ಬುಧವಾರ, ಅಕ್ಟೋಬರ್ 5, 2022
27 °C

ಸಲ್ಮಾನ್‌ ರಶ್ದಿ ಮೇಲೆ ದಾಳಿ: ಆಘಾತ ವ್ಯಕ್ತಪಡಿಸಿದ ಬ್ರಿಟಿಷ್‌ ಪ್ರಧಾನಿ ಬೋರಿಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌: ಖ್ಯಾತ ಲೇಖಕ ಸಲ್ಮಾನ್‌ ರಶ್ದಿ ಅವರ ಮೇಲೆ ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರ ವೇದಿಕೆ ಮೇಲೆ ನಡೆದಿರುವ ಮಾರಣಾಂತಿಕ ದಾಳಿಗೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಆಘಾತ ವ್ಯಕ್ತಪಡಿಸಿದ್ದಾರೆ. ರಶ್ದಿ ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ದಾಳಿ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.

'ಸರ್‌ ಸಲ್ಮಾನ್‌ ರಶ್ದಿ ಅವರಿಗೆ ಚಾಕುವಿನಿಂದ ಇರಿದಿರುವುದು ಭೀತಿಯನ್ನುಂಟು ಮಾಡಿದೆ. ಇಂತಹ ಕೃತ್ಯಗಳನ್ನು ನಾವು ಎಂದಿಗೂ ಸಮರ್ಥಿಸಿಕೊಳ್ಳಬಾರದು. ರಶ್ಧಿ ಅವರ ಪ್ರೀತಿಪಾತ್ರರ ಜೊತೆಗೆ ನಿಲ್ಲುತ್ತೇನೆ. ಅವರು ಗುಣಮುಖರಾಗುತ್ತಾರೆ ಎಂದು ನಾವೆಲ್ಲರೂ ಬಯಸಿದ್ದೇವೆ' ಎಂದು ಜಾನ್ಸನ್‌ ಟ್ವೀಟ್‌ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿ ಬ್ರಿಟನ್‌ನ ನೂತನ ಪ್ರಧಾನಿ ರೇಸ್‌ನಲ್ಲಿರುವ ಭಾರತೀಯ ಸಂಜಾತ ರಿಷಿ ಸುನುಕ್‌ ಅವರು ಆಘಾತ ವ್ಯಕ್ತಪಡಿಸಿದ್ದಾರೆ.

'ನ್ಯೂಯಾರ್ಕ್‌ನಲ್ಲಿ ಸಲ್ಮಾನ್‌ ರಶ್ದಿ ಮೇಲೆ ದಾಳಿ ನಡೆದ ವಿಚಾರ ತಿಳಿದು ಆಘಾತವಾಯಿತು. ಅವರು ಅಭಿವ್ಯಕ್ತಿ ಮತ್ತು ಕಲಾತ್ಮಕ ಸ್ವಾತಂತ್ರ್ಯದ ಸಾಕಾರಮೂರ್ತಿ. ನಮ್ಮ ಹಾರೈಕೆಗಳು ರಶ್ದಿ ಜೊತೆಗಿವೆ' ಎಂದು ಸುನುಕ್‌ ಹೇಳಿದ್ದಾರೆ.

ಪ್ರಧಾನಿ ರೇಸ್‌ನಲ್ಲಿರುವ ವಿದೇಶಾಂಗ ಕಾರ್ಯದರ್ಶಿ ಲಿಜ್‌ ಟ್ರುಸ್‌ ಅವರು ರಶ್ದಿ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

'ಸರ್‌ ಸಲ್ಮಾನ್‌ ರಶ್ದಿ ಅವರ ಮೇಲಿನ ದಾಳಿ ಅವಮಾನಕರ. ಜನರು ಮುಕ್ತವಾಗಿ ಮಾತನಾಡುವ ವಾತಾವರಣ ಇರಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲರೂ ಸಮರ್ಥಿಸಿಕೊಳ್ಳಬೇಕು' ಎಂದು ಲಿಜ್‌ ಟ್ರುಸ್‌ ಹೇಳಿದ್ದಾರೆ.

ಷಟೌಕ್ವಾ ಇನ್‌ಸ್ಟಿಟ್ಯೂಟ್‌ ಆಯೋಜಿಸಿದ್ದ ಕಲೆ ಮತ್ತು ಸಾಹಿತ್ಯದ ಕಾರ್ಯಕ್ರಮದಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಆಯೋಜಕರು ರಶ್ದಿ ಅವರನ್ನು ಭಾಷಣಕ್ಕೆ ಆಹ್ವಾನಿಸಿದ್ದರು. ರಶ್ದಿ ಅವರು ಕುರ್ಚಿಯ ಮೇಲೆ ಕುಳಿತುಕೊಳ್ಳು
ತ್ತಿದ್ದಂತೆಯೇ ವೇದಿಕೆಗೆ ನುಗ್ಗಿದ ಅಪರಿಚಿತ ವ್ಯಕ್ತಿ ಅವರಿಗೆ ಚಾಕುವಿನಿಂದ ಇರಿದಿದ್ದಾನೆ. ತಕ್ಷಣವೇ ರಶ್ದಿ ನೆಲಕ್ಕೆ ಕುಸಿದುಬಿದ್ದಿದ್ದಾರೆ. ಹಲ್ಲೆಕೋರನನ್ನು ಬಂಧಿಸಲಾಗಿದೆ.

ರಶ್ದಿ ಅವರ ಕುತ್ತಿಗೆಯ ಬಲಭಾಗ ಸೇರಿದಂತೆ ಹಲವೆಡೆ ಇರಿಯಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು