ಶನಿವಾರ, ಡಿಸೆಂಬರ್ 3, 2022
27 °C

ಅಮೆರಿಕ ಸಂಸತ್‌ಗೆ ಭಾರತೀಯ ಮೂಲದ ನಾಲ್ವರ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌ (ಪಿಟಿಐ): ಅಮೆರಿಕದಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದ ನಾಲ್ವರು ಹೌಸ್‌ ಆಫ್‌ ರೆಪ್ರಸೆಂಟಿಟೀವ್ಸ್‌ಗೆ (ಕೆಳಮನೆ) ಆಯ್ಕೆಯಾಗಿದ್ದಾರೆ ಹಾಗೂ ಹಲವು ರಾಜ್ಯಗಳ ಶಾಸನಸಭೆಗಳಿಗೂ ಭಾರತೀಯ ಮೂಲದವರು ಆಯ್ಕೆಯಾಗಿದ್ದಾರೆ.

ಆಡಳಿತಾರೂಢ ಡೆಮಾಕ್ರಟಿಕ್‌ ಪಕ್ಷದ ರಾಜಾ ಕೃಷ್ಣಮೂರ್ತಿ, ರೋ ಖನ್ನಾ, ಪ್ರಮೀಳಾ ಜಯಪಾಲ್‌ ಹಾಗೂ ಉದ್ಯಮಿ ಶ್ರೀ ಥಾಣೇದಾರ್‌ ಅವರು ಆಯ್ಕೆಯಾಗಿದ್ದಾರೆ. ಮಿಷಿಗನ್‌ ಕ್ಷೇತ್ರದಲ್ಲಿ ರಿಪಬ್ಲಿಕನ್‌ ಪಕ್ಷದ ಮಾರ್ಟೆಲ್‌ ಬಿವಿಂಗ್ಸ್‌ ಅವರನ್ನು ಸೋಲಿಸುವ ಮೂಲಕ ಥಾಣೇದಾರ್‌ (67) ಅವರು ಈ ಕ್ಷೇತ್ರದಲ್ಲಿ ಆಯ್ಕೆಯಾದ ಪ್ರಥಮ ಭಾರತೀಯ ಮೂಲದವರು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರಾಜಾ ಕೃಷ್ಣಮೂರ್ತಿ(49) ಅವರು ಇಲಿನಾಯ್ಸ್ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಅಮೆರಿಕ ಸಂಸತ್ ಪ್ರವೇಶಿಸಿದ್ದಾರೆ. ಕ್ಯಾಲಿಫೋರ್ನಿಯಾದಿಂದ ವಿಜೇತರಾದ ರೋ ಖನ್ನಾ(46) ಇದೀಗ 3ನೇ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. ಪ್ರಮೀಳಾ ಜಯಪಾಲ್‌ (57) ವಾಷಿಂಗ್ಟನ್‌ನಿಂದ ಆಯ್ಕೆಯಾಗಿದ್ದಾರೆ.

ರಾಜ್ಯಗಳ ಶಾಸನ ಸಭೆಗಳಿಗೂ ಹಲವಾರು ಮಂದಿ ಭಾರತೀಯ ಮೂಲದವರು ಆಯ್ಕೆಯಾಗಿದ್ದಾರೆ. ಮೇರಿಲ್ಯಾಂಡ್‌ನಲ್ಲಿ ಅರುಣಾ ಮಿಲ್ಲರ್‌ ಲೆಫ್ಟಿನಂಟ್‌ ಗವರ್ನರ್ ಸ್ಪರ್ಧೆಯಲ್ಲಿ ಗೆದ್ದ ಮೊದಲ ಭಾರತೀಯ ಮೂಲದವರು ಎನಿಸಿಕೊಂಡಿದ್ದಾರೆ. ಆದರೆ ಭಾರತೀಯ ಮೂಲದ ಇನ್ನೊಬ್ಬ ಅಭ್ಯರ್ಥಿ ಸಂದೀಪ್ ಶ್ರೀವಾತ್ಸವ್‌ ಅವರು ಟೆಕ್ಸಾಸ್‌ನಲ್ಲಿ ಸೋಲು ಅನುಭವಿಸಿದ್ದಾರೆ.

ಅಮೆರಿಕದ ಒಟ್ಟು ಜನಸಂಖ್ಯೆಯ ಶೇ 1ರಷ್ಟಿರುವ ಭಾರತೀಯ ಮೂಲದವರು ಈ ಮಧ್ಯಂತರ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, 2024ರ ಅಧ್ಯಕ್ಷ ಚುನಾವಣೆಯಲ್ಲಿ ತಮ್ಮ ಪ್ರಭಾವ ಬೀರುವ ಅವಕಾಶ ಪಡೆದಿದ್ದಾರೆ. ಈ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ ಅವರು ಮತ್ತೆ ಸ್ಪರ್ಧಿಸುವ ಇಂಗಿತವನ್ನು ಈಗಾಗಲೇ ವ್ಯಕ್ತಪಡಿಸಿದ್ದು, ಇದೇ 15ರಂದು ದೊಡ್ಡ ಘೋಷಣೆ ಮಾಡಲು ಸಜ್ಜಾಗಿದ್ದಾರೆ. ಇದೇ ಕಾರಣಕ್ಕೆ ನ.8ರಂದು ನಡೆದ ಚುನಾವಣೆಗೆ ಮೊದಲಾಗಿ ಭಾರತೀಯ ಮೂಲದ ಮತದಾರರನ್ನು ಓಲೈಸುವ ಯತ್ನವನ್ನು ಎರಡೂ ಪಕ್ಷಗಳು ನಡೆಸಿದ್ದವು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು