ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈವೀಕಳೆಯ ಮಗು

Last Updated 20 ಮೇ 2016, 19:41 IST
ಅಕ್ಷರ ಗಾತ್ರ

‘ಅಯ್ಯ ಆ ಹುಡುಗಿಗೆ ಖಬರೇ ಇಲ್ಲ. ಅಂಥ ಮಗನ್ನ ಮನ್ಯಾಗ ಮಲಗಿಸಿ ಟಿ.ವಿ ಹಚ್ಚಿ  ಹೋಗಿಬಿಡತಾಳ. ಎಲ್ಲಿ ತಿರಗಾಕ ಹೋಗ್ತಾಳೋ. ಹೋದ್ಲೂ ಅಂದ್ರ ಆ ಕಡೆಗೆ ಹೋಗ್ತಾಳ’ ಹೀಂಗ ಜನರ ಎಲುಬಿಲ್ಲದ ನಾಲಿಗೆಯ ಮಾತು ... ಮೂರು ವರ್ಷ ಆಯ್ತು. ಅವರ ಮಾತು ಕಟಕೊಂಡು ನಾನೇನು ಮಾಡಲಿ? 

ತಲೆತುಂಬ ಕೂದಲು, ಬೆಳ್ಳಗೆ ಮೈದಾಹಿಟ್ಟಿನಂತಹ ಬಣ್ಣ, ದಾಳಿಂಬೆ ಬೀಜದಂತಹ ಹಲ್ಲು,  ವಿಕಾಸ ಅಂದ್ರೆ  ಮುಖ ಅರಳಿಸೋದು ನೋಡಿ ಇಂಥ ಮಗು ನಿಮ್ಮ ಹೊಟ್ಯಾಗ ಹುಟ್ಟೈತಾ? ಕಳ್ಳತನ ಮಾಡಿ ಈ ಮಗುವನ್ನು ತಂದಿದ್ದೀರಿ ತಾನೇ ಎಂದು ಜನ ತಮಾಶೆ ಮಾಡೋದು ನೋಡಿ ನನ್ನ ಸಂಕಟಾ ಮರ್‌್ತ ಹೋಗ್ತೈತಿ.  ಎಲ್ಲಾ ದೇವರು ಮುಗುದ್ರು, ಎಲ್ಲಾ ಡಾಕ್ಟರ್ ಆದ್ರೂ.

ಕ್ರಮೇಣ ಸರಿ ಹೋಗುತ್ತದೆ ಅಂತಾರ. ತುಂಬಾ ಸಾಲ ಮಾಡಿ ಎಲ್ಲರ ದೃಷ್ಟಿಯಲ್ಲಿ ನಾವು ಚಿಲ್ಲರ ಆದ್ವಿ. ನಾನು ಸ್ವಾಭಿಮಾನದ ಹುಡುಗಿ. ಎಲ್ಲರ ಹತ್ತಿರವೂ ದುಡ್ಡಿಗಾಗಿ ಬಾಯಿ ತೆರೆಯಬೇಕು. ಹೇಳೀ ಕೇಳೀ ನಾವು ದುಡಿದು ಉಣ್ಣುವ ಜನ. ಮಗ ಎದ್ದು ಅಡ್ಡಾಡಲಿಲ್ಲ, ನಮ್ಮ ಸಾಲ ತೀರಲಿಲ್ಲ’ ಎಂದು ನೋವಿನಿಂದ ಹೇಳುವ ಆಕೆ ಬಿ.ಎ.ಪದವೀಧರೆ.                 
                     
ಮನುಷ್ಯನ ಬದುಕಿಗೆ ಕಷ್ಟ ಅಂದ್ರೆ ಹೀಗೇನೆ. ಯಾರಿಗೂ ಹೇಳಿ ಕೇಳಿ ಬರುವುದಿಲ್ಲ. ಬಂದರೆ ಸುಮ್ಮನೆ ಹೋಗುವುದಿಲ್ಲ. ಕಷ್ಟದಲ್ಲಿದ್ದವರಿಗೇ ಮೇಲಿಂದ ಮೇಲೆ ಕಷ್ಟ ಬರುವುದು. ಬದುಕಿನ ಜಂಜಾಟದಲ್ಲಿ ಮೇಲೇಳಲಾರದವರಿಗೆ ಬೆನ್ನಿಂದ, ಬೆನ್ನಿಗೆ ಸಮಸ್ಯೆಗಳ ರಾಶಿ ಭಾರ ಎರಗುತ್ತದೆ. 

ಹುಟ್ಟಿದ ಕೂಸಿಗೆ ಉಸಿರಾಟದ ತೊಂದರೆ ಇದ್ದ ಪ್ರಯುಕ್ತ ಹದಿನೆಂಟು ದಿನಗಳವರೆಗೆ ಐ.ಸಿಯುನಲ್ಲಿ ಇರುವುದರಿಂದ ಪ್ರಾರಂಭವಾದ ಆಸ್ಪತ್ರೆಯ ವಾಸ ಈಗ ಮೂರು ವರ್ಷವಾದರೂ ನಿಂತಿಲ್ಲ. ಕುತ್ತಿಗೆಯಲ್ಲಿ, ಸೊಂಟದಲ್ಲಿ ಶಕ್ತಿ ಇಲ್ಲ. ಗಂಟಲು ಸಣ್ಣದಿರುವುದರಿಂದ ದ್ರವರೂಪದ ಆಹಾರ ಮಾತ್ರ ಸೇವಿಸುತ್ತಾನೆ. ನೀರು ಕುಡಿಯೋದ ನೋಡಿಬಿಟ್ರ ಕರುಳು ಕಿತ್ತು ಬರಬೇಕು ಹಾಗೆ ಮಾಡತಾನ.          
                                       
‘ಎಲ್ಲಾ ಸ್ಕ್ಯಾನಿಂಗ್ ಮಾಡಿಸಿದ್ದಾಯಿತು. ಮೀರಜ್‌ಗೆ ಹೋಗಿ ಅಲ್ಲಿಂದ ಪಾಪುವಿನ ರಿಪೋರ್ಟುಗಳನ್ನೆಲ್ಲಾ ಅಮೆರಿಕಕ್ಕೂ ಕಳುಹಿಸಿದ್ದಾಯಿತು. ಅವರು ಈಗ ಕೊಡುತ್ತಿರುವ ಔಷಧಿಯನ್ನೇ ಮುಂದುವರೆಸಿರಿ ಎಂದರು. ಒಂದು ದಿನಕ್ಕೆ ಸುಮಾರು ಅರ್ಧ ಬಟ್ಟಲಿನಷ್ಟು ನೀರನ್ನು ಮೂರ್‌್ನಾಲ್ಕು ಹೊತ್ತು ತೀರ ಸಣ್ಣ ಚಮಚೆಯಿಂದ ಕುಡಿಸಿದರೆ ಒದ್ದಾಡುತ್ತಲೇ ಕುಡಿಯುತ್ತಾನೆ. ಹೊಟ್ಟೆ ಹಸಿದಿದೆ ಎನ್ನುವದಿಲ್ಲ, ನೀರು ಬೇಕು ಅನ್ನುವುದಿಲ್ಲ.

ಈ ಹಿಂದೆ ಆರು ತಿಂಗಳವರೆಗೆ ಅತ್ತ. ಕೊನೆಗೂ ಸಾಕಾಗಿ ಮತ್ತೇ ವೈದ್ಯರಲ್ಲಿ ಎಡತಾಕಿದಾಗ ಆರು ತಿಂಗ್ಳು ಅತ್ತ ಹುಡುಗ ಇಲ್ಲಿಯ ತನಕ ಅತ್ತಿರಲಿಲ್ಲ. ಈಗ ಮತ್ತೆ ಮೂರು ತಿಂಗಳಿನಿಂದ ರಾತ್ರಿ ಅಳುತ್ತಾನೆ. ಗುಳಿಗೆ ಕೊಟ್ಟರೂ ಅಳು ನಿಂತಿಲ್ಲ. ಇದು ನನಗೆ ಸವಾಲಾಗಿದೆ.

ಅವನ ತಮ್ಮ ವಿಶ್ವ ಎಂದರೆ ಅವನಿಗೆ ಅಚ್ಚು ಮೆಚ್ಚು. ಅಂವ ಏನೂ ಕೀಟಲೆ ಮಾಡಿದರೂ ಮಾಡಿಸಿಕೊಳ್ಳುತ್ತಾನೆ.   ನೋಡಿದ್ರೆ ನಗುತಾನೆ. ಗಂಡು ಮಕ್ಕಳನ್ನು ಎಷ್ಟೋ ಜನರನ್ನು ನೋಡಿದ್ದೇನೆ ಇಂಥ ವಿಶೇಷ ಮಕ್ಕಳನ್ನು ಹೊರಳಿ ಸಹ ನೋಡುವುದಿಲ್ಲ.

ಅಂಥದರಲ್ಲಿ ನನ್ನ ಗಂಡ ನನಗೆ ತಂದು ಹಾಕ್ತಾನೋ ಬಿಡ್ತಾನೋ ಆದ್ರ ಆ ಮಗುವನ್ನು ಚೆನ್ನಾಗಿ ನೋಡಿಕೊಳ್ತಾನ. ಈಗಂತೂ ಮತ್ತೆ ಮೂರು ತಿಂಗಳಾಯ್ತು ರಾತ್ರಿ ನಿದ್ದೆಯಿಲ್ಲ.

ಏನಾದರೂ ಬೇಜಾರು ಮಾಡಿಕೊಳ್ಳದೇ ಒಬ್ಬರ ನಂತರ ಒಬ್ಬರು ಎಚ್ಚರವಿದ್ದು ಎತ್ತಿಕೊಳ್ಳುತ್ತೇವೆ. ನಮ್ಮ ಸಾಲ, ಬಡತನ ನಮಗಿರಲಿ ಮಗು ಗುಣಮುಖನಾಗಿ ಎಲ್ಲ ಮಗುವಿನಂತಾದರೆ ಸಾಕು. ಕೊಡುವ ದೇವರು ಬಡವನಲ್ಲ. ಆತ ರಟ್ಟೆಯಲ್ಲಿ ಶಕ್ತಿ ಕೊಟ್ಟಾನ. ದುಡಿದು ಸಾಲ ಮುಟ್ಟಿಸುತ್ತೇವೆ’ ಎಂಬ ಆ ದಂಪತಿ ಮಾತಿನಲ್ಲಿ ಛಲ, ಆತ್ಮವಿಶ್ವಾಸ ಎದ್ದುಕಾಣುತ್ತಿತ್ತು.

ಹೆಪ್ಪುಗಟ್ಟಿದ್ದ ನೋವು ಕಣ್ಣೀರ ಮೂಲಕ ಹರಿದು, ಮನಸ್ಸು ಗಟ್ಟಿಯಾಗಿತ್ತು.  ವಿಕಾಸನನ್ನು ನೋಡಿ ಅಂಗವಿಕಲ ಅಂದ್ರ ನನ್ನೊಳಗಿನ ಅಂಗವೈಕಲ್ಯ ಕಾಣುತ್ತದೆ. ಅಯ್ಯೋ ಪಾಪ ಅಂದ್ರ ಮನಸ್ಸಿನ ನ್ಯೂನತೆ ಎದ್ದು ಕಾಣುತ್ತದೆ. ಇಲ್ಲ ನಾನು ಇದಾವುದನ್ನೂ ಸಂಬೋಧಿಸಲು ಇಷ್ಟಪಡುವದಿಲ್ಲ. ನಾನು ಆ ಮಗುವಿನಲ್ಲಿ ಕಂಡದ್ದು ದೈವೀಕಳೆಯ ಶಕ್ತಿಯನ್ನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT