ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದಂಥ ಮಗುವಿಗೆ ಚಿನ್ನದ ಹಂಗೇಕೆ?

Last Updated 28 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಭಾರತೀಯ ಸಮಾಜಕ್ಕೆ ಚಿನ್ನದ ಮೋಹ ಸ್ವಲ್ಪ ಹೆಚ್ಚೇ. ಅದರಲ್ಲೂ ಆಭರಣ ಧರಿಸುವುದು ಪ್ರತೀತಿ ಎನ್ನುವುದಕ್ಕಿಂತಲೂ ಅದೊಂದು ಪರಂಪರೆಯಾಗಿಯೇ ಬೆಳೆದುಬಂದಿದೆ.

ಕಾಲಕಳೆದಂತೆ ಪ್ರತಿಷ್ಠೆ ಹಾಗೂ ತೋರಿಕೆಯ ವಿಷಯವಾಗಿ ಬದಲಾಗಿದ್ದ ಚಿನ್ನ ಈಗ ಅದನ್ನೂ ಮೀರಿ, ಆಭರಣಗಳ ಮಹತ್ವವನ್ನೇ ಅರಿಯದ ಚಿಕ್ಕ ಪುಟ್ಟ ಮಕ್ಕಳಿಗೂ ಅವುಗಳನ್ನು ತೊಡಿಸಿ ಒಣಾಡಂಬರ ಮೆರೆಯುವ ಸಾಧನವಾಗಿದೆ.

ಈ ಸಲುವಾಗಿ ಎಷ್ಟೋ ತಂದೆತಾಯಂದಿರು ಕಷ್ಟಕ್ಕೆ ಸಿಲುಕಿದ, ಮುಜುಗರಕ್ಕೆ ಒಳಗಾದ ಜ್ವಲಂತ ನಿದರ್ಶನಗಳು ನಮ್ಮ ಮುಂದಿವೆ. ಅಪ್ಪ ಅಪ್ಪಂದಿರ ಇಂತಹ ಒಣ ಪ್ರತಿಷ್ಠೆಗೆ ಬಲಿಯಾಗುವ ಮುಗ್ಧ ಮಕ್ಕಳು ಕೆಲವೊಮ್ಮೆ ಅಪಾಯ ಎದುರಿಸಿದ ನಿದರ್ಶನಗಳೂ ಸಿಗುತ್ತವೆ.

ಅದಕ್ಕೆ ಉದಾಹರಣೆಯಾಗಿ ಈ ಎರಡು ಘಟನೆಗಳನ್ನು ನೋಡಿ:
ಘಟನೆ 1- ನಮ್ಮ ಪರಿಚಯದವರಾದ ನೇತ್ರಾವತಿ ಅವರದು ಕೂಡು ಕುಟುಂಬ. ಹಳ್ಳಿಯಲ್ಲಿ ಹುಟ್ಟಿ ಬೆಳೆದವರಾದ್ದರಿಂದ ಬಂಧು ಬಳಗವೂ ಹೆಚ್ಚು. ಅಲ್ಲದೆ ಅವರಿಗೆ ಥಳಕು ಬಳುಕಿನ ಜೀವನದ ಬಗ್ಗೆ ಆಸಕ್ತಿ ಹೆಚ್ಚು. ಆಗಾಗ ನೆಂಟರ ಮನೆಗೆ ಹೋಗುವಾಗ ಅಥವಾ ನೆಂಟರು ತಮ್ಮ ಮನೆಗೆ ಬರುವುದು ತಿಳಿದಾಗ ತಮ್ಮ ಪುಟ್ಟ ಮಕ್ಕಳಿಗೆಲ್ಲ ಚಿನ್ನಾಭರಣ ತೊಡಿಸಿ ಮೆರೆಯುವುದೆಂದರೆ ಅವರಿಗೆ ಎಲ್ಲಿಲ್ಲದ ಸಡಗರ.

ಒಮ್ಮೆ ಅವರ ಹೆಣ್ಣು ಮಗುವಿನ ಮೊದಲ ವರ್ಷದ ಹುಟ್ಟಿದ ಹಬ್ಬಕ್ಕೆ ದೊಡ್ಡ ಬಳಗವೇ ಅವರ ಮನೆಯಲ್ಲಿ ನೆರೆದಿತ್ತು. ಆ ಮಗುವಿನ ಕಿವಿ, ಕೊರಳು, ಬೆರಳು ಕಾಲು ಸೇರಿದಂತೆ ಸ್ವಲ್ಪ ಹೆಚ್ಚೇ ಎನ್ನುವಷ್ಟು ಆಭರಣಗಳನ್ನು ತೊಡಿಸಲಾಗಿತ್ತು. ಸಂಬಂಧಿಕರು ಪೈಪೋಟಿಗಿಳಿದವರಂತೆ ಮಗುವಿನ ಮುಂದೆ ಉಡುಗೊರೆಗಳನ್ನು ತಂದು ಸುರಿದರು.

ಇನ್ನು ಕೆಲವರು ಉಡುಗೊರೆ ರೂಪದಲ್ಲಿ ತೊಡಿಸಿದ ಇನ್ನಷ್ಟು ಆಭರಣಗಳಿಂದ ಹಿಂಸೆಗೊಳಗಾದ ಮಗು ಜೋರಾಗಿ ಅಳಲಾರಂಭಿಸಿತು. ಎಷ್ಟು ಸಮಾಧಾನ ಪಡಿಸಿದರೂ ಸುಮ್ಮನಾಗದೆ ರಚ್ಚೆ ಹಿಡಿಯಿತು. ಹಿರಿಯರು ಮಗುವಿಗೆ ದೃಷ್ಟಿಯಾಗಿರಬೇಕೆಂದು ತಿಳಿದು ದೃಷ್ಟಿ ನಿವಾಳಿಸಿದರು.

ಹಾಲು ಕುಡಿಸಿದರು, ತಿಂಡಿ ಕೊಟ್ಟರು. ಏನು ಮಾಡಿದರೂ ಮಗು ಮಾತ್ರ ಅಳು ನಿಲ್ಲಿಸಲೇ ಇಲ್ಲ. ಇದರಿಂದ ಹುಟ್ಟುಹಬ್ಬದ ಸಂಭ್ರಮವೇ ಮಾಯವಾದಂತಾಯಿತು. ಕೊನೆಗೆ ಮಗುವಿಗೆ ಸೆಖೆಯಾಗಿರಬೇಕೆಂದು ಭಾವಿಸಿ ಬಟ್ಟೆ ಕಳಚಿ ನೋಡಿದರೆ, ಅದಕ್ಕೆ ಹಾಕಿದ್ದ ಸರದಿಂದ ಕೊರಳ ಸುತ್ತ ಗೀಚಿದಂತಾಗಿ  ರಕ್ತ ಜಿನುಗುತ್ತಿತ್ತು. ಆ ನೋವಿನ ಬಾಧೆ ತಾಳಲಾರದೇ ಮಗು ಅಳುತ್ತಿತ್ತು.

ಘಟನೆ 2- ನಗರದ ದುಬಾರಿ ಜೀವನಶೈಲಿಯಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿಯಲೇಬೇಕಾದ ಅನಿವಾರ್ಯ ಬಹಳಷ್ಟು ಮನೆಗಳಲ್ಲಿದೆ. ಹೀಗಾಗಿ ಹೆಣ್ಣು ಮಕ್ಕಳಿಗೆ ಸ್ವಲ್ಪ ಹೆಚ್ಚೇ ಒತ್ತಡ ಇರುತ್ತದೆ. ನಮ್ಮ ಪರಿಚಯದ ಸುಮಿತ್ರಾ ಅವರದೂ ಇದೇ ಸ್ಥಿತಿ.

ಒಂದು ದಿನ ಬೆಳಿಗ್ಗೆ ಕೆಲಸದ ಒತ್ತಡದಲ್ಲಿದ್ದ ಸುಮಿತ್ರಾ ಮಗುವನ್ನು ಕೆಲಸದವಳ ಕೈಗಿತ್ತು ಅದಕ್ಕೆ ಮುತ್ತಿಟ್ಟು ತಿರುಗುವಷ್ಟರಲ್ಲಿ ಅದು ಜೋರಾಗಿ ಅಳತೊಡಗಿತು. ಇದೇನೆಂದು ನೋಡಿದರೆ ಮಗುವಿನ ಕಿವಿಯಿಂದ ರಕ್ತ ತೊಟ್ಟಿಕ್ಕುತ್ತಿದೆ. ಮಗುವಿಗೆ ತೊಡಿಸಿದ್ದ ಲೋಲಾಕಿಗೆ ಸುಮಿತ್ರಾ ಅವರ ಸೀರೆಯ ಅಂಚು ಸಿಕ್ಕಿಕೊಂಡು ಎಳೆದ ರಭಸಕ್ಕೆ ಮಗುವಿನ ಕಿವಿಯೇ ಕಿತ್ತು ಬಂದಿತ್ತು.

ಕೆಲವರು ಮೂಢನಂಬಿಕೆಗೆ ಬಲಿಯಾಗಿ ಜ್ಯೋತಿಷಿಗಳು, ಶಾಸ್ತ್ರ ಪುರಾಣ ಹೇಳುವವರ ಮಾತಿಗೆ ಮರುಳಾಗಿ ಮಕ್ಕಳ ಮೈಮೇಲೆ ವಿವಿಧ ಬಗೆಯ ಹರಳಿನ ಉಂಗುರ, ಆಭರಣಗಳನ್ನು ತೊಡಿಸುತ್ತಾರೆ.

ಆದರೆ ಹೀಗೆ ಆಧಾರರಹಿತ ಮಾತನ್ನು ನಂಬಿ, ಇಂತಹ ಆಭರಣಗಳಿಂದ ಮಕ್ಕಳ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಹುದು ಎಂಬುದನ್ನೇ ಮರೆಯುತ್ತಾರೆ. ಸುಲಭವಾಗಿ ಸಿಗುವ ಆಭರಣಗಳನ್ನು ಮಕ್ಕಳು ಬಾಯಿಗೆ ಹಾಕಿಕೊಳ್ಳುವುದು ಸಾಮಾನ್ಯ. ಇದರಿಂದ ಎಷ್ಟೋ ಸಲ ಸಣ್ಣ ಉಂಗುರ, ಹರಳುಗಳು, ಗುಂಡುಗಳು ಅವುಗಳ ಜೀವಕ್ಕೇ ಎರವಾದ ದೃಷ್ಟಾಂತಗಳೂ ಇವೆ. ಅಲ್ಲದೆ ಮಕ್ಕಳ ಮೈಮೇಲಿನ ಚಿನ್ನದ ಆಸೆಗೆ ಅವರನ್ನು ಅಪಹರಿಸಿ ಕೊಲೆ ಮಾಡಿದ ಘಟನೆಗಳೂ ನಡೆದಿವೆ.

ಆದ್ದರಿಂದ ಪೋಷಕರು ಮಕ್ಕಳನ್ನು ಪ್ರತಿಷ್ಠೆ ತೋರಿಸುವ ವೇದಿಕೆ ಮಾಡಿಕೊಳ್ಳದೆ ಮಕ್ಕಳನ್ನು ಮಕ್ಕಳಂತೆಯೇ ಇರಲು ಬಿಡಬೇಕು. ಚಿನ್ನಾಭರಣ ತೊಡಿಸಲೇಬೇಕೆಂದಿದ್ದರೆ ಹೆಚ್ಚು ಬೆಲೆಬಾಳದ, ಅವರ ಸ್ವಚ್ಛಂದಕ್ಕೆ ಅಡ್ಡಿಯಾಗದ, ಯಾವುದೇ ರೀತಿಯಲ್ಲೂ ಹಾನಿ ಉಂಟು ಮಾಡದಂತಹವುಗಳನ್ನು ತೊಡಿಸಿ ಖುಷಿ ಪಡಬಹುದು.


ಆಭರಣ ತೊಡಿಸುವ ಮುನ್ನ...
* ಯಾವುದೇ ರೀತಿಯಲ್ಲೂ ಮಕ್ಕಳನ್ನು ಬಾಧಿಸದ ನಯವಾದ ಕಾಲ್ಗೆಜ್ಜೆಗಳು, ಒರಟಿಲ್ಲದ ಬಳೆಗಳನ್ನು ಹಾಕಿ

* ಕೊರಳಿನ ಸರ ಮಕ್ಕಳ ಬಾಯಿಗೆ ಎಟುಕದಷ್ಟು ಗಿಡ್ಡವಾಗಿರಲಿ

* ಪುಟ್ಟ ಮಕ್ಕಳು ಏನು ಸಿಕ್ಕರೂ ಬಾಯಿಗೆ ಹಾಕಿಕೊಳ್ಳುವುದರಿಂದ ಹರಳು, ಮುತ್ತು, ಮಣಿ ಹಾರ ಹಾಕುವುದನ್ನು ತಪ್ಪಿಸಿ. ಮಕ್ಕಳು ಅವುಗಳನ್ನು ನುಂಗಿ ತೊಂದರೆಗೆ ಸಿಕ್ಕಿಕೊಳ್ಳುವುದು ತಪ್ಪುತ್ತದೆ

* ಕೆಲ ಆಭರಣಗಳು ಮಗುವಿನ ಆರೋಗ್ಯದ ದೃಷ್ಟಿಯಿಂದ ಉಪಯುಕ್ತವಾಗುವುದರಿಂದ ಅವುಗಳನ್ನು ಎಚ್ಚರ ವಹಿಸಿ ಕೊಂಡು ತಂದು ತೊಡಿಸಬಹುದು. ಬೆರಳಿನ ಉಂಗುರ, ಎದೆಯ ಮೇಲಿನ ಪದಕ, ಸೊಂಟಕ್ಕೆ ನೇವಳ (ಉಡುದಾರ, ಉಡುಗೆಜ್ಜೆ) ಕಾಲಿನ ಗೆಜ್ಜೆ ಆ್ಯಕ್ಯುಪ್ರೆಷರ್ ರೀತಿಯಲ್ಲಿ ಕೆಲಸ ಮಾಡುತ್ತವೆ. ಅಲ್ಲದೆ ಇವು ಮಕ್ಕಳ ಆರೋಗ್ಯ ಮತ್ತು ಸೌಂದರ್ಯ ವೃದ್ಧಿಗೆ ಸಹಕಾರಿ.

* ಬಳೆ, ಸರಗಳ ತಂತಿಗಳು ಸುಲಭವಾಗಿ ಕಿತ್ತುಹೋಗದಂತೆ ಜಾಗ್ರತೆ ವಹಿಸಿ

* ಕಾಲ್ಗೆಜ್ಜೆಗಳು, ಗುಂಡಿಗಳು, ಕೊಂಡಿಗಳು ಕಳಚಿಕೊಳ್ಳದಂತೆ ಎಚ್ಚರ ವಹಿಸಿ. ಇಲ್ಲದಿದ್ದರೆ ಮಗು ಅವುಗಳನ್ನು ಬಾಯಿ ಅಥವಾ ಮೂಗಿಗೆ ಹಾಕಿಕೊಂಡು ಅನಾಹುತಕ್ಕೆ ಎಡೆ ಮಾಡಬಹುದು

* ದೇವರ ತಾಯತ, ಕರಿದಾರ ಕಟ್ಟುವುದಾದರೆ ಸಡಿಲವಾಗಿ ಕಟ್ಟಿ

* ಲೋಲಾಕು, ಜುಮುಕಿ ಚೂಪಾಗಿರದಂತೆ ನೋಡಿಕೊಳ್ಳಿ

* ಸೊಂಟಕ್ಕೆ ಧರಿಸುವ ನೇವಳವನ್ನು (ಬೆಳ್ಳಿದಾರ) ಆಗಾಗ ಬದಲಾಯಿಸಿ. ಇಲ್ಲದಿದ್ದರೆ ಸೋಪಿನ ಜಿಡ್ಡು, ಬೆವರಿನ ಅಂಶ ಅದರಲ್ಲುಳಿದು ಮಗುವಿನ ಚರ್ಮಕ್ಕೆ ಕೇಡುಂಟು ಮಾಡಬಹುದು.

* ಮಕ್ಕಳ ಅಂದ ಹೆಚ್ಚಲು ಆಭರಣಗಳು ಬೇಕೇ ಬೇಕು ಎಂದೇನಿಲ್ಲ. ಮಕ್ಕಳು ಹೇಗಿದ್ದರೂ ನೋಡಲು ಚೆಂದವೇ.

* ಏನೇ ಆದರೂ ನಿಮ್ಮ ಮಕ್ಕಳು ಆಭರಣಕ್ಕಿಂತಲೂ ಅಮೂಲ್ಯವಾದವರು ಎಂಬುದನ್ನು ಮರೆಯದಿರಿ. ಮಕ್ಕಳೇ ಹೆತ್ತವರಿಗೆ ಅಮೂಲ್ಯ ಆಭರಣವಾಗಿರುವಾಗ ಅದಕ್ಕಿಂತಲೂ ಮಿಗಿಲಾದ ಆಭರಣ ಇನ್ನೇನಿದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT