ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯೆಂಬ ಬೆರಗಿಗೆ ಮೈಯೊಡ್ಡಿ

Last Updated 22 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಬಾಲ್ಯದಲ್ಲಿ ಆಕಾಶದ ಕುರಿತಂತೆ ನನಗೆ ಹತ್ತು ಹಲವು ಕೌತುಕಗಳಿದ್ದವು. ಆಕಾಶ ನೀಲಿ ಬಣ್ಣದ ಬಟ್ಟೆಯಿಂದ ಮಾಡಲ್ಪಟ್ಟಿದೆಯಾ?, ನಾವು ಹೋದಲ್ಲೆಲ್ಲ ಅದು ಹೇಗೆ ಹಿಂಬಾಲಿಸುತ್ತದೆ?, ಅದು ನಮ್ಮ ತಲೆಯ ಮೇಲೆ ಬಿದ್ದು ಬಿಟ್ಟರೆ?... ಹೀಗೆ ಮಣಿ ಪೋಣಿಸಿದಂತೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದ್ದವು. ಆದರೆ ಅವುಗಳ ಬಗ್ಗೆ ಪ್ರಶ್ನಿಸುವುದಾಗಲಿ, ಉತ್ತರವನ್ನು ದಕ್ಕಿಸಿಕೊಳ್ಳುವಷ್ಟರ ಮಟ್ಟಿನ ಜಾಣ್ಮೆ ನನ್ನಲ್ಲಿರಲಿಲ್ಲ. ಒಂದೊಂದೇ ತರಗತಿಯನ್ನು ಹಿಂದೆ ಬಿಟ್ಟು ಮುಂದೆ ಹೋದಂತೆಲ್ಲ ಆಕಾಶದ ಕುರಿತಾಗಿದ್ದ ಯಕ್ಷ ಪ್ರಶ್ನೆಗಳಿಗೆಲ್ಲ ಉತ್ತರ ದೊರಕುತ್ತ ಹೋದವು.

ಮಳೆ ಎಂಬುದು ಬಾಲ್ಯದಿಂದಲೂ ನನಗೊಂದು ಬೆರಗು, ಅಚ್ಚರಿ. ವರ್ಷದ ಮೊದಲ ಮಳೆ ಇಳೆಯನ್ನು ತಾಗುತ್ತಿದ್ದಂತೆಯೇ ಅವ್ವ ಕಿಟಕಿ, ಬಾಗಿಲುಗಳನ್ನು ಭದ್ರಪಡಿಸಿ ಬಿಡುತ್ತಿದ್ದಳು. ಆಗ ಕಿಟಕಿಗೆ ಹತ್ತಿರದಲ್ಲಿರುವ ಮಂಚವನ್ನೋ, ಮೇಜನ್ನೋ ಹತ್ತಿ ಕುಳಿತು ಕಿಟಕಿ ಬಾಗಿಲ ಬಿರುಕಿನೊಳಗಿಂದ ಮಳೆಯೆಂಬ ಮಾಯೆಯನ್ನು ಕಣ್ತುಂಬಿಕೊಳ್ಳುತ್ತಿದ್ದೆ. ಗುಡುಗು, ಸಿಡಿಲುಗಳ ಅಬ್ಬರಗಳಿಗೆ ಬೆಚ್ಚಿ ಕಂಬಳಿಯನ್ನು ಹೊದ್ದು ಮುಸುಕಿನೊಳಗಿನಿಂದಲೇ ಮಳೆಯ ಮಜವನ್ನು ಅನುಭವಿಸುತ್ತಿದ್ದೆ. ಬಾಲ್ಯ ಕಳೆದು ಶಾಲೆಯತ್ತ ಮುಖ ಮಾಡಿದಾಗ ಮಳೆಯ ಜೊತೆಗಿನ ನನ್ನ ಸಂಬಂಧ ಎಲ್ಲ ಕಟ್ಟಳೆಗಳನ್ನು ಮೀರಿದುದಾಗಿತ್ತು.

‘ಮಳಿಯೊಳಗ ನೆನೀಬ್ಯಾಡಾ, ಚಾಟಿನ್ಯಾಗ ನಿಂತು ಮಳಿ ನಿಂತ್ ಮ್ಯಾಲೆ ಮನೀಗಿ ಬಾ’ ಎಂಬ ಅವ್ವನ ಕಾಳಜಿಯ ನುಡಿಗಳು, ‘ಆತ ಅವ್ವಾ’ ಎನ್ನುವುದಕ್ಕೆ ಮಾತ್ರ ಸೀಮಿತವಾಗಿದ್ದವು. ಛತ್ರಿ, ಚಪ್ಪಲಿಗಳಿಲ್ಲದ ನಾನು ಮನೆಯವರೆಗೂ ಮಳೆಗೆ ಮೈಯೊಡ್ಡಿ ಅದರ ಆನಂದವನ್ನು ಅನುಭವಿಸುತ್ತ ತೊಯ್ದು ತೊಪ್ಪೆಯಾಗುತ್ತಿದ್ದೆ. ಅಲ್ಲಲ್ಲಿ ತೊರೆಗಳಾಗಿ ಹರಿಯುವ ನೀರಲ್ಲಿ ಕಾಲಾಡಿಸುತ್ತ, ಗೆಳತಿಯರೊಂದಿಗೆ ಕೇಕೆ ಹಾಕುತ್ತ ಮಳೆಯ ಮಹದಾನಂದವನ್ನು ಬೊಗಸೆಯೊಳಗೆ ತುಂಬಿಕೊಳ್ಳುತ್ತಿದ್ದೆ.

ಕಾಲೇಜು ಮೆಟ್ಟಿಲನ್ನು ಏರುತ್ತಿದ್ದಂತೆಯೇ ಮಳೆಯಲ್ಲಿ ನೆನೆಯುವ ಆಸೆಯನ್ನು ಹತ್ತಿಕ್ಕಿಕೊಳ್ಳುವುದು ಅನಿವಾರ್ಯವಾಯಿತು. ಈ ವಯಸ್ಸಿನಲ್ಲಿ ಮಳೆಯಲ್ಲಿ ನೆನೆಯಲು ಸಂಕೋಚ, ಏನೋ ಹಿಂಜರಿಕೆ. ನೋಡಿದವರು ಏನೆಂದುಕೊಳ್ಳಲಿಕ್ಕಿಲ್ಲ ಎಂಬ ಅಳುಕು. ಆದರೆ ಮನದ ಮೂಲೆಯೊಂದರಲ್ಲಿ ಸುರಿವ ಮಳೆಗೆ ಮೈಯೊಡ್ಡುವ ವಾಂಛೆ ಪ್ರತಿ ಮಳೆಗಾಲಕ್ಕೂ ಇಣುಕುತ್ತಿತ್ತು. ಆದರೆ ಮಳೆಗಾಲದ ದಿನಗಳಲ್ಲಿ ಛತ್ರಿ ಇಲ್ಲದೆ ಹೊರ ಹೋದಾಗ ನನ್ನ ಹಾಳು ಮರೆವಿಗೆ ಹಿಡಿ ಶಾಪ ಹಾಕುತ್ತಿದ್ದೆ.

ಸಿನಿಮಾಗಳಲ್ಲಿ ನಾಯಕಿಯರು ಮನಸೋ ಇಚ್ಛೆ ಮಳೆಯಲ್ಲಿ ನೆನೆಯುತ್ತ ಕುಣಿದು ಕುಪ್ಪಳಿಸುವುದನ್ನು ಕಂಡರೆ ಮತ್ತೆ ಆಸೆಯ ಸೆಲೆಯೊಡೆಯುತ್ತಿತ್ತು. ಆದರೆ ಅದನ್ನು ಕಾರ್ಯರೂಪಕ್ಕೆ ಇಳಿಸುವುದು ಸಾಧ್ಯವಾಗುತ್ತಿರಲಿಲ್ಲ. ಮೊನ್ನೆ ಮೊನ್ನೆ ಧೋ ಎಂದು ಮೊದಲ ಮಳೆ ಬೀಳುತ್ತಿದ್ದಂತೆಯೇ ಮೇಲ್ಛಾವಣಿಯ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳ ನೆನಪಾಗಿ ಅವಸರಿಸಿಕೊಂಡು ಓಡಿದೆ. ಅಷ್ಟರಲ್ಲಿಯೇ ಬಟ್ಟೆಗಳೆಲ್ಲ ತೊಯ್ದು ತೊಪ್ಪೆಯಾಗಿದ್ದವು. ಇನ್ನೇನು ಇಳಿದು ಬರಬೇಕೆನ್ನುವಷ್ಟರಲ್ಲಿ ಅಲ್ಲಿನ ದೃಶ್ಯ ನನ್ನನ್ನು ಧಿಗ್ಮೂಢಳನ್ನಾಗಿಸಿತ್ತು. ನನ್ನ ಬಾಲ್ಯ ಮತ್ತೆ ಜೀವ ಪಡೆದಿದೆ.

ಮುಸಲ ಧಾರೆಯಂತೆ ಅಪ್ಪಳಿಸುತ್ತಿರುವ ಮಳೆಗೆ ಮೈಯೊಡ್ಡಿ ನನ್ನ ಬಾಲ್ಯ ಮೇಲ್ಛಾವಣಿಯ ತುಂಬ ಓಡಾಡುತ್ತಿದೆ. ವರ್ಷಧಾರೆಯಲ್ಲಿ ನೆನೆಯುತ್ತ ಕುಣಿದು ಕುಪ್ಪಳಿಸುತ್ತಿದೆ. ಮೈ ಮರೆತು ನಿಂತ ನನ್ನನ್ನು ಎಚ್ಚರಿಸಿದ್ದು ‘ಅಮ್ಮಾ’ ಎಂಬ ಕೂಗು. ವಾಸ್ತವಕ್ಕೆ ಬಂದ ನನಗೆ ಈಗ ಹೊಳೆದಿತ್ತು. ನಾನು ಕಂಡದ್ದು ನನ್ನ ಬಾಲ್ಯವನ್ನಲ್ಲ. ಅವಳು ನನ್ನ ಮಗಳಾಗಿದ್ದಳು. ಗಲಿಬಿಲಿಗೊಂಡು ನಿಂತಿದ್ದ ನನ್ನನ್ನು ಸರ್ರನೇ ಎಳೆದುಕೊಂಡವಳೇ ಕೇಕೆ ಹಾಕುತ್ತ ಬುಗುರಿಯಂತೆ ಸುತ್ತತೊಡಗಿದಳು. ಸಂಕೋಚ, ಹಿಂಜರಿಕೆಗಳನ್ನೆಲ್ಲ ಕಿತ್ತೆಸೆದ ನಾನು ಮಗಳೊಂದಿಗೆ ಕೇಕೆ ಹಾಕುತ್ತ ಮಳೆಯ ಮಜವನ್ನು ಸಂಭ್ರಮಿಸತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT