ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡ-ಹೆಂಡತಿ ಮತ್ತು...

Last Updated 30 ಮೇ 2014, 19:30 IST
ಅಕ್ಷರ ಗಾತ್ರ

‘ನಮ್ಮಿಬ್ಬರ ನಡುವೆ ಅನೈತಿಕ ಸಂಬಂಧ ಎನ್ನುವಂಥದ್ದೇನೂ ಇಲ್ಲ. ಆದರೆ ಒಬ್ಬರಿಗೊಬ್ಬರು ಅನಿವಾರ್ಯ ಎನ್ನುವಷ್ಟು ಹಚ್ಚಿಕೊಂಡಿದ್ದೇವೆ. ಇಬ್ಬರೂ ಒಂದೇ ಸ್ಥಳದಲ್ಲಿ ಕೆಲಸ ಮಾಡುವುದರಿಂದ ಸಲುಗೆ ಬೆಳೆಯಿತು. ಕೆಲವೊಮ್ಮೆ ‘ಅವನು’ ಮನೆಗೂ ಬರುತ್ತಾನೆ. ನನ್ನ ಪತಿಗೆ ಯಾವತ್ತೂ ಹೆಂಡತಿ–ಮಕ್ಕಳ ಬಗ್ಗೆ ಗಮನವೇ ಇಲ್ಲ. ಅವರಿಗೆ ಮನೆ ಎನ್ನುವುದು ಕೇವಲ ಊಟ–ಸುಖ ಸಿಗುವ ಜಾಗವಷ್ಟೆ. ಹಾಗೆಯೇ ಅವನ ಪತ್ನಿಯೂ ಗಂಡನ ಬಗ್ಗೆ ಕಾಳಜಿ ವಹಿಸುವುದಿಲ್ಲ. ಹೀಗಾಗಿ ನನಗೆ ಅವನು, ಅವನಿಗೆ ನಾನು ಹತ್ತಿರವಾದೆವು. ಇಬ್ಬರೂ ಹೆಚ್ಚು ಸಮಯ ಕೂಡಿ ಕಳೆಯಲು ಬಯಸುತ್ತೇವೆ. ಇದೆಲ್ಲ ನನ್ನ ಪತಿ, ಅವರ ಪತ್ನಿಗೆ ತಪ್ಪಾಗಿ ಕಾಣಬಹುದು. ಆದರೆ ನಾವು ಸರಿ ಇದ್ದೇವೆ ಎಂದು ನಮಗೆ ಅನಿಸುತ್ತದೆ. ನಮ್ಮ ಸಂಬಂಧ ನಿಜಕ್ಕೂ ತಪ್ಪೇ?’

‘ನನ್ನ ಪತ್ನಿ ನನ್ನೊಂದಿಗೆ ಸರಿಯಾಗಿ ಬೆರೆಯುತ್ತಿಲ್ಲ. ಕಾಳಜಿಯೂ ಕಡಿಮೆ. ನಮ್ಮಿಬ್ಬರ ನಡುವೆ ಒಡಕು ಮೂಡಿ ನಾಲ್ಕಾರು ವರ್ಷಗಳೇ ಕಳೆದಿವೆ. ಈ ಮಧ್ಯೆ ನನ್ನ ಸಂಬಂಧಿಕರೊಬ್ಬರು ವರ್ಗವಾಗಿ ಬಂದು, ನಮ್ಮ ಮನೆ ಪಕ್ಕದಲ್ಲಿಯೇ ಇದ್ದಾರೆ. ನಾವಿಬ್ಬರೂ ಮದುವೆ ಆಗಬೇಕಿತ್ತು. ಕಾರಣಾಂತರಗಳಿಂದ ತಪ್ಪಿತ್ತು. ಆದರೆ ಈಗಲೂ ಅವಳ ಮನದಲ್ಲಿ ನಾನಿದ್ದೇನೆ. ನನಗೂ ಅವಳ ಬಗ್ಗೆ ಆಸಕ್ತಿ ಮೂಡಿದೆ. ಏನು ಮಾಡಲಿ?’

ಇಂತಹ ಗೊಂದಲ, ಸಂದಿಗ್ಧಗಳಿಂದ ಕೂಡಿದ ರಾಶಿ ರಾಶಿ ಪತ್ರಗಳು  ಸಮಾಲೋಚನಾ ಕೇಂದ್ರಗಳಿಗೆ, ಮನೋಚಿಕಿತ್ಸಕರ ಕಾರ್ಯಾಲಯಗಳಿಗೆ ಬರುತ್ತವೆ. ಉತ್ತರ ನೀಡುವುದು ಅಷ್ಟು ಸುಲಭವಲ್ಲ. ಏಕೆಂದರೆ ತಪ್ಪು–ಸರಿ, ನೈತಿಕ–ಅನೈತಿಕ ಎಂಬ ಪದಗಳಿಗೆ ಒಂದೇ ಅರ್ಥವಿಲ್ಲ. ಅದು ಅವರವರ ಭಾವಕ್ಕೆ ಬಿಟ್ಟಿದ್ದು.

* * *
ಪತಿ–ಪತ್ನಿಯರಾಗುವ ವೇಳೆ ಕೊಟ್ಟು–ತೆಗೆದುಕೊಂಡ ವಾಗ್ದಾನಗಳು ಕಳಚಿಬಿದ್ದ ಕ್ಷಣ, ವಿಶ್ವಾಸ–ಪ್ರೀತಿ–ನಂಬಿಕೆಯ ಕೊಂಡಿ ಸಡಿಲಗೊಂಡಾಗ ಏಳುವ ಧೂಳಿನ ಕಣಗಳಿವು. ಹತ್ತಾರು ವರ್ಷಗಳ ದಾಂಪತ್ಯದ ನಡುವೆ ಅಪಸ್ವರ ಹುಟ್ಟಿದ ಘಳಿಗೆ, ಸರಿ–ತಪ್ಪುಗಳ ನಡುವೆ ಹೊಯ್ದಾಡುವ ಮನಸ್ಸಿನ ತುಮುಲ ಎಬ್ಬಿಸುವ ಗದ್ದಲವಿದು.

ದಾಂಪತ್ಯದಲ್ಲಿನ ಸಣ್ಣ–ಪುಟ್ಟ ವಿರಸಗಳು ಸಾಂಗತ್ಯದ ಅರ್ಥವನ್ನು ಗಟ್ಟಿ ಮಾಡುತ್ತವೆ. ಇಬ್ಬರ ನಡುವಿನ ಹೊಂದಾಣಿಕೆಯನ್ನು ಹೆಚ್ಚಿಸುತ್ತವೆ. ಇಬ್ಬರ ನಡುವಿನ ತಪ್ಪು ಅಭಿಪ್ರಾಯಗಳನ್ನು, ಗ್ರಹಿಕೆಗಳನ್ನು ಸರಿಪಡಿಸಿಕೊಂಡು ಹೋಗುವುದರಲ್ಲಿಯೇ ದಾಂಪತ್ಯದ ಅರ್ಥ ಅಡಗಿರುವುದು. ಗಂಡ ಅಥವಾ ಹೆಂಡತಿ ಅಥವಾ ಇಬ್ಬರೂ ಸೇರಿ ತಮ್ಮ ನಡುವೆ ಏಳುವ ಕಂದಕವನ್ನು ಆರಂಭದಲ್ಲಿಯೇ ಸರಿಪಡಿಸುವುದು ಅಗತ್ಯ. ಆದರೆ ಕೆಲವು ಪ್ರಕರಣಗಳಲ್ಲಿ ಇದು ಹಾದಿ ತಪ್ಪಿ ಎಲ್ಲಿಗೊ ಹೋಗಿ ತಲುಪುವ ಅಪಾಯವೂ ಇದ್ದೇ ಇರುತ್ತದೆ. ಇಬ್ಬರ ನಡುವೆ ಮೂರನೇಯವರ ಹೆಜ್ಜೆ ಗುರುತು ಕಾಣುವುದು ಇಂಥದ್ದೇ ಸಂದರ್ಭಗಳಲ್ಲಿ.


ಆ ಸಂಬಂಧ...
ಕೆಲವೊಮ್ಮೆ ಇಂಥ ಯಾವುದೇ ಕಾರಣದಿಂದ, ಮತ್ತೊಮ್ಮೆ ಯಾವ ಕಾರಣವೂ ಇಲ್ಲದೇ ಒಂದು ಹೆಣ್ಣು–ಗಂಡಿನ ನಡುವೆ ಏರ್ಪಡುವ ಹೊರ ಸಂಬಂಧ ಹೊರೆಯಾಗುವುದು ಯಾವಾಗ? ಈ ಸ್ನೇಹ–ಸಂಬಂಧದಿಂದ ಎದುರಾಗಬಹುದಾದ ಕಂಟಕಗಳೇನು? ಇವುಗಳ ಅರ್ಥ–ರೂಪ–ವ್ಯಾಖ್ಯಾನ ಹೇಗೆ? ಎಂಬ ಪ್ರಶ್ನೆಗಳಿಗೆ ಸಿದ್ಧ ಉತ್ತರ ಹುಡುಕುವಲ್ಲಿ ಮನೋವೈದ್ಯರೂ, ಚಿಕಿತ್ಸಕರೂ, ಸಮಾಲೋಚಕರೂ ಹೈರಾಣಾಗುವುದಿದೆ.

ಒಂದು ಸಂಬಂಧವನ್ನು ತಪ್ಪು–ಸರಿ ಎಂದು ಹೇಳುವುದು ವಾಸ್ತವಿಕವಾಗಿ ಯಾವ ಮಾನದಂಡಕ್ಕೂ ಸಿಗದ ವಿಚಾರ. ಅವರಿಬ್ಬರ ನಡುವಿನ ಸಾಂಗತ್ಯ ಎಂಥದ್ದು, ಅವರ ಸಖ್ಯ ಯಾವ ಹಂತದಲ್ಲಿದೆ ಎನ್ನುವುದಷ್ಟೇ ಮುಖ್ಯವೆಂದೂ ಹೇಳಲಾಗದು. ಅದು ಅವರ ಮನಸ್ಥಿತಿ, ಅದಕ್ಕೆ ಪತಿ/ಪತ್ನಿಯ ಪ್ರತಿಕ್ರಿಯೆ, ಮಕ್ಕಳ ಗ್ರಹಿಕೆ, ಸಂಬಂಧಿಕರ ವ್ಯಾಖ್ಯಾನ, ಅವರು ವಾಸಿಸುವ ಪ್ರದೇಶ (ಗ್ರಾಮವೇ, ಪಟ್ಟಣವೇ, ಮೆಟ್ರೊ ನಗರವೇ), ಆರ್ಥಿಕ ಸ್ಥಾನ–ಮಾನ, ಸ್ವಾತಂತ್ರ್ಯ ಮುಂತಾದ ಅಂಶಗಳನ್ನು ಒಳಗೊಂಡ ಒಂದು ಸಂಕೀರ್ಣ ವಿಚಾರ.

ಇಂತಹ ವಿಚಾರವನ್ನು ಅವರವರ ವೈಯಕ್ತಿಕ ಸಾಮಾಜಿಕ ಹಾಗೂ ಕಾನೂನಿನ ನೆಲೆಯಲ್ಲಿ ಪ್ರತ್ಯೇಕವಾಗಿಟ್ಟು
ಪರಾಮರ್ಶಿಸಬೇಕಾಗುತ್ತದೆ.
ಅವುಗಳೆಂದರೆ:

*ಅವನ/ಅವಳ ಸಹವಾಸ ತನಗೇಕೆ ಬೇಕು ಮತ್ತು ತನ್ನ ಸ್ನೇಹದ ಪರಿಧಿ ಎಲ್ಲಿದೆ ಎಂದು ತನ್ನನ್ನೇ ತಾನು ಕೇಳಿಕೊಳ್ಳುವುದು ಮತ್ತು ಸ್ಪಷ್ಟ ಉತ್ತರ ಪಡೆಯುವುದು.
*ಈ ಭಾವಕ್ಕೆ ಕಾರಣವೇನು ಎಂಬುದನ್ನು ಕಂಡುಕೊಳ್ಳುವುದು. (ತನ್ನ ಸಂಗಾತಿಯ ಕಡೆಗಣನೆ. ಸಂಗಾತಿಯಿಂದ ತೃಪ್ತಿ ಸಿಗುತ್ತಿಲ್ಲ ಎನ್ನುವುದೂ ಕಾರಣವೇ.  ಅವರಿಗೆ ತಾನೇನು ಎನ್ನುವುದನ್ನು ತೋರಿಸಬೇಕೆನ್ನುವ ಹಟವೇ?)
* ತನಗೆ ಏನು ಬೇಕು ಎಂಬುದರ ವಿಶ್ಲೇಷಣೆ. ತನಗೆ ಬೇಕಿರುವುದು ಇನ್ನೊಂದು ಹೃದಯದ ಆಸರೆಯೇ? ಸಮಾನ ಮನಸ್ಸಿನ ಸಾಂತ್ವನವೇ? ಮನವರಿತ ಸಂಗಾತಿಯ ಸಾಂಗತ್ಯ–ಸಾಮಿಪ್ಯದ ಸೆಳೆತವೇ? ತನ್ನ ನೋವು–ನಲಿವುಗಳನ್ನು ಹಂಚಿಕೊಳ್ಳುವ ಸ್ನೇಹದ ಹಂಬಲವೇ? ಅಥವಾ ನಿಜಕ್ಕೂ ಲೈಂಗಿಕ ವಾಂಛೆಯ ನಿರೀಕ್ಷೆಯೇ? ಈ ಪ್ರಶ್ನೆಗಳಿಗೆ ತನಗೆ ತಾನೇ ಉತ್ತರಿಸಿಕೊಳ್ಳುವುದು.
*ನಂತರದ್ದು ಅದರ ಪರಿಣಾಮದ ಬಗ್ಗೆ ಆಲೋಚಿಸುವುದು. ಇದರ ಪರಿಣಾಮ ಕೌಟುಂಬಿಕವಾಗಿ, ಸಾಮಾಜಿಕವಾಗಿ ಹಾಗೂ ಕಾನೂನಾತ್ಮಕವಾಗಿ ಏನಾಗಬಹುದು? ನಿಮ್ಮ ಸಂಬಂಧ ಅಥವಾ ಸ್ನೇಹದಲ್ಲಿ ಕಾನೂನು ತಲೆ ಹಾಕಲಿಕ್ಕಿಲ್ಲ. ಆದರೆ ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ನಿಮ್ಮ ಸ್ನೇಹ–ಸಂಬಂಧ ಪಡೆಯಬಹುದಾದ ಅರ್ಥ ಹಾಗೂ ಅದರ ಪರಿಣಾಮದ ಬಗ್ಗೆ ಆಲೋಚಿಸಬೇಕು. ನೀವು ಆರಿಸಿಕೊಳ್ಳುವ ಸಾಂಗತ್ಯ, ಅದಕ್ಕೆ ಸಿಗುವ ಅರ್ಥ, ನಿಮ್ಮ ಸ್ನೇಹದ ಪರಿಧಿ, ವ್ಯಾಪ್ತಿ, ಸ್ವಭಾವಗಳು ಇವೆಲ್ಲ ಒಂದು ಸಂಬಂಧದ ನಿರ್ಧಾರಕ ಅಂಶಗಳು. ಇದರಿಂದ ಸಂಸಾರದ ಸಾರ ಮತ್ತಷ್ಟು ರುಚಿಗೆಡಬಹುದೇ, ಸಂಬಂಧಗಳು–ಬಾಂಧವ್ಯಗಳಲ್ಲಿ ಮೂಡಿದ ಅಂತರ ಮತ್ತಷ್ಟು ವಿಸ್ತೃತಗೊಳ್ಳುವ ಅಪಾಯವಿದೆಯೇ, ಮಕ್ಕಳ ಮನಸ್ಸಿನಲ್ಲಿ ಯಾವ ರೀತಿ ಪ್ರಭಾವ ಬೆಳೆದೀತು ಎಂಬ ಬಗ್ಗೆ ತರ್ಕಿಸುವುದು.
ಇದನ್ನು ಹೇಗೆ ನಿರ್ವಹಿಸುವುದು ಎನ್ನುವುದು ಕೊನೆಯ ವಿಚಾರ.

ನೀವೇನು ಮಾಡಬಹುದು...
*ನಿಮ್ಮ ಮನಸ್ಸಿನ ತುಮುಲವನ್ನು, ನಿಮ್ಮನ್ನು ಕಾಡುತ್ತಿರುವ ಖಾಲಿತನವನ್ನು ನಿಮ್ಮ ಸಂಗಾತಿಯ ಎದುರು ಹಂಚಿಕೊಳ್ಳುವುದು
*ನಿಮ್ಮ ಬದುಕಿನಲ್ಲಿ ಅವರ ಅಗತ್ಯವನ್ನು ಮನಗಾಣಿಸುವುದು
*ಅವರ ಅನುಪಸ್ಥಿತಿ ನಿಮ್ಮನ್ನು ಬಾಧಿಸುತ್ತಿರುವ ಬಗೆಯನ್ನು ವಿವರಿಸುವುದು (ಇದೆಲ್ಲಕ್ಕೂ ಮೊದಲು ನೀವು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ. ಇಲ್ಲದೇ ಹೋದರೆ ಇದು ಮತ್ತೊಂದು ರೀತಿಯ ಅನರ್ಥಕ್ಕೆ ಕಾರಣವಾಗಬಹುದು.)
*ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದು
*ಮಕ್ಕಳ ಶಾಲಾ–ಕಾಲೇಜು ಪಾರ್ಟಿಗಳಿಗೆ ಅವಕಾಶವಿದ್ದರೆ ನೀವೂ ಹೋಗಿ ಬರುವುದು
*ರಜಾ ದಿನಗಳಲ್ಲಿ ಮಕ್ಕಳ ಸ್ನೇಹಿತರನ್ನೆಲ್ಲ ಕರೆದು ಊಟ ಹಾಕಿ ಅವರೊಂದಿಗೆ ಸಂಭ್ರಮಿಸುವುದು
*ನಿಮ್ಮ ಕಚೇರಿಯಲ್ಲಿ ಅಥವಾ ನೆರೆಹೊರೆಯಲ್ಲಿ ನಿಮ್ಮದೇ ಆದ ಸಮಾನ ಮನಸ್ಕರ ಗುಂಪೊಂದನ್ನು ಕಟ್ಟಿಕೊಳ್ಳುವುದು. ಪರಸ್ಪರ ಚರ್ಚೆ, ವಿಚಾರ ವಿನಿಮಯ, ಕಿಟ್ಟಿ ಪಾರ್ಟಿ, ಸಿನಿಮಾ, ಪ್ರವಾಸಗಳನ್ನು ಕೈಗೊಳ್ಳುವುದು
*ಹಳೆ ಸ್ನೇಹಗಳ ಮರುಸ್ಥಾಪನೆ, ಮುಕ್ತವಾಗಿ ಹೊಸ ಹಾಗೂ ಆರೋಗ್ಯಕರ ಸ್ನೇಹಕ್ಕೆ ಕೈಚಾಚುವುದು
ಇಂಥವೇ ಮಾರ್ಗಗಳೆಂದು ಹೇಳಲಾಗದು. ಪ್ರತಿಯೊಬ್ಬರ ಗೊಂದಲಗಳೂ ಭಿನ್ನ, ಹಾಗೆಯೇ ಅವರವರ ಕೌಟುಂಬಿಕ–ಸಾಮಾಜಿಕ ಹಿನ್ನೆಲೆಯ ಆಧಾರದ ಮೇಲೆ ಅವರವರು ಕಂಡುಕೊಳ್ಳಬೇಕಾದ ಮಾರ್ಗಗಳೂ ಬೇರೆ ಬೇರೆಯಾಗುತ್ತವೆ.
ಸ್ನೇಹ ಮುಖ್ಯ, ಆದರೆ ದಾಂಪತ್ಯ ಅದಕ್ಕಿಂತಲೂ ಮೌಲ್ಯಯುತವಾದುದು. ಅದರಲ್ಲೂ ಭಾರತೀಯ ಮನಸ್ಸುಗಳಲ್ಲಿ ಅದಕ್ಕೊಂದು ವಿಶಿಷ್ಟ ಸ್ಥಾನವಿದೆ. ಹಾಗಾಗಿ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುವುದರಲ್ಲಿ ಯಾವುದೇ ಮುಜುಗುರ ಪಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಸ್ನೇಹ, ದಾಂಪತ್ಯದಲ್ಲಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳುವುದು ಅಗತ್ಯ. ಯಾವುದೇ ಅಪಾಯಗಳಿಲ್ಲದ, ಜಂಜಾಟಗಳಿಲ್ಲದ, ಸಮಾಜಸಮ್ಮತವಾದ, ಮನಸ್ಸಿಗೂ ಒಪ್ಪಿತವಾದ ಮಧುರ ಸ್ನೇಹವೆಂದರೆ ಗಂಡ–ಹೆಂಡಿರ ನಡುವಿನ ಬಾಂಧವ್ಯ. ಅದನ್ನು ಗಟ್ಟಿಗೊಳಿಸುವುದು, ಅದರಲ್ಲಿ ಇನ್ನಷ್ಟು, ಮತ್ತಷ್ಟು ಸತ್ವ ತುಂಬುವುದು ಆದ್ಯತೆಯಾಗಲಿ.... 

ಒಳ ಸಂಘರ್ಷಗಳ ವ್ಯಕ್ತ ರೂಪ...
ನಮ್ಮಲ್ಲಿ ಈ ರೀತಿಯ ಸಮಸ್ಯೆ ಹೊತ್ತು ಸಾಕಷ್ಟು ಜನ ನಡುವಯಸ್ಸಿನ ಮಹಿಳೆಯರು/ಪುರುಷರು ಎಡತಾಕುತ್ತಾರೆ. ಒಂದೆಡೆ ವಯೋಸಹಜ ತುಮುಲಗಳು, ಇನ್ನೊಂದೆಡೆ ತಾವೇ ತಮ್ಮ ಸುತ್ತ ಹೆಣೆದುಕೊಂಡ ಬಲೆ, ಇತ್ತ ಸಾಮಾಜಿಕ ನೀತಿಯನ್ನು ದಾಟಲು ಹಂಬಲಿಸುವ ಹೃದಯ, ಅತ್ತ ಮನಸ್ಸನ್ನು ಛಿದ್ರಗೊಳಿಸುವ ಕಳಂಕಿತ ಭಾವ, ಪಾಪಪ್ರಜ್ಞೆ.

ಗಂಡ/ಹೆಂಡತಿ ಇದ್ದಾಗ್ಯೂ ಇನ್ನೊಬ್ಬರ ಸಹವಾಸ ಬೇಕು ಎನಿಸುವುದು ತಪ್ಪಂತೂ ಅಲ್ಲ. ಸಂಘಕ್ಕೆ ಸಾವಿರ ರೂಪಗಳಿರುತ್ತವೆ. ನಿಮ್ಮ ಸಾಂಗತ್ಯದ ರೂಪ ಯಾವುದು ಎನ್ನುವುದೂ ಮುಖ್ಯವಾಗುತ್ತದೆ. ಅಂತೆಯೇ ಇಂತಹ ಸಂಬಂಧ ತಪ್ಪೇ, ಸರಿಯೇ ಎನ್ನುವುದಕ್ಕಿಂತ ಅದರ ಪರಿಣಾಮ ಏನು ಎನ್ನುವುದು ಸಹ ಪ್ರಮುಖ ವಿಚಾರ. ನಮ್ಮ ಸುತ್ತ ಮುತ್ತಲಿನ ಸಮಾಜ ಅದಕ್ಕೆ ಯಾವ ಹೆಸರಿಡಬಹುದು ಎನ್ನುವುದರ ಮೇಲೆ ಆ ಪರಿಣಾಮದ ತೀವ್ರತೆ ಅಡಗಿರುತ್ತದೆ.

ಈ ಆಸೆ ಭಾವನಾತ್ಮಕವಾಗಿರಬಹುದು, ಮಾನಸಿಕವಾಗಿರಬಹುದು, ದೈಹಿಕವಾಗಿರಬಹುದು, ಭೌತಿಕವಾಗಿರಬಹುದು. ಅದರ ತೀವ್ರತೆ ಹಾಗೂ ಅದನ್ನು ಅರ್ಥೈಸಿಕೊಳ್ಳುವ ಬಗೆ ಕೂಡ ಇಲ್ಲಿ ಮುಖ್ಯವಾಗುತ್ತದೆ.ಇಂದು ಮಾಧ್ಯಮಗಳಿವೆ, ಮಾಹಿತಿ ಇದೆ, ಶಿಕ್ಷಣವಿದೆ, ಬದುಕಿಗೆ ಅನ್ಯ ಮಾರ್ಗವಿದೆ  ಹೀಗಾಗಿ ವಿವಾಹದ ಅರ್ಥ–ವ್ಯಾಪ್ತಿ ಬದಲಾಗುತ್ತಿದೆ ಎಂದು ಹೇಳಬಹುದಷ್ಟೇ. ಸಾಂಗತ್ಯ–ಸಾಮೀಪ್ಯ–ಸಾನಿಧ್ಯ ಎಂಬ ಪರಿಕಲ್ಪನೆಗೆ ಪ್ರತಿಯೊಬ್ಬರಲ್ಲೂ ಬೇರೆ ಬೇರೆ ಅರ್ಥ ಹಾಗೂ ಮಿತಿಗಳಿರುತ್ತವೆ. ಹೀಗಾಗಿ ಇಂಥ ಸ್ನೇಹಕ್ಕೆ ಸಾರ್ವತ್ರಿಕವಾದ ವಿವರಣೆ ಇಲ್ಲ. ಇದನ್ನು ಅನೈತಿಕ ಎನ್ನುವುದಕ್ಕಿಂತ ಒಳ ಸಂಘರ್ಷಗಳ ವ್ಯಕ್ತ ರೂಪ ಎಂದು ಕರೆಯಬಹುದು.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ವಿವಾಹ ಎನ್ನುವುದು ಒಂದು ವಾಗ್ದಾನ. ಇಲ್ಲಿ ‘ನಾನು ನಿನಗಾಗಿ, ನೀನು ನನಗಾಗಿ’ ಬದುಕುವ ಸಂಧಾನವಿರುತ್ತದೆ. ಹೀಗಾಗಿ ಇದು ಸರಿ–ತಪ್ಪು ಎಂದು ಚರ್ಚಿಸುವ ಬದಲು ಈ ಕೆಳಗಿನ ಅಂಶಗಳ ಮೇಲೆ ಗಮನ ಹರಿಸಬೇಕಾಗುತ್ತದೆ.
*ನಿಮ್ಮ ಸಂಬಂಧ (ಸ್ನೇಹ) ನಿಮಗೆ ತಂದೊಡ್ಡಬಹುದಾದ ಅಪಾಯಗಳ ಬಗ್ಗೆ ನಿಮಗೆ ಎಚ್ಚರಿಕೆ ಇದೆಯೇ?
*ಪತಿ/ಪತ್ನಿ ಅಥವಾ ಪೋಷಕರಾಗಿ ನಿಮ್ಮ ಜವಾಬ್ದಾರಿಗಳ ಮೇಲೆ ಇದು ಪರಿಣಾಮ ಬೀರುತ್ತಿದೆಯೇ?
*ನಿಮ್ಮ ಮಕ್ಕಳ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರುತ್ತಿದೆಯೇ?
*ನಿಮ್ಮ ಕೌಟುಂಬಿಕ ಶಾಂತಿ–ಹೊಂದಾಣಿಕೆಯನ್ನು ಇದು ಹದಗೆಡಿಸುತ್ತಿದೆಯೇ?
*ಸಂಬಂಧಗಳ ಘರ್ಷಣೆಗೆ ಇದು ನಾಂದಿಯಾಗುತ್ತಿದೆಯೇ?
*ನಿಮ್ಮ ವೃತ್ತಿಪರತೆಯ ಮೇಲೆ ಪ್ರಭಾವ ಬೀರುತ್ತಿದೆಯೇ?
*ನಿಮ್ಮಲ್ಲಿ ಕಳಂಕಿತ ಭಾವ ಅಥವಾ ಪಾಪಪ್ರಜ್ಞೆಯನ್ನು ಹುಟ್ಟುಹಾಕುತ್ತಿದೆಯೇ?
ಈ ಎಲ್ಲ ಅಂಶಗಳನ್ನು ಮತ್ತೆ ಮತ್ತೆ ನಿಮ್ಮನ್ನು ನೀವು ತದಕಿ ಕೇಳಿಕೊಂಡಾಗಲೂ ನಿಮ್ಮ ಸ್ನೇಹ ಇದೆಲ್ಲಕ್ಕಿಂತ ಮುಖ್ಯ ಅಥವಾ ಅದನ್ನು ನೀವು ನಿಭಾಯಿಸಬಲ್ಲಿರಿ ಎಂದಾದರೆ ಉತ್ತರ ಸುಲಭ...
–ಡಾ. ಅ.ಶ್ರೀಧರ್, ಮನೋವಿಜ್ಞಾನಿ

ಅನುಮಾನಗಳ ಹುತ್ತ, ಅವಮಾನಗಳ ಸುತ್ತ...
ಪುರುಷ ಮತ್ತು ಮಹಿಳೆಯರ ನಡುವಿನ ಸ್ನೇಹಕ್ಕೆ ಸಂಬಂಧ ಸೂಚಕಗಳು ಬೇಕೆ?  ಇದೊಂದು ಚರ್ಚೆಯ ವಿಷಯ. ಆದರೆ ನಮ್ಮ ಸಂಗಾತಿ ನಮಗಷ್ಟೇ ಎಂಬ ಸ್ವಾರ್ಥ ಮಿಶ್ರಿತ ಪ್ರೀತಿ ಅಥವಾ ಬೇಡಿಕೆ ಪ್ರತಿಯೊಬ್ಬ ಮನುಷ್ಯನಲ್ಲೂ ಇದ್ದೇ ಇರುತ್ತದೆ.

ಆ ಪ್ರೀತಿಯನ್ನು ಹಂಚಿಕೊಳ್ಳಲಾರ. ಆದಷ್ಟೂ ಬಾಚಿಟ್ಟುಕೊಳ್ಳಬೇಕು ಎಂಬುದೇ ಪ್ರೀತಿಯ ಹವಣಿಕೆಯಾಗಿರುತ್ತದೆ. ತಮ್ಮಿಬ್ಬರ ನಡುವೆ ಇನ್ನೊಂದು ಜೀವ ಇಣುಕುತ್ತಿದೆ, ತಮ್ಮಿಬ್ಬರ ಖಾಸಗೀತನವನ್ನು ಆ ವ್ಯಕ್ತಿ ನುಂಗುತ್ತಿದೆ ಎನ್ನುವ ಆತಂಕ ಆರಂಭವಾದೊಡನೆ ಈ ಅನುಮಾನವೆಂಬ ಹುತ್ತ ಮನಸಿನೊಳಗೆ ಬೆಳೆಯಲಾರಂಭಿಸುತ್ತದೆ.

ನನಗಷ್ಟೇ ನೋಡಬೇಕು, ಮೆಚ್ಚಬೇಕು ಎಂಬ ಚಿನ್ನ ಚಿನ್ನ ಆಸೆಗಳೆಲ್ಲವೂ ಅನುಮಾನಗಳಾಗಿ ಬದಲಾಗುತ್ತವೆ. ಮೆಚ್ಚುಗೆಯ ನೋಟ, ಇನ್ನೊಬ್ಬರತ್ತಲೂ ಹರಿಯುತ್ತದೆಯೇ? ಇನ್ನೊಬ್ಬರನ್ನೂ ನನ್ನಷ್ಟೇ ಮುಖ್ಯವಾಗಿ ಪರಿಗಣಿಸುತ್ತಾರೆಯೇ? ಅವರಿಬ್ಬರ ನಡುವೆ ಏನಿರಬಹುದು? ಏನಿರಲಿಕ್ಕಿಲ್ಲ? ಅವರಿಬ್ಬರೂ ನಕ್ಕಾಗ, ನನ್ನನ್ನೇ ಆಡಿಕೊಂಡಿರಬಹುದೇ? ಇನ್ನೊಬ್ಬರ ಗಮನ ಸೆಳೆಯಲು ನಮ್ಮನ್ನು ಕೀಳು ಮಟ್ಟಕ್ಕೆ ಇಳಿಸಿರಬಹುದೇ?

ಇಂಥ ಪ್ರಶ್ನೆಗಳು ಕೂರಲಗಿನ ಅಂಬುವಿನಂತೆ ಒಳಗೊಳಗೇ ಕೋಮಲ ಹೃದಯವನ್ನು ಇರಿಯುತ್ತವೆ. ಘಾಸಿಗೊಂಡ ಹೃದಯ ಅಳುವ ಬದಲು ಅವಮಾನಕ್ಕೀಡು ಮಾಡುವ ಮೊನಚಿನ ಮಾತುಗಳ ಮೊರೆ ಹೋಗುತ್ತದೆ. ಬದುಕಿನ ಬಂಡಿ ಸಹಜವಾಗಿದ್ದರೂ ಯಾಕೋ ಕೃತಕವೆನಿಸತೊಡಗುತ್ತದೆ. ಮೆಚ್ಚುಗೆಯ ಮಾತಿಗೂ ಒಂದು ಅನುಮಾನ ಕಾಡುತ್ತದೆ. ‘ನಾವೆಲ್ಲ ಕಾಣುವುದಿಲ್ಲ ಈಗ’ ಎಂಬ ಕಾಡುವ ಮಾತು ಆಗಾಗ ಸಂಗಾತಿಗಳಿಗೆ ಚುಚ್ಚುತ್ತೇವೆ.

ಆದರೆ ಈ ಚುಚ್ಚು ಮಾತುಗಳಿಂದ, ಅನುಮಾನಗಳಿಂದ, ಅವಮಾನಗಳಿಂದ ಬಾಂಧವ್ಯ ಗಟ್ಟಿಯಾಗಿಯೇ ಉಳಿಯುವುದೇ? ಕೊನೆಯ ತನಕವೂ ಮಾಸದ ಕಹಿಯೊಂದನ್ನು ಉಳಿಸಿಯೂ ಬಿಡಬಹುದಲ್ಲವೇ? ಒಂದು ವೇಳೆ ಬಾಂಧವ್ಯ ಕದಡದ ಸ್ನೇಹ ಮಾತ್ರ ಅಲ್ಲಿದ್ದರೆ ಖಂಡಿತವಾಗಿಯೂ ಚುಚ್ಚುಮಾತಿನಿಂದ ಬೇಸರ ಉಂಟಾಗುವುದು. ಇದು ನಂಬಿಕೆಯ ಬುನಾದಿಗೇ ಬೀಳುವ ಪೆಟ್ಟು.  ಪ್ರತಿಸಲವೂ ಇಂಥ ಅನುಮಾನ, ಅವಮಾನಗಳನ್ನೇ ಅನುಭವಿಸುವುದಾದರೆ, ಆ ಸಾಂಗತ್ಯವೇ ಬೇಡವೆನಿಸುವ ಸಾಧ್ಯತೆಗಳಿರುತ್ತವೆ.

ಇಂಥ ಎಲ್ಲ ಸಂದರ್ಭಗಳನ್ನೂ ಸಹನೆ ಹಾಗೂ ಸಂಯಮದಿಂದಲೇ ನಿಭಾಯಿಸಬಹುದು. ಅಂಥ ಅನುಮಾನಗಳು ಹುಟ್ಟಿದಾಗಲೇ ಮೊಳಕೆಯಲ್ಲಿಯೇ ಚಿವುಟುವಂತೆ ಸಂಗಾತಿಯೊಡನೆ ಮಾತಾಡಬೇಕು. ಚರ್ಚಿಸಬೇಕು. ಅನುಮಾನವಿದ್ದವರೊಡನೆಯೂ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಲು ಯತ್ನಿಸಬಹುದು.  ತೆರೆದ ಮನಸಿನ ಮಾತುಗಳಿಲ್ಲಿ ಸಂಜೀವಿನಿಯ ಕೆಲಸ ಮಾಡಬಹುದು.

ನಂಬಿಕೆಗೆ ಏಟು ಕೊಡುವಂಥ  ಪ್ರಶ್ನೆಗಳಿಗೆ ಉತ್ತರಿಸಲೊಲ್ಲೆ ಎನ್ನುವ ಹಟವಿದ್ದರೆ ನಿಮ್ಮ ಸಂಗಾತಿಯ ಮನಸಿನೊಳಗೆ ನೀವು ಉತ್ತರವಿರದ ಹಲವಾರು ಪ್ರಶ್ನೆಗಳು ಹುಟ್ಟಲು ಕಾರಣರಾಗುವಿರಿ. ಮುಕ್ತ ಚರ್ಚೆ, ಮಾತು, ಕೆಲವೊಮ್ಮೆ ಮೌನದಿಂದಲೂ ಈ ಸಮಸ್ಯೆಯನ್ನು ನಿಭಾಯಿಸಬಹುದು. ಆದರೆ ಪರಿಹಾರೋಪಾಯಗಳು ಆಯಾಯ ಸಂದರ್ಭ ಮತ್ತು ಸಂಬಂಧಗಳ ತೀವ್ರತೆಯನ್ನು ಅವಲಂಬಿಸಿರುತ್ತದೆ. ಪ್ರತಿ ಬಾಂಧವ್ಯಕ್ಕೂ ನಂಬಿಕೆಯೊಂದಿಗೆ, ಕ್ಷಮೆಯೂ, ಕ್ಷಮೆಯೊಡನೆ ಮರೆವೂ ಇರುತ್ತವೆ. ಅವಮಾನ, ಅನುಮಾನಗಳು ಇವುಗಳನ್ನು ಮೀರಿ ಬೆಳೆಯಬಾರದು ಅಷ್ಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT