ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ. 21ರಂದು ವಿಶ್ವ ಸೀರೆ ದಿನ: ಮೋಹಕ ಸೀರೆ ಪುರಾಣ

Published 22 ಡಿಸೆಂಬರ್ 2023, 23:50 IST
Last Updated 22 ಡಿಸೆಂಬರ್ 2023, 23:50 IST
ಅಕ್ಷರ ಗಾತ್ರ

ಸಿನಿಮಾ ನಟಿಯರು ಒಮ್ಮೆ ಉಟ್ಟ ಸೀರೆಯನ್ನು ಮತ್ತೊಂದು ಸಮಾರಂಭಕ್ಕೆ ಬಹುತೇಕ ಉಡುವುದಿಲ್ಲ. ಆದರೆ ಬಾಲಿವುಡ್ ನಟಿ ಆಲಿಯಾ ಭಟ್ ಈಚೆಗೆ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತಮ್ಮ ಮದುವೆಯ ಸೀರೆ ಉಟ್ಟಿದ್ದು ದೊಡ್ಡ ಸುದ್ದಿ ಆಯಿತು.

ಮದುವೆಯ ಸೀರೆ ಅಥವಾ ಧಾರೆಯ ಸೀರೆ ಎಂದರೆ ಮಹಿಳೆಯರಿಗೆ ಚೂರು ಹೆಚ್ಚೇ ಮಮಕಾರ. ಮದುವೆ ಜೀವನದ ಪ್ರಮುಖ ಘಟ್ಟವಾದ ಕಾರಣ ಇರಬಹುದು, ಅದಕ್ಕೆಂದು ಕೊಂಡ ಸೀರೆ ಹೆಚ್ಚಿನ ಬೆಲೆಯದ್ದು, ವಿಶೇಷವಾದದ್ದು ಹಾಗೂ ಗುಣಮಟ್ಟ, ವಿನ್ಯಾಸದ ಕಾರಣವೂ ಇರಬಹುದು.

ಏನೇ ಇರಲಿ 6 ಮೀಟರ್‌ನ ಈ ಸೀರೆಯ ಬಗ್ಗೆ ನೀರೆಗೆ ಬಾಲ್ಯದಿಂದ ಮುಪ್ಪಿನವರೆಗೂ ಅಕ್ಕರೆ ಕಮ್ಮಿಯಾಗುವುದಿಲ್ಲ. ಅದರಲ್ಲೂ ಮೊದಲ ಬಾರಿ ಸೀರೆ ಧರಿಸುವಾಗಿನ ಖುಷಿ, ಸಡಗರ ಹಲವರಿಗೆ ಸದಾ ನೆನಪಿನ ಬುತ್ತಿಯಲ್ಲಿ ಭದ್ರ. ಮೊದಲ ಬಾರಿಗೆ ಸೀರೆ ಉಟ್ಟಿದ್ದು ಯಾವಾಗ ಎಂದು ಸರಿಯಾಗಿ ನೆನಪಿಲ್ಲ. ಏಕೆಂದರೆ ಬಾಲವಾಡಿಯಿಂದಲೇ ನೃತ್ಯ, ಛದ್ಮವೇಷಕ್ಕೆಂದು ಸೀರೆ ಸುತ್ತಿಕೊಂಡಿದ್ದು ಇದ್ದೇ ಇದೆ. ಒಮ್ಮೆ ಫ್ಯಾನ್ಸಿ ಡ್ರೆಸ್‌ಗಾಗಿ ‘ಮೀನು ಮಾರುವ ಮಹಿಳೆ’ಯಾಗಿದ್ದೆ. ಅದಕ್ಕಾಗಿ ಸಾಧಾರಣ ಸೀರೆಯುಟ್ಟಿದ್ದೆ. ಅದೇ ಮೊದಲಿರಬೇಕು. ಅದರ ನಂತರ ಮತ್ತೊಮ್ಮೆ ಲಕ್ಷ್ಮಿದೇವಿಯ ಪಾತ್ರಕ್ಕಾಗಿ ಅಮ್ಮ ತಮ್ಮ ಮದುವೆಯ ಧಾರೆ ಸೀರೆ ಉಡಿಸಿದ್ದರು. ಗುಲಾಬಿ ಬಣ್ಣದ ಬೆಳ್ಳಿ ಝರಿ ಹಾಗೂ ಹಸಿರು ಬಣ್ಣದ ಅಂಚುಳ್ಳ ಈ ಸೀರೆಯಲ್ಲಿ ಲಕ್ಷ್ಮಿಯಾಗಿ ತೆಗೆಸಿಕೊಂಡ ಫೋಟೊ ನೋಡಿದರೆ ಈಗಲೂ ನಗು ಬರುವುದುಂಟು. ಆದರೆ ಅಮ್ಮನ ಆ ಮದುವೆಯ ಸೀರೆ ಮಾತ್ರ ಎಲ್ಲ ಸೀರೆಗಳಿಗಿಂತ ಮೋಹಕ ಎನಿಸುವುದುಂಟು. ಸೀರೆ ಅಂಗಡಿಗಳನ್ನು ಹೊಕ್ಕಾಗಲೆಲ್ಲ ಅಂಥದ್ದೇ ಬಣ್ಣದ, ಛಂದದ ಸೀರೆಗಾಗಿ ಹುಡುಕಿದ್ದೂ ಇದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವೈವಿಧ್ಯಮಯ ಸೀರೆ ನೌವಾರಿ, ಸಾಹ್‌ ವಾರಿ ಎಂದು ಒಂಬತ್ತು ಮೊಳಗಳಿಂದ ಇದೀಗ ರೆಡಿಮೇಡ್‌ ಸೀರೆಗಳವರೆಗೂ ಸೀರೆಗಳ ಉದ್ದಗಲ ಬದಲಾಗಿದೆ. ಹೆಂಗಳೆಯರನ್ನು ಸುತ್ತುವರಿದು, ಲಾವಣ್ಯವತಿಯಾಗಿ ಕಾಣುವಂತೆ ಮಾಡುವ ಸೀರೆಗಳೀಗ ವೈವಿಧ್ಯಮಯ ಸ್ವರೂಪದಲ್ಲಿ ಲಭ್ಯ ಇವೆ. ಡಿ. 21ರಂದು ವಿಶ್ವ ಸೀರೆ ದಿನ ಎಂಬ ಸಂಗತಿ ತಿಳಿದಾಗ ಸೀರೆಯ ಈ ಪುರಾಣ ನೆನಪಾಯಿತು. ಪ್ರತಿ ಸೀರೆಗೂ ಒಂದು ಕತೆ ಇರುತ್ತದೆ. ಪ್ರತಿ ಸೀರೆಯಲ್ಲಿಯೂ ಕಾವ್ಯಕನ್ನಿಕೆಯಂತೆ ಕಂಗೊಳಿಸುವುದೂ ಸಹಜವಾಗಿದೆ.

ಮನೆಯಲ್ಲಿ ಅಮ್ಮನ ಸೀರೆಯನ್ನುಟ್ಟು ಹಾಡು ಹಾಕಿಕೊಂಡು ಕುಣಿದ ಸವಿಸವಿ ನೆನಪು ಯಾರು ಮರೆಯಲು ಸಾಧ್ಯ? ಶಾಲೆ-ಪ್ರೌಢಶಾಲೆ-ಕಾಲೇಜುಗಳಲ್ಲಿ ಬೀಳ್ಕೊಡುಗೆ ಸಮಾರಂಭ ಅಥವಾ ‘ಎಥ್ನಿಕ್‌–ಡೇ’ಗಾಗಿ ಸೀರೆ ಉಡುವುದು ಈಗಿನ ಟ್ರೆಂಡ್. ಬಹುತೇಕ ಯುವತಿಯರು ಮೊದಲ ಬಾರಿಗೆ ಈ ಸಮಾರಂಭಕ್ಕೆಂದೇ ಸೀರೆ ಉಡುವುದು. ಕಾಟನ್ ಸೀರೆ ಉಡಲಾ, ರೇಷ್ಮೆಯದ್ದಾ, ಚಿಫಾನ್, ಕ್ರೇಪ್, ಕೇರಳ ಖ್ಯಾತಿಯ ಪಟ್ಟಿ ಸೀರೆ ತರಲಾ, ಕಾಂಜೀವರಂ ಉಡಲಾ, ಬನಾರಸಿ ಸರಿಯಾಗುತ್ತದಾ ಅಥವಾ ಧಾರವಾಡದ ಕಸೂತಿಯುಳ್ಳ ಸೀರೆ ಚೆನ್ನಾಗಿ ಕಾಣುತ್ತಾ ಎಂಬ ನೂರೆಂಟು ಆಯ್ಕೆಗಳು ಕಣ್ಣೆದುರು ತೆರೆದುಕೊಳ್ಳುತ್ತವೆ. ಅಮ್ಮನ, ಅಕ್ಕನ, ಅತ್ತಿಗೆಯ, ಅತ್ತೆಯ, ಪಕ್ಕದ ಮನೆಯ ಆಂಟಿಯ ಸುಂದರ ಸೀರೆಗಾಗಿ ಹುಡುಕಾಟ ಶುರು. ಅವರನ್ನು ಕಾಡಿಬೇಡಿ ತಂದು ಅದಕ್ಕೆ ತಕ್ಕ ಬ್ಲೌಸ್ ಹೊಂದಿಸಿಕೊಂಡಾಗಲೇ ಗಮ್ಮತ್ತು. ಮುಂದೆ ಒಪ್ಪ–ಓರಣವಾಗಿ ಸೀರೆ ಉಡಿಸಲು ಯಾರದ್ದು ಎತ್ತಿದ ಕೈ ಎಂದು ಹುಡುಕುವುದು. ಅವರನ್ನು ದುಂಬಾಲು ಬಿದ್ದು ಅಂದಿನ ದಿನ ಸೀರೆ ಉಡಿಸಿಕೊಂಡು ಸ್ನೇಹಿತೆಯರೊಂದಿಗೆ ಮನೆ–ಕಾಲೇಜಿನಲ್ಲಿ ಸರಭರ ಓಡಾಡುವ ಸಂಭ್ರಮಕ್ಕೆ ಬೇಟೆ ಸಾಟಿಯಿಲ್ಲ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಒಮ್ಮೆ ಶಾಲೆಯ ಡಾನ್ಸ್‌ಗಾಗಿ ಹಸಿರು ಝರಿ ಸೀರೆ ಬೇಕಿತ್ತು. ಅಮ್ಮನ ಬಳಿಯ ಹಸಿರು ಸೀರೆಗಳಲ್ಲಿ ಗ್ರ್ಯಾಂಡ್ ಲುಕ್‌ ನೀಡುವಂಥದ್ದು ಇರದ ಕಾರಣ ಪಕ್ಕದ ಮನೆಯ ಅಕ್ಕನ ಬಳಿ ಬೇಡಿಕೆ ಇಟ್ಟೆ. ಅವರು ತಮ್ಮ ಬನಾರಸಿ ರೇಷ್ಮೆಯ ಸೀರೆಯನ್ನು ಕೊಟ್ಟು, ಹುಷಾರು ಇದರ ಮೇಲೆ ಏನೂ ಬೀಳಿಸಬೇಡ ಎಂದರು. ಆ ಭಾರಿ ರೇಷ್ಮೆ ಸೀರೆ ನನಗೆ ಭಾರಿಯಾದರೂ ಅದರ ಸ್ಪರ್ಶ ಮಾತ್ರದಿಂದಲೇ ಖುಷಿಯ ಮೇರೆ ಮೀರಿತ್ತು.

ಹೈಸ್ಕೂಲ್‌ನಲ್ಲಿ ಒಮ್ಮೆ ಕ್ರೀಡಾಕೂಟ ನಡೆದಿತ್ತು. ಅಲ್ಲಿ ಪ್ರಶಸ್ತಿಪತ್ರ ಹಾಗೂ ಮೆಡಲ್‌ ಪ್ರದಾನ ಸಮಾರಂಭಕ್ಕಾಗಿ ಸೀರೆ ಉಡಲು ಶಿಕ್ಷಕರು ತಿಳಿಸಿದ್ದರು. ಮನೆಯ ಹೊರಗೆ ಯಾವ ಸಮಾರಂಭಕ್ಕೆ ಸೀರೆ ಉಟ್ಟು ಹೋಗದ ಕಾರಣ ನಾಚಿಕೆ–ಗಾಬರಿ ಬಂದೇ ಬಂತು. ಅಮ್ಮನ ಗುಲಾಬಿ ಧಾರೆ ಸೀರೆ ಮತ್ತೆ ಹೊರಗೆ ಬಂತು. ಒಂದು ಅರ್ಧ ಡಜನ್ ಸೇಫ್ಟಿ ಪಿನ್‌ಗಳನ್ನು ಹಾಕಿ ಅಮ್ಮ ಸೀರೆ ಉಡಿಸಿದರು. ಕಾಲಿಗೆ ಸಿಕ್ಕಿಕೊಳ್ಳುತ್ತಿದ್ದ ಸೀರೆಯ ನೆರಿಗೆಗಳು, ಸೆರಗನ್ನೂ ಸಂಭಾಳಿಸಲು ಕಿರಿಕಿರಿಯಾಗಿತ್ತು. ಹತ್ತಿರದ ಶಾಲೆಗೂ ಆಟೊ ಮಾಡಿಕೊಂಡು ಹೋದದ್ದೂ ಆಯಿತು. ಬೆಳಿಗ್ಗೆಯಿಂದ ಸಂಜೆಯವರೆಗೂ ಸೀರೆ ಉಟ್ಟು ಸಾಕುಬೇಕಾಯಿತು. ಇನ್ನು ಮುಂದೆ ಸೀರೆ ಉಡುವುದು ಬೇಡ ಎನಿಸಿಬಿಟ್ಟಿತು. ಆದರೆ ಸೀರೆ ಮೋಹ ಅಷ್ಟು ಸುಲಭವಾಗಿ ಬಿಡುವುದುಂಟೇ? ಮುಂದೆ ಸ್ವಂತ ಸೀರೆಯ ಸಂಗ್ರಹವಂತೂ ಶುರುವಾಯ್ತು.

ನಟಿ ಅನು ಪ್ರಭಾಕರ್ ಸಮಾರಂಭವೊಂದರಲ್ಲಿ ಮಾತನಾಡುತ್ತ, ‘ವಾರ್ಡ್‌ರೋಬ್‌ ತುಂಬ ಚಂದಕ್ಕಿಂತ ಚಂದನೆಯ ಸೀರೆಗಳು ತುಂಬಿ ತುಳುಕುತ್ತಿವೆ. ಆದರೆ ಯಾವುದೇ ಫಂಕ್ಷನ್‌ಗೆ ಹೋಗಬೇಕಾದಾಗ ಯಾವುದನ್ನು ಉಡಲಿ ಎಂದೇ ಹೊಳೆಯುವುದಿಲ್ಲ. ಈ ಫಂಕ್ಷನ್‌ಗೆ ಬರುವಾಗಲೂ ರಾಮಾ ಗ್ರೀನ್‌ ಬಣ್ಣದ ಈ ಧಾರವಾಡ ಸೀರೆಯನ್ನು ಮಗಳು ಆರಿಸಿಕೊಟ್ಟಳು’ ಎಂದು ಹೆಮ್ಮೆಯಿಂದ ಅಂದಿದ್ದರು. ಬಹುತೇಕ ಎಲ್ಲ ಮಹಿಳೆಯರದ್ದೂ ಇದೇ ಕಥೆ. ಎಷ್ಟು ಸೀರೆಗಳಿದ್ದರೂ ಹೊಸ ವಿನ್ಯಾಸದವು ಕಂಡಾಗ ಕೊಳ್ಳದೇ ಇರಲು ಮನಸ್ಸು ಒಪ್ಪುವುದಿಲ್ಲ.

ಹುಬ್ಬಳ್ಳಿಯ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜು ವಿದ್ಯಾರ್ಥಿನಿಯರು ಸೀರೆಯಲ್ಲಿ ಕಂಗೊಳಿಸಿದ ದೃಶ್ಯ (ಸಂಗ್ರಹ ಚಿತ್ರ).
ಹುಬ್ಬಳ್ಳಿಯ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜು ವಿದ್ಯಾರ್ಥಿನಿಯರು ಸೀರೆಯಲ್ಲಿ ಕಂಗೊಳಿಸಿದ ದೃಶ್ಯ (ಸಂಗ್ರಹ ಚಿತ್ರ).

ಗಳಿಗೆ ಮುರಿಯುವುದು:

ಅಜ್ಜಿಗೆ ಒಂದು ವಿಶಿಷ್ಟ ಅಭ್ಯಾಸವಿತ್ತು. ಹೆಚ್ಚಾಗಿ ಹತ್ತಿಯ ಸೀರೆಗಳನ್ನೇ ಉಡುತ್ತಿದ್ದ ಅವರು ಹೊಸ ಸೀರೆಯನ್ನು ಮೊದಲು ತಾವು ಉಡುತ್ತಿರಲಿಲ್ಲ. ತಮ್ಮ ಮಗಳು ಅಥವಾ ಮೊಮ್ಮಕ್ಕಳಿಗೆ ಕೊಟ್ಟು 'ಗಳಿಗೆ ಮುರಿದು ಕೊಡೆ’ ಎನ್ನುವರು. ಎಂದರೆ ಒಮ್ಮೆ ಉಟ್ಟು ಕೊಡು ಎಂದು. ಅಜ್ಜಿಯ ಮನೆಗೆ ಹೋದರೆ ಅಜ್ಜಿಯ ಹೊಸ ಸೀರೆಯುಟ್ಟು ಅಡುಗೆ ಆಟ ಆಡುವುದೂ ಕಾಯಂ ಆಗಿತ್ತು.

ಭಾರತೀಯ ಉಡುಗೆ ಪದ್ಧತಿಯಲ್ಲಿ ಮಹು ಮುಖ್ಯ ಪಾತ್ರ ವಹಿಸಿರುವ ಸೀರೆ ತಲೆತಲಾಂತರಗಳಿಂದ ನವನವ ವಿನ್ಯಾಸಗಳಲ್ಲಿ ಹೊರಬರುತ್ತಿದೆ. ಉಡುವ ಪದ್ಧತಿಗಳು ದಿನದಿನಕ್ಕೂ ಬದಲಾಗುತ್ತಿವೆ. ಪ್ರಾಚೀನ ಹಾಗೂ ನಾವಿನ್ಯ ಎರಡರ ಸೊಬಗನ್ನೂ ತರುವ ಈ ಉಡುಪು ನಾರಿಯ ಕಾಯಂ ಸಖಿ.

ದಾವಣಗೆರೆಯ ಯುಬಿಡಿಟಿ ಕಾಲೇಜಿನ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಸೀರೆಗಳಲ್ಲಿ ಶೋಭಿಸಿದ್ದು (ಸಂಗ್ರಹ ಚಿತ್ರ)
ದಾವಣಗೆರೆಯ ಯುಬಿಡಿಟಿ ಕಾಲೇಜಿನ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಸೀರೆಗಳಲ್ಲಿ ಶೋಭಿಸಿದ್ದು (ಸಂಗ್ರಹ ಚಿತ್ರ)
ಡಿ. 21ರಂದು ವಿಶ್ವ ಸೀರೆ ದಿನ
10-20 ವರ್ಷಗಳ ಹಿಂದೆ ಮಹಿಳೆಯರ ಮನೆಯ ದಿರಿಸಾಗಿದ್ದ ಸೀರೆ ಈಗ ಸಮಾರಂಭಕ್ಕೆ ಸೀಮಿತ ಉಡುಪಾಗಿ ಬದಲಾಗುತ್ತಿದೆ. ಮನೆಯಲ್ಲಿ ನೈಟಿ ಟೀಶರ್ಟ್–ಪ್ಯಾಂಟ್‌ಗೆ ಮೊರೆ ಹೊಗಿರುವ ಮಹಿಳೆಯರಲ್ಲಿ ಸದ್ಯಕ್ಕಂತೂ ಸೀರೆಯ ವ್ಯಾಮೋಹ ಕಡಿಮೆಯಾಗಿಲ್ಲ. ಅಧಿಕಾರಿ ಶಿಕ್ಷಕಿ ಮಹಿಳಾ ರಾಜಕಾರಣಿಗಳು ಈಗಲೂ ತಮ್ಮ ಕಾರ್ಯಕ್ಷೇತ್ರದಲ್ಲಿ ಸೀರೆಯುಟ್ಟರೇ ಹೆಚ್ಚು ಗೌರವಯುತ ಎಂದು ಭಾವಿಸುತ್ತಾರೆ. ಡಿ. 21ರಂದು ವಿಶ್ವ ಸೀರೆ ದಿನ ಎಂಬ ಸಂಗತಿ ತಿಳಿದಾಗ ಸೀರೆಯ ಈ ಪುರಾಣ ನೆನಪಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT