಹಾಯತೊಡಗಿದರು. ಜೊತೆಗಿದ್ದವರೇ ಎದುರು ನಿಂತು ಶತ್ರುಗಳಂತೆ ದ್ವೇಷ ಕಾರತೊಡಗಿದರು. ಆ ದಿನಗಳಲ್ಲಿ ಲೋಕಸಭಾ ಚುನಾವಣೆ ಸಿದ್ಧತೆ ನಡೆಯುತ್ತಿತ್ತಾದರೂ ನಮ್ಮಲ್ಲಿ ಬಹುತೇಕರಿಗೆ ಇವೆಲ್ಲ ಚುನಾವಣಾ ರಾಜಕಾರಣದ ಭಾಗ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು.
ಹೀಗೆ ಕಳೆದ ಚುನಾವಣೆ ವೇಳೆ ಶುರುವಾಗಿದ್ದ ಅಸಹಿಷ್ಣುತೆಯ ಕಳೆ ಗಿಡ, ಐದು ವರ್ಷ ಮುಗಿಯುವ ವೇಳೆಗೆ ನಿವಾರಿಸಲಾಗದ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಮರ ಉಗುಳುವ ವಿಷಗಾಳಿಗೆ ತುತ್ತಾದವರಲ್ಲಿ ನಾನೂ ಒಬ್ಬಳಾಗಿದ್ದೇನೆ.

ಫೇಸ್ ಬುಕ್’ನಲ್ಲಿ ಯಾವ ವಿಷಯಗಳನ್ನು ಬರೆದರೆ ಅಶ್ಲೀಲ ವಾಗ್ದಾಳಿ ನಡೆಯುತ್ತದೆ ಮತ್ತು ಬೆದರಿಕೆ ಎದುರಿಸಬೇಕಾಗುತ್ತದೆ ಅನ್ನುವುದನ್ನು ಗಮನಿಸಿದರೆ, ಅದನ್ನು ಯಾರು – ಯಾಕಾಗಿ ಮಾಡುತ್ತಿದ್ದಾರೆ ಎಂದು ಊಹಿಸುವುದು ಕಷ್ಟವಲ್ಲ. ನಾನು ಇವುಗಳನ್ನು ಎದುರಿಸಿದ್ದು ಫ್ಯಾಸಿಸ್ಟ್ ರಾಜಕಾರಣದ ವಿರುದ್ಧ ನನ್ನ ಅಭಿಪ್ರಾಯಗಳನ್ನು ದಾಖಲಿಸಿದ್ದಕ್ಕೆ; ಗುಜರಾತ್ ಹತ್ಯಾಕಾಂಡದ ಕಳಂಕ ಹೊತ್ತ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತರಾದಾಗ ಅದನ್ನು ವಿರೋಧಿಸಿದ್ದಕ್ಕೆ; ಕೇಸರಿ ಶಾಲು ಹೊದ್ದವರು ನಡೆಸುವ ಗೂಂಡಾಗಿರಿ ವಿರೋಧಿಸಿ, ಸಂಬಂಧಿತ ಸುದ್ದಿಗಳನ್ನು ಹಂಚಿಕೊಂಡಿದ್ದಕ್ಕೆ; ಆಹಾರದ ಹಕ್ಕನ್ನು ಎತ್ತಿಹಿಡಿದು ಗೋಮಾಂಸ ಭಕ್ಷಣೆಯನ್ನು ಅನುಮೋದಿಸಿದ್ದಕ್ಕೆ; ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಪುರುಷ ಮನಸ್ಥಿತಿಯ ವಿರುದ್ಧ ಕಟುವಾಗಿ ಮಾತಾಡಿದ್ದಕ್ಕೆ; ಸಂಸ್ಕೃತಿ – ಪುರಾಣಗಳ ಹೆಸರಲ್ಲಿ ನಡೆಸುವ ಅನಾಚಾರವನ್ನು ಅವೇ ಸಂಸ್ಕೃತಿ – ಪುರಾಣಗಳನ್ನು ಮುಂದಿಟ್ಟು ಪ್ರಶ್ನಿಸಿದ್ದಕ್ಕೆ; ಕಾವಿ ಧರಿಸಿದ ಮಠಾಧಿಪತಿ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದನ್ನು ಮತ್ತೆ ಮತ್ತೆ ಉಲ್ಲೇಖಿಸಿ ಸನ್ಯಾಸದ ನಿಜಾಯಿತಿ ಪ್ರಶ್ನಿಸಿದ್ದಕ್ಕೆ; ಕೋಮುವಾದಿ – ಫ್ಯಾಸಿಸ್ಟ್ ರಾಜಕಾರಣದ ಸುಳ್ಳುಗಳನ್ನು ಅನಾವರಣ ಮಾಡುವ ಸುದ್ದಿಗಳನ್ನು ಹಂಚಿಕೊಂಡಿದ್ದಕ್ಕೆ.

ಆಶ್ಚರ್ಯವೆಂದರೆ ಈ ಎಲ್ಲ ಪ್ರಶ್ನೆಗಳೂ ಸಂತ್ರಸ್ತರ ಪರವಾಗಿ ಮತ್ತು ಶೋಷಕರ ವಿರುದ್ಧವಾಗಿದ್ದವು. ಆದರೂ ದ್ವೇಷ ಕಾರಿದ ಮಂದಿ ‘ರಾಷ್ಟ್ರಭಕ್ತಿ ಇಲ್ಲದವರು ಮಾತ್ರ ಇಂತಹ ಮಾತುಗಳನ್ನಾಡುತ್ತಾರೆ’ ಎಂದು ದೂರತೊಡಗಿದರು. ನನ್ನ ಫೋಟೋ ಹಾಕಿ ಅಶ್ಲೀಲ / ಅಸಭ್ಯ ಬರಹಗಳೊಂದಿಗೆ ಟ್ರೋಲ್ ಮಾಡತೊಡಗಿದರು. ಈ ಸಂಬಂಧ ಮೊದಲ ಸಲ ನನಗೆ ಬೆದರಿಕೆ ಸಂದೇಶ ಬಂದಿದ್ದು 2015ರಲ್ಲಿ. ಒಂದು ಹಿಂದುತ್ವವಾದಿಗಳು ನಿರ್ವಹಿಸುವ ಪುಟದ ಅಡ್ಮಿನ್ ಇಂದ, ಇನ್ನೊಂದು ದುಬೈನಲ್ಲಿ ಕೆಲಸ ಮಾಡುವ ಯುವಕನೊಬ್ಬನಿಂದ. ಅವುಗಳಲ್ಲಿ “ನನಗೆ ಬುದ್ಧಿ ಕಲಿಸುವ”, “ಆ್ಯಸಿಡ್ ಎರಚುವ”, “ಕೊಂದು ಹಾಕುವ” ಬೆದರಿಕೆಗಳಿದ್ದವು. ಇದು ನನ್ನ ಮಟ್ಟಿಗಂತೂ ಸಂಪೂರ್ಣ ಹೊಸ ಆಘಾತವಾಗಿತ್ತು, ಮತ್ತು ಬೆದರಿಕೆಯೊಡ್ಡುವುದು ಒಂದು ಅಪರಾಧವಾಗಿದ್ದರಿಂದ ಅದಕ್ಕೆ ಕಾನೂನು ಕ್ರಮ ಕೈಗೊಳ್ಳುವುದು ನನ್ನ ಕರ್ತವ್ಯವೂ ಆಗಿತ್ತು.

ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಪೊಲೀಸರೇ ಸೈಬರ್ ಸೇರಿದಂತೆ ಸಂಬಂಧಿತ ಎಲ್ಲರನ್ನೂ ಸಂಪರ್ಕಿಸಿ ಪ್ರಕ್ರಿಯೆ ಮುಂದುವರಿಸಿದರು. ಬೆದರಿಕೆಯೊಡ್ಡಿದ್ದ ಪುಟದ ಅಡ್ಮಿನ್ url ಸಿಗದೆ ಹೋಗಿದ್ದರಿಂದ ಮತ್ತು ನನ್ನಲ್ಲಿ ಸಂಬಂಧಿತ ಮಾಹಿತಿಗಳ ಕೊರತೆ ಇದ್ದುದರಿಂದ ಆತ ಸಿಗಲಿಲ್ಲ. ಆದರೆ ದುಬೈನಲ್ಲಿ ವಾಸವಿದ್ದ ಯುವಕನ ಸಂಪೂರ್ಣ ವಿವರ ಸುಲಭವಾಗಿ ಸಿಕ್ಕಿದ್ದರಿಂದ ಆತನ ಬಂಧನವಾಗಿ ಪ್ರಕರಣ ನ್ಯಾಯಾಲಯದವರೆಗೂ ಹೋಯಿತು.

ಇದೆಲ್ಲ ನಡೆದ ಮೇಲೆ, ದೂರು ದಾಖಲಿಸಿರುವ ಕುರಿತು ಬಹಿರಂಗವಾಗಿ ಹೇಳಿಕೊಂಡ ಮೇಲಾದರೂ ವಿಕೃತ ಮನಸ್ಕರು ಟ್ರೋಲಿಂಗ್ ಕಡಿಮೆ ಮಾಡುತ್ತಾರೆಂದು ಭಾವಿಸಿದ್ದೆ. ಆದರೆ ಪರಿಣಾಮ ವ್ಯತಿರಿಕ್ತವಾಗಿತ್ತು. “ದೇಶಕ್ಕೋಸ್ಕರ, ಹಿಂದುತ್ವಕ್ಕೋಸ್ಕರ, ಮೋದಿಗೋಸ್ಕರ ಜೈಲಿಗೆ ಹೋಗಲೂ ಸಿದ್ಧ” ಅಂತ ನೇರಾನೇರ ಹೇಳಿಕೊಂಡೇ ಬೆದರಿಕೆ ಮತ್ತು ಅಶ್ಲೀಲ ನಿಂದನೆ ಮಾಡತೊಡಗಿದರು. ಹೆಚ್ಚಿನ ಸಂಖ್ಯೆಯಲ್ಲಿ, ಮತ್ತಷ್ಟು ಅಶ್ಲೀಲವಾಗಿ ಬರೆಯತೊಡಗಿದರು. ಇದರಿಂದ ನನ್ನ ವೈಯಕ್ತಿಕ ಬದುಕಿಗೆ ಸಾಕಷ್ಟು ಸಮಸ್ಯೆಯಾಯಿತು. ಫ್ರೀಲ್ಯಾನ್ಸರ್ ಆಗಿರುವ ನನ್ನ ದುಡಿಮೆಗೂ ಪೆಟ್ಟು ಬಿತ್ತು. ಮನೆಯ ಸದಸ್ಯರು ಆತಂಕಪಡುವಂತಾಯಿತು. ಬೆದರಿಕೆ ಹೆಚ್ಚಾದಾಗ ಪೊಲೀಸ್ ಬೀಟ್ ವ್ಯವಸ್ಥೆ ಮಾಡಲಾಗಿತ್ತು. ಆಗ ಬಾಡಿಗೆ ಮನೆಯಲ್ಲಿರುವ ನಾನು ಮನೆ ಮಾಲೀಕರ ಪ್ರಶ್ನೆಗಳನ್ನೂ ನೆರೆಹೊರೆಯವರ ನಿಗೂಢ ನೋಟವನ್ನೂ ಎದುರಿಸುವ ಹಿಂಸೆಗೆ ಒಳಗಾಗಬೇಕಾಯ್ತು. ಇವೆಲ್ಲ ಚಿಕ್ಕಚಿಕ್ಕ ಸಂಗತಿಗಳಾದರೂ ಎದುರಿಸುವ ಕಷ್ಟ ವಿವರಣೆಗೂ ನಿಲುಕದ್ದು.

ಏನು ಬರೆದರೂ ನಿರ್ದಿಷ್ಟ ಚಿಂತನೆ/ಸಮರ್ಥಕರಿಂದ ಬರುವ ಪ್ರತಿಕ್ರಿಯೆಗಳ ಪ್ಯಾಟರ್ನ್ ಗಮನಿಸಿದರೆ, ಎಲ್ಲವೂ ಒಂದೇ ರೀತಿ ಇರುವುದು ಸ್ಪಷ್ಟವಾಗುತ್ತದೆ. ಇವೆಲ್ಲವೂ ಒಂದು ಮೂಲದಿಂದ ಪೂರ್ವನಿಯೋಜಿತವಾಗಿ ಬರುತ್ತಿರುವುದು ಖಾತ್ರಿಯಾಗುತ್ತದೆ. ಹೀಗೆ ಸುವ್ಯವಸ್ಥಿತವಾಗಿ ಹರಿಬಿಡುವ ಪೋಸ್ಟ್/ ಕಮೆಂಟ್’ಗಳನ್ನು ಇಲ್ಲಿ ಉಲ್ಲೇಖಿಸಲೂ ಮುಜುಗರವಾಗುತ್ತದೆ. ಮೊದಲಿಗೆ, ಪ್ರಶ್ನೆಗಳನ್ನೇ ಸಹಿಸದ ದಬ್ಬಾಳಿಕೆಯ ಫ್ಯಾಸಿಸ್ಟ್ ಮನಸ್ಥಿತಿ; ಅದರಲ್ಲೂ ಹೆಣ್ಣುಗಳು ಪ್ರಶ್ನಿಸುವುದನ್ನು ಸಹಿಸದ ಪುರುಷ ಮನಸ್ಥಿತಿ. ಈ ದ್ವಿಗುಣ ದ್ವೇಷವನ್ನು ಕಾರಲು ಅವರು ಹಿಡಿದಿದ್ದು, ‘ಪಾವಿತ್ರ್ಯ’ವನ್ನು ಪ್ರಶ್ನಿಸುವ, ದೈಹಿಕ ಸಂಬಂಧಗಳನ್ನು ಕಲ್ಪಿಸುವ, ಪರಮ ಅಶ್ಲೀಲ ಪದಗಳನ್ನು ಬಳಸುವ ಕೀಳು ದಾರಿಯನ್ನು. ದೈಹಿಕ – ಲೈಂಗಿಕ ನಿಂದನೆ ಹೆಣ್ಣಿನ ಬಾಯಿ ಮುಚ್ಚಿಸುವ ಪ್ರಬಲ ಅಸ್ತ್ರವೆಂದು ಭಾವಿಸಿರುವ ಈ ಮಂದಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಚಿಂತನೆಯ ವಿರುದ್ಧ ಬರೆಯುವ ಬಹುತೇಕ ಪ್ರತಿ ಹೆಣ್ಣಿನ ಮೇಲೂ ಅದನ್ನು ಪ್ರಯೋಗಿಸುತ್ತಾರೆ.
ನಿಂದನೆ, ಬೆದರಿಕೆ ಮಾತ್ರವಲ್ಲ, ನನ್ನ ಫೋಟೋಗಳನ್ನು ಬಳಸಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡುವುದು, ಅಶ್ಲೀಲ ಸಂದೇಶ ಕಳಿಸುವುದೂ ಸೇರಿದಂತೆ ಹಲವು ಬಗೆಯ ವಿಕೃತ ಹಿಂಸೆಯನ್ನೂ ನೀಡಿದ್ದಾರೆ/ ನೀಡುತ್ತಿದ್ದಾರೆ. ಅಂಥವರ ಸಂಖ್ಯೆ ಕಡಿಮೆ ಇದ್ದರೆ ದೂರು ದಾಖಲಿಸಬಹುದು. ಹೀಗೆ ನಿರಂತರವಾಗಿ ಬರೆಯುವವರ ಸಂಖ್ಯೆಯೇ ಹತ್ತಕ್ಕೂ ಹೆಚ್ಚು ಇರುವಾಗ ಯಾರ ಮೇಲೆ, ಎಷ್ಟು ಬಾರಿ ದೂರು ನೀಡುವುದು? ನಮ್ಮ ಸೈಬರ್ ಕಾನೂನು ತೀರಾ ಕೊಲೆ ಬೆದರಿಕೆ ಬಂದರೆ ಮಾತ್ರ ಅಲ್ಪಸ್ವಲ್ಪ ಗಂಭೀರವಾಗಿ ಪರಿಗಣಿಸುತ್ತದೆ. ಅಶ್ಲೀಲತೆಯನ್ನು, ನಿಂದನೆಗಳನ್ನು, ಫೋಟೋ ದುರ್ಬಳಕೆಯನ್ನು ದಂಡನಾರ್ಹ ಅಪರಾಧವಾಗಿ ಪರಿಗಣಿಸಿದ್ದು ಬಹಳ ಅಪರೂಪ. ಹೀಗಿರುವಾಗ ಒಬ್ಬಂಟಿ ಅಷ್ಟು ಜನರ ಮೇಲೆ ದೂರು ದಾಖಲಿಸಿ ಗುದ್ದಾಡುವುದು ಕಷ್ಟ ಮತ್ತು ವ್ಯರ್ಥ ಸಾಹಸ ಅನಿಸಿಬಿಟ್ಟಿದೆ. ಅಷ್ಟು ಮಾತ್ರವಲ್ಲ, ಅಶ್ಲೀಲ ನಿಂದನೆಯನ್ನೇ ಆಯುಧ ಮಾಡಿಕೊಂಡವರ ಪೊಳ್ಳುತನ ಕಂಡು ಮರುಕವಾಗುತ್ತದೆ. ಅವರ ಸತ್ವಹೀನತೆಯನ್ನು ಅನುಕಂಪದಿಂದ ನೋಡಿ ನಿರ್ಲಕ್ಷಿಸುವುದೇ ಉತ್ತಮ ಅನ್ನಸಿಬಿಡುತ್ತದೆ.

ಅಷ್ಟು ಮಾತ್ರವಲ್ಲದೆ, ನೇರವಾಗಿ ವಿಕೃತಿ ತೋರುವವರ ಹಿನ್ನೆಲೆ ಗಮನಿಸಿದರೆ 90% ಭಾಗ ಆರ್ಥಿಕ ಮತ್ತು ಸಾಮಾಜಿಕವಾಗಿ, ಜಾತಿ ಹಿನ್ನೆಲೆಯಿಂದಲೂ ಹಿಂದುಳಿದವರೆಂದು ಗುರುತಿಸಲ್ಪಟ್ಟವರು. ಅವರಿಗೆ ಕುಮ್ಮಕ್ಕು ಕೊಡುವ, ಪ್ರಚೋದಿಸುವ ಸುಪ್ತ ಅಜೆಂಡಾ ಇಟ್ಟುಕೊಂಡು ಬರೆಯುವವರು ಪುಸ್ತಕಗಳನ್ನು ಬರೆಯುವ/ ಪತ್ರಿಕೆಗಳಲ್ಲಿ ಕೆಲಸ ಮಾಡುವ / ಐದಂಕಿ ಸಂಬಳದ/ ಮೇಲ್ವರ್ಗಗಳ/ ವಿದ್ಯಾವಂತ ಯುವಜನರು ಇಲ್ಲವೇ ತಿಂದುಂಡು ಸುಖವಾಗಿರುವ ಗೃಹಿಣಿಯರು. ಅವರ ಬರಹಗಳಲ್ಲಿ ಪ್ರಚೋದನೆಯನ್ನು ಗುರುತಿಸಬಹುದೇ ಹೊರತು ಕಾನೂನಿಗೆ ಕನ್ವಿನ್ಸ್ ಆಗುವಂತೆ ಅಪರಾಧವನ್ನು ಹೆಕ್ಕಿ ತೋರಿಸಲು ಸಾಧ್ಯವಾಗುವುದಿಲ್ಲ. ಅಕಸ್ಮಾತ್ ಹೆಕ್ಕಿ ತೋರಿಸುವಂತಿರೂ ಅಂಥವರ ಬೆನ್ನಿಗೆ ಸಮಾಜದ ಆಯಕಟ್ಟಿನ ಜಾಗಗಳಲ್ಲಿರುವ ಜನರ ಬೆಂಬಲವಿರುತ್ತದೆ. ಇಲ್ಲವೇ, ನಮ್ಮದೇ ಸುತ್ತಮುತ್ತಲಿನವರು ಅಂಥ ವಿಕೃತ ಮನಸ್ಕರೊಂದಿಗೆ ಗೆಳೆತನ ಹೊಂದಿರುತ್ತಾರೆ. ಇಂಥಾ ಸಂದರ್ಭದಲ್ಲಿ ಕ್ರಮ ಕೈಗೊಳ್ಳುವುದು ಸುಲಭದ ಮಾತಲ್ಲ. ಮೂಲ ಸೂತ್ರ ಹಿಡಿದವರನ್ನು ಏನೂ ಮಾಡಲಾಗದೆ, ಕೇವಲ ಆಯುಧಗಳಂತೆ ಬಳಕೆಯಾಗುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದು ವೈಯಕ್ತಿಕವಾಗಿ ನನಗೆ ಸಮ್ಮತವಲ್ಲ. ದಾರಿತಪ್ಪಿದ ಯುವಜನರನ್ನು ಎಷ್ಟು ದಂಡಿಸಿದರೂ, ದಾರಿ ತಪ್ಪಿಸುತ್ತಿರುವವರನ್ನು ಶಿಕ್ಷಿಸದೆ ಇದಕ್ಕೆ ಪರಿಹಾರ ದೊರಕುವುದಿಲ್ಲ.

ಆದ್ದರಿಂದ, ಈ ಟ್ರೋಲ್’ಗಳನ್ನು ಎದುರಿಸಲು ನಾನು ಕಂಡುಕೊಂಡಿರುವ ದಾರಿಯೆಂದರೆ, ‘ಇಗ್ನೋರ್ ಮಾಡುವುದು’. ಮೊದಲನೆಯದಾಗಿ ಅಂಥವುಗಳನ್ನು ನೋಡದಿರುವುದು; ಯಾರಾದರೂ ಗಮನಕ್ಕೆ ತಂದರೆ, ಅಂಥವರನ್ನು ಅವಾಯ್ಡ್ ಮಾಡುವುದು; ಅಕಸ್ಮಾತ್ ಗಮನಕ್ಕೆ ಬಂದೇಬಿಟ್ಟರೆ, ರೆಸ್ಪಾಂಡ್ ಮಾಡದಿರುವುದು. ಈ ಎಲ್ಲಕ್ಕಿಂತ ಮುಖ್ಯವಾಗಿ ನಾನು ಏನನ್ನು ಬರಿಯುತ್ತಾ, ಪ್ರತಿಪಾದಿಸುತ್ತಾ ಬಂದಿದ್ದೀನೋ ಅದನ್ನು ಇನ್ನಷ್ಟು ಬದ್ಧತೆ ಮತ್ತು ದೃಢನಿಶ್ಚಯದೊಂದಿಗೆ ಮುಂದುವರಿಸುವುದು ನಾನು ಕೊಡಬಹುದಾದ ಸಶಕ್ತ ಪ್ರತ್ಯುತ್ತರ ಎಂದು ಭಾವಿಸಿದ್ದೇನೆ.

ಸಾಮಾಜಿಕ ಜಾಲತಾಣದ ಮೂಲಕ ಹರಡಲಾಗುತ್ತಿರುವ ಸುಳ್ಳು, ಅಸಹಿಷ್ಣುತೆ, ಹುಸಿ ರಾಷ್ಟ್ರೀಯತೆ, ದ್ವೇಷ ಮತ್ತು ಕೋಮುವಾದಗಳ ವಿರುದ್ಧ, ಇದೇ ಸ್ಪೇಸ್’ನಲ್ಲೇ ಬರೆಯುವುದು ಅನಿವಾರ್ಯ. ಆದ್ದರಿಂದಲೇ ನಾನು ಫೇಸ್ ಬುಕ್’ನಲ್ಲಿ ಹೆಚ್ಚು ಬರೆಯುತ್ತೇನೆ. ಈ ಉದ್ದೇಶದಿಂದ ನೂರಾರು ಹೆಣ್ಣುಗಳು ಈ ಕೆಲಸವನ್ನು ಮಾಡುತ್ತಿದ್ದಾರೆ. ಅವರೆಲ್ಲರೂ ಇಂಥಾ ಟ್ರೋಲ್, ಬೆದರಿಕೆ ಮೊದಲಾದವನ್ನು ಎದುರಿಸುತ್ತಿದ್ದಾರೆ. ಆದರೂ ಪಟ್ಟುಬಿಡದೆ ಬರೆಯುವುದರಿಂದ ಏನೋ ಸಾಧನೆ ಆಗಿಬಿಡುತ್ತದೆ ಅನ್ನುವ ಭ್ರಮೆ ನಮ್ಮದಲ್ಲ. ನನಗಂತೂ ಅಂಥ ಭ್ರಮೆ ಇಲ್ಲ. “ವರ್ತಮಾನದ ವಿದ್ಯಮಾನಗಳನ್ನು ಗಟ್ಟಿದನಿಯಲ್ಲಿ ಹೇಳುವುದೂ ಒಂದು ಕ್ರಾಂತಿಕಾರ್ಯ” ಅನ್ನುತ್ತಾಳೆ ರೋಸಾ ಲುಕ್ಸೆಂಬರ್ಗ್. ಕ್ರಾಂತಿ ಅನ್ನುವ ದೊಡ್ಡಮಟ್ಟದಲ್ಲಿ ಅಲ್ಲವಾದರೂ ಮಾತಾಡಲೇಬೇಕಾದ ಈ ದಿನಗಳ ತುರ್ತಿನಲ್ಲಿ ಕನಿಷ್ಠ ಜವಾಬ್ದಾರಿ ನಡೆಸುತ್ತಿದ್ದೇನೆ ಅನ್ನುವ ಪ್ರಜ್ಞೆಯಿಂದ ನಾನು ಫೇಸ್ ಬುಕ್’ನಲ್ಲಿ ಬರೆಯುತ್ತಿದ್ದೇನೆ. ಮುಂದೆಯೂ ಕೈಸೋಲುವಷ್ಟು ಕಾಲ ಇದನ್ನು ಮುಂದುವರೆಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT