ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವ ಅಮ್ಮನ ಬಳೆ

Last Updated 9 ಮೇ 2014, 19:30 IST
ಅಕ್ಷರ ಗಾತ್ರ

ಬಂಗಾರದ ಬಗ್ಗೆ ಯಾವತ್ತೂ ತೀವ್ರ ವ್ಯಾಮೋಹವಿರದ ನನಗೆ ಬಂಗಾರದ ಬಳೆಯೊಂದು ಹಳವಂಡವಾಗಿ ಕಾಡುತ್ತಿದೆಯೋ ಗೊತ್ತಿಲ್ಲ. ನಡೆದ ಘಟನೆ ಇಷ್ಟು.

ನನ್ನ ಅಪ್ಪ ಶಾಂತರಸ 1998ರಲ್ಲಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪದವಿಯಿಂದ ಮುಕ್ತರಾದ ಮೇಲೆ ನನ್ನಮ್ಮ ಲಕ್ಷ್ಮೀದೇವಿಯ ಜೊತೆಗೆ ನಮ್ಮೊಡನಿರಲು ಬಂದರು. ಇರುವ ನಾಲ್ಕು ಮಕ್ಕಳಲ್ಲಿ ನಮ್ಮ ಮನೆಯನ್ನೇ ಆಯ್ಕೆ ಮಾಡಿಕೊಂಡಿದ್ದು ನಮಗೆ ಸಂತಸ ತಂದಿತ್ತು.
ಅಮ್ಮ ಅದಾಗಲೇ ಶ್ವಾಸಕೋಶದ ಕ್ಯಾನ್ಸರನಿಂದ ಬಳಲುತ್ತಿದ್ದಳು. ಆಕೆಯ ಆಯಸ್ಸು ಹೆಚ್ಚು ಕಡಿಮೆ ಒಂದು ವರ್ಷ ಎಂದು ವೈದ್ಯರು ಹೇಳಿದ್ದರು. ಈ ವಿಷಯ ಅಮ್ಮನಿಗೆ ಗೊತ್ತಿದ್ದೂ ತುಂಬ ಆತ್ಮಸ್ಥೈರ್ಯದಿಂದ ಬದುಕನ್ನು ಎದುರಿಸಿದಳು. ಕೊನೆಯ ದಿನಗಳನ್ನು ನಮ್ಮ ಮನೆಯಲ್ಲಿಯೇ ಕಳೆಯಬಯಸಿದ್ದ ಅವಳ ಸೇವೆಯ ಭಾಗ್ಯ ನನಗೆ ದೊರೆತಿತ್ತು.

ಕೊನೆಯುಸಿರಿರುವವರೆಗೂ ಜೀವನೋತ್ಸಾಹದಿಂದ ಬದುಕಿದ ಅಮ್ಮ 1999 ಫೆಬ್ರುವರಿ 27ರಂದು ಶಾಂತಳಾದಳು. ನನಗಂತೂ ಕೈಗೂಸನ್ನೇ ಕಳೆದುಕೊಂಡತಾಗಿತ್ತು. ಕ್ರಿಯಾ ವಿಧಿಯಲ್ಲ ಮುಗಿದು ಬಂದವರೆಲ್ಲ ತಮ್ಮ ತಮ್ಮ ಊರಿಗೆ ಮರಳಿದ ಮೇಲೆ ಉಳಿದದ್ದು ಅಮ್ಮನ ಗಾಢವಾದ ನೆನಪು. ಆ ಕೊರಗನ್ನು ಒಳಗೊಳಗೆ ಸಹಿಸುತ್ತ ಒಬ್ಬರನ್ನೊಬ್ಬರು ಸಮಾಧಾನಿಸುತ್ತ ಇದ್ದ ಅಪ್ಪ, ನನ್ನಕ್ಕ, ಪತಿ ಹಾಗೂ ಮಕ್ಕಳು. ಹೀಗಿರುವಾಗ ಒಂದು ದಿನ ನಾನು ಅಮ್ಮನ ಕೈಯಲ್ಲಿದ್ದ ನಾಲ್ಕು ಬಂಗಾರದ ಬಳೆ ಹಾಗೂ ಮಾಂಗಲ್ಯದ ಸರವನ್ನು ಅಪ್ಪನೆದುರು ಇರಿಸಿದೆ. ‘ಅಪ್ಪ, ಇದೆಲ್ಲ ಇನ್ನು ನಿನ್ನ ಸೊತ್ತು, ನಿನ್ನಲ್ಲಿರಲಿ’ ಎಂದೆ. ಕಂಬನಿದುಂಬಿಕೊಂಡ ಅಪ್ಪ ಏನೊಂದು ಮಾತಾಡದೆ ಅವುಗಳನ್ನೆಲ್ಲ ತನ್ನ ಬಳಿ ಇಟ್ಟುಕೊಂಡ.

ಇದಾಗಿ ಎರಡು ದಿನ ಕಳೆದಿರಬಹುದು ಗಜೇಂದ್ರಗಡದಲ್ಲಿರುವ ನನ್ನ ಭಾವನವರು ನಮ್ಮ ಮನೆಗೆ ಬಂದರು; ಒಂದು ಸೋಜಿಗದ ಸುದ್ದಿಯನ್ನು ಹೊತ್ತು. ಗದಗಿನ ಸಮೀಪದಲ್ಲಿ ನರೇಗಲ್ಲ ಎಂಬ ಗ್ರಾಮವಿದೆ ಸೂಫಿ ಸಂತ ದೂದನಾನಾರ ಅನನ್ಯ ಭಕ್ತೆಯಾದ ಹುಸೇನ್‌ಬಿ ಅಮ್ಮ ಹಲವು ವಿಸ್ಮಯಗಳ ಆಗರ; ಅಲೌಕಿಕ ಪ್ರಭಾವಳಿಯುಳ್ಳ ಮಹಿಳೆ. ನಮ್ಮ ಕುಟುಂಬದ ಮೇಲೆ, ಅಮ್ಮನ ಮೇಲೆ ಅವಳಿಗೆ ಇನ್ನಿಲ್ಲದ ಮಮತೆ. ನನ್ನಮ್ಮ ಲಕ್ಷ್ಮೀದೇವಿ ಅವಳ ಕನಸಿನಲ್ಲಿ ಬಂದು  ನನ್ನ ನಾಲ್ಕು ಬಂಗಾರದ ಬಳೆಗಳನ್ನು ನಾಲ್ವರು ಮಕ್ಕಳು ನನ್ನ ಪ್ರೀತಿಯ ಗುರುತಾಗಿ ಒಂದೊಂದು ಇಟ್ಟುಕೊಳ್ಳಲಿ ಎಂದು ಹೇಳಿದಳಂತೆ.  ಗಜೇಂದ್ರಗಡದ ಭಾವನಿಗೆ ದೂರವಾಣಿ ಮೂಲಕ ಸಂಪರ್ಕಿಸಿದ ನರೇಗಲ್ಲದ ಅಮ್ಮ ಕನಸಿನ ವಿಷಯ ಪ್ರಸ್ತಾಪಿಸಿದ್ದಳು. 

ಇದಾಗಿ ಒಂದು ವಾರ ಕಳೆದಿರಬೇಕು, ಗುಲ್ಬರ್ಗದಲ್ಲಿ ಉನ್ನತ ಸರಕಾರಿ ಹುದ್ದೆಯಲ್ಲಿರುವ ನನ್ನ ಕಿರಿಯ ಸಹೋದರ ಗದಗಿಗೆ ಬಂದ. ಅಪ್ಪ ಆತನನ್ನು ತನ್ನ ಬಳಿ ಕರೆದು ಸೂಫಿ ಸಂತಳ ಕನಸಿನ ವಿಷಯ ತಿಳಿಸಿ  ಆಕೆಯ ಇಚ್ಛೆಯಂತೆ ಈ ನಾಲ್ಕು ಬಳೆಗಳನ್ನು ನೀವು ನಾಲ್ವರು ಒಂದೊಂದಾಗಿ ಇಟ್ಟುಕೊಳ್ಳಿ ಎಂದು ಹೇಳಿದ.

ತಕ್ಷಣ ಸಿಡಿದೆದ್ದ ಅಣ್ಣ ಊಹುಂ ಸಾಧ್ಯವೇಇಲ್ಲ. ಅಮ್ಮ ತನ್ನ ನಾಲ್ಕು ಬಳೆಗಳನ್ನು ನನ್ನ ಮಗಳಿಗೆ ಕೊಡುವುದಾಗಿ ಹೇಳಿದ್ದಾಳೆ. ಕೊಟ್ಟರೆ ಎಲ್ಲ ಕೊಡಿ ಎಂದು ಕಡ್ಡಿ ಮುರಿದಹಾಗೆ ಹೇಳಿ ಹೋಗಿಬಿಟ್ಟ. ಅಮ್ಮ ಹಾಗೆ ಹೇಳಿದ್ದಳೆ? ಅಮ್ಮ, ಅಣ್ಣ  ಹಾಗೂ ದೇವರಿಗೆ ಬಿಟ್ಟು ಈ ವಿಷಯ ಯಾರಿಗೆ ಗೊತ್ತು?!

ಅಣ್ಣಾ, ಇದು ಕೇವಲ ಬಂಗಾರದ ಬಳೆ ಅಲ್ಲಪ್ಪ, ಇದರಲ್ಲಿ ನನ್ನವ್ವನ ಪ್ರೀತಿ, ಅಂತಃಕರಣ ಇದೆಯೋ, ಆಕೆಯ ಬೆಚ್ಚಗಿನ ಕೈ ಸ್ಪರ್ಶ ಇದೆಯೋ. ನಾನು ಸಾಯುವವರೆಗೆ ಅಮ್ಮ ನನ್ನ ಕೈಯಲ್ಲಿಯೇ ಇದ್ದಾಳೆ ಎಂಬ ಭಾವನೆಯನ್ನುಂಟು ಮಾಡುತ್ತದೆಯೋ, ಅಮ್ಮ ಎಲ್ಲರಿಗೂ ಸೇರಿದವಳು. ಎಲ್ಲರ ಬಳಿಯೂ ಅವಳ ಕುರುಹು ಇರಲೋ... ... ಎಂದು ಹೇಳಬೇಕಾದ ಮಾತುಗಳನ್ನು ಹೇಳಲಾಗಲೇ ಇಲ್ಲ.

ಸಹಸ್ರಾರು ರೂಪಾಯಿ ಸಂಪಾದಿಸುವ ನನಗೆ ಅಂಥ ಹತ್ತು ಬಳೆ ಮಾಡಿಸಿಕೊಳ್ಳುವುದು ದೊಡ್ಡ ವಿಷಯವೇನಲ್ಲ. ಆದರೆ ಸಮಸ್ತ ಕನಕ ರಾಶಿಯೂ ನನ್ನ ಅಮ್ಮನ ಕೈ ಬಳೆಗೆ ಸಮವಲ್ಲ. ಯಾಕೆ ಅಣ್ಣ ಹೀಗೆ ಮಾಡಿದ? ಅವನ ಅಂತಃಸಾಕ್ಷಿ ‘ಮೃತತಾಯಿಯ ಆಸೆಯನ್ನು ತೀರಿಸಬೇಕಾದುದು ನಿನ್ನ ಕರ್ತವ್ಯ’ ಎಂದು ಎಚ್ಚರಿಸಲೇ ಇಲ್ಲವೇ? ಆತನ ನಡವಳಿಕೆಯ ಬಗ್ಗೆ ನಿಜಕ್ಕೂ ಸಿಟ್ಟಿಲ್ಲ, ಸಂಕಟವಿದೆ. ಅಮ್ಮನ ಆ ಬಳೆ ಇಂದಿಗೂ ನನಗೆ ಕಾಡುತ್ತದೆ. ಅಮ್ಮನನ್ನು ಕೊನೆಗಾಲದಲ್ಲಿ ಜೋಪಾನ ಮಾಡಿದ ಆತ್ಮತೃಪ್ತಿಯೇ ದಿವ್ಯ ಸಮಾಧಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT