ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮನನ್ನು ತಳ್ಳಿಹೋದ ಕೊಳ್ಳಿದೆವ್ವ!

Last Updated 1 ಜನವರಿ 2016, 19:30 IST
ಅಕ್ಷರ ಗಾತ್ರ

ಐವತ್ತು ವರ್ಷಗಳ ಹಿಂದೆ ನನಗಾಗ 10 ವರ್ಷವಿರಬಹುದು. ರೈತ ಮನೆತನದ ನಾವು ಸಣ್ಣ ಹಳ್ಳಿಯಲ್ಲಿದ್ದೆವು. ಅಲ್ಲಿ ಒಂದು ನೂರು ಮನೆಗಳಿರಬಹುದು. ನಮ್ಮದು ಸ್ವಲ್ಪ ದೊಡ್ಡಮನೆ. ವಿಶಾಲವಾದ ಹಿತ್ತಿಲು, ಬೃಹದಾಕಾರದ ನಡುಮನೆ, ಮುಂದೆ ಹಸುಗಳನ್ನು ಕಟ್ಟಲು ದೊಡ್ಡ ಒಪ್ಪಾರ. ಅಲ್ಲದೆ ಅಲ್ಲಿ ಒಂದು ಚಿಕ್ಕ ಕೋಣೆಯಿತ್ತು. ಸಂಪ್ರದಾಯದ ಕುಟುಂಬವಾದ್ದರಿಂದ ಹೆರಿಗೆಯಾದ, ಹೊರಗಾದ ಹೆಂಗಸರಿಗಾಗಿಯೇ ಆ ಕೋಣೆ ಮೀಸಲಾಗಿತ್ತು.

ಅಮ್ಮ ಅಂದು ಹೊರಗಾಗಿದ್ದರಿಂದ ಆ ಕೋಣೆಯಲ್ಲಿ ಮಲಗಿದ್ದರು. ಅಮ್ಮನನ್ನು ಬಿಟ್ಟಿರಲಾರದ ನಾನು ಸಹ ಅಮ್ಮನಿಗೆ ಸ್ವಲ್ಪದೂರದಲ್ಲಿ ಮಲಗಿದ್ದೆ. ಮಧ್ಯರಾತ್ರಿಯಲ್ಲಿ ಎಚ್ಚರವಾಗಿ ಅಮ್ಮನನ್ನು ಕರೆದು ಎಬ್ಬಿಸಿ ಬಚ್ಚಲಿಗೆ ಹೋಗಬೇಕೆಂದು ಹೇಳಿದೆ. ಅಜ್ಜಿ, ತಾತ, ಅಪ್ಪ ಎಲ್ಲ ಮಲಗಿದ್ದರು. ಒಳಗೆ ಹೋಗಲಾಗದ ಅಮ್ಮ ಮತ್ತು ನಾನು ಹಸು, ಕರು, ಎಮ್ಮೆಗಳನ್ನು ಕಟ್ಟಿದ್ದ ಕೊಟ್ಟಿಗೆಯನ್ನು ದಾಟಿಕೊಂಡು ಹೊರಗೆ ಬಂದೆವು. ಹೊರಗೆ ಕತ್ತಲು ಗವ್ ಎನ್ನುತ್ತಿತ್ತು. ಅಮ್ಮ ನನಗೆ ರಸ್ತೆಯ ಬದಿ ಕೂಡಲು ಹೇಳಿ ತಾನು ರಸ್ತೆಗೆ ಅಡ್ಡಲಾಗಿ ನಿಂತರು.

ಒಂದೇ ನಿಮಿಷ ಇನ್ನೇನು ನಾನು ಮೇಲೇಳಬೇಕು ಅಷ್ಟರಲ್ಲಿ ಕಿಟಾರೆಂದು ಕಿರುಚಿಕೊಂಡ ಅಮ್ಮ ನನ್ನ ಮೇಲೇ ಬಿದ್ದು ಬಿಟ್ಟರು. ನಾನೂ ಕಿರುಚಿಕೊಂಡ ಶಬ್ದಕ್ಕೆ ಎಲ್ಲರೂ ಎದ್ದು ಬಂದರು. ಕೆಳಗೆ ಬಿದ್ದ ಅಮ್ಮನ ಮೇಲೆ ನೀರು ಚಿಮುಕಿಸಿದರು. ಆಗ ಎಚ್ಚರಗೊಂಡ ಅಮ್ಮ ದೆವ್ವ ಕೊಳ್ಳಿ ದೆವ್ವ ಎಂದು ತೊದಲುತ್ತಾ   ಆಕಾಶದ ಕಡೆ ನೋಡುತ್ತಾ ಕೈ ತೋರಿಸುತ್ತಿದ್ದರು. ದೆವ್ವವೆಂಬ ಮಾತು ಕೇಳಿದ ಕೂಡಲೆ ಹೆದರಿಕೊಂಡ ನಾನು ಅಜ್ಜಿಯ ಸೆರಗಿನ ಮರೆಯಲ್ಲಿ ಅಡಗಿಕೊಂಡಿದ್ದೆ. ಅಮ್ಮ ನಿಧಾನವಾಗಿ ಎದ್ದುಬಂದು ತನ್ನ ಲೋಟದಿಂದ ನೀರು ಕುಡಿದು ಮೂಲೆಯಲ್ಲಿ ಕುಳಿತು ಹೇಳತೊಡಗಿದರು.

‘ರಸ್ತೆಯಲ್ಲಿ ನಿಂತು ಆ ಕಡೆ ತಿರುಗಿದ ಕೂಡಲೆ ದೂರದಲ್ಲಿ ಯಾವುದೋ ಬೆಂಕಿಯ ಪಂಜಿನಂತೆ ಕಾಣುವ ಆಕೃತಿಯೊಂದು ವೇಗವಾಗಿ ಹತ್ತಿರಬರುತ್ತಾ  ನನ್ನನ್ನು ತಳ್ಳಿಕೊಂಡು ಆಕಾಶದ ಕಡೆಗೆ ಮೇಲೆ ಮೇಲೆ ಹೋಯಿತು’. ನಂತರ ಅಪ್ಪಿ, ತಪ್ಪಿಯೂ ಆ ಕೋಣೆಯಲ್ಲಿ ಅಮ್ಮನ ಜೊತೆ  ನಾನು ಮಲಗುತ್ತಿರಲಿಲ್ಲ. ನಾಲ್ಕು ದಿನದ ನಂತರ ಅಮ್ಮನಿಗೂ, ನನಗೂ ತಾಯಿತ ಮಂತ್ರಿಸಿ ಕಟ್ಟಿಸಿದ್ದರು. ಅಬ್ಬಾ, ಇಷ್ಟು ವರ್ಷಗಳಾದರೂ ಈಗಲೂ ಆ ದೃಶ್ಯ ನನ್ನ ಕಣ್ಣಿಗೆ ಕಟ್ಟಿದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT